

ಪ್ರಸಿದ್ಧ ಚಿತ್ರಕಾರನೊಬ್ಬ ತನ್ನ ಮನಸ್ಸಿಗೆ ಸಂಪೂರ್ಣ ಸಮಾಧಾನವನ್ನೀಯುವಂಥ ಚಿತ್ರವೊಂದನ್ನು ಬರೆಯಲು ಅಪೇಕ್ಷಿಸಿದ. ಅಂಥ ಚಿತ್ರ ಹೇಗಿರಬೇಕು, ಯಾವುದಿರಬೇಕು ಎಂದು ಯೋಚಿಸುತ್ತ ಆತ ಬೀದಿಯಲ್ಲಿ ನಡೆಯುತ್ತಿದ್ದಾಗ ಎದುರಿಗೆ ಒಬ್ಬ ಧರ್ಮಗುರುಗಳು ಭೇಟಿಯಾದರು. ಆತ ಅವರಿಗೆ ನಮಸ್ಕರಿಸಿ ಕೇಳಿದ, ‘ಸ್ವಾಮಿ ಜಗತ್ತಿನಲ್ಲಿಯೇ ಅತೀ ಸುಂದರವಾದ ವಿಷಯದ ಚಿತ್ರ ಬಿಡಿಸಬೇಕೆಂದಿದ್ದೇನೆ. ಆ ವಿಷಯ ಯಾವುದು ಎಂದು ನನಗೆ ತಿಳಿಸಬಲ್ಲಿರಾ?’ ಅದಕ್ಕೆ ಸ್ವಾಮಿ ಆತ್ಮವಿಶ್ವಾಸದಿಂದ, ‘ಹೇಳುವೆ ಕೇಳು, ಇದೇನು ಅಂಥ ಮಹಾಸಮಸ್ಯೆಯಲ್ಲ. ಶ್ರದ್ಧೆಗಿಂತಲೂ ಸುಂದರವಾದ ಇನ್ನೊಂದು ವಸ್ತು ಈ ಜಗತ್ತಿನಲ್ಲಿ ಸಿಗಲಾರದು. ಶ್ರದ್ಧೆಯೇ ಅನುಪಮ, ಅನನ್ಯ’ ಎಂದು ಹೇಳಿದರು.
ಆದರೂ ಆ ಕಲಾವಿದನಿಗೆ ಅದೇಕೋ ಸಮಾಧಾನವಾಗಲಿಲ್ಲ. ಏನೋ ಯೋಚಿಸುತ್ತ ಮುಂದಕ್ಕೆ ಹೊರಟ. ತುಸು ದೂರ ಹೋದ ಬಳಿಕ ಅವನ ಪರಿಚಯದ, ಅದೇ ತಾನೇ ವಿವಾಹವಾಗಿದ್ದ ತರುಣಿಯೊಬ್ಬಳು ಸಿಕ್ಕಳು. ಅವಳಿಗೂ ತನ್ನ ಪ್ರಶ್ನೆ ಕೇಳಿದ. ಆ ಹುಡುಗಿ ಥಟ್ಟನೇ- ‘ಪ್ರೇಮ, ಹೌದು, ಜಗತ್ತಿನಲ್ಲಿ ಪ್ರೇಮಕ್ಕಿಂತ ಸುಂದರವಾದದ್ದು ಮತ್ತೊಂದಿಲ್ಲ. ಅದು ಎಲ್ಲ ಸಮಸ್ಯೆ ನಿವಾರಿಸುತ್ತದೆ, ಜೀವನಕ್ಕೆ ಹೊಸ ಉತ್ಸಾಹ ತುಂಬುತ್ತದೆ. ಅಂತರಂಗದ ಸೌಂದರ್ಯ ಹೆಚ್ಚಿಸುತ್ತದೆ. ಪ್ರೇಮದಿಂದ ಜೀವಿಸಿದರೆ ಬಾಳು ಸಾರ್ಥಕ’ ಎಂದಳು. ಆ ತರುಣಿಯ ಉತ್ತರದಿಂದಲೂ ಇವನಿಗೆ ಸಮಾಧಾನವಾಗಲಿಲ್ಲ. ಆತ ಮತ್ತೂ ಮುಂದಕ್ಕೆ ಹೋದಾಗ ಎದುರಿಗೆ ಒಬ್ಬ ಸೇವಾ ನಿವೃತ್ತ ಸೈನಿಕ ಸಿಕ್ಕನು. ಚಿತ್ರಕಾರನ ಪ್ರಶ್ನೆಗೆ ಉತ್ತರವೀಯುತ್ತ ಆ ಸೈನಿಕ ಹೀಗೆ ಹೇಳಿದ, ‘ಸ್ವಾಮಿ ಎಲ್ಲಕ್ಕಿಂತಲೂ ಸುಂದರವಾದದ್ದೆಂದರೆ ಶಾಂತಿ. ಎಲ್ಲಕ್ಕಿಂತಲೂ ಕುರೂಪಿ ಯುದ್ಧ. ಶಾಂತಿಯಲ್ಲಿ ಸೌಂದರ್ಯವಿರುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಿದಾಗಲೇ ಅಭಿವೃದ್ಧಿಯ ಆಶಯಗಳು ಈಡೇರುತ್ತವೆ, ಉತ್ತಮ ಮೌಲ್ಯಗಳು ವಿಕಾಸವಾಗುತ್ತವೆ’ ಎಂದ.
ಕಲಾವಿದ ನಿರಾಶನಾಗಿಯೇ ಮನೆಗೆ ಮರಳಿದ. ಆದರೆ ಅವನು ತನ್ನ ಮನೆಯ ಬಾಗಿಲಿಗೆ ಬಂದಾಗ ಜಗತ್ತಿನಲ್ಲಿಯೇ ಸುಂದರವಾದ ದೃಶ್ಯವನ್ನು ಕಂಡ! ಬಾಗಿಲಲ್ಲಿ ಅವನ ಹೆಂಡತಿ-ಮಕ್ಕಳು ಅವನ ದಾರಿ ಕಾಯುತ್ತ ನಿಂತಿದ್ದರು. ಮಕ್ಕಳ ಕಣ್ಣಲ್ಲಿ ಅವನಿಗೆ ತನ್ನ ಮೇಲಿನ ಅವರ ಶ್ರದ್ಧೆ ಕಂಡಿತು. ಹೆಂಡತಿಯ ಮುಗುಳ್ನಗುವಿನಲ್ಲಿ ಪ್ರೇಮರಸ ಹರಿಯುತ್ತಿತ್ತು. ಮನೆಯ ಸಾಮ್ರಾಜ್ಯದಲ್ಲಿ ಸುಖಕರವಾದ ಶಾಂತಿ ನೆಲೆಸಿತ್ತು. ಶ್ರದ್ಧೆ, ಶಾಂತಿ, ಪ್ರೇಮ ಮೂರೂ ಒಂದೆಡೆ ಇದ್ದವು. ಆಗ ಆತ ಚಿತ್ರ ಬರೆದು ಅದಕ್ಕೆ ‘ಮನೆ’ ಎಂದು ಹೆಸರಿಟ್ಟ.
ಎಷ್ಟೋ ಬಾರಿ ನಮ್ಮ ಸುತ್ತಲಿನ ಚಿಕ್ಕ-ಚಿಕ್ಕ ವಿಷಯದಲ್ಲೂ ಸುಖ ಮತ್ತು ಶಾಂತಿ ಸಿಗುತ್ತದೆ ಎಂಬುದನ್ನು ಮರೆತು, ಬೇರೆ ಏನೋ ಹುಡುಕುವ ಕಾತರದಲ್ಲಿ ಇರುತ್ತೇವೆ. ಆದರೆ, ವಾಸ್ತವದೃಷ್ಟಿಯಿಂದ ಗಮನಿಸಿದಾಗ ನಮ್ಮ ಬಾಳಿನಲ್ಲಿ ಖುಷಿ ಪಡುವಂಥ, ನೆಮ್ಮದಿ ತರುವಂಥ ಹಲವು ಸಂಗತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ, ನಮ್ಮದಾಗಿಸಿಕೊಂಡು, ಚೆಂದದ ಬದುಕು ರೂಪಿಸಿಕೊಳ್ಳೋಣ.
(ಲೇಖಕರು ಸಹ ಪ್ರಾಧ್ಯಾಪಕರು)
(ಪ್ರತಿಕ್ರಿಯಿಸಿ: manollasavv@gmail.com)