ಕೆರೆಗಳನ್ನು ತುಂಬಿಸುವ ಸಂಕಲ್ಪದೊಂದಿಗೆ ಮರುಳಸಿದ್ಧೇಶ್ವರ ದೇಗುಲ ಲೋಕಾರ್ಪಣೆ

್ಸಹಯು
Published on

ಸದಾ ಸಾಮಾಜಿಕ, ವೈಚಾರಿಕ, ಧಾರ್ವಿುಕ, ಶೈಕ್ಷಣಿಕ, ಸಾಹಿತ್ಯಿಕ, ಶರಣರ ತತ್ವದೊಂದಿಗೆ ಮಾನವೀಯತೆಯ ಬೆಸುಗೆಯಡಿ, ರೈತರ, ಜನ-ಜಾನುವಾರುಗಳ ಸಂಕಷ್ಟಗಳಿಗೆ ಮಿಡಿಯುವ, ಸರ್ವರ ಅಭ್ಯುದಯಕ್ಕೆ ಶ್ರಮಿಸುವ ಜಾತ್ಯತೀತ ಮಠವೆಂದೇ ಪ್ರಸಿದ್ಧವಾದುದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ.

ಕೆರೆಗಳನ್ನು ತುಂಬಿಸುವ ಸಂಕಲ್ಪ: 2021ರ ತರಳಬಾಳು ಹುಣ್ಣಿಮೆ ಮಹೋತ್ಸವವು ಕೊಟ್ಟೂರಿನಲ್ಲಿ ನಡೆಯಲಿದೆ. ಅದಕ್ಕೂ ಮುನ್ನವೇ ಈ ಭಾಗದ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೃಹನ್ಮಠವು ಹೆಜ್ಜೆ ಇಟ್ಟಿದೆ. ಬಳ್ಳಾರಿ ಜಿಲ್ಲೆ ಉಜ್ಜಯಿನಿ ಸಮೀಪದ ನೂತನ ತಾಲ್ಲೂಕು ಕೊಟ್ಟೂರು ವ್ಯಾಪ್ತಿಯ ಸಾವಿರಾರು ಭಕ್ತರ ನಿಯೋಗವು - ಕೊಟ್ಟೂರು ಮತ್ತು ಈ ಭಾಗದ 11 ಕೆರೆಗಳಿಗೆ ನೀರು ತುಂಬಿಸುವ ಜನತೆಯ ದಶಕಗಳ ಕನಸಿನ ಯೋಜನೆಯು ಶ್ರೀ ತರಳಬಾಳು ಬೃಹನ್ಮಠದ ವತಿಯಿಂದ ಕೊಟ್ಟೂರಿನಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಒಳಗಾಗಿ ಸಾಕಾರಗೊಳಿಸುವಂತೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಲ್ಲಿ ಮನವಿ ಮಾಡಿದೆ.

ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ಕಳಸಾರೋಹಣ: ಕೊಟ್ಟೂರು ತಾಲೂಕು ಉಜ್ಜಯನಿ ಸಮೀಪದ ತೂಲಹಳ್ಳಿಗೂ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೂ ಬಹುಕಾಲದ ಬಾಂಧವ್ಯವಿದೆ. ಶ್ರೀಮದುಜ್ಜಯಿನಿ ಸದ್ಧರ್ಮಸಿಂಹಾಸನದ ವಿಶ್ವಬಂಧು ಮರುಳಸಿದ್ಧರು 12ನೇ ಶತಮಾನದ ಕ್ರಾಂತಿಕಾರಿ ವೈಚಾರಿಕ ಮಹಾಗುರುವಾಗಿದ್ದಾರೆ.

ಕುಚಿಮಾರ-ಸುಪ್ರಭೆ ದಂಪತಿಯ ಪುಣ್ಯಗರ್ಭದಲ್ಲಿ, ಹಂಪೆಯ ದಕ್ಷಿಣದಿಕ್ಕಿನ ಕೂಗಳತೆಯ ದೂರದ ಕಗ್ಗಲ್ಲುಪುರದಲ್ಲಿ ಜನಿಸಿದ ಮರುಳಸಿದ್ಧ, ಕಣ್ಣು ಬಿಡುವ ಮೊದಲೇ ತನ್ನ ತಂದೆ ತಾಯಿಗಳನ್ನು ಕಳೆದುಕೊಂಡ. ಇವನನ್ನು ಸಾಕಿ ಸಲುಹಿದವರು ಕಗ್ಗಲ್ಲುಪುರದ ಬಾಚಣ್ಣಗೌಡ. ಅವರ ಮನೆಯ ಮಗನಾಗಿ ಗೋವುಗಳನ್ನು ಕಾಯುತ್ತ ಮರುಳಸಿದ್ಧ ಬೆಳೆಯುತ್ತಿದ್ದ.

ಈ ಸಂದರ್ಭದಲ್ಲಿ ತಮ್ಮೂರಿನ ಜಾತ್ರೆಗೆ ಕೋಣವೊಂದನ್ನು ಬಲಿ ಕೊಡುವ ವಿಷಯ ತಿಳಿದು ಅವನ ಹೃದಯ ಮಿಡಿಯಿತು. ಕೋಣನ ಬಲಿಯನ್ನು ತಡೆಯುವ ಮರುಳಸಿದ್ಧನ ಹೋರಾಟಕ್ಕೆ ಹಿನ್ನಡೆಯಾದ ಕಾರಣದಿಂದ ಆ ಊರನ್ನು ತೊರೆದು, ಚಿನ್ಮೂಲಾದ್ರಿಯ ಗುರು ರೇವಣಸಿದ್ಧರಿಂದ ಲೋಕಸೇವಾ ದೀಕ್ಷೆ ಕೈಗೊಂಡ. ಲೋಕಸಂಚಾರದ ತರುವಾಯ ತೆಲುಗುಬಾಳಿಗೆ ಬಂದು ಮೂಕಸಿದ್ಧಯ್ಯನನ್ನು ವಟುವಾಗಿ ಸ್ವೀಕರಿಸಿ ಮಾತನಾಡುವ ಸಿದ್ಧಯ್ಯನನ್ನಾಗಿಸಿದ. ಕಗ್ಗಲ್ಲುಪುರದ ಬಾಚಣ್ಣಗೌಡರಿಂದ ನವ ಪಾದಗಳ ಭೂಮಿಯನ್ನು ಪಡೆದು ಆ ಸ್ಥಳವನ್ನು ಉಜ್ಜಯಿನಿ ಕ್ಷೇತ್ರವನ್ನಾಗಿಸಿ ಅಲ್ಲಿ ಸದ್ಧರ್ಮಪೀಠವನ್ನು ಸ್ಥಾಪಿಸಿದ. ಅಂದಿನಿಂದ ಶ್ರೀಮದುಜ್ಜಯಿನಿ ಸದ್ಧರ್ಮಸಿಂಹಾಸನದ ಸುವರ್ಣ ಶಕೆ ಆರಂಭವಾಯಿತು.

ಮರುಳಸಿದ್ಧರು ಬಾಲ್ಯಾವಸ್ಥೆಯಲ್ಲಿ ಪಶುಪಾಲನೆಯ ಸಮಯದಲ್ಲಿ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದ ವಲಯದಲ್ಲಿ ವಾರಿಗೆಯ ಗೆಳೆಯರೊಂದಿಗೆ ಮರಗಳಿಗೆ ಉಯ್ಯಾಲೆಯನ್ನು ಕಟ್ಟಿ ಆಡಿದ್ದರು. ಇದರಿಂದ ಈ ಗ್ರಾಮಕ್ಕೆ ಉಯ್ಯಲೆಹಳ್ಳಿ, ತೂಗಿದುಯ್ಯಾಲೆಹಳ್ಳಿ ಎಂತಲೂ ಕಾಲಾಂತರದಲ್ಲಿ ತೂಲಹಳ್ಳಿ ಎಂತಲೂ ಕರೆಯುವುದು ರೂಢಿಯಾಯಿತು. ಗ್ರಾಮದ ಹೃದಯಭಾಗದಲ್ಲಿ ಶ್ರೀ ವಿಶ್ವಬಂಧು ಮರುಳಸಿದ್ಧರ ದೇವಸ್ಥಾನವಿದೆ.

ನೂತನ ದೇಗುಲ ಕಳಾಸಾರೋಹಣ ಕಾರ್ಯಕ್ರಮ: ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರರ ನೂತನ ದೇವಾಲಯವು ಜೀಣೋದ್ಧಾರಗೊಂಡು ಆಕರ್ಷಕವಾಗಿ ನಿರ್ವಿುತವಾಗಿದೆ. ದೇವಾಲಯದ ನೂತನ ಗೋಪುರವು ನಯನಮನೋಹರವಾಗಿ ನಿರ್ವಿುಸಲ್ಪಟ್ಟಿದೆ. ದೇವಾಲಯದ ಹೊರಾಂಗಣದ ಸುತ್ತ ವಿಶ್ವಬಂಧು ಮರುಳಸಿದ್ಧರ ಕ್ರಾಂತಿಕಾರಕ ಪವಾಡಗಳನ್ನು ಕೆತ್ತಲಾಗಿವೆ. ಈ ದೇವಸ್ಥಾನದ ಜತೆಗೆ ಗುರುಪಿತಾಮಹ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳ ಸ್ಮರಣಾರ್ಥ ನೂತನ ಕಲ್ಯಾಣಮಂಟಪವನ್ನು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇದೇ ಶನಿವಾರ (ಮಾ. 14) ಲೋಕಾರ್ಪಣೆ ಮಾಡಲಿದ್ದಾರೆ. ಅನೇಕ ಜನಪ್ರತಿನಿಧಿಗಳು ಸೇರಿದಂತೆ ಹತ್ತಾರು ಸಾವಿರ ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net