ಸಂಸ್ಕಾರವಂತ ಶಿಕ್ಷಣ: ಮನೋಲ್ಲಾಸ

Manollasa
Published on
| ಡಾ.ವಿಶ್ವನಾಥ ರೆಡ್ಡಿ ಎಚ್.

ಕಷ್ಟಪಟ್ಟು ಓದಿ ವಿದ್ಯಾವಂತನಾದ ಒಬ್ಬ ಅನಾಥ ಯುವಕ ತನ್ನ ಮೊದಲ ತಿಂಗಳ ಸಂಪಾದನೆಯನ್ನು ವೃದ್ಧಾಶ್ರಮಕ್ಕೆ ನೀಡುವ ಸದುದ್ದೇಶದೊಂದಿಗೆ ಆಶ್ರಮಕ್ಕೆ ಬಂದ. ಅಲ್ಲಿರುವ ಬಹುತೇಕ ವೃದ್ಧರಿಗೆ ಶ್ರೀಮಂತ ಮಕ್ಕಳಿದ್ದು, ಅವರು ಅನಾಥರಂತೆ ಆಶ್ರಮದಲ್ಲಿ ಇರುವುದನ್ನು ತಿಳಿದು ಅವನಿಗೆ ಆಶ್ಚರ್ಯದೊಂದಿಗೆ ಬೇಸರವೂ ಆಯಿತು. ಯುವಕ ಒಬ್ಬ ವೃದ್ಧರನ್ನು ಆಪ್ಯಾಯತೆಯಿಂದ ಅನುಕಂಪದ ದನಿಯಲ್ಲಿ ಕೇಳಿದ- ‘ನೀವು ಯಾಕೆ ಮಕ್ಕಳಿದ್ದೂ ಹೀಗೆ ಅನಾಥರಂತೆ ಈ ಆಶ್ರಮದಲ್ಲಿ ಇದ್ದಿರಿ’ ಎಂದು.

ಆಗ ಆ ಹಿರಿಯರು ಹೇಳಿದರು, ‘ನಮ್ಮ ಮಕ್ಕಳ ಜೀವನ ರೂಪಿಸುವುದಕ್ಕಾಗಿ ದುಡಿದು, ಲಕ್ಷಗಟ್ಟಲೇ ಖರ್ಚು ಮಾಡಿ ವಿದ್ಯಾಭ್ಯಾಸ ಕೊಡಿಸಿದೆವು ನಿಜ. ಆದರೆ ಈಗಿನ ಸ್ಪರ್ಧಾತ್ಮಕ ಶಿಕ್ಷಣದಿಂದ ಅವರಿಗೆ ಹಣ ಸಂಪಾದನೆಯೇ ಮುಖ್ಯ ಗುರಿಯಾಯಿತೇ ಹೊರತು ಸಂಸ್ಕಾರದ ಬಗ್ಗೆ ಗಮನ ಹರಿಸಲಿಲ್ಲ. ಹಾಗಾಗಿ ಹಣದ ಮೂಲ ಹುಡುಕಿಕೊಂಡು ದೂರದಲ್ಲೆಲ್ಲೋ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಆಸರೆ ಇಲ್ಲದ ನಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಿ ವರ್ಷಕ್ಕೊಮ್ಮೆ ಬಂದು ಹಣ ಕೊಟ್ಟು ನೋಡಿಕೊಂಡು ಹೋಗ್ತಾರೆ’. ವ್ಯಥೆಯಿಂದ ಮಾತು ಮುಂದುವರಿಸುತ್ತ, ‘ಈ ಸದ್ಯದ ಜಗತ್ತಿನಲ್ಲಿ ಶಿಕ್ಷಣವೂ ಮೂಲಾರ್ಥವನ್ನು ಕಳೆದುಕೊಂಡು ವ್ಯಾವಹಾರಿಕವಾಗಿ ಪರಿವರ್ತನೆಗೊಂಡು ಉದ್ಯೋಗ ಗಿಟ್ಟಿಸುವುದು ಮತ್ತು ಹಣ ಸಂಪಾದನೆಗೆ ಮಾತ್ರ ಸೀಮಿತವಾಗಿದೆ. ಅದರ ಪರಿಣಾಮ ನಮ್ಮಂಥವರು ಮಕ್ಕಳಿದ್ದೂ ಅನಾಥರಾಗಿದ್ದೇವೆ’ ಎಂದು ನಿಟ್ಟುಸಿರು ಬಿಟ್ಟರು.

ಅಕ್ಷರಶಃ ಸತ್ಯ ಅಲ್ಲವೇ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ವ್ಯಾಪಾರವಾಗಿದೆ. ನಮ್ಮ ಪೂರ್ವಜರ ಕಾಲದಲ್ಲಿ ಶಿಕ್ಷಣವು ಮನೋವಿಕಾಸದ ಕಡೆ ದಾರಿ ತೋರಿಸಿ ಸಂಸ್ಕಾರವಂತರನ್ನಾಗಿ ರೂಪುಗೊಳಿಸುತ್ತಿತ್ತು. ವಿದ್ಯಾವಂತರು ಉನ್ನತ, ಆದರ್ಶ ಸಮಾಜದ ಪರಿಕಲ್ಪನೆ ಅಡಿಯಲ್ಲಿ ಸಮಾಜಕ್ಕೆ ತಮ್ಮ ಜ್ಞಾನದ ಮೂಲಕ ನೆರವಾಗುತ್ತಿದ್ದರು. ಸಂಬಂಧಗಳನ್ನು ಗೌರವಿಸುತ್ತಿದ್ದರು. ಶಾಲಾ-ಕಾಲೇಜುಗಳಿಗೆ ಹೋಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಜ್ಞಾನವಿಲ್ಲದ, ಸಂಸ್ಕಾರವೂ ಇಲ್ಲದ ಪದವಿ ಪಡೆದು ಹೇಗಾದರೂ ಆಯಿತು, ಕೆಲಸ ಗಿಟ್ಟಿಸಿದರೆ ಸಾಕು ಎನ್ನುವ ಈಗಿನ ನಮ್ಮ ಯುವಜನಾಂಗದ ಮನಸ್ಥಿತಿ ಮತ್ತು ಶಿಕ್ಷಣದ ಕ್ರಮ ಬದಲಾಗಬೇಕಿದೆ.

ಮೂಲಾರ್ಥದಲ್ಲಿ ಶಿಕ್ಷಣ ಅಂದರೆ ಕಲಿಕೆ. ಒಬ್ಬ ರೈತನ ಮಗ ಓದು ಅಥವಾ ಅನುಭವದ ಮೂಲಕ ಕೃಷಿ ಕಲಿತು ಕೃಷಿಕನಾದರೆ ಅದು ಕೂಡ ಶಿಕ್ಷಣವಲ್ಲವೇ? ‘ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಸಮಾಜಕ್ಕೆ ಅಪಾಯಕಾರಿ’ ಎಂದು ಹೇಳಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತು ಎಷ್ಟು ಅರ್ಥಪೂರ್ಣ ಅನಿಸುತ್ತದೆ. ಶಿಕ್ಷಣದ ಮೂಲಕ ವ್ಯಕ್ತಿಯ ಮನೋವಿಕಾಸವಾಗಿ, ತನ್ನ ಸುತ್ತಮುತ್ತಲಿನ ಪರಿಸರವನ್ನು ಅನುಕೂಲತೆಯೆಡೆಗೆ ಪರಿವರ್ತನೆ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸುವಂತೆ ಮಾಡಬೇಕು. ಸಂಸ್ಕಾರವಂತರಾಗಿ, ಸಹನೆಯುಳ್ಳ ಉತ್ತಮ ನಾಗರಿಕರಾಗಬೇಕು. ಶಿಕ್ಷಣ ಪಡೆದ ವ್ಯಕ್ತಿಯಿಂದ ಸಾಮಾಜಿಕ, ಆರ್ಥಿಕ, ನೈತಿಕ ಬೆಳವಣಿಗೆ ಆಗಿ ಮಾನವೀಯತೆಯುಳ್ಳ ಉತ್ತಮ ಸಮಾಜ ನಿರ್ವಣವಾಗಬೇಕು. ಅದರಲ್ಲೇ ಇರುವುದು ಮನುಕುಲದ ಗೆಲುವು.

(ಲೇಖಕರು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net