ಅಳಿಲುಸೇವೆ ಮಳಲು ಭಕ್ತಿ: ಮನೋಲ್ಲಾಸ

Manollasa
Published on
| ಎನ್. ಜಯಭೀಮ್ ಜೊಯ್ಸ್ ಶಿವಮೊಗ್ಗ

ರಾಮಾಯಣದ ಕಥೆಯಲ್ಲಿ ಬರುವ ಸೀತಾಮಾತೆಯ ಅನ್ವೇಷಣೆಯ ಪ್ರಸಂಗದಲ್ಲಿ ಲಂಕಾ ಪಟ್ಟಣಕ್ಕೆ ಹೋಗಲು ಸಮುದ್ರಕ್ಕೆ ಸೇತುವೆ ಕಟ್ಟಬೇಕಾಗಿ ಬರುತ್ತದೆ. ಶ್ರೀರಾಮ ಲಕ್ಷ್ಮಣರ ಎದುರಿನಲ್ಲಿ ವಾನರ ಸೈನ್ಯ ರಾಮಭಕ್ತ ಹನುಮಂತನ ನೇತೃತ್ವದಲ್ಲಿ ಸೇತುವೆ ಕಟ್ಟುವ ಕಾರ್ಯವನ್ನು ಕೈಗೊಳ್ಳುತ್ತದೆ. ಸಮುದ್ರ ದಾಟಲು ಸೇತುವೆ ಕಟ್ಟುವ ಕಾರ್ಯವು ಭರದಿಂದ ಸಾಗುತ್ತಿತ್ತು. ವಾನರ ಸೈನ್ಯ ದೊಡ್ಡದೊಡ್ಡ ಬಂಡೆಗಳನ್ನು, ಮರದ ಕಾಂಡಗಳನ್ನು ಹೊತ್ತು ಸಮುದ್ರದಲ್ಲಿ ಸೇತುವೆ ನಿರ್ವಿುಸಲು ಪ್ರಾರಂಭ ಮಾಡುತ್ತದೆ. ವಾನರರ ಈ ಕಾರ್ಯವನ್ನು ಕಂಡ ರಾಮ-ಲಕ್ಷ್ಮಣರು ಪ್ರಶಂಸೆ ಮಾಡುತ್ತಿದ್ದರು. ಇದನ್ನು ಕಂಡ ವಾನರ ಸೈನ್ಯಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಿತ್ತು. ವಾನರ ಸೈನ್ಯ

ಈ ಕೆಲಸ ಮಾಡುವುದನ್ನು ಅಲ್ಲೇ ಇದ್ದ ಎರಡು ಅಳಿಲುಗಳು ಗಮನಿಸುತ್ತಿದ್ದವು. ವಾನರ ಸೈನ್ಯ ಮಾಡುತ್ತಿರುವ ಈ ಮಹಾನ್ ಕಾರ್ಯವನ್ನು ನೋಡಿ ಎರಡು ಅಳಿಲುಗಳಿಗೂ ಉತ್ಸಾಹ ಉಕ್ಕಿ ಬಂದಿತು. ಇವೆರಡೂ ಸೇರಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದವು. ಅವುಗಳು ಅಲ್ಲೇ ಸೇತುವೆ ಕಟ್ಟುವ ಜಾಗದಲ್ಲಿ ನೀರಿನಲ್ಲಿ ಒಮ್ಮೆ ಮುಳುಗಿ ಮರಳ ರಾಶಿಯಲ್ಲಿ ಹೊರಳಾಡಿ, ಸೇತುವೆ ಕಟ್ಟುವ ಜಾಗದ ಹತ್ತಿರ ಬಂದು ತಮ್ಮ ಮೈಗಂಟಿಕೊಂಡಿದ್ದ ಮರಳನ್ನು ಕೊಡವಿ ಸೇತುವೆಗೆ ಸೇರಿಸತೊಡಗಿದವು. ಸೇತುವೆ ಕಟ್ಟಲು ಮರಳನ್ನು ಸೇರಿಸತೊಡಗಿ ತಾವೂ ಸೇತುವೆ ಕಟ್ಟುವ ಕಾರ್ಯದಲ್ಲಿ ಭಾಗಿಗಳಾಗಿದ್ದನ್ನು ನೆನೆದು ಬಹಳ ಸಂತೋಷಪಡುತ್ತವೆ. ದಿನ ಪೂರ್ತಿ ಆ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡಿದವು. ಆದರೆ, ಈ ಸಣ್ಣ ಪ್ರಾಣಿಗಳು ಮಾಡಿದ ಕೆಲಸ ಯಾರ ಗಮನಕ್ಕೂ ಬಂದಿರಲಿಲ್ಲ. ಸೇತುವೆ ಕಟ್ಟುವ ಕೆಲಸದಲ್ಲಿ ಈ ಅಳಿಲುಗಳು ಮರಳನ್ನು ತಂದು ಹಾಕುತ್ತಿದ್ದ ಕೆಲಸ ಶ್ರೀರಾಮನ ಗಮನಕ್ಕೆ ಬರುತ್ತದೆ. ಸ್ವಾರ್ಥರಹಿತ ನಿಷ್ಕಲ್ಮಷ ಸೇವೆಯನ್ನು ನೋಡಿದ ಶ್ರೀರಾಮಚಂದ್ರನಿಗೆ ಅಳಿಲುಗಳ ಬಗ್ಗೆ ಕರುಣೆ ಉಕ್ಕಿ ಬರುತ್ತದೆ. ರಾಮನು ಅವುಗಳ ಬಳಿ ಬಂದು ಪ್ರೀತಿಯಿಂದ ಬೆನ್ನು ಸವರಿದ. ಅಳಿಲುಗಳ ಮೇಲೆ ಶ್ರೀರಾಮನ ಬೆರಳುಗಳ ಗುರುತು ಮೂಡಿತು.

ಅದೇ ಗುರುತುಗಳು ಶಾಶ್ವತವಾದ ಮೂರುಪಟ್ಟಿಗಳಾಯಿತು. ಅಳಿಲುಗಳನ್ನು ನೋಡಿದಾಗ ಅವುಗಳ ಬೆನ್ನಿನ ಮೇಲೆ ಮೂರು ಪಟ್ಟಿಯಿರುವುದನ್ನು ಕಾಣಬಹುದು. ಯಾವುದೇ ಸಭೆ, ಸಮಾರಂಭ, ಉತ್ಸವ ಇವೇ ಮೊದಲಾದ ಕಾರ್ಯಗಳಲ್ಲಿ ಕಡಿಮೆ ಶಕ್ತಿ, ಕಡಿಮೆ ಸಂಪತ್ತಿನಿಂದ ಮಾಡಿದ ಕೆಲಸಗಳು ಬೇರೆಯವರ ಕಣ್ಣಿಗೆ ಕಾಣದಿದ್ದರೂ ಸರ್ವತ್ರ ವ್ಯಾಪ್ತನಾದ ಭಗವಂತ ಅದನ್ನು ನೋಡಿ ಸಂತುಷ್ಟನಾಗಿ ಅನುಗ್ರಹಿಸುವುದರಲ್ಲಿ ಸಂದೇಹವಿಲ್ಲ. ನಾವು ಮಾಡುವ ಸೇವೆ ಇನ್ನೊಬ್ಬರು ನೋಡುವುದಕ್ಕಾಗಲೀ ಅಥವಾ ಅವರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ. ನಾವು ಮಾಡುವ ಕೆಲಸ ಎಷ್ಟು ದೊಡ್ಡದು ಎಂಬುದು ಮುಖ್ಯವಲ್ಲ. ಎಷ್ಟರಮಟ್ಟಿಗೆ ನಿಸ್ವಾರ್ಥ ಬುದ್ಧಿಯಿಂದ ಸೇವೆ ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎನ್ನುವುದು ಮುಖ್ಯ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net