

ಒಂದೂರಿನಲ್ಲಿ ಒಬ್ಬ ಅರಸನಿದ್ದ. ಅವನಿಗೆ ಆಪ್ತನಾದ ಒಬ್ಬ ಮಂತ್ರಿ. ಅವನು ಹೇಳುವ ಮಾತುಗಳೇ ರಾಜನಿಗೆ ಅಂತಿಮ. ಎಂದೂ ಅವನ ಸಲಹೆ, ಸೂಚನೆಗಳನ್ನು ವಿವೇಚಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಇದನ್ನು ಚೆನ್ನಾಗಿಯೇ ಅರಿತಿದ್ದ ಮಂತ್ರಿ ತನ್ನ ಲಾಭದ ಸಲುವಾಗಿ ಮತ್ತು ತನಗೆ ವಿರೋಧಿಗಳೆನಿಸಿದವರನ್ನು ಹತ್ತಿಕ್ಕಲು ಅಸ್ತ್ರವಾಗಿಸಿಕೊಂಡಿದ್ದ. ಒಂದು ದಿನ ಮಂತ್ರಿ ಆಸ್ಥಾನಕ್ಕೆ ಬರುತ್ತಿರುವಾಗ ಕಾವಲುಗಾರ ಅವನನ್ನು ಗಮನಿಸಲಿಲ್ಲ. ತನಗೆ ಗೌರವ ಕೊಡಲಿಲ್ಲ ಎಂದು ಅವನ ಮೇಲೆ ಕುಪಿತನಾದ ಮಂತ್ರಿ. ‘ಇವನಿಗೆ ಸರಿಯಾದ ಪಾಠ ಕಲಿಸುತ್ತೇನೆ’ ಎಂದು ನಿರ್ಧರಿಸಿಕೊಂಡು ರಾಜನ ಬಳಿಗೆ ಬಂದು ಕಾವಲುಗಾರನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ. ಕಾವಲುಗಾರನನ್ನು ಎಳೆದು ತರುವಂತೆ ಭಟರಿಗೆ ಆದೇಶ ನೀಡಿದ ರಾಜ. ಕಾವಲುಗಾರ ತನ್ನ ಕೆಲಸದ ನಿಷ್ಠೆಯನ್ನು ರಾಜನಲ್ಲಿ ಪರಿಪರಿಯಾಗಿ ಭಿನ್ನವಿಸಿಕೊಂಡು, ನಡೆದ ವಿಚಾರವನ್ನು ತಿಳಿಸುವ ಪ್ರಯತ್ನ ಮಾಡಿದ. ರಾಜನಿಗೆ ಮಂತ್ರಿಯ ನುಡಿಯೇ ಪರಮೊಚ್ಚವಾಗಿದ್ದರಿಂದ, ಕಾವಲುಗಾರನ ಯಾವ ಮಾತುಗಳೂ ಹಿತವೆನಿಸಲಿಲ್ಲ. ಸರಿಯಾಗಿ ವಿಚಾರಣೆ ನಡೆಸದೆಯೇ ಅವನಿಗೆ ಶಿಕ್ಷೆಯನ್ನು ವಿಧಿಸಿದ. ಆದರೆ ನ್ಯಾಯಸಮ್ಮತವಲ್ಲದ ರಾಜನ ಈ ನಿರ್ಣಯದಿಂದ ತಪು್ಪ ಸಂದೇಶವೊಂದು ಅವನ ಆಡಳಿತ ವರ್ಗಕ್ಕೆ ಬಿತ್ತರಗೊಂಡಿತು. ಅವರುಗಳು ಕರ್ತವ್ಯನಿಷ್ಠೆ ಬಗ್ಗೆ ಮನಸ್ಸನ್ನು ಸ್ಥಿರವಾಗಿಸದೆ, ಮಂತ್ರಿಯ ಓಲೈಕೆಯ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಿದರು. ಇದರಿಂದ ರಾಜನ ಆಡಳಿತವೇ ತಪ್ಪುದಾರಿಯಲ್ಲಿ ಕ್ರಮಿಸಿ, ರಾಜ್ಯವೇ ಅಧಃಪತನ ಹೊಂದಿತು.
ಗೌರವ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿಗಳ ಸಣ್ಣ ನಡವಳಿಕೆಗಳು ಕೂಡ ಎಂತಹ ದುಷ್ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೇ. ನಮ್ಮ ಜೀವನದಲ್ಲಿಯೂ ಅಷ್ಟೇ. ಹಲವು ವಿಷಯ, ವಿಚಾರಗಳು ನಮ್ಮ ಮುಂದೆ ಬಂದು ಹೋಗುತ್ತವೆ. ಕೆಲವು ಬಾರಿ ಮತ್ತೊಬ್ಬರ ಮಾತುಗಳ ಪ್ರಭಾವಕ್ಕೆ ಒಳಗಾಗಿ, ಪೂರ್ವಗ್ರಹ ಪೀಡಿತರಾಗುತ್ತೇವೆ. ಯಾವುದೋ ಕಾರಣಗಳನ್ನು ಮಾತ್ರ ಅನುಲಕ್ಷಿಸಿಕೊಂಡು, ಇದು ಹೀಗೆಯೇ ಇರಬಹುದು ಎಂದುಕೊಂಡು ಬಿಡುತ್ತೇವೆ. ಯಾವುದೋ ಪ್ರಚೋದನೆಗೆ ಒಳಪಟ್ಟಂತೆ ಮನಸ್ಸು ಮತ್ತು ಬುದ್ಧಿಯನ್ನು ಹರಿಸಿ ನಮಗರಿವಿಲ್ಲದ ಹಾಗೆ ನಮ್ಮ ಸುತ್ತಲು ನಾವೇ ಸಂದೇಹದ ಪೊರೆಯನ್ನು ಸುತ್ತಿಕೊಂಡು ಅಗ್ರಾಹ್ಯವಾದ ಸ್ಥಿತಿಯನ್ನು ನಿರ್ವಿುಸಿಕೊಂಡು ಅರಿವಿನ ಪ್ರಜ್ಞೆ ಕಳೆದುಕೊಳ್ಳುತ್ತೇವೆ. ಇಂತಹ ಯೋಚನೆಗಳು ನಷ್ಟವನ್ನು ಉಂಟುಮಾಡುತ್ತವೆ ಎಂಬ ತಿಳಿವಳಿಕೆ ಕೂಡ ಗೋಚರಿಸುವುದಿಲ್ಲ. ಅರೆಕ್ಷಣ, ಮಂಥರೆ ಎಂಬ ವಿಷಬೀಜದ ವಿಸ್ಮೃತಿಯನ್ನು ನಂಬಿ, ತಾನೇ ಬೆಳೆಸಿದ ರಾಮನ ಬಗ್ಗೆ ಪ್ರಜ್ಞಾರಹಿತವಾಗಿ ಕೈಕೆಯಿ ಯೋಚಿಸಿದ್ದು ಅವಳ ಬದುಕಿಗೆ ಮಾರಕವಾಯಿತು ಎಂಬ ಸತ್ಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ
ಲೋಚನಾಭ್ಯಾಂ ವಿಹೀನಸ್ಯ ದರ್ಪಣಃ ಕಿಂ ಕರಿಷ್ಯತಿ
ಈ ಸುಭಾಷಿತ ಸ್ವಯಂಪ್ರಜ್ಞೆಯ ವಿವರಣೆ ನೀಡುತ್ತದೆ.
ಅರಿವಿನ ಪ್ರಜ್ಞೆ ಇಲ್ಲವಾದರೆ ಅಂಥವರಿಗೆ ಶಾಸ್ತ್ರಗಳು ಏನು ಮಾಡುತ್ತವೆ. ಎರಡೂ ಕಣ್ಣುಗಳಿಲ್ಲದವನಿಗೆ ಕನ್ನಡಿ ಹಿಡಿದರೆ ಕನ್ನಡಿ ಏನು ಮಾಡಬಲ್ಲದು? ಹಾಗಾಗಿಯೇ ವಿಚಾರ, ವಿಷಯಗಳನ್ನು ಒಳಗಣ್ಣಿನಿಂದ ನೋಡುವ ಅಗತ್ಯವಿದೆ.
(ಲೇಖಕರು ಸಾಫ್ಟ್ವೇರ್ ಉದ್ಯೋಗಿ, ಹವ್ಯಾಸಿ ಬರಹಗಾರರು)