

ಜಪಾನ್ ದೇಶದಲ್ಲಿ ಓರ್ವ ಆಗರ್ಭ ಶ್ರೀಮಂತನಿದ್ದ. ಅವನಿಗೆ ಮಡದಿ, ಮಕ್ಕಳು ಯಾರೂ ಇರಲಿಲ್ಲ. ಹಣದ ಸಂಪಾದನೆ ಮತ್ತು ಅದರ ರಕ್ಷಣೆಯೊಂದೇ ಅವನ ಏಕಮೇವ ಗುರಿಯಾಗಿತ್ತು. ಒಂದು ದಿನ ರಾತ್ರಿ ಕಳ್ಳನೊಬ್ಬ ಅವನ ಮನೆಯೊಳಗೆ ನುಗ್ಗಿ ಹಣ, ಚಿನ್ನಾಭರಣ ಎಲ್ಲವನ್ನೂ ಲೂಟಿ ಹೊಡೆದು ಓಡಿ ಹೋಗಲು ಯತ್ನಿಸುತ್ತಿದ್ದ. ಅಷ್ಟರಲ್ಲಿ ಎಚ್ಚರಗೊಂಡ ಶ್ರೀಮಂತ ಯಜಮಾನ ಓಡುತ್ತಿದ್ದ ಕಳ್ಳನನ್ನು ಹಿಡಿಯಲು ಎಷ್ಟೇ ಯತ್ನಿಸಿದರೂ ಆತ ಅವನ ಕೈಗೆ ಸಿಗದೆ ಎಲ್ಲೆಂದರಲ್ಲಿ ಓಡುತ್ತಿದ್ದ. ತಕ್ಷಣ ಮನೆಯ ಯಜಮಾನ ಉಪಾಯವೊಂದನ್ನು ಹೂಡಿದ. ತನ್ನ ದೇಶದ ರಾಷ್ಟ್ರಗೀತೆಯನ್ನು ನುಡಿಸಲಾರಂಭಿಸಿದ. ತಕ್ಷಣ ಆ ಕಳ್ಳ ಸ್ತಬ್ಧನಾಗಿ ರಾಷ್ಟ್ರಗೀತೆ ಮುಗಿಯುವವರೆಗೆ ದೇಶದ ಮೇಲಿನ ಗೌರವವನ್ನು ವ್ಯಕ್ತಪಡಿಸಲು, ನಿಂತಲ್ಲೇ ನಿಂತು ಬಿಟ್ಟ. ಈ ಅವಕಾಶವನ್ನು ಬಳಸಿಕೊಂಡು ಯಜಮಾನ ಓಡಿ ಬಂದು ಅವನನ್ನು ಬಂಧಿಸಿ, ಕೋಣೆಯೊಳಗೆ ಕೂಡಿಹಾಕಿದ. ಮರುದಿನ ಪೊಲೀಸರ ಮೂಲಕ ಕೋರ್ಟಿಗೆ ವಿಚಾರಣೆಗಾಗಿ ಹಾಜರುಪಡಿಸಿದ.
ಘಟನೆಯ ವಿವರವನ್ನು ಕೇಳಿಸಿಕೊಂಡ ನ್ಯಾಯಾಧೀಶರು ಕಳ್ಳನ ಬದಲಿಗೆ ಆ ಶ್ರೀಮಂತ ಯಜಮಾನನಿಗೆ ಶಿಕ್ಷೆಯನ್ನು ವಿಧಿಸಿದರು. ಇದಕ್ಕೆ ಕಾರಣ ಹೀಗಿತ್ತು, ‘ಕಳ್ಳ ತನ್ನ ಬಂಧನದ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ರಾಷ್ಟ್ರಗೀತೆಯನ್ನು ನುಡಿಸುವಾಗ ಗೌರವಾರ್ಥವಾಗಿ ನಿಂತಲ್ಲೇ ನಿಂತು ತನ್ನ ದೇಶಪ್ರೇಮವನ್ನು ಮೆರೆದ. ಆದರೆ ಯಜಮಾನನಾದರೋ ತನ್ನ ಸಂಪತ್ತನ್ನು ಉಳಿಸಿಕೊಳ್ಳುವ ಆಸೆಯಿಂದ ರಾಷ್ಟ್ರಗೀತೆಗೆ ಗೌರವ ಕೊಡದೆ ಓಡಿ ಹೋಗಿ ಕಳ್ಳನನ್ನು ಸೆರೆಹಿಡಿದ. ಇದು ರಾಷ್ಟ್ರಕ್ಕೆ ಮಾಡಿದ ಅವಮಾನ. ಆದುದರಿಂದ ಕಳ್ಳ ಅಭಿನಂದನೀಯ. ಶ್ರೀಮಂತ ಯಜಮಾನ ಶಿಕ್ಷಾರ್ಹ!’ ಇದು ಆ ದೇಶದಲ್ಲಿ ಜನರು ರಾಷ್ಟ್ರಕ್ಕೆ ನೀಡುವ ಗೌರವ, ರಾಷ್ಟ್ರಾಭಿಮಾನವೆಂದರೆ ಹೀಗಿರಬೇಕಲ್ಲವೇ!
ನಮ್ಮ ದೇಶದಲ್ಲಿ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸಿದ ಮೊದಲನೆಯ ವ್ಯಕ್ತಿ ಎಂದರೆ ರಾಮಾಯಣದ ಶ್ರೀರಾಮಚಂದ್ರ. ಲಂಕೆಯಲ್ಲಿ ರಾವಣನ ವಧೆಯಾದ ನಂತರ ತಮ್ಮ ಲಕ್ಷ್ಮಣ ಅಣ್ಣ ರಾಮನಿಗೆ ಹೇಳುತ್ತಾನೆ, ‘ಸ್ವರ್ಣಮಯವಾದ ಸಂಪದ್ಭರಿತವಾದ ಈ ಲಂಕೆಯನ್ನು ನಾವು ಜಯಿಸಿ ಆಗಿದೆ. ಮತ್ಯಾಕೆ ಹಿಂತಿರುಗಿ ಅಯೋಧ್ಯೆಗೆ ಹೋಗಬೇಕು. ಇಲ್ಲೇ ಇರಬಹುದಲ್ಲ?’ ಉತ್ತರವಾಗಿ ಶ್ರೀರಾಮಚಂದ್ರನು ಹೇಳುತ್ತಾನೆ,
‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||’
ಅರ್ಥ ‘ಈ ಸ್ವರ್ಣಮಯೀ ಲಂಕಾ ನನ್ನನ್ನು ಆಕರ್ಷಿಸುತ್ತಿಲ್ಲ. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು’ ಇದು ರಾಷ್ಟ್ರಾಭಿಮಾನದ ಮಾತುಗಳು. ಈ ಹಿನ್ನೆಲೆಯಲ್ಲಿ ದೇವತಾರ್ಚನಗಿಂತ ದೇಶ ಅರ್ಚನೆ ಮೇಲು. ಕಾರಣ ದೇಶವಿದ್ದರೆ ತಾನೇ ದೇವರು. ಈ ಸತ್ಯವನ್ನೇ ಕವಿ ಹೀಗೆ ಬರೆದ-‘ದೇಶ ಒಂದಳಿಯ ಉಳಿದವರಾರು? ದೇಶವೊಂದುಳಿಯ ಅಳಿದವರಾರು?’ ಈ ಹಿನ್ನೆಲೆಯಲ್ಲಿ ಒಂದು ದೇಶದ ಸಂಪತ್ತನ್ನು ಅಲ್ಲಿರುವ, ಸೌಕರ್ಯ ಸೌಲಭ್ಯಗಳಿಂದಾಗಲಿ, ಭೌತಿಕ ಪ್ರಗತಿಯಿಂದಾಗಲಿ, ಆರ್ಥಿಕ ಸ್ಥಿತಿಗತಿಯಿಂದಾಗಲಿ ಅಳೆಯಲಾಗದು, ಅಳೆಯಬಾರದು. ಒಂದು ದೇಶದ ನಿಜವಾದ ಸಂಪತ್ತೆಂದರೆ ಆ ದೇಶದ ಸುಶಿಕ್ಷಿತ-ಸುಸಂಸ್ಕೃತ, ಸಭ್ಯ-ಸಂಭಾವಿತ, ಆರೋಗ್ಯವಂತ, ಗುಣವಂತ ರಾಷ್ಟ್ರಪ್ರೇಮಿ ಪ್ರಜೆಗಳು. ಇಂತಹವರ ಸಂತತಿ ಸಾವಿರವಾಗಲಿ!
| ಡಾ.ಕೆ.ಪಿ.ಪುತ್ತೂರಾಯ
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)
(ಪ್ರತಿಕ್ರಿಯಿಸಿ: manollasavv@gmail.com)