ವಿಜಯದ ಹಿಂದಿನ ಹಲವು ವೈಪರ್ಯಾಸಿಕ ದುರಂತಗಳು

Column F
Published on
ಭಾರತೀಯರಿಗೆ ಡಿಸೆಂಬರ್ 16 ಐತಿಹಾಸಿಕ ವಿಜಯದ ದಿನ. ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿ, ಅದನ್ನು ತುಂಡರಿಸಿದ ಸಂಭ್ರಮವನ್ನು ದೇಶವೀಗ ಆಚರಿಸಹೊರಟಿದೆ. ಈ ಯುದ್ಧವನ್ನು, ಯುದ್ಧದಲ್ಲಿ ಭಾರತೀಯ ರಕ್ಷಣಾಪಡೆಗಳ ಪರಾಕ್ರಮಗಳನ್ನು ದೇಶ ನೆನಪಿಸಿಕೊಳ್ಳುತ್ತಿದೆ. ಈ ಸಂಭ್ರಮದಲ್ಲಿ ಭಾಗಿಯಾಗುವುದರ ಜತೆಗೆ ಆ ಯುದ್ಧಕ್ಕೆ ಕಾರಣವಾದ, ಇಂದಿನ ತಲೆಮಾರಿಗೆ ಬಹುತೇಕ ಅಪರಿಚಿತವಾಗಿರುವ ಪೂರ್ವ ಪಾಕಿಸ್ತಾನೀಯರ ಗೋಳನ್ನು ಪರಿಚಯಿಸುವುದು ಇಂದಿನ ‘ಜಗದಗಲ’ದ ಉದ್ದೇಶ.

1947ರಲ್ಲಿ ಸೃಷ್ಟಿಯಾದ ಪಾಕಿಸ್ತಾನದ ಪೂರ್ವ ಮತ್ತು ಪಶ್ಚಿಮ ಭೂಭಾಗಗಳ ನಡುವಿದ್ದ ಸುಮಾರು 1,600 ಕಿಲೋಮೀಟರ್ ವಿಸ್ತಾರದ ಭಾರತೀಯ ಭೂಮಿಗಿಂತಲೂ ಜನಾಂಗೀಯ, ಭಾಷಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳು ಅವೆರಡನ್ನೂ ಅಕ್ಷರಶಃ ಪೂರ್ವ-ಪಶ್ಚಿಮವಾಗಿಸಿದ್ದವು. ಅಚ್ಚರಿಯೆಂದರೆ ಈ ವಾಸ್ತವವನ್ನು ಅಂದು ಎಲ್ಲರೂ ಗುರುತಿಸಿಯೇ ಇದ್ದರು, ಆದಾಗ್ಯೂ ತಾವು ಒಂದಾಗಿ ‘ಮುಂದೆ ಬಹುಕಾಲ ಸುಖವಾಗಿ ಬಾಳುತ್ತೇವೆ’ ಎಂದು ಅವರು ಭ್ರಮಿಸಿದ್ದರು!

ಲಖನೌ, ಬಾಂಬೆ ಮತ್ತು ದೆಹಲಿಯ ಶ್ರೀಮಂತ ಮುಸ್ಲಿಮರು ಮುಖ್ಯವಾಗಿ ಒಟ್ಟುಗೂಡಿ ಮುಸ್ಲಿಂ ಲೀಗ್ ಹುಟ್ಟುಹಾಕಿ, ಮೊದಲಿಗೆ ಬ್ರಿಟಿಷ್ ಆಡಳಿತಶಾಹಿಯಲ್ಲಿ ನವಸಾಕ್ಷರ ಮುಸ್ಲಿಮರಿಗೆ ಮೀಸಲಾತಿ ಕೇಳಿ, ನಂತರ ಆ ಬೇಡಿಕೆಯನ್ನು ಬ್ರಿಟಿಷರ ಕುಮ್ಮಕ್ಕಿನಿಂದ ಪ್ರತ್ಯೇಕ ದೇಶದ ಬೇಡಿಕೆಯನ್ನಾಗಿ ವಿಸ್ತರಿಸಿದಾಗ ಅದಕ್ಕೆ ಇಂದು ಪಾಕಿಸ್ತಾನವಾಗಿರುವ ಪ್ರದೇಶದಲ್ಲಿ ಮನ್ನಣೆಯೇ ಸಿಗಲಿಲ್ಲ. ಸಿಂಧ್ ಒಂದು ಅದಕ್ಕೆ ತುಸು ಸ್ಪಂದಿಸಿದರೂ ಪಂಜಾಬ್, ಗಡಿನಾಡು ಪ್ರಾಂತ್ಯ ಮತ್ತು ಬಲೂಚಿಸ್ತಾನಗಳ ಜನತೆ ತಿರಸ್ಕರಿಸಿದರು. ಆದರೆ ಪಾಕಿಸ್ತಾನ ಬೇಕೇಬೇಕೆಂದು ಉಗ್ರವಾಗಿ ಕೂಗತೊಡಗಿದವರು ಪೂರ್ವ ಬಂಗಾಲಿಗಳು ಅಂದರೆ ಇತ್ತೀಚಿನ ಬಾಂಗ್ಲಾದೇಶೀಯರು! ಆದರೆ ಅವರು ಪಾಕಿಸ್ತಾನಿಗಳಾಗಲು ‘ಯೋಗ್ಯರಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದು ಪಾಕಿಸ್ತಾನ ಎಂಬ ಹೆಸರನ್ನು ಸೃಷ್ಟಿಸಿದ ಚೌಧರಿ ರಹಮತ್ ಆಲಿ. ಕೇಂಬ್ರಿಜ್​ನಲ್ಲಿ ವಿದ್ಯಾರ್ಥಿಯಾಗಿದ್ದ ಆತ 1933 ಜನವರಿ 28ರಂದು ಪ್ರಚುರಪಡಿಸಿದ ತನ್ನ ‘ಇಂದಲ್ಲದಿದ್ದರೆ ಎಂದಿಗೂ ಇಲ್ಲ’ ಎಂಬ ಪುಟ್ಟ ಪುಸ್ತಕದಲ್ಲಿ ಘೊಷಿಸಿದ್ದು ಭಾರತದ ಪಶ್ಚಿಮ ಭಾಗಗಳಾದ ಬಲೂಚಿಸ್ತಾನ್, ಸಿಂಧ್, ಪಂಜಾಬ್, ಗಡಿನಾಡು ಮತ್ತು ಕಾಶ್ಮೀರಗಳ ಮುಸ್ಲಿಮರು ತಾವು ಜನಾಂಗಿಯ, ಧಾರ್ವಿುಕ ಮತ್ತು ಸಾಮಾಜಿಕವಾಗಿ ಹತ್ತಿರವಾಗಿರುವ ಇರಾನ್, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದೊಂದಿಗೆ ಒಟ್ಟುಗೂಡಿ ‘ಪಾಕಿಸ್ತಾನ’ ಎಂಬ ವಿಶಾಲ, ಬಲಾಢ್ಯ ಮುಸ್ಲಿಂರಾಷ್ಟ್ರವನ್ನು ಸ್ಥಾಪಿಸಬೇಕೆಂದು. ಆತ ಗುರುತಿಸಿದ ಯಾವ ಪ್ರದೇಶದಲ್ಲೂ ಪಾಕಿಸ್ತಾನದ ಬೇಡಿಕೆಗೆ ಮನ್ನಣೆ ಇರಲಿಲ್ಲ ಮತ್ತು ಅದು ಬೇಕೇಬೇಕೆಂದು ಕೂಗುತ್ತಿದ್ದ ಪೂರ್ವ ಬಂಗಾಲಿಗಳು ಪಾಕಿಸ್ತಾನದ ಹೊರಗಿರಬೇಕೆಂದು ರಹಮತ್ ಆಲಿ ಹೇಳಿದ್ದ. ಅದಕ್ಕೆ ಅವನು ಕೊಟ್ಟ ಕಾರಣ ಪೂರ್ವ ಬಂಗಾಲಿಗಳು ಮುಸ್ಲಿಮರಾದರೂ ಅವರು ಜನಾಂಗೀಯವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ, ಊಟತಿಂಡಿ, ಉಡುಪು ಎಲ್ಲದರಲ್ಲೂ ಭಾರತೀಯರೇ!

ತಾವು ಭಾರತದಿಂದ ಬೇರಾಗುವುದು ‘ಅಗತ್ಯ’ವಾದರೂ ತಮಗೆ ಪಾಕಿಸ್ತಾನ ಸೂಕ್ತವೇನಲ್ಲ ಎಂದು ಕೆಲವು ಪ್ರಮುಖ ಪೂರ್ವ ಬಂಗಾಲಿಗಳಿಗೂ ಅನಿಸಿತ್ತು. ಅಂತಹ ಅಭಿಪ್ರಾಯ ಹೊಂದಿದ್ದವರಲ್ಲಿ ಪ್ರಮುಖರಾಗಿದ್ದವರು ಮುಸ್ಲಿಂ ಲೀಗ್​ನ ಪ್ರಮುಖ ನೇತಾರ ಮತ್ತು 1946-47ರಲ್ಲಿ ಬಂಗಾಲದ ಪ್ರಧಾನಮಮಂತ್ರಿಯಾಗಿದ್ದ ಎಚ್.ಎಸ್. ಸುಹ್ರವರ್ದಿ. ಭಾರತ ಮತ್ತು ಪಾಕಿಸ್ತಾನಗಳ ಜತೆ ಕೊಲ್ಕತಾವನ್ನು ರಾಜಧಾನಿಯುಳ್ಳ ಸ್ವತಂತ್ರ ಬಂಗಾಲವನ್ನೂ ಸೃಷ್ಟಿಸಬೇಕೆಂದು ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಮುಂದೆ ಬೇಡಿಕೆ ಇಡಬೇಕೆಂದು ಅವರು ಯೋಜಿಸಿದ್ದರು. ಇದಕ್ಕೆ ಹಿಂದೂ ಬಂಗಾಲಿಗಳ ಬೆಂಬಲ ಪಡೆದುಕೊಳ್ಳಲು ಅವರು ಹಿಂದೂ ನಾಯಕ ಶ್ಯಾಮಾಪ್ರಸಾದ್ ಮುಖರ್ಜಿಯವರೊಂದಿಗೆ ಮಾತುಕತೆ ನಡೆಸಿದರು. ಆದರೆ ಸುಹ್ರವರ್ದಿ ಕೈಗಳಲ್ಲಿ ಹಿಂದೂ ರಕ್ತ ಅಂಟಿತ್ತು. ಅವರ ಸರ್ಕಾರ ಇತಿಹಾಸದಲ್ಲಿ ‘ದ ಗ್ರೇಟ್ ಕಲ್ಕಟ್ಟಾ ಕಿಲಿಂಗ್ಸ್’ ಎಂದು ಕುಖ್ಯಾತವಾಗಿರುವ ಕೋಮುವಾದಿ ಹಿಂಸಾಚಾರವನ್ನು ಆಯೋಜಿಸಿ ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂಗಳನ್ನು ಕೊಂದಿತ್ತು. ಹೀಗಾಗಿ ಅಂತಹ ಕ್ರೂರ ಕೋಮುವಾದಿ ಹಂತಕನೊಂದಿಗೆ ಕೈಜೋಡಿಸಲು ಮುಖರ್ಜಿಯವರು ಖಡಾಖಂಡಿತವಾಗಿ ನಿರಾಕರಿಸಿದರು. ಸುಹ್ರವರ್ದಿ ಬೇರೆ ದಾರಿಯಿಲ್ಲದೇ ಪಾಕಿಸ್ತಾನವನ್ನೇ ಒಪ್ಪಿಕೊಳ್ಳಬೇಕಾಯಿತು. ಆಗ ಅವರು ಹೂಡಿದ ಇನ್ನೊಂದು ತಂತ್ರವೆಂದರೆ ಮುಂದೆ ಹೆಚ್ಚಲಿರುವ ಪೂರ್ವ ಪಾಕಿಸ್ತಾನಿಗಳಿಗೆ ಹೆಚ್ಚಿನ ನೆಲ ಬೇಕೆಂದು ಲೆಕ್ಕಹಾಕಿ ಅಸ್ಸಾಂ ಸೇರಿದಂತೆ ಇಡೀ ಪೂವೋತ್ತರ ಭಾರತವನ್ನು ಕೊಡಬೇಕೆಂದು ಬೇಡಿಕೆಯಿತ್ತದ್ದು. ಪಶ್ಚಿಮದ ವಿರುದ್ಧವಾಗಿ ಪೂರ್ವಕ್ಕೆ ಅದಾಗಲೇ ಇದ್ದ ಜನಸಂಖ್ಯೀಯ ಮೇಲುಗೈ ಜತೆ ಭೌಗೋಳಿಕ ಮೇಲುಗೈ ಸಹ ಸೇರಿದರೆ ನವರಾಷ್ಟ್ರದ ಚುಕ್ಕಾಣಿ ಪೂರ್ವ ಪಾಕಿಸ್ತಾನಿಗಳ ಕೈಗೇ ದಕ್ಕುತ್ತದೆ ಎಂದವರ ಲೆಕ್ಕಾಚಾರವಾಗಿತ್ತು. ಆದರೆ ಅವರ ಬೇಡಿಕೆಯನ್ನು ಬ್ರಿಟಿಷರು ಕಸದ ಬುಟ್ಟಿಗೆ ಹಾಕಿದರು (ಬ್ರಿಟಿಷರು ಮಾಡಿದ ಕೆಲವೇ ಕೆಲವು ಒಳ್ಳೆಯ ಕೆಲಸಗಳಲ್ಲಿ ಇದೊಂದು).

ಅಂತೂ ಕೊನೆಗೆ ಭೌಗೋಳಿಕವಾಗಿ ಸಂಪರ್ಕವಿಲ್ಲದ ಎರಡು ದೂರದ ತುಂಡುಗಳಾಗಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಾಗ ಆಗತೊಡಗಿದ್ದು ‘ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ!’ ಎನ್ನುವುದಕ್ಕೆ ಉದಾಹರಣೆಯಾಯಿತು. ಎರಡೂ ತುಂಡುಗಳ ನಡುವೆ ಆರಂಭವಾದ ತಿಕ್ಕಾಟ ನಿರೀಕ್ಷಿಸಿದಂತೆಯೇ ಮೂಲಭೂತವಾಗಿ ಎರಡು ಬಗೆಯದಾಗಿತ್ತು. ಪಶ್ಚಿಮ ಪಾಕಿಸ್ತಾನ ಭೌಗೋಳಿಕವಾಗಿ ಪೂರ್ವ ಪಾಕಿಸ್ತಾನದ ಐದೂವರೆ ಪಟ್ಟು ವಿಸ್ತಾರವಾಗಿದ್ದರೂ, ಜನಸಂಖ್ಯೆಯ ದೃಷ್ಟಿಯಿಂದ ಶೇಕಡ 54 ಪಾಕಿಸ್ತಾನೀಯರು ಪೂರ್ವದಲ್ಲಿದ್ದರು. ಅಂದರೆ ಒಟ್ಟಾರೆ ಪಾಕಿಸ್ತಾನೀಯರಲ್ಲಿ ಬಹುಸಂಖ್ಯಾತರ ಮಾತೃಭಾಷೆ ಬಂಗಾಲಿ. ಹೀಗಾಗಿ, 1948ರಲ್ಲಿ ಪಾಕಿಸ್ತಾನದಲ್ಲಿ ಅಧಿಕೃತ ರಾಷ್ಟ್ರೀಯ ಭಾಷೆಯ ಆಯ್ಕೆಪ್ರಕ್ರಿಯೆ ಆರಂಭವಾದಾಗ ಆ ಸ್ಥಾನ ತಮ್ಮ ಬಂಗಾಲಿಯದಾಗುತ್ತದೆ ಎಂದು ಪೂರ್ವ ಪಾಕಿಸ್ತಾನೀಯರು ಆಶಿಸಿದರು. ಆದರೆ ರಾಷ್ಟ್ರಭಾಷೆಯ ಸ್ಥಾನ ದಕ್ಕಿದ್ದು ಕೇವಲ ಶೇ.4 ಜನರ, ಅದರಲ್ಲೂ ಭಾರತದಿಂದ ವಲಸೆ ಬಂದಿದ್ದವರ ಮಾತೃಭಾಷೆಯಾದ ಉರ್ದುವಿಗೆ. ಈ ಚೋದ್ಯಕ್ಕೆ ಕಾರಣ ಪಾಕಿಸ್ತಾನದ ಸೃಷ್ಟಿಯ ಸ್ವರೂಪದಲ್ಲಿದೆ. ಪಾಕಿಸ್ತಾನಕ್ಕಾಗಿ ಆಂದೋಲನ ಆರಂಭಿಸಿ, ಭಾರತದ ವಿಭಜನೆಗಾಗಿ ಕೂಗೆತ್ತಿದವರು ಮುಖ್ಯವಾಗಿ ಯುನೈಟೆಡ್ ಪ್ರಾವಿನ್ಸ್ (ಉತ್ತರ ಪ್ರದೇಶ), ಬಾಂಬೆ ಪ್ರೆಸಿಡೆನ್ಸಿ ಮತ್ತು ದೆಹಲಿಯ ಶ್ರೀಮಂತ ನವಸಾಕ್ಷರ ಮುಸ್ಲಿಮರು. ಪಾಕಿಸ್ತಾನದ ಸೃಷ್ಟಿಯಾದಾಗ ಇವರಲ್ಲಿ ಬಹುತೇಕರು ಅಲ್ಲಿಗೆ ವಲಸೆಹೋಗಿ ಪ್ರಧಾನಮಂತ್ರಿಯ ಸ್ಥಾನದಿಂದ ಹಿಡಿದು ಎಲ್ಲ ಪ್ರಮುಖ ರಾಜಕೀಯ ಸ್ಥಾನಗಳನ್ನು ಹಿಡಿದುಕೊಂಡವರು. ಇವರಿಗೆ ಪೂರ್ಣ ಸಹಕಾರವಿತ್ತವರು ಈಗ ಭಾರತವಾಗಿರುವ ಪ್ರದೇಶದಲ್ಲಿದ್ದ ಲಕ್ಷಲಕ್ಷ ಶಿಕ್ಷಿತ ಮುಸ್ಲಿಂ ಸರ್ಕಾರಿ ನೌಕರರು. ಇವರನ್ನು ಪಾಕಿಸ್ತಾನಿ ವಿದ್ವಾಂಸ ಹಂಜಾ ಅಲಾವಿ ‘ಖಚ್ಝಚ್ಟಜಿಚಠಿ‘ ಅಂದರೆ ‘ಪಗಾರವರ್ಗ’ ಎಂದು ಹೆಸರಿಸಿದ್ದಾರೆ. ನವರಾಷ್ಟ್ರದ ಆಡಳಿತಶಾಹಿಯಲ್ಲಿ ಮೇಲಿನಿಂದ ಕೆಳಗಿನವರೆಗೆ ತುಂಬಿಕೊಂಡವರು ಇವರೇ. ಇವರನ್ನು ಶೈಕ್ಷಣಿಕವಾಗಿ ಸರಿಗಟ್ಟುವ ಸಾಮರ್ಥ್ಯ ಸ್ಥಳೀಯರಿಗಿರಲಿಲ್ಲ. ಇವರ ಮಾತೃ ಅಥವಾ ವ್ಯವಹಾರದ ಭಾಷೆಯೂ ಉರ್ದುವೇ. ಇವರಿಗೆ ಸ್ಥಳೀಯ ಭಾಷೆಗಳಾದ ಪಂಜಾಬಿ, ಸುರೈಕಿ, ಸಿಂಧಿ, ಪುಶ್ತೂ ಹಾಗೂ ಬಲೂಚಿಗಳು ತಿಳಿದಿರುವುದಿರಲಿ, ಪರಿಚಯವೂ ಇರಲಿಲ್ಲ. ಹೀಗಾಗಿ ಉರ್ದುವನ್ನೇ ಅವರು ಪಾಕಿಸ್ತಾನದ ಮೇಲೆ ಹೇರಿದರು.

ಈ ಭಾರತೀಯ ವಲಸಿಗ ಮುಸ್ಲಿಮರ ಕೃತ್ಯದಿಂದ ನಿರಾಶೆಗೊಂಡ ಬಂಗಾಲಿಗಳು ಪೂರ್ವ ಪಾಕಿಸ್ತಾನದಾದ್ಯಂತ ಸಾರ್ವತ್ರಿಕ ಮುಷ್ಕರ, ಹರತಾಳಗಳಲ್ಲಿ ತೊಡಗಿದರು. ಇದು 1952 ಫೆಬ್ರವರಿ 21ರಂದು ಪ್ರಾಂತೀಯ ರಾಜಧಾನಿ ಢಾಕಾ ನಗರದಲ್ಲಿ ಅತಿರೇಕಕ್ಕೆ ಹೋಗಿ ಪೊಲೀಸ್ ಗೋಲಿಬಾರ್​ನಲ್ಲಿ ಐವರು ಮೃತಪಟ್ಟು ನೂರಾರು ಜನ ಗಾಯಗೊಂಡರು.

ಹೀಗೆ ಆರಂಭವಾದ ಭಾಷಾ ಮುಷ್ಕರಗಳು ಪಾಕಿಸ್ತಾನದ ಒಕ್ಕೂಟಕ್ಕೆ ಮೊದಲ ಕತ್ತಿಯೇಟಾಗಿ ಪರಿಣಮಿಸಿದವು. ಢಾಕಾದಲ್ಲಿ ನಡೆದ ಭಾಷಾ ಮುಷ್ಕರಗಳಲ್ಲಿ ಮುಂಚೂಣಿಯಲ್ಲಿದ್ದ ಢಾಕಾ ಯೂನಿವರ್ಸಿಟಿಯ ವಿದ್ಯಾರ್ಥಿ ನಾಯಕ ಶೇಖ್ ಮುಜೀಬುರ್ ರಹಮಾನ್ ಮುಂದಿನ ದಿನಗಳಲ್ಲಿ ಬಂಗಾಲಿ ಸ್ವಾತಂತ್ರ್ಯಹೋರಾಟದ ಪ್ರಭಾವಿ ನಾಯಕರಾಗಿ ಬೆಳೆದರು. ಮುಸ್ಲಿಂ ಲೀಗ್ ಕೇವಲ ಪಶ್ಚಿಮ ಪಾಕಿಸ್ತಾನೀ ರಾಜಕೀಯ ಪಕ್ಷವಾಗಿದೆ ಎಂದು ಆರೋಪಿಸಿ ಪೂರ್ವ ಪಾಕಿಸ್ತಾನಿಗಳಿಗಾಗಿ ಕೆಲವರು ಬಂಗಾಲೀ ರಾಷ್ಟ್ರೀಯವಾದಿಗಳು ಜೂನ್ 1949ರಲ್ಲಿ ಸ್ಥಾಪಿಸಿದ್ದ ‘ಆಲ್ ಪಾಕಿಸ್ತಾನ್ ಅವಾಮಿ ಮುಸ್ಲಿಂ ಲೀಗ್’ಗೆ ಮುಜೀಬುರ್ ರಹಮಾನ್ ಸೇರಿ ಆ ಪಕ್ಷವನ್ನು ಬಂಗಾಲಿಗಳ ಆಶೋತ್ತರಗಳ ಪ್ರತೀಕವಾಗಿ ಬೆಳೆಸಿದರು. ಆಮೇಲೆ ಆ ಪಕ್ಷದ ಹೆಸರಿನಿಂದ ಪಾಕಿಸ್ತಾನ ಪದದ ಉಚ್ಚಾಟನೆಯಾಗಲು ಹೆಚ್ಚುಕಾಲ ಬೇಕಾಗಲಿಲ್ಲ. ಅಂದರೆ ಪೂರ್ವದಲ್ಲಿ ಪಾಕಿಸ್ತಾನಕ್ಕೆ ಸಂಚಕಾರ ಆರಂಭವಾದದ್ದರ ಸೂಚನೆ ಅದಾಗಿತ್ತು.

ಎರಡೂ ಪಾಕಿಸ್ತಾನಗಳ ನಡುವೆ ಜನಾಂಗೀಯ ತಾರತಮ್ಯವೂ ಮೊದಲಿ ನಿಂದಲೂ ಕಾಣಬರತೊಡಗಿತ್ತು. ಕುಳ್ಳನೆಯ, ಕಪು್ಪ ರಂಗಿನ ಬಂಗಾಲಿಗಳಿಗಿಂತ ಎತ್ತರದ, ತಿಳಿ ಮೈಬಣ್ಣದ ಪಶ್ಚಿಮ ಪಾಕಿಸ್ತಾನೀಯರು ಶ್ರೇಷ್ಠ ಎಂಬ ಅಹಂ ಸಹ ಮೂಡಿ ಅವರು ಪೂರ್ವದ ಬಂಗಾಲಿಗಳನ್ನು ಕೀಳಾಗಿ ಕಂಡು ಅವಮಾನಿಸುವುದೂ ಆರಂಭವಾಯಿತು. ಬಂಗಾಲಿಗಳಲ್ಲಿ ಕ್ಷಾತ್ರಗುಣ ಇಲ್ಲವೆಂದು ಹೇಳಿ ಅವರನ್ನು ರಾಷ್ಟ್ರೀಯ ಸೇನೆ ಹಾಗೂ ಪೊಲೀಸ್ ಪಡೆಗಳಿಂದಲೂ ಹೊರಗಿಡಲಾಯಿತು. ಇಂಥ ತಾರತಮ್ಯಗಳು ಉಗ್ರವಾಗುತ್ತ ಸಾಗಿ ಅವುಗಳಿಗೆ ಆರ್ಥಿಕ ವೈಷಮ್ಯವೂ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕಲುಷಿತಗೊಳಿಸಿತು. ವಿಪುಲ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದ ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನೀಯರು ತಮ್ಮ ವಸಾಹತುವಿನಂತೆ ಶೋಷಿಸತೊಡಗಿದರು.

ಈ ನಡುವೆ ಬಂಗಾಲಿ ನಾಯಕ ಎಚ್.ಎಸ್. ಸುಹ್ರವರ್ದಿ 1956-57ರಲ್ಲಿ ಅಲ್ಪಕಾಲ ಪಾಕಿಸ್ತಾನದ ಪ್ರಧಾನಮಮಂತ್ರಿಯಾದರು. ಅದರಿಂದ ಪೂರ್ವಕ್ಕೇನೂ ಒಳ್ಳೆಯದಾಗಲಿಲ್ಲ. 1958ರಲ್ಲಿ ಜನರಲ್ ಅಯೂಬ್ ಖಾನ್ ಸೇನಾ ಕ್ರಾಂತಿಯೆಸಗಿ ಅಧಿಕಾರ ಕಿತ್ತುಕೊಳ್ಳುತ್ತಿದ್ದಂತೇ ಸ್ವತಃ ಸುಹ್ರವರ್ದಿಯೇ ದೇಶ ಬಿಟ್ಟು ಓಡಿಹೋದರು. ಆದರೆ ಅವರನ್ನು ಅಯೂಬ್​ರ ಹಸ್ತಕರು 1963ರಲ್ಲಿ ಬೈರೂತ್​ನಲ್ಲಿ ಪತ್ತೆಹಚ್ಚಿ ಕೊಂದುಹಾಕಿದರು. ಈ ವೈಷಮ್ಯ ಅಂತಿಮವಾಗಿ ಮುಜೀಬುರ್ ರಹಮಾನ್ ನಾಯಕತ್ವದ ಅವಾಮಿ ಲೀಗ್ ಪೂರ್ವ ಪಾಕಿಸ್ತಾನಕ್ಕೆ ಆಂತರಿಕ ಸ್ವಾಯತ್ತತೆಗಾಗಿ ಒತ್ತಾಯಿಸುವ ಹಂತಕ್ಕೆ ತಲುಪಿತು. ಇದಕ್ಕೆ ಪೂರ್ವ ಪಾಕಿಸ್ತಾನೀಯರ ಪೂರ್ಣ ಬೆಂಬಲವಿತ್ತು. ಅದು ಡಿಸೆಂಬರ್ 1970ರ ಚುನಾವಣೆಗಳಲ್ಲಿ ವ್ಯಕ್ತವಾಗಿ ಅವಾಮಿ ಲೀಗ್ ಸರ್ಕಾರ ರಚನೆಗೂ, ಮುಜೀಬುರ್ ರಹಮಾನ್ ಪ್ರಧಾನಮಂತ್ರಿ ಸ್ಥಾನಕ್ಕೂ ಹಕ್ಕುದಾರರಾದರು. ಪೂರ್ವ ಪಾಕಿಸ್ತಾನೀ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರಕ್ಕೇರುವುದು ಸೇನಾಡಳಿತಗಾರ ಜನರಲ್ ಯಾಹ್ಯಾ ಖಾನ್ ಹಾಗೂ 81 ಸ್ಥಾನಗಳೊಂದಿಗೆ ಎರಡನೆಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸ್ಥಾಪಕ-ನೇತಾರ ಝುುಲ್ಪಿಕರ್ ಆಲಿ ಭುಟ್ಟೋರಿಗೆ ಸಮ್ಮತವಾಗಲಿಲ್ಲ. ಭುಟ್ಟೋರ ನಿರಂತರ ಕಿವಿಯೂದುವಿಕೆಗೆ ಬಲಿಯಾದ ಯಾಹ್ಯಾ ಖಾನ್ ಹೊಸ ಸಂಸತ್ತಿನ ರಚನೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದರು. ಅವಾಮಿ ಲೀಗ್ ಬಹುಮತವಿದ್ದರೂ ಅಧಿಕಾರದಿಂದ ವಂಚಿತವಾಯಿತು. ಇದಕ್ಕೆ ಅದು ಪ್ರತಿಕ್ರಿಯಿಸಿದ್ದು ಪೂರ್ವ ಪಾಕಿಸ್ತಾನದ ಪ್ರತ್ಯೇಕತೆಯ ಕೂಗೆತ್ತಿ. ಅದನ್ನು ಹತ್ತಿಕ್ಕಲು ಯಾಹ್ಯಾ ಖಾನ್ ಸೇನಾ ಸರ್ಕಾರ ಕಳಿಸಿದ್ದು ‘ಬುಚರ್ ಆಫ್ ಬೆಂಗಾಲ್’ (ಬಂಗಾಲದ ಕಟುಕ) ಎಂದು ನಂತರ ಕುಖ್ಯಾತನಾದ ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ತಾನೀ ಸೇನೆಯನ್ನು. ಆ ಕಿರಾತಕ ಸೇನೆ ಒಂದೇ ರಾತ್ರಿಯಲ್ಲಿ ಢಾಕಾ ಯೂನಿವರ್ಸಿಟಿ ಒಂದರಲ್ಲೇ ಐನೂರಕ್ಕೂ ಹೆಚ್ಚಿನ ಜನರನ್ನು ಕೊಲ್ಲುವ ಮೂಲಕ ಘೊರ ನರಸಂಹಾರವನ್ನಾರಂಭಿಸಿದರು. ಅದರ ಮರುದಿನವೇ ಅಂದರೆ 1971ಮಾರ್ಚ್ 26ರಂದು, ಮುಜೀಬುರ್ ರಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೊಷಿಸಿದರು. ಪಾಕ್ ಸೇನೆ ಮುಂದಿನ ಒಂಬತ್ತು ತಿಂಗಳವರೆಗೆ ಅವ್ಯಾಹತವಾಗಿ ನಡೆಸಿದ ನರಮೇಧದಲ್ಲಿ ಸುಮಾರು ಎಂಟರಿಂದ ಹತ್ತು ಲಕ್ಷ ಬಂಗಾಲಿಗಳು ಬಲಿಯಾದರೆಂದು ಅಂದಾಜಿಸಲಾಗಿದೆ. ಕೆಲವು ಮೂಲಗಳು ಆ ಸಂಖ್ಯೆಯನ್ನು ಮೂವತ್ತು ಲಕ್ಷದವರೆಗೂ ಕೊಂಡೊಯ್ಯುತ್ತವೆ. ಕೊನೆಗೆ ಬಂಗಾಲಿ ನತದೃಷ್ಟರ ಪರವಾಗಿ ರಣಾಂಗಣಕ್ಕೆ ಧುಮುಕಿದ ಭಾರತ ಡಿಸೆಂಬರ್ 3-16ರ ಅವಧಿಯಲ್ಲಿ ಜರುಗಿದ ‘ಬಾಂಗ್ಲಾದೇಶ ವಿಮೋಚನಾ ಯುದ್ಧ’ದಲ್ಲಿ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿತು. 1971 ಡಿಸೆಂಬರ್ 16ರ ಸಂಜೆ 4.31ಕ್ಕೆ ಪಾಕಿಸ್ತಾನಿ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ‘ಶರಣಾಗತಿಯ ಪತ್ರ’ಕ್ಕೆ ಸಹಿ ಹಾಕಿ 93 ಸಾವಿರ ಸೈನಿಕರೊಂದಿಗೆ ಶರಣಾದರು, ಪೂರ್ವ ಪಾಕಿಸ್ತಾನ ಸ್ವತಂತ್ರ ಬಾಂಗ್ಲಾದೇಶವಾಗಿ ಹೆಮ್ಮೆಯಿಂದ ತಲೆಯೆತ್ತಿತು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net