ಜೀವನ ಪ್ರತಿಧ್ವನಿಯಂತೆ...

Manollasa 29
Published on

| ಜಯಶ್ರೀ ಜೆ.ಅಬ್ಬಿಗೇರಿ, ಬೆಳಗಾವಿ

ಇಬ್ಬರು ಪುಟ್ಟ ಬಾಲಕಿಯರು ನಿಸರ್ಗದ ಸಿರಿಯಲ್ಲಿ ಓಡುತ್ತ ನಲಿಯುತ್ತ ಬೆಟ್ಟದ ತಾಣವೊಂದನ್ನು ತಲುಪಿದರು. ‘ಹೇ! ನನ್ನ ಹಿಂದೆ ಏಕೆ ಬರುತ್ತಿರುವೆ ಅಲ್ಲೇ ನಿಲ್ಲು’ ಎಂದಳು ಒಬ್ಬ ಬಾಲಕಿ. ಅದೇ ಧ್ವನಿ ಮಾರ್ದನಿಯಾಗಿ ಬಂತು. ಅದಕ್ಕೆ ಉತ್ತರವಾಗಿ, ‘ನೀ ನನ್ನ ಗೆಳತಿಯಲ್ಲವೇ ಅದಕ್ಕೆ ನಿನ್ನ ಹಿಂಬಾಲಿಸುತ್ತಿರುವೆ’ ಎಂದಳು ಇನ್ನೊಬ್ಬ ಬಾಲಕಿ. ಆಗಲೂ ಪ್ರತಿಧ್ವನಿ ಮೊಳಗಿತು. ಅದು ಪುಟ್ಟ ಬಾಲಕಿಯರಿಗೆ ಆಶ್ಚರ್ಯವೆನಿಸಿತು. ನಮ್ಮಂತೆ ಇಲ್ಲಿ ಯಾರೋ ಮಾತನಾಡಿ ನಮಗೆ ಅಣುಕಿಸುತ್ತಿದ್ದಾರೆಂದು ತಿಳಿದು ಬೈಯ್ಯಲಾರಂಭಿಸಿದರು. ಅವೇ ಬೈಗುಳಗಳು ಮರಳಿ ಬಂದವು. ಅವರೊಂದಿಗೆ ಜಗಳ ಬೇಡವೆನಿಸಿ ‘ನಾವು ನಿಮ್ಮ ಗೆಳತಿಯರು’ ಎಂದು ಜೋರಾಗಿ ಕೂಗಿದರು. ಅದೇ ಮಾತು ಮರಳಿತು. ಪ್ರತಿಧ್ವನಿಯಿಂದ ಸಂತಸವಾಯಿತಾದರೂ ಮನದಲ್ಲೇನೋ ಗೊಂದಲವಾಯಿತು. ಮರುದಿನ ಶಾಲೆಯಲ್ಲಿ ಗುರುಗಳ ಹತ್ತಿರ ನಡೆದ ಘಟನೆ ತಿಳಿಸಿದರು. ಅದಕ್ಕೆ ಗುರುಗಳು, ‘ಮಕ್ಕಳೇ, ಇದರಲ್ಲಿ ಹೆದರುವಂಥದ್ದು ಏನಿಲ್ಲ. ಪ್ರತಿಧ್ವನಿಯ ಘಟನೆ ನಮ್ಮ ಜೀವನದ ಕಥೆಯೇ ಆಗಿದೆ. ಲೋಕವು ಯಾವಾಗಲೂ ಕನ್ನಡಿಯಂತೆ ನಮ್ಮ ಪ್ರತಿಕ್ರಿಯೆಗಳನ್ನು ಪ್ರತಿಬಿಂಬಿಸುತ್ತದೆ. ಕೆಟ್ಟದ್ದನ್ನು ನೀಡಿದರೆ ಕೆಟ್ಟದ್ದನ್ನೇ ಮರಳಿಸುವುದು. ಒಳ್ಳೆಯದನ್ನು ನೀಡಿದರೆ ಅದನ್ನೇ ನಿರೀಕ್ಷಿಸಬಹುದು. ನಾವು ಏನನ್ನು ಕೊಡತ್ತೇವೆಯೋ ಅದನ್ನೇ ಮರಳಿ ಪಡೆಯುತ್ತೇವೆ. ಆದ್ದರಿಂದ ನಾವು ನಮಗೆ ಒಳ್ಳೆಯದಾಗಬೇಕೆಂದು ಬಯಸುವುದಾದರೆ ಒಳ್ಳೆಯ ದನ್ನೇ ನೀಡಬೇಕು’ ಎಂದರು.

ಮೇಲಿನ ದೃಷ್ಟಾಂತವು ನಿಜ ಜೀವನಕ್ಕೆ ಕನ್ನಡಿ ಹಿಡಿದಂತಿದೆ. ‘ನಾವು ಇತರರಿಂದ ಏನನ್ನು ಬಯಸುತ್ತೇವೆಯೋ ಅದನ್ನು ಇತರರಿಗೆ ನೀಡಬೇಕು’ ಎನ್ನುತ್ತಾರೆ ಬಲ್ಲವರು. ಸಮಾಜಕ್ಕೆ ನಾವು ಏನನ್ನು ನೀಡುತ್ತೇವೆಯೋ ಅದನ್ನೇ ವಾಪಸ್ ಪಡೆಯುತ್ತೇವೆ. ಬಹಳಷ್ಟು ಸಲ ನಾವೆಷ್ಟು ನೀಡುತ್ತೇವೆಯೋ ಅದಕ್ಕಿಂತ ಹೆಚ್ಚಾಗಿ ಪಡೆಯುತ್ತೇವೆ. ಯಾವುದೇ ಒಳ್ಳೆಯ ಕಾರ್ಯ ಫಲದಿಂದ ತಪ್ಪಿಸಿಕೊಳ್ಳಲಾರದು. ಕೆಟ್ಟದ್ದು ಶಿಕ್ಷೆಯಿಂದ ತಪ್ಪಿಸಿಕೊಳ್ಳದು. ಮಾಡಿದ ಕರ್ಮಗಳು ನೆರಳಿನಂತೆ ಬಿಡದೇ ಹಿಂಬಾಲಿಸುವವು. ಸಮುದ್ರ ದಂಡೆಯಲ್ಲಿ ಮಕ್ಕಳು ಪುಟ್ಟ ಕೈಗಳಲ್ಲಿ ಮರಳನ್ನು ತುಂಬಿಕೊಂಡು ನಿಧಾನವಾಗಿ ಬೆರಳುಗಳ ಸಂದಿಗಳ ಮೂಲಕ ಪೂರ್ಣವಾಗಿ ಕೆಳಕ್ಕೆ ಚೆಲ್ಲುತ್ತಾರೆ. ಹಾಗೆಯೇ ನಾವೂ ಜೀವನದಲ್ಲಿನ ಒಳ್ಳೆಯ ಅವಕಾಶಗಳನ್ನು ಕೆಳಕ್ಕೆ ಚೆಲ್ಲುತ್ತೇವೆ. ನಂತರ ಮರುಗುತ್ತೇವೆ. ‘ನಿನ್ನ ಅಕ್ಕಪಕ್ಕದ ವರನ್ನು ಪ್ರೀತಿಸು, ಆದರೆ ಸ್ವಾಭಿಮಾನದ ಬೇಲಿಯನ್ನು ಎಳೆದು ಹಾಕಬೇಡ. ನೀವು ಯಾರನ್ನು ಪ್ರೀತಿಸುತ್ತಿರೋ ಅದು ಅವರಿಗೆ ತಿಳಿದಿರಲಿ’ ಎನ್ನುತ್ತಾರೆ ಪ್ರಾಜ್ಞರು. ಕಣ್ಣುಗಳನ್ನು ಎತ್ತಿ ನೋಡಿದರೆ ನಕ್ಷತ್ರಗಳು ಕಾಣುತ್ತೇವೆ. ನೆಲದಲ್ಲಿ ದೃಷ್ಟಿ ಇರಿಸಿದರೆ ಕೆಸರುಕೊಳ್ಳಗಳನ್ನು ಕಾಣುತ್ತೇವೆ. ದೃಷ್ಟಿಯಂತೆ ಸೃಷ್ಟಿ. ಗುಣಗಳನ್ನು ಗ್ರಹಿಸುವ ಗುಣ ನಮ್ಮಲ್ಲಿದ್ದಲ್ಲಿ ಜೀವನ ಸರಳ. ಹಾಗೆ ನೋಡಿದರೆ ಜೀವನ ತುಂಬ ಸರಳವಾದುದು. ಆದರೆ ಅದನ್ನು ನಾವೇ ಕ್ಲಿಷ್ಟವಾಗಿಸಿಕೊಂಡು ಕಷ್ಟಪಡುತ್ತಿದ್ದೇವೆ. ನಕ್ಕರೆ ಜಗವೆಲ್ಲ ನಮ್ಮೊಡನೆ ನಗುವುದು. ಅತ್ತರೆ ಏಕಾಕಿಯಾಗಿ ಅಳಬೇಕಾಗುವುದು. ಜೀವನ ತಾನೇ ಸುಂದರವಾಗಿಲ್ಲ. ನಾವೇ ಅದನ್ನು ಸುಂದರಗೊಳಿಸಿಕೊಳ್ಳಬೇಕು. ಒಳ್ಳೆಯವರಾಗಿ ರುವ ಜತೆಗೆ ಒಳ್ಳೆಯ ಕೆಲಸಗಳನ್ನೂ ಮಾಡೋಣ. ಆ ದಿಶೆಯಲ್ಲಿ ಹೆಜ್ಜೆ ಹಾಕೋಣ.

(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net