

ದೂರದ ಊರಿಗೆ ವ್ಯಾಪಾರಕ್ಕೆಂದು ಹೋಗಿದ್ದ ಶ್ರೀಮಂತ ವ್ಯಾಪಾರಿಯೊಬ್ಬನು ಕುದುರೆ ಸವಾರಿ ಮಾಡುತ್ತಾ ತನ್ನ ಊರಿಗೆ ಹಿಂದಿರುಗುತ್ತಿದ್ದಾಗ ಕತ್ತಲಾಯಿತು. ಆ ದಟ್ಟ ಅರಣ್ಯದಲ್ಲಿ ಊರಿಗೆ ಹೋಗುವುದು ತುಂಬಾ ಕಷ್ಟವೆಂದು ಅರಿತ ಆತ ಸ್ವಲ್ಪ ಮುಂದೆ ಹೋಗಿ ಅತ್ತಿತ್ತ ತಿರುಗಿ ನೋಡಿದಾಗ ಪುಟ್ಟ ಗುಡಿಸಲು ಕಾಣಿಸಿತು. ಅಲ್ಲಿ ಮೂರು ಮಕ್ಕಳು ಆಟವಾಡುತ್ತಿದ್ದರು. ಆತನನ್ನು ನೋಡಿದ ಮಕ್ಕಳು ಮನೆ ಮುಂದಿನ ಬಂಡೆಗಲ್ಲಿನ ಮೇಲೆ ಕುಳಿತುಕೊಳ್ಳಲು ಹೇಳಿ ಗುಡಿಸಲಿನಲ್ಲಿದ್ದ ತಾಯಿಯನ್ನು ಕರೆದುಕೊಂಡು ಬಂದರು. ವ್ಯಾಪಾರಿಗೆ ನಮಸ್ಕರಿಸಿದ ಮಹಿಳೆ ಕುಡಿಯಲು ನೀರು ತಂದುಕೊಟ್ಟಳು.
ಆಗ ವ್ಯಾಪಾರಿ, ‘ರಾತ್ರಿ ಇಲ್ಲೇ ತಂಗಲು ಅನುಮತಿ ಕೊಟ್ಟರೆ ನಾಳೆ ಬೆಳಗ್ಗ್ಗೆ ಬೇಗ ನನ್ನೂರಿಗೆ ಹೋಗುತ್ತೇನೆ’ ಎಂದು ಹೇಳಿದಾಗ ಆಕೆ ಅನುಮತಿ ಕೊಟ್ಟು ಊಟ ಬಡಿಸಿ ಉಪಚರಿಸಿದಳು. ಆತಿಥ್ಯ ಸ್ವೀಕರಿಸಿದ ವ್ಯಾಪಾರಿ ಪ್ರಸನ್ನನಾದನು. ಆ ರಾತ್ರಿ ಗುಡಿಸಲಿನ ಒಂದು ಮೂಲೆಯಲ್ಲಿ ಮಲಗಿಕೊಂಡು, ಬೆಳಗಾಗುವುದರಲ್ಲಿ ಅಲ್ಲಿಂದ ಹೊರಟುಹೋದ. ನಂತರ ಮಕ್ಕಳಿಗೆ ಶ್ರೀಮಂತ ಮಲಗಿದ್ದ ಸ್ಥಳದಲ್ಲಿ ಒಂದು ಸಣ್ಣ ಕೈಚೀಲ ಕಾಣಿಸಿತು. ಆ ಕೈಚೀಲವನ್ನು ತಾಯಿಗೆ ತಂದು ತೋರಿಸಿದಾಗ, ಬೇರೊಬ್ಬರ ವಸ್ತು ಮುಟ್ಟಬಾರದೆಂದು ಮಕ್ಕಳಿಗೆ ತಿಳಿಹೇಳಿದಳು. ಅದು ಎಲ್ಲಿ ಇತ್ತೋ ಅಲ್ಲಿಯೇ ಇಡಲು ಹೇಳಿದಳು. ವರ್ಷ ಕಳೆದರೂ ಯಾರೂ ಆ ಚೀಲ ಬಿಚ್ಚಿ ನೋಡಲಿಲ್ಲ. ಆ ಸ್ಥಳ ಸ್ವಚ್ಛ ಮಾಡಿ ಮತ್ತೆ ಆ ಚೀಲವನ್ನು ಅಲ್ಲಿಯೇ ಇಡುತ್ತಿದ್ದರು. ಒಂದು ದಿನ ಅದೇ ಶ್ರೀಮಂತ ಆ ಮನೆ ಈಗ ಹೇಗಿದೆ ಎಂದು ಕುತೂಹಲದಿಂದ ಬಂದು ನೋಡಿದಾಗ, ಮತ್ತೆ ಅದೇ ಗುಡಿಸಲು, ಅದೇ ಮಕ್ಕಳು, ಅದೇ ಪ್ರೀತಿ ಕಂಡುಬಂದಿತು.
ಇವೆಲ್ಲವನ್ನೂ ನೋಡಿ ದಂಗಾದ ಶ್ರೀಮಂತ ಮನೆಯ ಮುಂದಿನ ಮರದ ಕೆಳಗೆ ಕುಳಿತುಕೊಂಡನು. ಆ ಶ್ರೀಮಂತನನ್ನು ಕಂಡ ಮಕ್ಕಳು ತುಂಬಾ ಖುಷಿಯಿಂದ ಕುಡಿಯಲು ನೀರು ತಂದು ಕೊಟ್ಟರು. ಆಗ ಆ ತಾಯಿ ಬಂದು ನಮಸ್ಕರಿಸಿ, ಶ್ರೀಮಂತ ಬಿಟ್ಟು ಹೋಗಿದ್ದ ಚೀಲ ತಂದುಕೊಟ್ಟಳು. ಅದನ್ನು ತೆರೆದು ನೋಡಿದಾಗ ಬಂಗಾರದ ನಾಣ್ಯಗಳು ಹೇಗಿದ್ದವೋ ಹಾಗೆಯೇ ಇದ್ದವು. ದಿಗ್ಬ›ಮೆಗೊಂಡ ಶ್ರೀಮಂತ ಮನಸ್ಸಿನಲ್ಲಿ, ‘ನನ್ನ ಮಕ್ಕಳು ನನ್ನ ಆಸ್ತಿಗಾಗಿ ಜಗಳ ಮಾಡುತ್ತಾರೆ. ಆದರೆ, ನಾನು ಉದ್ದೇಶಪೂರ್ವಕವಾಗಿ ಬಿಟ್ಟು ಹೋದ ಹಣದ ಚೀಲವನ್ನು ತೆರೆದು ಕೋಡು ನೋಡದೆ ಈ ತಾಯಿ- ಮಕ್ಕಳು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ್ದಾರೆ. ನಿಜವಾದ ಪ್ರೀತಿ ವಾತ್ಸಲ್ಯ ಅರಮನೆಯಲ್ಲಿ ಇಲ್ಲ, ಅದು ಈ ಪುಟ್ಟ ಗುಡಿಸಲಿನಲ್ಲಿ ವಾಸಿಸುವ ಜನರ ಮನಸ್ಸಿನಲ್ಲಿದೆ’ ಎಂದುಕೊಂಡು ತೆರಳಿದ.
(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)