ಮದುವೆಯ ಈ ‘ಬಂಧ’... ವಿವಾಹಕ್ಕೂ ಮುನ್ನ ಬೇಕು ಈ ಕೌನ್ಸೆಲಿಂಗ್‌...

lalitha1
Published on

ಗಂಡ ಹೆಂಡಿರ ಜಗಳ ಉಂಡುಮಲಗುವ ತನಕ ಎನ್ನುವ ಬದಲು ಕೋರ್ಟ್​ ಮೆಟ್ಟಿಲೇರುವವರೆಗೆ, ವಿಚ್ಛೇದನ ಪಡೆಯುವವರೆಗೆ ಎಂದಾಗಿದೆ ಇಂದಿನ ಸ್ಥಿತಿ. ವಿಕೋಪಕ್ಕೆ ಹೋಗುತ್ತಿರುವ ದಾಂಪತ್ಯ ಜೀವನದ ಹಾದಿಯನ್ನು ಸರಿದಾರಿಗೆ ತರುವ ಉದ್ದೇಶದಿಂದಲೇ ಗೋವಾ ಸರ್ಕಾರ ಪ್ರೀ ಮ್ಯಾರೇಜ್​ ಕೌನ್ಸೆಲಿಂಗ್​ ಕಡ್ಡಾಯ ಮಾಡುವ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ. ಹಾಗಿದ್ದರೆ ಏನಿದು ಕೌನ್ಸೆಲಿಂಗ್​ ಇದರ ಅವಶ್ಯಕತೆ ಏನು?

|ರೂಪಾ ಲಕ್ಷ್ಮೀಪತಿ ರಾವ್​

ಆಕೆಯದ್ದು ಹೋಟೆಲ್​ ಒಂದರಲ್ಲಿ ರಿಸೆಪ್ಷನಿಸ್ಟ್​ ಕೆಲಸ. ಈತ ಸರ್ಕಾರಿ ನೌಕರ. ರಿಸೆಪ್ಷನಿಸ್ಟ್​ ಎಂದ ಮೇಲೆ ಸೌಂದರ್ಯದೆಡೆ ಗಮನ ಕೊಡಲೇಬೇಕು. ಅದಕ್ಕಾಗಿಯೇ ಕೆಲಸಕ್ಕೆ ಹೋಗುವಾಗ ದಿನವೂ ಕನ್ನಡಿ ಮುಂದೆ ನಿಲ್ಲುವ ಪತ್ನಿಯನ್ನು ಕಂಡು ಗಂಡನಿಗೆ ಅದೇನೋ ಸಂಕಟ. ತನ್ನ ಪತ್ನಿಯ ಕೆಲಸ ಏನು ಎಂದು ಗೊತ್ತಿದ್ದರೂ ಅವಳು ಕನ್ನಡಿ ಮುಂದೆ ನಿಂತು ಶೃಂಗಾರ ಮಾಡಿಕೊಳ್ಳುವುದು, ತನ್ನಷ್ಟಕ್ಕೆ ತಾನು ನಗುವಿನ ಪ್ರಾಕ್ಟೀಸ್​ ಮಾಡುವುದು ಈತನಿಗೆ ನೋಡಲು ಆಗುತ್ತಿಲ್ಲ. ನೇರವಾಗಿ ಹೇಳಲು ಆಗದ ಆತನದ್ದು ದಿನವೂ ಸಿಡಿಸಿಡಿ ಮಾತು. ಪತ್ನಿ ಸ್ವಲ್ಪ ಲೇಟಾಗಿ ಬಂದರೂ ಏನೋ ಸಂದೇಹ. ದಂಪತಿ ನಡುವೆ ಬಿಟ್ಟಿದೆ ಬಿರುಕು, ಒಡೆದಿದೆ ಸಂಸಾರ...

ಇನ್ನೊಂದು ಕಥೆ ನೋಡಿ... ಪತಿ ಪ್ರತಿಷ್ಠಿತ ಬ್ಯಾಂಕ್​ ಒಂದರ ಉದ್ಯೋಗಿ, ಪತ್ನಿ ಗೃಹಿಣಿ. ಬ್ಯಾಂಕ್​ ಕೆಲಸಕ್ಕಾಗಿ ಮೇಲಿಂದ ಮೇಲೆ ಬರುವ ಮಹಿಳಾ ಗ್ರಾಹಕರೂ ಆತನಿಗೆ ಪರಿಚಯ. ಅದಕ್ಕಾಗಿಯೇ ರಸ್ತೆಯಲ್ಲಿ ಹೋಗುವಾಗ ಹೆಣ್ಣುಮಕ್ಕಳು ಮಾತನಾಡಿಸುವುದು, ಮುಗುಳ್ನಗುವುದು ಸಹಜವೇ. ಪಕ್ಕದಲ್ಲಿರುವ ಪತ್ನಿಗೆ ಶುರುವಾಗೋಯ್ತು ಸಂಕಟ. ನಿತ್ಯವೂ ಇದೇ ವಿಷಯಕ್ಕೆ ಮನೆಯಲ್ಲಿ ಜಗಳ, ಪ್ರೇಮ ವಿವಾಹ ವಿಚ್ಛೇದನದಲ್ಲಿ ಅಂತ್ಯ...

ಇದು ಎರಡು ಉದಾಹರಣೆಗಳಷ್ಟೇ. ಇಂದು ಕೋರ್ಟ್​ ಮೆಟ್ಟಿಲೇರುತ್ತಿರುವ ಪ್ರಕರಣಗಳತ್ತ ದೃಷ್ಟಿ ಹಾಯಿಸಿದಾಗ, ವಿಚ್ಛೇದನ ನೀಡಲು ದಂಪತಿ ನೀಡುತ್ತಿರುವ ಕಾರಣಗಳನ್ನು ನೋಡಿದಾಗ ಉಳಿದವರಿಗೆ ಅದು ಹಾಸ್ಯಾಸ್ಪದ ಎನ್ನಿಸುವುದುಂಟು. ಅಷ್ಟೇ ಏಕೆ.. ವಿಚ್ಛೇದನ ಪಡೆದು ವರ್ಷಗಳಾದ ಮೇಲೆ ಅವರು ಹಿಂದಿನ ಜೀವನವನ್ನು ಮೆಲುಕು ಹಾಕಿದಾಗ ಛೇ... ನಾನು ಇಷ್ಟಕ್ಕೇ ಡಿವೋರ್ಸ್​ ಕೊಟ್ಟುಬಿಟ್ಟೆನಾ ಎಂದು ಕೌನ್ಸೆಲಿರ್​ ಬಳಿ ಹೋದಾಗ ಪರಿತಪಿಸುವುದೂ ಉಂಟು.

ಈ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ನಿಜಕ್ಕೂ ದಾಂಪತ್ಯವನ್ನು ಮುರಿದುಕೊಳ್ಳುವಷ್ಟು ಕಾರಣಗಳು ಅಲ್ಲಿದ್ದವಾ? ಪ್ರೇಮ ವಿವಾಹವೇ ಆಗಲಿ, ಹಿರಿಯರು ನೋಡಿ ಮಾಡಿದ ಮದುವೆಯೇ ಆಗಲಿ... ಸಾಮರಸ್ಯ ಹೋಯಿತೆಂದರೆ ಮುಗಿಯಿತು ಕಥೆ. ಹಾಗಿದ್ದರೆ ಇದಕ್ಕೇನು ಪರಿಹಾರ? ಅದೇ ಪ್ರೀ ಮ್ಯಾರೇಜ್​ ಕೌನ್ಸೆಲಿಂಗ್​ ಅರ್ಥಾತ್​ ಮದುವೆಗೂ ಮುನ್ನ ಭಾವಿ ದಂಪತಿ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ನಡೆಸುವ ಕೌನ್ಸೆಲಿಂಗ್​ ಇದು.

ಎಷ್ಟೋ ಬಾರಿ ದಂಪತಿ ನಡುವೆ ಜಗಳವಾದಾಗ ಆ ಮನೆಯ ಹಿರಿಯರು ಬಂದು ಇಬ್ಬರನ್ನೂ ಸಮಾಧಾನ ಪಡಿಸುವುದು ಉಂಟು. ಆದರೆ ಇಂದಿನ ಕೆಲ ವಿಚ್ಛೇದನ ಟನೆಗಳನ್ನು ತೆಗೆದುಕೊಂಡರೆ, ಹಿರಿಯರು ಎಂಟ್ರಿ ಕೊಟ್ಟೇ ಇಬ್ಬರ ನಡುವೆ ಇನ್ನಷ್ಟು ಕಂದಕ ಮೂಡಿಸಿರುವುದೂ ಉಂಟು. ಅದೇ ಕಾರಣಕ್ಕೆ ಮದುವೆಯ ಕೌನ್ಸೆಲರ್​ ಬಳಿ ಹೋಗುವ ದಾರಿ ಬಲು ಉತ್ತಮ.

ಹಾಗೆ ನೋಡಿದರೆ, ಮೊದಲೆಲ್ಲಾ ಇಂಥದ್ದೊಂದು ಕೌನ್ಸೆಲಿಂಗ್​ ಪರೋಕ್ಷ$ವಾಗಿ ನಡೆಯುತ್ತಿತ್ತು. ವಾರಾನುಗಟ್ಟಲೆ ನಡೆಯುತ್ತಿದ್ದ ಪದ್ಧತಿಯಲ್ಲಿ ಪರಸ್ಪರ ಗಂಡು ಹೆಣ್ಣು ಮಾತ್ರವಲ್ಲ ಉಭಯ ಮನೆಗಳವರೂ ಪರಸ್ಪರ ಬೆರೆತು ಹೋಗುತ್ತಿದ್ದರು. ಸಪ್ತಪದಿ , ಕಾಶೀಯಾತ್ರೆ ಇನ್ನಿತರ ಪದ್ಧತಿಗಳು ಈಗಿನಂತೆ ತರಾತುರಿಯಲ್ಲಿ ನಡೆಯುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗಂಡು ಹೆಣ್ಣು ಮದುವೆಯಾದ ಮೇಲೆ ಹೇಗಿರಬೇಕೆಂದು ಸಂಸ್ಕೃತ ಮಂತ್ರಗಳಲ್ಲಿ ಹೇಳುತ್ತಾರೆ . ಕೆಲವು ಪುರೋಹಿತರು ಅವನ್ನು ಅನುವಾದಿಸಿಯೂ ಹೇಳುತ್ತಾರೆ. ಆದರೆ ಮದುವೆಯ ಗಲಾಟೆಯಲ್ಲಿ ಕೇಳಿಸಿಕೊಳ್ಳುವವರು ಯಾರು? ಾಸ್ಟ್​ ಫುಡ್​ನಂತೆಯೇ ಮಂತ್ರವನ್ನೂ ಫಾಸ್ಟ್​ ಫಾರ್ವರ್ಡ್​ ಮಾಡಿ ಮದುವೆ ಮುಗಿಸುವ ಆತುರತೇ ಎಲ್ಲಾ ಕಡೆ.

ಕೌನ್ಸೆಲಿಂಗ್​ ಎಂದರೆ ಏನು?

ಜೀವನದಲ್ಲಿ ತೊಂದರೆ ಉಂಟಾದಾಗ, ಗೊಂದಲಗಳು ಬಂದಾಗ, ಏನು ಮಾಡಬೇಕೆಂಬ ಸ್ಪಷ್ಟತೆ ಸಿಗದಾಗ, ಗುರಿ ತಿಳಿಯದಾದಾಗ ಆಪ್ತ ಮಾತುಕತೆ ಮೂಲಕ ತೊಂದರೆಯ ಸ್ವರೂಪವನ್ನು ಅರಿತು ತಕ್ಕ ಪರಿಹಾರವನ್ನು ಕಂಡುಕೊಳ್ಳುವುದೇ ಕೌನ್ಸೆಲಿಂಗ್​. ದಾಂಪತ್ಯ ಜೀವನವನ್ನು ಕೊನೆಯತನಕ ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸ, ಧೈರ್ಯ ತುಂಬುವ, ಗೊಂದಲ ನಿವಾರಿಸುವ ಜತೆ ವೈವಾಹಿಕ ಸಂಬಂಧ ನಿರ್ವಹಿಸುವ ಕಲೆಯನ್ನು ಹೇಳಿ ಕೊಡುವುದು ಪ್ರೀ ಮ್ಯಾರೇಜ್​ ಕೌನ್ಸೆಲಿಂಗ್​.

ಕೆಲವರಿಗೆ ನಿಶ್ಚಿತಾರ್ಥವಾಗಿರುತ್ತದೆ. ಅಂಥವರು ಸಂಗಾತಿ ಬಗ್ಗೆ ಬೇರೆ ರೀತಿಯಲ್ಲೇ ಯೋಚಿಸಲು ಪ್ರಾರಂಭಿಸುತ್ತಾರೆ. ಸಂಗಾತಿ ಬಗ್ಗೆ ಗೊಂದಲಕ್ಕೀಡಾಗಿದ್ದರೆ, ಮದುವೆಗೂ ಮುನ್ನ ಸಂಗಾತಿ ಜತೆಗೆ ಸಲಹೆಗಾರರನ್ನು ಸಂಪಕಿರ್ಸಬೇಕು. ಕೆಲಮೊಮ್ಮೆ ಈ ಸಮಾಲೋಚನೆಯಲ್ಲಿ ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂದಾದಲ್ಲಿ ಮುಂಚೆಯೇ ಮದುವೆಯನ್ನು ನಿರಾಕರಿಸಲೂ ಸಾಧ್ಯವಿದೆ .ಇದರಿಂದ ಮುಂದೆ ಜೀವನದುದ್ದಕ್ಕೂ ನರಳುವ ಬದಲು ಅದರಿಂದ ಗೌರವಯುತವಾಗಿಯೇ ಹೊರಬರಬಹುದು.

ದಂಪತಿಗೆ ವೈವಾಹಿಕ ಪೂರ್ವದ ಸಮಾಲೋಚನೆಯನ್ನು ತಿಳಿಸುವ ವೃತ್ತಿಪರ ಸಲಹೆಗಾರ ಅನೇಕ ರೀತಿಯ ಮೌಲ್ಯಮಾಪನ ಮಾನದಂಡಗಳನ್ನು ಬಳಸಿಕೊಳ್ಳುತ್ತಾರೆ. ಪ್ರಶ್ನೋತ್ತರಗಳಾಗಿರಬಹುದು, ಅಥವಾ ವ್ಯಕ್ತಿತ್ವ ಪರೀಕ್ಷೆಯೂ ಆಗಿರಬಹುದು. ಅಷ್ಟೇ ಅಲ್ಲ ಪರಸ್ಪರ ಜೀವನದ ಅದ್ಯತೆ, ಗುರಿ, ಆಶಯಗಳನ್ನು ಸಹಾ ಇಲ್ಲಿ ಜೋಡಿಗಳು ಅರಿಯಲು ಕೆಲವು ಟೆಸ್ಟ್​ಗಳೂ ಇವೆ. ಕೆಸ್ತ ಧರ್ಮದಲ್ಲಿ ಈ ಪ್ರೀ ಮ್ಯಾರೇಜ್​ ಕೌನ್ಸೆಲಿಂಗ್​ ಧಾಮಿರ್ಕವಾಗಿ ಕಡ್ಡಾಯವೇ. ಆದ್ದರಿಂದಲೇ ಏನೊ ಇಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆ ಎನ್ನುತ್ತವೆ ವರದಿಗಳು.

ವಿಚ್ಛೇದನಕ್ಕೆ ಸಾಮಾನ್ಯ ಕಾರಣಗಳೇನು?

1. ಅತಿಯಾದ ನಿರೀಕ್ಷೆ

2. ಹೊಂದಾಣಿಕೆಯಾಗದ ಮನೋಭಾವ

3. ಎಷ್ಟೋ ಬಾರಿ ಪರಸ್ಪರ ವೈರುಧ್ಯಗಳು

4. ಹೊಸ ಜವಾಬ್ದಾರಿ

5. ಸಂಸಾರ ಮತ್ತು ಕೆಲಸವನ್ನು ಬ್ಯಾಲೆನ್ಸ್​ ಆಗಿ ಮಾಡಲಾಗದ ಕೊರತೆ

6. ಪರಸ್ಪರ ಅಹಂ

7 ವಿವಾಹೇತರ ಸಂಬಂಧ,

8.ವರದಕ್ಷಿಣೆ ಕಿರುಕುಳ

9 ಇಷ್ಟವಿಲ್ಲದ ಮದುವೆ,

ಪ್ರೀ ಮ್ಯಾರೇಜ್​ ಕೌನ್ಸೆಲಿಂಗ್​ ಹೇಗೆ ಸಹಕಾರಿ?

* ಮದುವೆಯಾಗಬಯಸುವ ಜೋಡಿಗಳಿಗೆ ಮದುವೆಯ ನಂತರದ ಉಂಟಾಗಬಹುದಾದ ಸಂಘರ್ಷಗಳನ್ನು ಗುರುತಿಸಲು ದಂಪತಿಗೆ ಸಹಾಯವಾಗುತ್ತದೆ.

* ತಮ್ಮ ಜೀವನದಲ್ಲಿ ಮುಂದೆ ಆಗುವ ಪಾತ್ರಗಳ ಬದಲಾವಣೆ ಮತ್ತು ಅದಕ್ಕೆ ತಕ್ಕ ಪೂರಕ ಪರಸ್ಪರ ಹೊಂದಾಣಿಕೆಗಳ ಬಗ್ಗೆ ಅರಿವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ.

* ಆರೋಗ್ಯ ಪೂರ್ಣ ದಾಂಪತ್ಯಕ್ಕೆ ಬೇಕಾದ ಕೌಶಲಗಳಿಗೆ ಜೋಡಿಗಳನ್ನು ಸಜ್ಜುಗೊಳಿಸುತ್ತದೆ.

* ಮದುವೆಯ ನಂತರ ಹೊಸದಾಗಿ ಬರುವ ಪರಸ್ಪರ ಜವಾಬ್ದಾರಿ , ಹೊಂದಾಣಿಕೆ ಕೇವಲ ಜೋಡಿಗಳಲ್ಲಿ ಮಾತ್ರವಲ್ಲ , ಅದು ಕುಟುಂಬದೊಂದಿಗೆ ಕೂಡ ಎಂಬ ಅರಿವನ್ನು ಮೂಡಿಸುವ ಕೆಲಸವೂ ಆಗುತ್ತದೆ.

* ಮದುವೆಗೂ ಪೂರ್ವದಲ್ಲಿ ಕೌನ್ಸೆಲಿಂಗ್​ ಪಡೆದದ್ದೇ ಆದರೆ, ಮದುವೆಯ ನಂತರ ಬರುವ ಸಮಸ್ಯೆಗಳಿಗೆ ಅಲ್ಲಿಗೇ ಹೋಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ.

* ಕೌನ್ಸೆಲಿಂಗ್​ಗೆ ಹೋದ ಸಂದರ್ಭದಲ್ಲಿ ಜೋಡಿಗಳ ನಡುವೆ ಪರೋಕ್ಷವಾಗಿ ದಾಂಪತ್ಯ ಕಾಪಾಡಿಕೊಳ್ಳುವ ಒಪ್ಪಂದ ಏರ್ಪಡುತ್ತದೆ.

(ಲೇಖಕರು ರಿಲೇಷನ್​ಷಿಪ್​ ಕೌನ್ಸೆಲರ್​, ಬೆಂಗಳೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net