

| ಸುನಿತಾ ಬಸವರಾಜ ಕುಳಲಿ
ಜೀವನದಲ್ಲಿ ಏನೇ ಸಾಧನೆ ಮಾಡಿದರೂ ಅದರ ಹಿಂದೆ ಪರಿಶ್ರಮ ಇದ್ದೇ ಇರುತ್ತದೆ. ಕೇವಲ ಕನಸು ಕಾಣುವುದರಿಂದ ಪ್ರಯೋಜನವಾಗದು. ಆಲಸ್ಯವು ಸಾಧನೆಯ ಹಾದಿಯಲ್ಲಿನ ಅತಿದೊಡ್ಡ ಕಂದರ.
ಒಂದೂರಲ್ಲಿ ಒಬ್ಬ ಸೋಮಾರಿಯಿದ್ದ. ಕಡು ಬಡವ. ಆದರೆ ಬಡತನದಿಂದ ಹೊರಬರಲು ಯಾವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ದಿನವನ್ನೆಲ್ಲ ಕೇವಲ ಕನಸು ಕಾಣುವುದರಲ್ಲಿಯೇ ಕಳೆಯುತ್ತಿದ್ದ. ಆದರೆ, ಕನಸು ಕಾಣುವುದರಿಂದಷ್ಟೇ ಹೊಟ್ಟೆ ತುಂಬುವುದಿಲ್ಲವಲ್ಲ! ಹಸಿವಾದಾಗ ಊರಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಒಂದು ದಿನ ಆತನ ಅದೃಷ್ಟಕ್ಕೆ ಒಂದು ಲೀಟರ್ನಷ್ಟು ಹಾಲು ಭಿಕ್ಷೆಯಲ್ಲಿ ದೊರೆಯಿತು. ಮನೆಗೆ ಬಂದು ಸ್ವಲ್ಪ ಹಾಲು ಕುಡಿದು, ಉಳಿದಿದ್ದನ್ನು ಮಣ್ಣಿನ ಮಡಕೆಯಲ್ಲಿಟ್ಟ. ಆ ಹಾಲಿಗೆ ಸ್ವಲ್ಪ ಮೊಸರು ಹಾಕಿ ಹಾಲನ್ನು ಮೊಸರು ಮಾಡಲು ಇಟ್ಟ. ಆ ಮಡಕೆಯ ಪಕ್ಕದಲ್ಲಿಯೇ ಗೊಡೆಗೆ ಒರಗಿ ಕುಳಿತು ಹಾಲಿನ ಬಗ್ಗೆ ಕನಸು ಕಾಣಲಾರಂಭಿಸಿದ.
‘ನಾಳೆ ಅನ್ನುವಷ್ಟರಲ್ಲಿ ಈ ಹಾಲು ಮೊಸರಾಗಿರುತ್ತದೆ. ನಾನು ಮೊಸರನ್ನು ಮಜ್ಜಿಗೆ ಮಾಡುತ್ತೇನೆ, ಅದನ್ನು ಕಡೆದು ಅದರಿಂದ ಬೆಣ್ಣೆ ತೆಗೆಯುತ್ತೇನೆ. ಬೆಣ್ಣೆಯನ್ನು ಕಾಯಿಸಿ ಅದರಿಂದ ತುಪ್ಪ ತೆಗೆಯುತ್ತೇನೆ. ಆ ತುಪ್ಪವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಕೋಳಿಗಳನ್ನು ಕೊಳ್ಳುತ್ತೇನೆ. ಆ ಕೋಳಿಗಳು ನೂರಾರು ಮೊಟ್ಟೆ ಇಡುತ್ತವೆ. ಅದರಿಂದ ನೂರಾರು ಕೋಳಿಮರಿಗಳು ಹೊರಬರುತ್ತವೆ. ಆ ಕೋಳಿಗಳನ್ನು ಮತ್ತು ಮೊಟ್ಟೆಗಳನ್ನು ಮಾರಿ ಹಣ ಗಳಿಸಿ ಅದರಿಂದ ಹಸುಗಳನ್ನು ಕೊಂಡುಕೊಳ್ಳುತ್ತೇನೆ. ಅದರಿಂದ ಬರುವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಿ ಹಣ ಗಳಿಸಿ ಶ್ರೀಮಂತನಾಗುತ್ತೇನೆ. ಸಿರಿವಂತನಾದ ಮೇಲೆ ಬಂಗಾರದ ವ್ಯಾಪಾರ ಮಾಡುತ್ತೇನೆ. ಸುಂದರ ಕನ್ಯೆಯನ್ನು ಮದುವೆಯಾಗುತ್ತೇನೆ. ಆಕೆಯಿಂದ ಸುಂದರ ಮಗನನ್ನು ಪಡೆಯುತ್ತೇನೆ. ಆ ಮಗು ದೊಡ್ಡವನಾದ ಮೇಲೆ ನನ್ನ ಮಾತನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ ನಾನು ಅವನನ್ನು ಕೋಲಿನಿಂದ ಹೊಡೆಯುತ್ತೇನೆ...’ ಎಂದೆಲ್ಲ ಕಲ್ಪಿಸಿಕೊಂಡ ಆತ ಪಕ್ಕದಲ್ಲಿರುವ ಕೋಲನ್ನು ತೆಗೆದುಕೊಂಡು ಮಗನನ್ನು ಹೊಡೆಯುವುದನ್ನು ಮನಸ್ಸಿನಲ್ಲಿ ತಂದುಕೊಂಡು ಕೋಲನ್ನು ಮುಂದೆ ಚಾಚಿದಾಗ ಅದರ ಪೆಟ್ಟು ಪಕ್ಕದಲ್ಲಿರುವ ಮಣ್ಣಿನ ಮಡಕೆಗೆ ಬಿದ್ದು, ಮಡಕೆ ಒಡೆದು ಹಾಲೆಲ್ಲ ಮಣ್ಣುಪಾಲಾಗುತ್ತದೆ.
ಆತನ ಕನಸೆಲ್ಲ ನುಚ್ಚುನೂರಾಗುತ್ತದೆ. ಕೇವಲ ಕನಸು ಕಾಣುತ್ತ, ಸೋಮಾರಿಯಾಗಿ ಕಾಲ ಕಳೆದರೆ ಏನೂ ಸಾಧನೆಯಾಗುವುದಿಲ್ಲ. ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ. ಸಾಧನೆಗೆ ಯಾವುದೇ ಶಾರ್ಟ್ಕಟ್ ಇಲ್ಲ. ‘ಸಂಕಲ್ಪ, ದೃಢ ನಿಶ್ಚಯ ಮತ್ತು ಪರಿಶ್ರಮದಿಂದ ಬೆಟ್ಟ ಗುಡ್ಡಗಳನ್ನೂ ಕುಟ್ಟಿ ಪುಡಿ ಮಾಡಬಹುದು’ ಎಂಬ ಸ್ವಾಮಿ ವಿವೇಕಾನಂದರ ನುಡಿಯು ಸಾಧನೆಯ ಬಯಕೆ ಹೊತ್ತವರಿಗೆಲ್ಲ ದಾರಿದೀಪ.
(ಲೇಖಕರು ಹವ್ಯಾಸಿ ಬರಹಗಾರರು)