

| ವಾಣಿಶ್ರೀ ಬಡಿಗೇರ
ಅದೊಂದು ದಟ್ಟಕಾಡು, ಅಲ್ಲಿನ ಮರದ ಮೇಲೆ ಎರಡು ಸುಂದರ ಕ್ರೌಂಚಪಕ್ಷಿಗಳು ರಸಗಳಿಗೆಯಲ್ಲಿ ತಲ್ಲೀನ. ಆಗ ಅಲ್ಲಿಗೆ ಬಂದ ಬೇಡನೊಬ್ಬ ಈ ಜೋಡಿಪಕ್ಷಿಗಳ ಮೇಲೆ ಬಾಣ ಬಿಟ್ಟ. ಆ ಬೇಡನ ಬಾಣಕ್ಕೆ ಗುರಿಯಾದ ಗಂಡುಪಕ್ಷಿ ಧರೆಗುರುಳಿತು. ಹೆಣ್ಣು ಕ್ರೌಂಚಪಕ್ಷಿ ಅದರ ಸುತ್ತ ಹಾರಾಡುತ್ತ ಶೋಕಿಸಲು ಆರಂಭಿಸಿತು. ಇದನ್ನು ಕಂಡ ಮಹರ್ಷಿ ವಾಲ್ಮೀಕಿಯ ಮನಸ್ಸು ಕರಗಿ ರಾಮಾಯಣ ಬರೆಯಲು ಕಾರಣವಾಗುತ್ತದೆ.
ನಮ್ಮ ಬದುಕು ಕೂಡ ಇದೇ ರೀತಿ. ಜೀವನ ಒಂದು ಸುಂದರ ಪಯಣ ಎಂದುಕೊಂಡು ಅದರಲ್ಲಿ ಸಂತೋಷದಿಂದ ವಿಹರಿಸುತ್ತಿರುವಾಗಲೇ ಕಾಲ ಬೇಡನ ರೂಪದಲ್ಲಿ ಯಾವಾಗ ಬೇಕಾದರೂ ಬಂದೆರಗಬಹುದು. ಮನುಷ್ಯನ ಜೀವನ ನೀರ ಮೇಲಿನ ಗುಳ್ಳೆಯಂತೆ. ಅದರ ಆಯಸ್ಸು ಭಗವಂತನಿಗೆ ಮಾತ್ರ ಗೊತ್ತು. ಹುಟ್ಟಿನೊಂದಿಗೆ ಸಾವಿನ ಖಚಿತತೆ ಕೂಡ ಇರುತ್ತದೆ. ಆದರೂ ಮನುಷ್ಯ ಹುಟ್ಟು-ಸಾವುಗಳ ಮಧ್ಯದ ಜೀವನವೆಂಬ ಪಯಣದಲ್ಲಿ ತಾನು ಶಾಶ್ವತ ಎಂಬಂತೆ ವರ್ತಿಸುತ್ತಾನೆ.
ಇಲ್ಲಿ ನಾವೆಲ್ಲರೂ ಅರ್ಥೈಸಿಕೊಳ್ಳ ಬೇಕಾದದ್ದು ತುಂಬ ಸರಳ ವಿಚಾರ. ನಮ್ಮ ಉಟಜ್ಟಿಢ ಛಚಠಿಛಿ ಯಾವಾಗ ಅಂತ ನಮಗೂ ಗೊತ್ತಿಲ್ಲ. ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರೋಣ. ಯಾರೊಂದಿಗಾದರೂ ಮನಸ್ತಾಪ ಇದ್ದರೆ ಅದನ್ನು ಮನಸ್ಸಿನಿಂದ ತೆಗೆದುಹಾಕಿ ಒಂದು ಮುಗುಳ್ನಗೆಯೊಂದಿಗೆ ಅವರೊಂದಿಗೆ ಸ್ನೇಹ ಮುಂದುವರಿಸೋಣ. ಯಾರದ್ದೋ ಮನಸ್ಸಿಗೆ ನೋವುಂಟಾಗುವ ಹಾಗೆ ನಡೆದುಕೊಂಡಿದ್ದರೆ ಸುಮ್ಮನೆ ಒಂದು ಕ್ಷಣ-‘ಈ ಜೀವನ ನಶ್ವರ’ ಎಂದು ಮನಸ್ಸಿನಲ್ಲಿ ಆಲೋಚನೆ ಮಾಡಿ ಮನಃಪೂರ್ವಕವಾಗಿ ಅವರಲ್ಲಿ ಕ್ಷಮೆ ಕೇಳೋಣ. ಯಾರಾದರೂ ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಒಂದು ಸಾರಿ ಮುಗುಳ್ನಕ್ಕು ಕ್ಷಮಿಸಿಬಿಡಿ. ಯಾರಿಗಾದರೂ ಏನನ್ನಾದರೂ ಹೇಳುವುದಿದ್ದರೆ ‘ನಾಳೆ ಹೇಳಿದರಾಯಿತು’ ಎಂದು ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದರೆ ದಯವಿಟ್ಟು ಇಂದೇ ಈಗಲೇ ಹೇಳಿಬಿಡಿ. ನಾಳೆಗಾಗಿ ಕಾಯಬೇಡಿ. ಆ ನಾಳೆ ನಮ್ಮ ಜೀವನದಲ್ಲಿ ಬರದೇ ಇರಬಹುದು. ಸಂಬಂಧಗಳನ್ನು ಗೌರವಿಸಿ. ಏಕೆಂದರೆ ನಮ್ಮ ಎಕ್ಸ್ಪೈರಿ ಡೇಟ್ ಮುಗಿದಾಗ ಕಾಲ ನಮಗೆ ಯಾರನ್ನೂ ಕ್ಷಮಿಸಲು, ಪ್ರೀತಿಸಲು, ಗೌರವಾದರ ತೋರಿಸಲು ಸಮಯ ನೀಡುವುದಿಲ್ಲ. ಅದಕ್ಕೆ ಬದುಕನ್ನು ಪೂರ್ತಿಯಾಗಿ ಜೀವಿಸೋಣ. ಇದ್ದಷ್ಟು ದಿನ ಎಲ್ಲರೊಂದಿಗೆ ಸ್ನೇಹ- ಪ್ರೀತಿಯಿಂದ ಇರೋಣ. ಇದನ್ನೂ ಓದಿ: ಮನೋಲ್ಲಾಸ: ಧನದ ಪರಿವರ್ತನೆ ಹೇಗೆ?
ಪ್ರಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಮ್ |
ಮೂಢೈಃ ಪಾಷಾಣ ಖಂಡೇಷು ರತ್ನ ಸಂಜ್ಞಾವಿಧೀಯತೇ||
ಈ ಪೃಥ್ವಿಯ ಮೇಲೆ ಮೂರೇ ಮೂರು ರತ್ನಗಳಿವೆ- ‘ನೀರು, ಅನ್ನ ಮತ್ತು ಒಳ್ಳೆಯ ಮಾತುಗಳು. ಆದರೆ ಅಜ್ಞಾನಿಗಳು ಕಲ್ಲಿನ ತುಂಡುಗಳನ್ನು ರತ್ನವೆಂದು ಭಾವಿಸಿರುತ್ತಾರೆ. ಕಾಲಪುರುಷನು ನಮ್ಮ ಬದುಕಿಗೆ ಯಾವಾಗ ಪೂರ್ಣವಿರಾಮವನ್ನಿಡುತ್ತಾನೆಯೋ ಗೊತ್ತಿಲ್ಲ. ಅದಕ್ಕೂ ಮೊದಲೇ ಸತ್ಕಾರ್ಯಗಳನ್ನು ಮಾಡಿ ಧರ್ಮ ಮತ್ತು ಪುಣ್ಯಸಂಗ್ರಹ ಮಾಡುವುದು ವಿವೇಕಿಯ ಲಕ್ಷಣ.
(ಪ್ರತಿಕ್ರಿಯಿಸಿ: manollasavv@gmail.com)
(ಲೇಖಕಿ ಉಪನ್ಯಾಸಕಿ)