ತಿದ್ದಿಕೊಂಡವರ ಒಪ್ಪಿಕೊಳ್ಳೋಣ: ಮನೋಲ್ಲಾಸ

Manollasa
Published on

| ರೇಖಾ ಗಜಾನನ ಭಟ್ಟ

ಒಬ್ಬ ರೈತನ ಮನೆಗೆ ದೂರದ ಹಳ್ಳಿಯಿಂದ ಬಂದ ಪರಿಚಯದ ವ್ಯಕ್ತಿಯೊಬ್ಬ, ತನ್ನ ಹೊಲದಲ್ಲಿ ಬೆಳೆದಿದ್ದ ವಿಶೇಷ ಸಸ್ಯದ ಕುರಿತಾಗಿ ಹೇಳುತ್ತಾ, ‘ನೀನು ಕೂಡ ಇಂತಹ ಸಸ್ಯಗಳನ್ನು ಬೆಳೆದರೆ ಅಧಿಕ ಲಾಭ ಪಡೆಯಬಹುದು. ಹಾಗೂ ಅಧಿಕ ಬೆಲೆಗೆ ಬೆಳೆಯನ್ನು ನಾನೇ ಖರೀದಿಸುತ್ತೇನೆ ..’ ಎಂದು ಹುರಿದುಂಬಿಸಿದ. ಗೆಳೆಯನ ಮಾತನ್ನು ಒಪ್ಪಿ, ಆ ಸಸ್ಯಗಳನ್ನು ತನ್ನ ಹೊಲದಲ್ಲಿ ಬೆಳೆಸಲು ನಿರ್ಧರಿಸಿದ. ಉತ್ತಮ ಬೆಲೆಯ ಫಸಲನ್ನು ಕಳ್ಳಕಾಕರು ಕದಿಯುವ ಕಾರಣ, ಬೆಳೆಯುತ್ತಿರುವ ವಿಷಯ ಯಾರಿಗೂ ಹೇಳಬಾರದು.. ಹಾಗೂ ಇತರ ಗಿಡಗಳ ಮಧ್ಯೆ ಬೆಳೆಸಬೇಕು ಎಂದು ಗೆಳೆಯ ಎಚ್ಚರಿಸಿದ್ದ. ಆದ್ದರಿಂದ ರೈತನಿಗೆ ಹಗಲುರಾತ್ರಿ ಅದರೆಡೆಗೇ ಗಮನವಾಯಿತು.

‘ಬೆಲೆ ಬಾಳುವ ಗಿಡ, ಯಾರಿಗೂ ಕಾಣಬಾರದು’ ಎಂಬುದು ಪದೇಪದೆ ತಲೆಯೊಳಗೆ ಬಂದು, ಊಟ ನಿದ್ದೆಯ ಕಡೆಗೆ ನಿಗಾ ಇಲ್ಲದೇ ಹೆಚ್ಚಿನ ಸಮಯ ತೋಟದಲ್ಲೇ ಇರುತ್ತಿದ್ದ. ಒಂದು ದಿನ ಆ ದಾರಿಯಲ್ಲಿ ಸಾಗುತ್ತಿದ್ದ ಆರಕ್ಷಕರು ಬೇರೆ ಕಾರಣಕ್ಕೆ ಹೊಲ ಹೊಕ್ಕಾಗ ಅವರಿಗೆ ಅಲ್ಲಿ ಸಿಕ್ಕಿದ್ದು ಗಾಂಜಾ ಬೆಳೆ.! ಗಾಂಜಾ ಬೆಳೆಯುವುದು ಅಪರಾಧ ಎಂದರಿಯದ ರೈತ ತನಗರಿವಿಲ್ಲದೆಯೇ ಆರೋಪಿಯಾದ. ಶಿಕ್ಷೆ, ದಂಡ ಅನುಭವಿಸಿ, ಎಂತಹ ಮೋಸವಾಯಿತು.. ಎಂದು ಅಲವತ್ತುಕೊಂಡು ಇನ್ನು ಮುಂದೆ ಇಂತಹ ತಪ್ಪು ಮಾಡಬಾರದು ಎಂದುಕೊಡ. ಮಾರನೆಯ ದಿನವೇ ಆತನ ಮನೆಗೆ ಇನ್ನಿಬ್ಬರು ಬಂದು ‘ನೀನು ಗಾಂಜಾ ಬೆಳೆಯುವುದನ್ನು ಮುಂದುವರಿಸು. ಆರಕ್ಷಕರು ನಿನ್ನ ಬಳಿ ಸುಳಿಯದಂತೆ ನಾವು ನೋಡಿಕೊಳ್ಳುತ್ತೇವೆ. ಜೊತೆಗೆ ನಿನಗೆ ಹೆಚ್ಚಿಗೆ ಹಣ ನೀಡುತ್ತೇವೆ’ ಎಂದರು. ರೈತ ಒಪ್ಪದೇ ಹೋದಾಗ ‘ನೀನು ಒಮ್ಮೆ ತಪ್ಪು ಮಾಡಿ ಸಿಕ್ಕಿಬಿದ್ದಿದ್ದಿಯಾ. ನೀನು ಈಗ ಸರಿದಾರಿಯಲ್ಲೇ ಇದ್ದರೂ, ಜಗತ್ತು ನಿನ್ನನ್ನು ಅಪರಾಧಿಯೆಂದೇ ಕರೆಯುತ್ತದೆ. ಹಾಗಾಗಿ ಇದನ್ನೇ ಮುಂದುವರಿಸಿದರೆ ಹಣವಾದರೂ ಬರುತ್ತದೆ..’ ಎಂದು ಮನವೊಲಿಸಲು ಯತ್ನಿಸಿದರು. ಆಗ ರೈತ ’ಲೋಕವು ನನ್ನ ಕುರಿತು ಏನೇ ಅಂದುಕೊಳ್ಳಲಿ. ಆಗ ನಾನು ತಿಳಿಯದೇ ತಪ್ಪು ಮಾಡಿದೆ. ಈಗ ಅರಿವಿನ ಮನೆ ಹೊಕ್ಕಿದ್ದೇನೆ. ತಿಳಿದೂ ಮತ್ತೆ ತಪ್ಪು ಮಾಡಲಾರೆ. ದಯವಿಟ್ಟು ಹೊರಡಿ..’ ಎಂದನು.

ಅರಿವಿರದೆಯೋ ಅರಿವಿದ್ದೋ ಕೆಲವೊಮ್ಮೆ ತಪ್ಪುಗಳಾಗಿರಬಹುದು. ನಂತರ ಪಶ್ಚಾತ್ತಾಪ ಪಟ್ಟು ಅದರಿಂದ ಹೊರಬಂದರೂ ಜಗತ್ತು ಮತ್ತೆ ಅದರೊಳಗೆ ನೂಕಲು ಯತ್ನಿಸುತ್ತದೆ. ನಿನ್ನೆ ಅಪರಾಧಿಗಳಾದ ಕೆಲವರು ಇಂದು ಪಶ್ಚಾತ್ತಾಪದ ಅಗ್ನಿಯಲ್ಲಿ ಬಿದ್ದು ಶುದ್ಧವಾಗಿರಬಹುದು. ಕಲ್ಮಶಗೊಂಡ ಬಟ್ಟೆಯು ನೀರಿನಿಂದ ಹೇಗೆ ಶುಚಿಯಾಗುವುದೋ ಹಾಗೆ ಸನ್ಮಾರ್ಗದ ದಾರಿಯಲ್ಲಿ ಮನಸ್ಸು ಬದಲಾಗಿರಬಹುದು. ಪೂರ್ವಾಭಿಪ್ರಾಯದ ಕನ್ನಡಕ ಹಾಕಿಯೇ ಎಲ್ಲವನ್ನೂ ನೋಡುವುದನ್ನು ಬಿಡಲು ಪ್ರಯತ್ನಿಸೋಣ.

ತಿದ್ದಿಕೊಳುವೆ ಎಂಬುವನೆಳೆದು ತಂದು/ ಅದ್ದಲೇಕೆ ಮತ್ತದೇ ಕೂಪದೊಳಗೆ

ಬದ್ಧವಾಗಿ ನಡೆಯಬಹುದವನು ಮುಂದೆ/ ಬುದ್ಧನ ಹಿಂಬಾಲಿಸಿದ ಶಿಷ್ಯರಂತೆ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net