ಮರ್ಯಾದಾ ಪುರುಷೋತ್ತಮ ರಾಮ ಆದರ್ಶಗಳ ಅನ್ವರ್ಥ ನಾಮ

ಮರ್ಯಾದಾ ಪುರುಷೋತ್ತಮ ರಾಮ ಆದರ್ಶಗಳ ಅನ್ವರ್ಥ ನಾಮ
ಮರ್ಯಾದಾ ಪುರುಷೋತ್ತಮ ರಾಮ ಆದರ್ಶಗಳ ಅನ್ವರ್ಥ ನಾಮ
Published on
ಇಂದಿಗೂ ಜಗತ್ತಿಗೆ ಅವನೇ ಮರ್ಯಾದಾ ಪುರುಷೋತ್ತಮ. ಲೋಕರಂಜಕ. ಒಂದೇ ಒಂದು ಸಣ್ಣ ಉಪಕಾರವನ್ನೂ ಧನ್ಯತೆಯಿಂದ ಸ್ಮರಿಸಿ, ನೂರು ಅಪಕಾರಗಳನ್ನು ಕಡೆಗಣಿಸುವ ಮಹಾಕೃತಜ್ಞತೆ ಅವನದು. ರ+ಅಮ = ರಾಮ ಎಂದರೆ ಆನಂದರೂಪನಾದವನು. ಈತನನ್ನು ಶಾಂಡಿಲ್ಯ ಶಾಖೆಯು ಪರಿಮಾಣಾತೀತ ಗುಣದಿಂದ ಸಂಪನ್ನನಾದವನು ಎಂದು ವರ್ಣಿಸಿದೆ. ಬೇರೆ ಬೇರೆ ಆಯಾಮಗಳಲ್ಲಿ ರಾಮ ಶಬ್ದವು ತೆರೆದುಕೊಳ್ಳುವ ಪರಿಯನ್ನು ಲೋಕಕ್ಕೆ ತಿಳಿಯುವಂತೆ ವ್ಯಾಖ್ಯಾನಿಸಿದೆ. ಬ್ರಹ್ಮವೈವರ್ತಪುರಾಣವು
ರಮಾಯಾ ರಮಣಸ್ಥಾನಂ
ತೇನ ರಾಮಂ ವಿದುರ್ಬುಧಾಃ
ಎಂದು ಪ್ರತಿಪಾದಿಸಿದೆ. ರಾ ಎಂಬ ಶಬ್ದವು ಲಕ್ಷ್ಮೀಸ್ವರೂಪಳಾದ ಸೀತೆಯನ್ನು ಪ್ರತಿನಿಧಿಸುತ್ತದೆ. ಅಮಾ ಶಬ್ದವು ಸಾಮೀಪ್ಯವನ್ನು ತಿಳಿಸುತ್ತದೆ. ಯಾರಿಗೆ ಲಕ್ಷ್ಮೀ ಸ್ವರೂಪಳಾದ ಸೀತೆಯು ಸಮೀಪಳಾದಳೋ, ಆ ರಾಘವನೇ (ರಾ + ಅಮಾ ಯಸ್ಯ ಸಃ = ರಾಮಃ) ಎಂದು ಧ್ವನಿಸುತ್ತದೆ. ಕೈಲಾಸ ಪರ್ವತವನ್ನೇ ಎತ್ತಿದ ರಾವಣನೂ ಸೇರಿದಂತೆ ಯಾವ ರಾಜ ಮಹಾರಾಜರೂ ಎತ್ತಲಾಗದ ಶಿವಧನುಸ್ಸನ್ನು ಸೀತಾಸ್ವಯಂವರದಲ್ಲಿ ಲೀಲಾಜಾಲವಾಗಿ ಎಡಗೈಯಿಂದಲೇ ಎತ್ತಿ, ಹೆದೆ ಏರಿಸುವ ಭರದಲ್ಲಿ ಅದನ್ನು ತುಂಡಾಗಿಸಿದ ರಾಮನಿಗೆ ಸೀತೆ ಸಮೀಪಳಾಗಿ ವಿಜಯಮಾಲೆ ಸಮರ್ಪಿಸಿದಳು. ಯಾವ ವ್ಯಕ್ತಿ ನಿಷ್ಕಲ್ಮಷ ಮನದಿಂದ ಗುರುಸೇವೆ ಮಾಡಿ ಸಾಧಕನಾಗುವನೋ ಅವನು ಶಿವನ ನಿಯಂತ್ರಣದಲ್ಲಿರುವ ಮನೋರೂಪ ಕಠಿಣ ಧನುಸ್ಸನ್ನು ಮುರಿದು (ಅಹಂಕಾರರೂಪ ಮನೋಧನುಸ್ಸನ್ನು ನಿಗ್ರಹಿಸಿ) ಮೋಕ್ಷಲಕ್ಷ್ಮಿಯನ್ನು ಒಲಿಸಿಕೊಳ್ಳಬಲ್ಲನು ಎಂಬ ಅಧ್ಯಾತ್ಮ ಸಂದೇಶವನ್ನೂ ನೀಡಿದ್ದು ರಾಮಾವತಾರ.
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||
ಮಿಥಿಲೆಯಲ್ಲಿ ಸೀತಾಕಲ್ಯಾಣ ಉತ್ಸವವನ್ನು ವಿಜೃಂಭಣೆಯಿಂದ ಮಾಡಿಕೊಂಡು ಅಯೋಧ್ಯೆಗೆ ಹಿಂದಿರುಗಿ ಬರುವ ಮಾರ್ಗದಲ್ಲಿ ಪರಶುರಾಮ ಯುದ್ಧಕ್ಕಾಗಿ ಆಹ್ವಾನಿಸುತ್ತಾನೆ. ಆಗ ಆತನ ಒಳಗಿರುವ ಅತುಲ ಎಂಬ ಲೋಕಕಂಟಕ ರಾಕ್ಷಸನನ್ನು ರಾಮ ಸಂಹರಿಸುತ್ತಾನೆ. ಇಷ್ಟು ಮಾತ್ರವಲ್ಲ, ತಾಟಕೆ, ಸುಬಾಹು, ಮಾರೀಚಾದಿಗಳು, ಖರದೂಷಣಾದಿ 14 ಸಾವಿರ ರಾಕ್ಷಸರ ಗಣವನ್ನು ಸಂಹಾರ ಮಾಡಿದ್ದಾನೆ. ಅಂತಿಮವಾಗಿ ಲಂಕೆಯಲ್ಲಿ ನಡೆದ ಯುದ್ಧಯಜ್ಞದಲ್ಲಿ ಆರು ಸಹಸ್ರ ಅಕ್ಷೋಹಿಣಿ ಸೈನ್ಯ, 30 ಮಹೌಘ ಸೈನ್ಯಗಳ ಮಾರಣಹೋಮವನ್ನೇ ಏಕಾಂಗಿಯಾಗಿ ಮಾಡಿದನು ರಾಘವ.
ಮಾರಣಾತ್ ರಾಮಃ ಎಂದರೆ ಬೃಹತ್ ದುಷ್ಟಸಂಹಾರದಿಂದ ಈತ ರಾಮ ಎನಿಸಿದ್ದಾನೆ. ವಿಶ್ವಾಮಿತ್ರಾದಿ ಯೋಗಿಗಳು ಯಜ್ಞಾದಿ ರಕ್ಷಣೆಯಿಂದ ಸಂತುಷ್ಟರಾಗಿ, ರಘುವೀರನಲ್ಲಿ ಮಾನಸಿಕ ರಮಣ ಮಾಡಿ, ಕೃತಾರ್ಥರಾದರು. ಅದಕ್ಕೆಂದೇ ಆತ ತನ್ನ ರಾಮನಾಮವನ್ನು ಅನ್ವರ್ಥಗೊಳಿಸಿದ್ದಾನೆ. ರಾಘವ ರಾಘವ ರಾಕ್ಷಸ ಶತ್ರೋ, ಮಾರುತಿವಲ್ಲಭ ಜಾನಕಿಕಾಂತ, ದೇವಕಿನಂದನ ನಂದಕುಮಾರ, ವೃಂದಾವನಂಚನ ಗೋಕುಲಚಂದ್ರ... ಎಂದು ದ್ವಾದಶ ಸ್ತೋತ್ರದಲ್ಲಿ ಬಣ್ಣಿಸಿದರು ಆಚಾರ್ಯ ಶ್ರೀ ಮಧ್ವರು.
ಎಲ್ಲವೂ ಅವನಿಗೆ ಗೊತ್ತಿತ್ತು: ಪೂರ್ಣಾನಂದ-ಪೂರ್ಣಜ್ಞಾನ ಸ್ವರೂಪವುಳ್ಳವನಾಗಿ, ರಾಮ ಎನಿಸಿದ ರಾಘವನಿಗೆ ಸೀತೆಯು ಎಲ್ಲಿದ್ದಾಳೆಂದು ತಿಳಿದಿತ್ತು. ಆಕೆ ಕೈಲಾಸ ಪರ್ವತದಲ್ಲಿ ಶಿವ-ಪಾರ್ವತಿಯರಿಂದ ಪೂಜಿತಳಾಗಿದ್ದಾಳೆಂದು ತಿಳಿದೂ, ಅಜ್ಞಾನಿಯಂತೆ ತೋರುತ್ತ, ಸೀತಾನ್ವೇಷಣ ಮಾಡಿದ. ಆಕೆಯ ವಿರಹದುಃಖದ ನಟನೆಯನ್ನು ಮಾತ್ರ ಮಾಡಿದ. ರಾವಣನು ಸೀತಾ ಪ್ರತಿಕೃತಿಯನ್ನು ಅಪಹರಿಸಿದಾಗ, ದುರ್ಜನರನ್ನು ಮೋಹಗೊಳಿಸುವ ಉದ್ದೇಶ ರಾಮನಿಗಿತ್ತು. ಅವನು ಪೂರ್ಣಜ್ಞಾನ ಸ್ವರೂಪವುಳ್ಳವನಾದ್ದರಿಂದ ವರ್ತಮಾನ, ಭೂತ ಮತ್ತು ಭವಿಷ್ಯ ಆತನಿಗೆ ತಿಳಿದಿತ್ತು.
ನಿತ್ಯ ವಿಷ್ಣುಸಹಸ್ರನಾಮ ಪಠಿಸಿಯೇ ಭೋಜನ ಮಾಡುವ ಪದ್ಧತಿಯನ್ನು ಅನುಸರಿಸುವ ಪಾರ್ವತೀದೇವಿಯು, ಒಮ್ಮೆ ದ್ವಾದಶಿಯಂದು ರುದ್ರದೇವನು ಪಾರಣೆಗೆ (ವ್ರತಾಂಗ ಭೋಜನಕ್ಕೆ) ಕರೆದಾಗ, ವಿಷ್ಣುಸಹಸ್ರನಾಮ ಪಠಣವಾಗಿಲ್ಲವೆಂದು ಹೇಳಿದಳು. ಆಗ ರುದ್ರದೇವನು ರಾಮನನ್ನು ಭಕ್ತಿಯಿಂದ ಸ್ಮರಿಸಿ, ಮೂರು ಬಾರಿ ರಾಮನಾಮವನ್ನು ಪಠಿಸಿದರೆ, ವಿಷ್ಣುಸಹಸ್ರನಾಮ ಪಠಣದ ಫಲ ಪ್ರಾಪ್ತಿಯಾಗುವುದೆಂದು ಸೂಚಿಸಿದ. ಶ್ರೀ ರಾಮ ರಾಮ ರಾಮೇತಿ, ರಮೇ ರಾಮೇ ಮನೋರಮೇ, ಸಹಸ್ರನಾಮತತ್ತುಲ್ಯಂ, ರಾಮನಾಮವರಾನನೇ... ಎಂಬ ಶ್ಲೋಕವನ್ನು ಪಠಿಸಿದ. ಸಾಧಿ್ವಾದ ಪಾರ್ವತಿ ರಾಮನಾಮವನ್ನು ಜಪಿಸಿ, ಹರನೊಂದಿಗೆ ಪಾರಣೆಯಲ್ಲಿ ಪ್ರವೃತ್ತಳಾದಳು. ಹರನು ಆಕೆಗೆ, ರಾಮನಾಮಾಷ್ಟೋತ್ತರ ಶತನಾಮಗಳನ್ನೂ ಉಪದೇಶಿಸಿದ. ಇದಲ್ಲದೆ ಎಲ್ಲರ ಬಾಯಲ್ಲಿ ಇಂದಿಗೂ ನಲಿದಾಡುವ ಪ್ರಸಿದ್ಧವಾದ ಮಂತ್ರತುಲ್ಯ ಪದ್ಯವನ್ನೂ ಉಪದೇಶಿಸಿದ. ಪದ್ಮಪುರಾಣದಲ್ಲಿ ಈ ಶ್ಲೋಕದ ಉಲ್ಲೇಖವಿದೆ.
ರಾಮನಿಗೆ ರಘುನಾಥ ಎಂಬ ಹೆಸರೂ ಇದೆ. ಈ ಶಬ್ದವು ರಘುವಂಶದಲ್ಲಿ ಶ್ರೇಷ್ಠನಾದ, ದಶರಥರಾಜನಿಂದ ಆಶೀರ್ವಾದ ಮಾಡಿಸಿಕೊಂಡವನು ಎಂಬ ಅರ್ಥವನ್ನು ಸೂಚಿಸುತ್ತದೆ. ರಘುವಂಶದಲ್ಲಿ ಬಂದ ಎಲ್ಲ ರಾಜರನ್ನೂ ರಘುವಂಶ ಕಾವ್ಯದಲ್ಲಿ ರಘು ಎಂಬ ಪದದಿಂದಲೇ ಉಲ್ಲೇಖಿಸಲಾಗಿದೆ. ಹೀಗಾಗಿ ರಘುಶಬ್ದದಿಂದ ದಶರಥರಾಜನೂ ಭೂಷಿತನಾಗಿದ್ದಾನೆ. ನಾಥ ಎಂಬ ಶಬ್ದವು ಆಶೀರ್ವಾದಕರ್ತಾ ಎಂಬ ಅರ್ಥವನ್ನು ಧ್ವನಿಸುತ್ತದೆ. ನಾಥೃ ಎಂಬ ಕ್ರಿಯಾಪದಕ್ಕೆ ಆಶೀರ್ವಾದ ಎಂಬ ಅರ್ಥವೂ ಇದೆ. ತಂದೆಯಾದ ದಶರಥರಾಜನು ತನ್ನ ನೆಚ್ಚಿನ ಮಗನಾದ ರಾಮಚಂದ್ರನಿಗೆ ಆಶೀರ್ವಾದ ಮಾಡಿದ್ದನ್ನು ವಾಯುಪುರಾಣ ಉಲ್ಲೇಖಿಸಿದೆ. ‘ರಾಮ, ನೀನು ಚಿರಕಾಲ ರಾಜ್ಯಭಾರ ಮಾಡುವಿ, ಅಯೋಧ್ಯಾ ಜನರು ಹಾಗೂ ತೃಣ-ಕೀಟಾದಿ ಜೀವರಾಶಿಯೊಂದಿಗೆ ವಿಷ್ಣುಲೋಕವನ್ನು ಹೊಂದುವಿ’ ಎಂದು ಆಶೀರ್ವದಿಸಿದನೆಂದು ಅದು ಉಲ್ಲೇಖ ಮಾಡಿದೆ. ಇದು ರಾಮನ ಪಿತೃಭಕ್ತಿಗೆ ದ್ಯೋತಕವಾದ ಪದ. ರಾಮನು ದೇವರ ಅವತಾರ. ಆತನಿಗೆ ತಂದೆ ದಶರಥನ ಆಶೀರ್ವಾದದಿಂದ ಏನೂ ಆಗಬೇಕಾಗಿಲ್ಲ. ಈ ಆಶೀರ್ವಾದವು ಲೋಕಶಿಕ್ಷಕನಾಗಿ ಅವನು ತೋರಿದ ಪಿತೃಭಕ್ತಿಗೆ ದ್ಯೋತಕವೆನ್ನಬಹುದು.
ರಘುನಾಥಶಬ್ದವು ಇನ್ನೊಂದು ಆಯಾಮದಲ್ಲಿಯೂ ತೆರೆದುಕೊಳ್ಳುತ್ತದೆ. ರಘವಃ ನಾಥಾಃ ಯಸ್ಮಾತ್ ಸಃ = ರಘುನಾಥಃ - ಎಂಬ ವಿವರಣೆಯನ್ನು ಗಮನಿಸಿದಾಗ ಇನ್ನೊಂದು ಅರ್ಥ ಲಭ್ಯವಾಗುತ್ತದೆ. ಕುಲದೀಪಕನಾದ ತನ್ನ ಅವತಾರದಿಂದ, ಪವಿತ್ರ ಕೀರ್ತಿಯಿಂದ ಪಾವನವಾದ ವಂಶದಲ್ಲಿ ಜನ್ಮ ತಳೆದು, ರಘುಕುಲದಲ್ಲಿ ಬಂದ ಎಲ್ಲ ರಾಜರೂ ಸಾಮ್ರಾಟರಾಗಿ ಮೆರೆಯಲು ರಾಮಚಂದ್ರನ ಅನುಗ್ರಹವೇ ಕಾರಣ ಎಂಬ ಅಭಿಪ್ರಾಯವನ್ನೂ ಈ ಪದ ಸೂಚಿಸುತ್ತದೆ. ಅರ್ಥಾತ್, ತನ್ನ ಕೀರ್ತಿಯಿಂದ ಪಾವನವಾದ ಕುಲದಲ್ಲಿ ರಾಜರಾಗಿ, ಚಕ್ರವರ್ತಿಗಳಾಗಿ ಮೆರೆಯಲು, ಶ್ರೀರಾಮಚಂದ್ರ ಕಾರಣ. ಅದಕ್ಕೆಂದೇ ಆತ ರಘುನಾಥ ಎನಿಸಿದ್ದಾನೆ.
ಚತುರ್ವ್ಯೆಹದಲ್ಲಿ ಸೇರಿದ ಭಗವಂತನ ವಾಸುದೇವ ರೂಪವು ಮೋಕ್ಷಪ್ರದ. ಆ ರೂಪವೇ ಒಂದಂಶದಿಂದ ರಾಮನಾಗಿ ಕೌಸಲ್ಯೆಯಲ್ಲಿ ಪ್ರಾದುರ್ಭವಿಸಿತು. ರಾಮಚಂದ್ರನು, ತಾನು ಮೋಕ್ಷಪ್ರದ ವಾಸುದೇವನೆಂದು ಭಕ್ತರಿಗೆ ಸ್ಪಷ್ಟಪಡಿಸಲು, ಗಿಡ-ಮರ-ತೃಣ-ಲತಾ ರೂಪಗಳಲ್ಲಿರುವ, ಕ್ರಿಮಿ-ಕೀಟ-ನೊಣ-ಸೊಳ್ಳೆ ರೂಪಗಳಲ್ಲಿರುವ, ಮತ್ತು ಮೃಗ, ಪಶು-ಪಕ್ಷಿ ರೂಪಗಳಲ್ಲಿರುವ, ಭಗವದ್ದರ್ಶನಸಿದ್ಧಿಯನ್ನು ಪಡೆದ ಎಲ್ಲ ಸುಜೀವರಿಗೂ ಸರಯೂ ನದಿಯಲ್ಲಿ ಸ್ನಾನ ಮಾಡಿಸಿದ. ದಿವ್ಯದೇಹವನ್ನು ಪಡೆದ ಅವರನ್ನು ಸದಾ ಇರುವ ತನ್ನ ಸಾಂತಾನಿಕ ಲೋಕಕ್ಕೆ ಕರೆದುಕೊಂಡು ಹೋಗಿ ಮೋಕ್ಷಪ್ರದಾನ ಮಾಡಿದ.
ಜಾತ್ಯತೀತ ರಾಮ: ಜ್ಞಾನಸಿದ್ಧಿ-ಮೋಕ್ಷಸಿದ್ಧಿಗಳು ಯೋಗ್ಯತೆಯುಳ್ಳ ಎಲ್ಲ ವರ್ಗದ ಮನುಷ್ಯರಿಗೆ ಸಂಬಂಧಿಸಿದ್ದು. ಅದು ಕೇವಲ ಉಚ್ಚ ಜಾತಿಗೆ, ಅದರಲ್ಲಿಯೂ ಗಂಡಸರಿಗೆ ಮಾತ್ರ, ಗಂಡಸರಲ್ಲಿಯೂ ಸಂನ್ಯಾಸಿಗಳಿಗೆ ಮಾತ್ರ ಸೀಮಿತಗೊಳಿಸದೆ, ಯಾವ ಜಾತಿಗೂ ಅಂಟಿಕೊಳ್ಳದೆ, ಯೋಗ್ಯರಾದ ಎಲ್ಲ ಸುಜೀವಿಗಳಿಗೂ ಮೋಕ್ಷವನ್ನು ರಾಮಚಂದ್ರನು ಪ್ರದಾನ ಮಾಡಿ, ತಾನು ಜಾತ್ಯತೀತ ಭಕ್ತವತ್ಸಲನೆಂದು ಲೋಕಕ್ಕೆ ತೋರಿಸಿದ್ದಾನೆ. ಸುರ-ಅಸುರ, ನರ-ವಾನರ, ಕರಡಿ, ರಾಕ್ಷಸ, ಬೇಡತಿ-ಬೇಡ, ಹದ್ದು ಮುಂತಾದ ಭಕ್ತರೊಂದಿಗೆ ಪ್ರೀತಿಯಿಂದ ಬೆರೆತು, ಅವರನ್ನು ಅನುಗ್ರಹಿಸಿದ. ದೇಹದಲ್ಲಿ ನೆಲೆಸಿರುವ, ಪ್ರಾಣ, ಶ್ರದ್ಧಾ, ಮನಸ್ಸು, ಇಂದ್ರಿಯ, ಗೋಲಕ, ತಪೋ, ವೀರ್ಯ, ನಾಮ, ಅನ್ನ, ಮಂತ್ರ ಮುಂತಾದ 16 ಕಲಾಭಿಮಾನಿ ದೇವತಾಗಣಕ್ಕೆ ಸ್ವಾಮಿಯಾದ. ಷೋಡಶ ಕಲಪುರುಷನೆಂದು ಷಟ್ಪ್ರಶ್ನ ಉಪನಿಷತ್ತಿನಲ್ಲಿ, ಬಣ್ಣಿಸಲ್ಪಟ್ಟ ಭಗವಂತನು ಭಾಗವತದಲ್ಲಿ ಕಲೇಶ ಎಂದು ಉಲ್ಲೇಖಿಸಲ್ಪಟ್ಟಿದ್ದಾನೆ. ಈತ, ಒಂದಂಶದಿಂದ ಇಕ್ಷ್ವಾಕು ವಂಶದಲ್ಲಿ ಅವತರಿಸಿ, ತಂದೆಯ ಮಾತಿಗೆ ಬದ್ಧನಾಗಿ, ಪತ್ನಿ, ತಮ್ಮನೊಂದಿಗೆ ಕಾಡಿಗೆ ಹೊರಟ. ಸಿಂಹಾಸನ ತಪ್ಪಿಹೋದ ಖೇದವಿಲ್ಲದೆ ಪೂರ್ಣಾನಂದದಿಂದ ಮಹಾಪ್ರಸನ್ನವಾದ, ನಿಷ್ಕಳಂಕವಾದ, ಪೂರ್ಣಚಂದ್ರಮುಖವನ್ನು ತೋರುತ್ತ ಹೋದ. ಹೀಗಾಗಿ ವಿಷಮಸ್ಥಿತಿಯಲ್ಲಿಯೂ ಸುಂದರವಾದ ಪರಿಪೂರ್ಣ ಚಂದ್ರಮುಖವನ್ನು ತೋರಿದ್ದರಿಂದ ರಾಮಚಂದ್ರ ಎಂಬ ಹೆಸರು ಈತನಿಗೆ ಅನ್ವರ್ಥವಾಗಿದೆ.
ಲೋಕದ ತಂದೆ, ತಾಯಿಗಳಾದ ಸೀತಾರಾಮರ ನಿಜದರ್ಶನವನ್ನು ಮಂತ್ರತುಲ್ಯದ ಪದ್ಯದಲ್ಲಿ ನಿತ್ಯವೂ ಮಾಡುತ್ತ, ಅದನ್ನು ಪಠಿಸಿ, ಅವರಿಗೆ ನಮಿಸಿ ಕೃತಾರ್ಥರಾಗೋಣ. ಅಯೋಧ್ಯಾಧಾಮ ನಾದ ಬಾಲರಾಮಚಂದ್ರನು ತನ್ನ ಸುಂದರ ಕೀರ್ತಿರೂಪ ಚಂದ್ರನ ಬೆಳದಿಂಗಳನ್ನು ನಮ್ಮೆಲ್ಲರ ಮನಸ್ಸೆಂಬ ನೈದಿಲೆಯ ಮೇಲೆ ಬೀರಲಿ. ನಮ್ಮನ್ನು ವಿಕಾಸಗೊಳಿಸಲಿ.
ಅಯೋಧ್ಯಾಯಾಂ ರಾಮಜ್ಯೋತಿರ್ದೀಪ್ತಂ ದೃಷ್ಟಾ್ವ ಶುಭಾವಹಂ
ಕೃತ್ವಾ ರಾಷ್ಟ್ರಂ ನಂದಿಘೊಷಂ ಜಯತಾತ್ ಸುಪಥಾ ಸದಾ|
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net