

| ಡಿ. ಯಶೋದಾ, ಆಪ್ತ ಸಮಾಲೋಚಕಿ
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಆದರೆ ಈಗಿನ ಕಾಲದಲ್ಲಿ ಮದುವೆ ಎನ್ನುವ ಪರಿಕಲ್ಪನೆಯೇ ಬದಲಾಗಿದೆ. ತನಗೆ ಸೂಕ್ತ ವರ ಸಿಗುವುದಿಲ್ಲವೇನೋ? ಸಿಕ್ಕರೂ ಸಾಂಸಾರಿಕ ಜೀವನ ಹೇಗಿರುತ್ತದೋ? ಜವಾಬ್ದಾರಿ ನಿರ್ವಹಣೆ ಹೇಗೆ ಎಂಬ ಅನೇಕ ಗೊಂದಲಗಳ ನಡುವೆ ಹೆಣ್ಣು ಮಕ್ಕಳು ಮದುವೆ ಎಂಬ ಬಂಧದಲ್ಲಿ ಬಂಧಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೊರಬರಲು ಪಾಲಕರು ಮಾಡಬೇಕಿರುವುದೇನು ಎಂಬುದನ್ನು ಇಲ್ಲಿ ಲೇಖಕರು ತಿಳಿಸಿದ್ದಾರೆ.
ತೆಂಗಿನ ಮರದ ತರಹ ಉದ್ದಕ್ಕೆ ಬೆಳೆದುಬಿಟ್ಟಿದ್ದಾಳೆ, ಈ ಹುಡುಗಿಗೆ ಅಮಿತಾಭ್ ಬಚ್ಚನ್ ಅಂತಹವನನ್ನೇ ಹುಡುಕಬೇಕಾಗುತ್ತದೆ, ಆದರೆ ನಮ್ಮಲ್ಲಿ ಅಷ್ಟು ಉದ್ದ ಇರುವವರು ಸಿಗುತ್ತಾರಾ?, ತನ್ನ ಉದ್ದಕ್ಕೆ ಸರಿಹೋಗುವಂತಹವನೇ ಬೇಕೆಂದು ಅವಳು ಕಾಯುತ್ತಾ ಕೂತರೆ ಮದುವೆಯಾಗದೇ ಉಳಿಯಬೇಕಾಗುತ್ತದೆ...ಅವರು ಅಂದದ್ದು ಇಷ್ಟೇ. ಆದರೆ ಈ ಮಾತಿನ ಪರಿಣಾಮ ತೆಂಗಿನ ಮರದ ಉದ್ದವನ್ನೂ ಮೀರಿಸಿತ್ತು.
ತಮ್ಮ ಮನೆಯ ಹುಡುಗನಿಗೆ ಮದುವೆ ಮಾಡಲು ಹುಡುಗಿ ನೋಡಲು ಹೋಗಿದ್ದ ಆ ಮನೆಯ ಸದಸ್ಯರಲ್ಲೊಬ್ಬರು ತಮ್ಮ ಮೀಡಿಯಂ ಉದ್ದದ ವರನಿಗೆ ಉದ್ದನೆಯ ಹುಡುಗಿ ನೋಡಿ ಅವಳು ತಮ್ಮ ಹುಡುಗನನ್ನು ಒಪ್ಪುವುದಿಲ್ಲ ಎಂದುಕೊಂಡು ಆ ಮನೆಯಿಂದ ಹೊರಡುವಾಗ ಈ ಮಾತು ಹೇಳಿದರು. ಅದು ಹೇಗೋ ಈ ಮಾತು ಆ ಹುಡುಗಿಯ ಕಿವಿಗೆ ಬಿದ್ದುಬಿಟ್ಟಿತು. ಇಷ್ಟರಲ್ಲಾಗಲೇ ಹುಡುಗಿ ತುಂಬಾ ಉದ್ದ ಎಂಬ ಕಾರಣವಾಗೇ ಒಂದೆರಡು ಸಂಬಂಧ ಮುಂದುವರಿದಿರಲಿಲ್ಲ. ಈಗ ಬಂದ ಸಂಬಂಧದವರ ಮಾತಿನಿಂದ ತನಗೆ ಮದುವೆಯಾಗದೇ, ಹಾಗೇ ಉಳಿಯಬೇಕಾಗುತ್ತದೇನೋ ಎಂಬ ಭಯವನ್ನೂ ತುಂಬಿತು. ರಾತ್ರಿಯೆಲ್ಲಾ ಯೋಚಿಸಿ ಆಕೆ ಒಂದು ನಿರ್ಧಾರಕ್ಕೆ ಬಂದಳು, ಮುಂದಿನ ಸಂಬಂಧದಲ್ಲಿ ಗಂಡು ಹೇಗಿದ್ದರೂ ಪರವಾಗಿಲ್ಲ ತಾನು ಒಪ್ಪಿಕೊಳ್ಳಬೇಕೆಂದು.
ಹುಡುಗಿ ತುಂಬಾ ಕಪ್ಪು, ಅಷ್ಟೇ ಅಲ್ಲ ತುಂಬಾ ಸಣ್ಣ ಬೇರೆ ಇದ್ದಾಳೆ, ಯಾರು ಮೆಚ್ಚುತ್ತಾರೋ?
ವಧು ಅನ್ವೇಷಣೆಯಲ್ಲಿ ತೊಡಗಿದ್ದ ಇನ್ನೊಂದು ಕುಟುಂಬದ ಸದಸ್ಯರೊಬ್ಬರ ಮಾತಿದು. ಈ ಮಾತನ್ನು ಕೇಳಿಸಿಕೊಂಡ ಹುಡುಗಿ ಅಮ್ಮ ಅವರಿಗೆ ನಮ್ಮ ಮಗಳು ಇಷ್ಟವಾಗದಿದ್ದರೆ ಬೇಡ, ಆದರೆೆ ಬೇರೆಯವರು ಮೆಚ್ಚುತ್ತಾರೋ ಇಲ್ಲವೋ ಎಂದು ಯಾಕೆ ಹೇಳಬೇಕು ಎಂದು ಬೇಸರಿಸಿಕೊಂಡರು. ಈ ಮಾತುಗಳಿಗೆ ಮೂಲ ಕಾರಣವಾದ ಮಗಳು ತನ್ನ ತಪ್ಪೇನಿಲ್ಲದಿದ್ದರೂ ತಪ್ಪಿತಸ್ಥಳೆಂಬ ಭಾವದಲ್ಲಿ ನರಳಬೇಕಾಯಿತು. ನಮ್ಮ ಹೆಣ್ಣುಮಕ್ಕಳು ಯಾಕೆ ಇಷ್ಟು ವೀಕ್? ಈ ಮೇಲಿನ ಪ್ರಕರಣಗಳಲ್ಲಿನ ಹೆಣ್ಣುಮಕ್ಕಳನ್ನು ಗಮನಿಸಿದರೆ ಬೇರೆಯವರ ಅನಿಸಿಕೆ, ಅಭಿಪ್ರಾಯ, ಅನುಭವಕ್ಕೆ ಬೆಲೆಕೊಟ್ಟು ತಮ್ಮ ಆಸೆ, ಕನಸು, ಸಾಧನೆಯ ಗುರಿ, ಸಿದ್ಧಾಂತಗಳನ್ನು ಬಲಿಕೊಡುತ್ತಿದ್ದಾರಾ ಅಂತನಿಸುತ್ತದೆ.
ಯಾರೋ ಏನೋ ಅಂದುಬಿಟ್ಟರು ಎಂದು ತಲೆಕೆಡಿಸಿಕೊಳ್ಳುವ ಬದಲು, ಒಳ್ಳೆಯತನಕ್ಕೆ, ಅಪ್ಪ ಅಮ್ಮನ ಮಾತಿಗೆ ಬೆಲೆಕೊಟ್ಟರೆ ಸಾಕಲ್ಲವೇ? ಹಾಗೆಯೇ ಮದುವೆಯಿಂದ ಯಾರಿಗೋ ಏನೋ ತೊಂದರೆ ಆದರೆ, ತಮಗೂ ಅದೇ ಆಗುತ್ತದೆ ಎಂದು ಭಾವಿಸುವುದೂ ತಪ್ಪು. ಪಾಲಕರೂ ಅಷ್ಟೇ ಮಕ್ಕಳ ಸುಖ- ನೆಮ್ಮದಿ ಮತ್ತು ಅವರ ಪ್ರಗತಿ ಬಗ್ಗೆ ಗಮನ ಕೊಡುವುದು ಬಿಟ್ಟು ಬೇರೆಯವರ ದೃಷ್ಟಿಯಲ್ಲಿ ತಮ್ಮ ಮಕ್ಕಳ ಭವಿಷ್ಯ ಕಾಣುವುದು ವಿಚಿತ್ರ ಎನಿಸುತ್ತದೆ.
ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಗುಣ ಮಕ್ಕಳು ಮತ್ತು ಪಾಲಕರು ಇಬ್ಬರಿಗೂ ಬೇಕು. ಮಕ್ಕಳು ತಪ್ಪು ಮಾಡಿದಾಗ, ಸಮಾಜಘಾತುಕ ಕೆಲಸದಲ್ಲಿ ತೊಡಗಿದಾಗ ಮಾತ್ರ ಪಾಲಕರು ಆತಂಕ ಪಡಬೇಕು, ಮದುವೆಯಾಗಲಿಲ್ಲ, ಮಕ್ಕಳಾಗಲಿಲ್ಲ, ಬೇರೆಯವರು ಆಡಿಕೊಳ್ಳುತ್ತಾರೆ.... ಎಂದು ಗೋಳಾಡುವುದು ಎಷ್ಟು ಸರಿ?
ಅವರ ಜೀವನ, ಅವರ ನಿರ್ಧಾರ: ಮದುವೆಯ ವಯಸ್ಸಿನ ಮಕ್ಕಳಿಗೆ ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬುದ್ಧಿ, ಸಾಮರ್ಥ್ಯ, ಹಕ್ಕು ಎಲ್ಲವೂ ಇರುತ್ತದೆ. ಸಾಧ್ಯವಾದರೆ ಪಾಲಕರು, ಮದುವೆ ಬಗ್ಗೆ ತಮ್ಮ ಮಕ್ಕಳಿಗಿರುವ ನಕಾರಾತ್ಮಕ ಭಾವನೆ ಹೋಗಲಾಡಿಸಲು ಯತ್ನಿಸಬಹುದು, ಅವರ ಮನಸ್ಸನ್ನು ಬದಲಾಯಿಸುವ ಪ್ರಯತ್ನ ಮಾಡಬಹುದೇನೋ, ಆದರೆ ಅಭಿಪ್ರಾಯ ಹೇರಲು ಸಾಧ್ಯವಿಲ್ಲ. ಮಕ್ಕಳಿಗೆ ಮದುವೆ ನಂತರ ಉಂಟಾಗಬಹುದಾದ ಹಣಕಾಸು ಸಮಸ್ಯೆ, ಮನೆ- ಮಕ್ಕಳ ಕೆಲಸಗಳ ಕಷ್ಟದ ಭಯವಾಗಿದ್ದರೆ, ತಾವು ಸಹಾಯ ಮಾಡುವುದಾಗಿ ಭರವಸೆ ನೀಡುವ ಮೂಲಕ ಪೋಷಕರು ಮಕ್ಕಳನ್ನು ಮದುವೆ ಸಂಬಂಧಕ್ಕೆ ಒಪ್ಪಿಸಬಹುದೇ ಹೊರತು, ಬೇರೆ ಯಾವುದೇ ಹಟ, ಆಣೆ- ಪ್ರಮಾಣ, ಸಾವಿನ ಭಯದಿಂದ ತಮ್ಮ ಮಾತು ಕೇಳುವಂತೆ ಮಾಡುವುದು ಸಲ್ಲದ ವರ್ತನೆ.
ಪರಸ್ಪರ ಒಪ್ಪಿಗೆಯಿಂದ ಆಗಲಿ: ಇತ್ತೀಚೆಗೆ ಕೆಲವರು ಮದುವೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲೋ ಅಥವಾ ಸಂಸಾರದ ಜಂಜಾಟ ಬೇಡವೆಂದೋ, ಆರ್ಥಿಕವಾಗಿ ಸಾಕಷ್ಟು ಸಬಲರಾಗಿಲ್ಲವೆಂದೋ, ಮತ್ತಿನ್ನೇನೋ ಕಾರಣಕ್ಕೆ ಮದುವೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವರು ತಮ್ಮ ಸುತ್ತಮುತ್ತ ಗಂಡ- ಹೆಂಡಿರ ಜಗಳ, ವಿಚ್ಛೇದನ, ಆಸ್ತಿ ವಿವಾದ, ಮರುಮದುವೆ... ಇವೆಲ್ಲವನ್ನೂ ಗಮನಿಸಿ ಮದುವೆಯೇ ಬೇಡ ಎಂದು ಮದುವೆ ಮೇಲೆ ಮುನಿಸಿಕೊಂಡಿದ್ದಾರೆ. ಕೆಲ ಹೆಣ್ಣುಮಕ್ಕಳು ಓದಿ, ಸಾಧನೆ ಮಾಡಿ ಅಥವಾ ಸಾಧನೆಯ ಹಾದಿ ಕಂಡುಕೊಂಡ ಮೇಲೆ ಮದುವೆ ಮಾತು ಎಂದು ಮದುವೆಯನ್ನು ದೂರ ಮಾಡುತ್ತಿದ್ದಾರೆೆ, ಇನ್ನೂ ಕೆಲವರು ಬಹಿರಂಗಪಡಿ ಸಲಾಗದ ಸಮಸ್ಯೆಯಿಂದಲೂ ಮದುವೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ಮದುವೆ ಬಗ್ಗೆ ಗೊಂದಲ ಹೆಚ್ಚಾಗಿದ್ದು, ಮದುವೆ ಸಂಬಂಧವಾಗಿ ಕೌನ್ಸೆಲಿಂಗ್ ನೆರವು ಪಡೆಯುವವರು ಹೆಚ್ಚಾಗಿದ್ದಾರೆ. ಮದುವೆ ಎಂದರೆ ಗಂಡು- ಹೆಣ್ಣು ಜೀವನ ಪೂರ್ತಿ ಜತೆಯಾಗಿ ಸಾಮರಸ್ಯದಿಂದ ಬದುಕುವಂಥದ್ದು. ಇಂತಹ ಮಹತ್ವಪೂರ್ಣ ಮದುವೆ ಆತುರದಲ್ಲೋ, ಒತ್ತಡದಲ್ಲೋ, ಬೇರೆ ಒಂದು ಉದ್ದೇಶದ ಸಲುವಾಗಿಯೋ ಆಗದೇ, ಪ್ರೀತಿಯಿಂದ, ಪರಸ್ಪರ ಒಪ್ಪಿಗೆಯಿಂದ ಆಗುವುದಾದರೆ ಸಾರ್ಥಕ.
ಭಾವನೆಗಳಿಗೆ ಬೆಲೆ ಕೊಡಿ: ಯಾವುದೇ ಸಂಬಂಧದಲ್ಲಾಗಲಿ ವ್ಯಕ್ತಿಯ ಭಾವನೆಗೆ ಬೆಲೆ ಕೊಡಬೇಕಾಗುತ್ತದೆ, ಅದು ತಪ್ಪೋ ಸರಿಯೋ ಅದರ ಪರಿಣಾಮ ಅವರಿಗೇ ಬಿಟ್ಟಿದ್ದು, ನಮಗೆ ಅವರ ಬಗ್ಗೆ ಕಾಳಜಿ ಇದ್ದರೆ, ಅವರು ತೆಗೆದುಕೊಂಡಿರುವ ನಿರ್ಧಾರದಲ್ಲಿ ತಪ್ಪು ಕಂಡರೆ ತಿದ್ದುವ, ಅವರಿಗೆ ತಿಳಿಹೇಳಿ ಸರಿಮಾಡುವ ಪ್ರಯತ್ನ ಮಾಡಬಹುದಷ್ಟೇ. ಅದನ್ನು ಒಪ್ಪುವುದು ಬಿಡುವುದು ಅವರಿಗೇ ಬಿಟ್ಟಿದ್ದು.