

| ಗಿರೀಶ್ ಗರಗ
ರಾಜ್ಯದಲ್ಲಿ ಮುಂಗಾರು ಈ ಬಾರಿ ನಿರೀಕ್ಷೆಗೂ ಮೊದಲೇ ಕಾಲೂರಿದೆ. ಪರಿಣಾಮವಾಗಿ ಅವಧಿಗಿಂತ ಸ್ವಲ್ಪ ಮುಂಚೆ ಎಲ್ಲೆಡೆ ಕೃಷಿ ಚಟುವಟಿಕೆ ಬಿರುಸಿನಿಂದ ಆರಂಭವಾಗಿದೆ. ಬಿತ್ತನೆಗೆ ಭೂಮಿ ಹದ ಮಾಡುವ ಕಾರ್ಯವೂ ಆರಂಭವಾಗಿದೆ. ಇನ್ನೊಂದು ತಿಂಗಳೊಳಗಾಗಿ ಬಹುತೇಕ ಬಿತ್ತನೆ ಕಾರ್ಯವೂ ಪೂರ್ಣಗೊಳ್ಳಲಿದ್ದು, ಅದಕ್ಕೆ ಬೇಕಾಗುವ ಬಿತ್ತನೆ ಬೀಜ, ಗೊಬ್ಬರದ ದಾಸ್ತಾನಿಗೂ ಯಾವುದೇ ಕೊರತೆ ಇಲ್ಲ. ಕರ್ನಾಟಕದಲ್ಲಿ ಒಟ್ಟು 77 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಬಿತ್ತನೆ ಭೂಮಿ ನೀರಾವರಿ, ಮಳೆಯಾಧಾರಿತ ಎಂದು ಎರಡು ಮಾದರಿಯದ್ದಾಗಿದೆ. 20 ಲಕ್ಷ ಹೆಕ್ಟೇರ್ ನೀರಾವರಿಯಿದ್ದರೆ, ಉಳಿದಿದ್ದು ಮಳೆಯಾಧಾರಿತ ಕೃಷಿ ಭೂಮಿ. ಕರಾವಳಿ, ಮಲೆನಾಡು, ಹಳೇ ಮೈಸೂರು ಭಾಗದಲ್ಲಿ ಶೇ. 60ಕ್ಕೂ ಹೆಚ್ಚಿನ ಭೂಮಿಯನ್ನು ರೈತರು ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದಾರೆ. ಬಯಲುಸೀಮೆಯಲ್ಲಿ ಮಳೆ ಆಧರಿಸಿ ಕೃಷಿ ಚಟುವಟಿಕೆ ಆರಂಭಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ಸರ್ಕಾರದಿಂದ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಯೂ ಆರಂಭವಾಗಿದೆ.
135.48 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ: ಕರೊನಾ ಸೋಂಕಿನ ನಡುವೆಯೂ 2020-21ರಲ್ಲಿ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಾಗಿತ್ತು. ಕಳೆದ ವರ್ಷ 153.8 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿತ್ತು. ಈ ಬಾರಿ 135.48 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯ ಗುರಿ ಇದೆ. ಅದರಲ್ಲಿ ಶೇ. 90 ಆಹಾರ ಧಾನ್ಯಗಳಾಗಿದ್ದರೆ, ಶೇ. 10 ಎಣ್ಣೆ ಕಾಳುಗಳು.
6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ: ರಾಜ್ಯದಲ್ಲಿ 2021-22ನೇ ಸಾಲಿಗೆ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಅದರಲ್ಲಿ ಶೇ. 50ರಷ್ಟು ಬೀಜ ಏಪ್ರಿಲ್, ಮೇ ಮತ್ತು ಜೂನ್ನಲ್ಲೇ ಬೇಕಾಗುತ್ತದೆ. ಬೇಡಿಕೆ ಇರುವ ಬಿತ್ತನೆ ಬೀಜದಲ್ಲಿ ಮೇ 28ರವರೆಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ 19,675 ಕ್ವಿಂಟಾಲ್ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಉಳಿದಂತೆ 1,74,653 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇಡಲಾಗಿದೆ.
3 ಲಕ್ಷ ಹೆಕ್ಟೇರ್ ಬಿತ್ತನೆ ಪೂರ್ಣ: ರಾಜ್ಯದಲ್ಲಿ ಪ್ರಸಕ್ತ ಅವಧಿಯಲ್ಲಿ 77 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯ ಗುರಿ ಇದೆ. ಹವಾಮಾನ ವೈಪರೀತ್ಯ, ಚಂಡಮಾರು ಮತ್ತು ಇತರ ಕಾರಣಗಳಿಂದ ಸುರಿದ ಮಳೆಯನ್ನು ಬಳಸಿ ಹಾಗೂ ನೀರಾವರಿ ಉಪಯೋಗಿಸಿ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ. 77 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ ಈಗಾಗಲೆ 3.6 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜತೆಗೆ ಬಿತ್ತನೆ ಬೀಜದ ಬೇಡಿಕೆ ಪ್ರಮಾಣದಲ್ಲಿ ಶೇ. 5ರಷ್ಟು ಬೀಜಗಳನ್ನು ಈಗಾಗಲೆ ರೈತರಿಗೆ ಪೂರೈಸಲಾಗಿದೆ.
ಗೊಬ್ಬರಕ್ಕೆ ಕೊರತೆ ಇಲ್ಲ: ಕೃಷಿ ಇಲಾಖೆಯ ಲೆಕ್ಕದ ಪ್ರಕಾರ 2021-22ನೇ ಸಾಲಿನಲ್ಲಿ ರಾಜ್ಯದ ಕೃಷಿ ಚಟುವಟಿಕೆಗಾಗಿ 26.47 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಅದರಲ್ಲಿ ಏಪ್ರಿಲ್, ಮೇ ತಿಂಗಳಲ್ಲಿಯೇ 7,97,662 ಮೆಟ್ರಿಕ್ ಟನ್ ಅವಶ್ಯಕತೆಯಿದೆ. ಆ ಪ್ರಮಾಣದಲ್ಲಿ ಈಗಾಗಲೆ 5,67,239 ಮೆಟ್ರಿಕ್ ಟನ್ ರಸಗೊಬ್ಬರವನ್ನು ಸರಬರಾಜು ಮಾಡಲಾಗಿದೆ. ಉಳಿದಂತೆ 12.54 ಲಕ್ಷ ಮೆಟ್ರಿಕ್ ಗೊಬ್ಬರ ದಾಸ್ತಾನಿಡಲಾಗಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರದ ಯಾವುದೇ ಕೊರತೆ ಉಂಟಾಗುವುದಿಲ್ಲ. ಅಲ್ಲದೆ, ಡಿಎಪಿ ರಸಗೊಬ್ಬರ ಖರೀದಿಗೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯಲ್ಲಿ ಈ ಬಾರಿ ಶೇ. 140ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದಕ್ಕಾಗಿ 14,775 ಕೋಟಿ ರೂ.ಗಳನ್ನು ಸರ್ಕಾರ ವ್ಯಯಿಸುತ್ತಿದೆ. ಅದರ ಪ್ರಕಾರ 500 ರೂ. ಇದ್ದ ಸಬ್ಸಿಡಿ ಮೊತ್ತ ಈ ಬಾರಿ 1,200ಕ್ಕೆ ಹೆಚ್ಚಳವಾಗಲಿದೆ. ಕಳೆದ ವರ್ಷ 1 ಚೀಲ ಡಿಎಪಿ ರಸಗೊಬ್ಬರ 1,700 ರೂ. ದರ ವಿದ್ದರೆ, 500 ರೂ. ಸಬ್ಸಿಡಿ ಕಳೆದು 1,200 ರೂ.ಗೆ ರೈತರು ರಸಗೊಬ್ಬರದ ಮೂಟೆ ಖರೀದಿಸಿದ್ದರು. ಈ ಬಾರಿ ಸಬ್ಸಿಡಿ ಪ್ರಮಾಣ ಹೆಚ್ಚಿಸಿರುವ ಕಾರಣ 500ರಿಂದ 600 ರೂ.ಗೆ ರಸಗೊಬ್ಬರದ ಮೂಟೆ ದೊರೆಯಲಿದೆ.
ಕೃಷಿಗೆ ನಿರ್ಬಂಧ ಇಲ್ಲದಿದ್ದರೂ ಸಮಸ್ಯೆ!: ರಾಜ್ಯದಲ್ಲಿ ಲಾಕ್ಡೌನ್ ಇದ್ದರೂ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ. ಆದರೂ ಬೆಳಗ್ಗೆ 10ರ ನಂತರ ವಾಹನಗಳ ಓಡಾಟಕ್ಕೆ ನಿರ್ಬಂಧವಿರುವ ಕಾರಣ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಹೋಗಲು ಸಾಧ್ಯವಾಗದಂತಾಗಿದೆ. ಆದರೂ, ಈ ಬಾರಿಯೂ ಬಿತ್ತನೆ ಪ್ರಮಾಣ ಏರಿಕೆಯಾಗಿ ಆಹಾರ ಉತ್ಪಾದನೆ ಹೆಚ್ಚಾಗುವ ಸಾಧ್ಯತೆಗಳಿವೆ. ಲಾಕ್ಡೌನ್ನಿಂದ ಜನರು ನಗರ ತೊರೆದು ಹಳ್ಳಿಗಳಿಗೆ ಹೋಗಿದ್ದಾರೆ. ಅವರೆಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. 2020ರಲ್ಲೂ ಈ ಪರಿಸ್ಥಿತಿ ಇದ್ದರೂ 153 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಇದು ಕೃಷಿ ಇಲಾಖೆ ನಿಗದಿ ಮಾಡಿದ್ದ ಗುರಿಗಿಂತ ಶೇ. 10 ಹೆಚ್ಚು. ಈ ಬಾರಿ 135.48 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿ ಇದೆ. ಅದಕ್ಕಿಂತ ಹೆಚ್ಚು ಉತ್ಪಾದನೆಯಾಗುವ ಎಲ್ಲ ಲಕ್ಷಣಗಳಿವೆ.
ಬಾಡಿಗೆಗೆ ಸಿಗುತ್ತವೆ ಕೃಷಿ ಯಂತ್ರೋಪಕರಣ: ಭೂಮಿ ಹದ ಮಾಡುವುದು, ಬಿತ್ತನೆ ಸೇರಿ ಹಲವು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳು ರೈತರಿಗೆ ಸುಲಭವಾಗಿ ಸಿಗಲೆಂದು ಸರ್ಕಾರ, ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆದಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಮತ್ತು 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣ ಬ್ಯಾಂಕ್ಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಮೂಲಕ ರೈತರಿಗೆ ಟ್ರಾ್ಯಕ್ಟರ್, ಟಿಲ್ಲರ್ ಸೇರಿ ಮುಂತಾದ ಕೃಷಿ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದೆ.