

‘ಸ್ವಾಮೀಜಿ ನಾನು ಒಬ್ಬ ವ್ಯಾಪಾರಿ, ಜನರಿಗೋಸ್ಕರ ಎಷ್ಟೊಂದು ದಾನಧರ್ಮ ಮಾಡುತ್ತೇನೆ, ಅನ್ನದಾನ, ವಿದ್ಯಾದಾನ ಮಾಡಿದ್ದೇನೆ. ಆದರೂ ನನ್ನನ್ನು ಯಾರೂ ಸರಿಯಾಗಿ ಗುರುತಿಸುತ್ತಿಲ್ಲ, ಮರ್ಯಾದೆ ಕೊಡುತ್ತಿಲ್ಲ, ಎದುರಿಗೆ ಸಿಕ್ಕರೆ ಮಾತನಾಡಿಸುವುದಿಲ್ಲ. ಕೆಲವರು ನನ್ನನ್ನು ಸುಮ್ಮನೇ ಬೈದುಕೊಂಡು ಓಡಾಡುತ್ತಾರೆ. ಏನು ಮಾಡುವುದು?’ ಎಂದು ಸ್ವಾಮೀಜಿಯನ್ನು ಕೇಳಿದ ವ್ಯಾಪಾರಿ. ಆಗ ಸ್ವಾಮೀಜಿ, ‘ಅಲ್ಲಿ ಒಂದಷ್ಟು ದೂರದಲ್ಲಿ ಮಾವಿನಮರ ಇದೆಯಲ್ಲ, ಅದರಲ್ಲಿ ಒಂದು ಹಣ್ಣು ತೆಗೆದುಕೊಂಡು ಬಾ ಹೋಗು’ ಎಂದರು.
ಹಣ್ಣು ತರಲು ವ್ಯಾಪಾರಿ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಆ ಮರದ ಮಾಲೀಕ ಮರವನ್ನು ತೆಗಳುತ್ತಿರುತ್ತಾನೆ. ‘ಇದೊಂದು ದೊಡ್ಡಮರ. ಇದರಿಂದ ನನಗೆ ಏನೂ ಉಪಯೋಗವಿಲ್ಲ. ಬರೀ ಊರಿನವರಿಗೆ ಉಪಯೋಗ. ಇದರ ನೆರಳಿನಲ್ಲಿ ಏನೂ ಬೆಳೆ ಬರುವುದಿಲ್ಲ...’ ಎಂದು ಗೋಣಗಿಕೊಂಡು ಹೋಗುತ್ತಿದ್ದ. ಮಾವಿನ ಮರದ ಹತ್ತಿರವೇ ಮಕ್ಕಳು ಆಟವಾಡುತ್ತಿದ್ದರು, ಬಿಸಿಲಿಗೆ ನಡೆದು ಬಂದ ಜನ ದಣಿವಾರಿಸಿಕೊಳ್ಳಲು ಕೂತಿದ್ದರು, ಆಟವಾಡುತ್ತಿದ್ದ ಮಕ್ಕಳನ್ನು ಕೇಳಿ ಒಂದು ಹಣ್ಣು ಪಡೆದು ಸ್ವಾಮೀಜಿಯ ಹತ್ತಿರ ಹೋಗಿ ಕೊಟ್ಟ.
ಸ್ವಾಮೀಜಿ ವ್ಯಾಪಾರಿಗೆ- ‘ಮಗು ನಿನ್ನ ಸಮಸ್ಯೆಗೆ ಪರಿಹಾರ ಸಿಕ್ಕಿತೆ?’ ಎಂದು ಕೇಳಿದರು. ಅದಕ್ಕೆ ‘ಹೌದು ಸ್ವಾಮೀಜಿ’ ಎಂದ. ‘ಏನು?’ ಎಂದು ಕೇಳಿದಾಗ, ‘ಆ ಮಾವಿನ ಮರ ಅದೆಷ್ಟೋ ಉಪಕಾರ ಮಾಡುತ್ತಿದೆ. ದಣಿದು ಬಂದವರಿಗೆ ನೆರಳು ಕೊಡುತ್ತಿದೆ. ಮಕ್ಕಳಿಗೆ ಆಟವಾಡಲು ತಂಪಾದ ಜಾಗ, ತಿನ್ನಲು ಹಣ್ಣು ಕೊಡುತ್ತಿದೆ. ಆದರೂ ಅದರ ಮಾಲೀಕ ಅದನ್ನು ಬಯ್ಯುತ್ತಾನೆ ಅಂದರೆ ಕೆಲವೊಂದಷ್ಟು ಜನ ನಾವು ಏನೇ ಮಾಡಿದರೂ ತೆಗಳುತ್ತಾರೆ. ಅವರ ಮಾತನ್ನು ನಿರ್ಲಕ್ಷಿಸಿ ಆ ಮರದ ಹಾಗೆ ಪರೋಪಕಾರಿಯಾಗಿ ಬದುಕಬೇಕು’ ಎಂದ.
‘ಸರಿಯಾಗಿ ತಿಳಿದುಕೊಂಡೆ. ಅಷ್ಟೇ ಅಲ್ಲ, ಆ ಮರ ತನ್ನನ್ನು ಯಾರೂ ಗುರುತಿಸುತ್ತಿಲ್ಲ, ಮರ್ಯಾದೆ ಕೊಡುತ್ತಿಲ್ಲ ಎಂದು ಕೊರಗುವುದಿಲ್ಲ. ಬದಲಾಗಿ ಕಲ್ಲು ಹೊಡೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ. ಅದರ ಕೊಂಬೆಗೆ ಹಗ್ಗ ಕಟ್ಟಿ ಜೋಕಾಲಿ ಆಡಿದರೂ, ಹಬ್ಬ-ಹರಿದಿನಗಳಲ್ಲಿ ನಮ್ಮ ಮನೆಯ ಅಲಂಕಾರಕ್ಕೆ ಅದರ ಎಲೆಗಳನ್ನು ಕಿತ್ತು ತಂದರೂ ಬೇಜಾರು ಮಾಡಿಕೊಳ್ಳದೆ ಮರು ವರ್ಷ ಮತ್ತೆ ಚಿಗುರುತ್ತದೆ, ಮತ್ತೆ ಹಣ್ಣು ಕೊಡುತ್ತದೆ. ನೂರಾರು ಪಕ್ಷಿಗಳಿಗೆ ಆಶ್ರಯ ನೀಡುತ್ತದೆ. ಮನುಷ್ಯರ ದಾಹ ತೀರಿಸುತ್ತದೆ. ಬೇರೆಯವರ ಸಂತೋಷದಲ್ಲಿ ತಾನು ಸಂತೋಷ ಕಾಣುತ್ತದೆ.
ನೀನು ಕೂಡ ದಾನಧರ್ಮ ಮಾಡಿದಾಗ ಅವರ ಮುಖದಲ್ಲಿ ಮೂಡುವ ಸಂತೋಷದಲ್ಲಿ ನಿನ್ನ ಸಂತೋಷವನ್ನು ಕಾಣು, ಪ್ರತಿಯಾಗಿ ಅವರು ನಿನಗೆ ಗೌರವ ಕೊಡಬೇಕು ಎಂದು ಬಯಸಬೇಡ. ಗೌರವ-ಮರ್ಯಾದೆ ಕೊಡುವುದು, ಬಿಡುವುದು ಅವರಿಷ್ಟ. ಕೊಟ್ಟರೆ ಸಂತೋಷ, ಕೊಡದಿದ್ದರೆ ಇನ್ನೂ ಸಂತೋಷ. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ದಾನ, ಕೆಲಸವೇ ಶ್ರೇಷ್ಠ’ ಎಂದು ಸ್ವಾಮೀಜಿ ಹೇಳಿದಾಗ ಅವನಿಗೆ ನಿಜದ ಅರಿವಾಯಿತು.
ನಮ್ಮ ಕೆಲಸ, ಜವಾಬ್ದಾರಿಗಳನ್ನು ನಿಭಾಯಿಸುತ್ತ ಸಾಗೋಣ. ಆತ್ಮತೃಪ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)