ರಾಜಧರ್ಮ ಮತ್ತು ಪ್ರಭುತ್ವ; ಮನೋಲ್ಲಾಸ

Manollasa
Published on
| ಡಾ.ಜಯಪ್ರಕಾಶ ಮಾವಿನಕುಳಿ

ಮಹಾಭಾರತದ ಪ್ರಸಂಗ. ನೀರು ತರಲು ಹೋದ ನಾಲ್ಕೂ ತಮ್ಮಂದಿರು ಯಕ್ಷನ ಪ್ರತಾಪಕ್ಕೆ ಒಳಗಾಗಿ ಮೂರ್ಛೆ ಬಿದ್ದಿದ್ದಾರೆ. ಕಾದು ಕಾದು ಧರ್ಮರಾಯ ತಾನೇ ಸ್ವತಃ ಬರುತ್ತಾನೆ. ತಮ್ಮಂದಿರು ಎಚ್ಚರವಾಗಬೇಕಾದರೆ ಯಕ್ಷನ ಪ್ರಶ್ನೆಗೆ ಸಮರ್ಪಕ ಉತ್ತರ ಹೇಳಬೇಕು. ಉತ್ತರದಿಂದ ಸಂಪ್ರೀತನಾದ ಯಕ್ಷ, ‘ಯಾರನ್ನು ಬದುಕಿಸಬೇಕು?’ ಎಂದು ಕೇಳಿದಾಗ ಧರ್ಮರಾಯ ‘ಸಹದೇವನನ್ನು ಬದುಕಿಸು’ ಎಂದು ಕೇಳುತ್ತಾನೆ. ಯಕ್ಷನಿಗೆ ಆಶ್ಚರ್ಯ! ಸಹದೇವನೇ ಯಾಕೆಂದು ಕೇಳಿದಾಗ ಧರ್ಮರಾಯನ ಉತ್ತರ ಪ್ರಜಾಪ್ರಭುತ್ವದ ರಾಜಧರ್ಮವನ್ನು ಹೇಳುತ್ತದೆ. ‘ಕುಂತಿಯ ಮಗನಾಗಿ ನಾನಿರುವಾಗ ಮಾದ್ರಿಯ ಮಗನಾಗಿ ಸಹದೇವ ಇರುವುದು ಸೂಕ್ತ’ ಎನ್ನುತ್ತಾನೆ. ನಮ್ಮ ಸಂವಿಧಾನದ ಮೂಲ ಆಶಯವೂ ಇದೇ. ಸಮಾನತೆ ಅಂದರೆ ಇದೇ.

ರಾಮಾಯಣದಲ್ಲಿ ಒಂದು ಪ್ರಸಂಗ. ಶ್ರೀರಾಮಚಂದ್ರನ ಆಡಳಿತದಲ್ಲಿ ಒಬ್ಬನನ್ನು ನಾಲ್ಕು ಜನ ಸೇರಿ ಕೊಲೆ ಮಾಡುತ್ತಾರೆ. ನಾಲ್ಕೂ ಜನರನ್ನು ಸೆರೆ ಹಿಡಿಯಲಾಗುತ್ತದೆ. ಅದರಲ್ಲಿ ಒಬ್ಬ ಬ್ರಾಹ್ಮಣ, ಒಬ್ಬ ಕ್ಷತ್ರಿಯ, ಒಬ್ಬ ವ್ಯೆಶ್ಯ, ಒಬ್ಬ ಶೂದ್ರ ಇದ್ದಿರುತ್ತಾರೆ. ವಿಚಾರಣೆಯಲ್ಲಿ ಅಪರಾಧ ಸಾಬೀತಾಗುತ್ತದೆ. ಶಿಕ್ಷೆಯನ್ನು ದೊರೆ ಶ್ರೀರಾಮಚಂದ್ರ ಘೊಷಿಸುತ್ತಾನೆ. ಬ್ರಾಹ್ಮಣನಿಗೆ ನಾಲ್ಕು ಛಡಿಯೇಟು, ವ್ಯೆಶ್ಯನಿಗೆ ಮೂರು, ಕ್ಷತ್ರಿಯನಿಗೆ ಎರಡು ಮತ್ತು ಶೂದ್ರನಿಗೆ ಒಂದು ಛಡಿಯೇಟಿನ ಶಿಕ್ಷೆ. ಸಭೆಯಲ್ಲಿ ಜಿಜ್ಞಾಸೆ ಶುರುವಾಗುತ್ತದೆ. ಆಗ ದೊರೆ ಶ್ರೀರಾಮ ಸಮಜಾಯಿಷಿ ನೀಡುತ್ತಾನೆ. ‘ಅಪರಾಧ ಒಂದೇ ಆದರೂ ಅಪರಾಧಿಯ ತಿಳಿವಳಿಕೆ ಮೇಲೆ ಶಿಕ್ಷೆ ತೀರ್ವನವಾಗುತ್ತದೆ. ದಡ್ಡ ಮಾಡುವ ತಪ್ಪು ಮತ್ತು ಬುದ್ಧಿಶಕ್ತಿ ಇರುವವನು ಮಾಡುವ ತಪ್ಪು ಒಂದೇ ಅಲ್ಲ. ಬುದ್ಧಿಶಕ್ತಿ ಇರುವವನು ಹೆಚ್ಚು ಎಚ್ಚರಿಕೆಯಿಂದ ನಡೆಯಬೇಕಾಗುತ್ತದೆ’. ನಮ್ಮ ಸಂವಿಧಾನದಲ್ಲಿ ಹೇಳಿದ ‘ಸಮಾನತೆ’ ಅಂದರೆ ‘ಎಲ್ಲರೂ ಸಮಾನರು’ ಎಂಬ ಅದರ ವಾಚ್ಯ ಅರ್ಥವನ್ನು ತೆಗೆದುಕೊಳ್ಳಬಾರದು. ಸಮಾನತೆ ಎಂದರೆ ಸಮಾನರಲ್ಲಿ ಸಮಾನತೆ. ಇಬ್ಬರು ಮಕ್ಕಳಲ್ಲಿ ಒಬ್ಬ ಎರಡು ಇಡ್ಲಿ ತಿಂದಾನು, ಇನ್ನೊಬ್ಬ ನಾಲ್ಕು ಇಡ್ಲಿ ತಿಂದಾನು. ಇಬ್ಬರನ್ನೂ ಪ್ರೀತಿಯಿಂದ ಪೋಷಿಸುವುದೇ ರಾಜಧರ್ಮ.

ಪ್ರಖ್ಯಾತ ಸಂಗೀತಗಾರ ಚೆಂಬೈ ವೈದ್ಯನಾಥ ಭಾಗವತರು ಗುರುವಾಯೂರು ದೇವಸ್ಥಾನದಲ್ಲಿ ಸಂಗೀತ ಕಛೇರಿ ನಡೆಸಲು ಅವರ ಶಿಷ್ಯ, ಪ್ರಸಿದ್ಧ ಸಂಗೀತಗಾರ ಯೇಸುದಾಸ್​ರನ್ನು ಕರೆದುಕೊಂಡು ಹೋಗಿದ್ದರಂತೆ. ಆದರೆ ದೇವಸ್ಥಾನದದ ಆಡಳಿತ ಮಂಡಳಿಯವರು ಯೇಸುದಾಸರಿಗೆ ಪ್ರವೇಶ ನಿರಾಕರಿಸಿ, ಸಂಗೀತ ಕಛೇರಿ ಮಾಡಲು ಬಿಡಲಿಲ್ಲವಂತೆ. ಇದರಿಂದ ಮನನೊಂದ ಚೆಂಬೈ ವೈದ್ಯನಾಥ, ‘ನನ್ನ ಶಿಷ್ಯನಿಗೆ ಪ್ರವೇಶ ಅವಕಾಶವಿಲ್ಲ ಎಂದಾದರೆ ನಾನೂ ಬರಲಾರೆ’ ಎಂದು ಇಬ್ಬರೂ ದೇವಸ್ಥಾನದ ಹೊರಗಡೆ ಕಛೇರಿ ಮಾಡಿ ಹೋದರಂತೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ಭೇದಭಾವ ಮಾಡಬಾರದು. ತನ್ನಂತೆ ಪರರು ಎಂದು ತಿಳಿಯುವುದೇ ದೊಡ್ಡ ಮೌಲ್ಯ ಮತ್ತು ಮಾನವೀಯ ಗುಣ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲಿ ಇದುವೇ ರಾಜಧರ್ಮ, ಸಂವಿಧಾನದ ಆಶಯವೂ ಹೌದು. ಇಂಥ ನಿಜವಾದ ಸಮಾನತೆ ತತ್ತ್ವವನ್ನು ನಮ್ಮೆಲ್ಲರ ಬದುಕಿನಲ್ಲಿಯೂ ಅಳವಡಿಸಿಕೊಳ್ಳೋಣ.

(ಲೇಖಕರು ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net