

ಅಂದಿನ ಗುರುಕುಲದಲ್ಲಿ ಪಾಠದ ನಂತರದ ಪ್ರಶ್ನೋತ್ತರದ ಸಮಯದಲ್ಲಿ ಗುರುಗಳು ‘ನೀವು ನಿಮ್ಮ ಬದುಕಿನ ಒಂದೊಂದು ಹೆಜ್ಜೆಯನ್ನು ಇಟ್ಟು ನಡೆಯುತ್ತಾ ಇರುವಾಗ ನಿಮ್ಮ ಗುರಿ ಪ್ರಾಂಶುಪಾಲರ ಕಡೆಗೆ ಇರಬೇಕು’ ಅಂದರು. ಶಿಷ್ಯರಿಗೆ ಇದು ಬಹಳ ಆಳವಾದ ಅರ್ಥವಿರುವ ವಿಚಾರ ಅನಿಸಿತು. ಗುರಿ ಪ್ರಾಂಶುಪಾಲರ ಕಡೆಗಿರಬೇಕು ಎಂದರೆ ನಾವೂ ಒಂದಲ್ಲ ಒಂದು ದಿನ ಒಂದಲ್ಲಾ ಒಂದು ಸಂಸ್ಥೆಯ ಪ್ರಾಂಶುಪಾಲರಾಗಬೇಕು ಎನ್ನುವುದು ಗುರುಗಳ ಅಭಿಮತ ಇರಬೇಕು ಅನಿಸಿತು. ಗುರುಗಳು ಮಾತು ಮುಂದುವರಿಸಿ ‘ಈಗಿನ ಅನೇಕ ಶಾಲೆಗಳಲ್ಲಿ ಒಂದು ಕೊಠಡಿಯ ಬಾಗಿಲ ಮೇಲೆ ವ್ಯಕ್ತಿಯ ಹೆಸರು ಬರೆದು ಪ್ರಾಂಶುಪಾಲರು ಎಂದು ಬರೆದಿರುತ್ತದೆ. ಅದರ ಅರ್ಥ ನಿಮಗೆ ಗೊತ್ತೇ?’ ಅಂತ ಕೇಳಿದರು.
ಶಿಷ್ಯರಿಗೆ ಕಾಲೇಜಿನ ಉನ್ನತ ಹುದ್ದೆಯಲ್ಲಿರುವವರಿಗೆ ಪ್ರಾಂಶುಪಾಲರು ಎಂದು ಕರೆಯುತ್ತಾರೆ ಎಂದು ಗೊತ್ತಿತ್ತು. ಅದನ್ನು ಒಬ್ಬ ಶಿಷ್ಯ ಹೇಳಿದ. ಗುರುಗಳು ನಕ್ಕು ‘ಹೌದು, ಆದರೆ ಈ ಪ್ರಪಂಚದ ಮೊಟ್ಟ ಮೊದಲ ಮತ್ತು ಈಗಿನ ಪ್ರಾಂಶುಪಾಲ ಯಾರು?’ ಎಂದು ಕೇಳಿದರು. ಶಿಷ್ಯರಲ್ಲಿ ಉತ್ತರವಿರಲಿಲ್ಲ. ಗುರುಗಳೇ ಹೇಳಿದರು. ಪ್ರಪಂಚಕ್ಕೆಲ್ಲಾ ಪ್ರಾಂಶುಪಾಲನಾದವನು ಶ್ರೀಹರಿ. ಭಗವದ್ಗೀತೆಯಲ್ಲಿ ‘ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತ ಅತೀಂದ್ರಃ ಸಂಗ್ರಹಃ ಸಗೋ ಧೃತಾತ್ಮಾ ನಿಯಮೋ ಯಮಃ’ ಎನ್ನುವ ಶ್ಲೋಕ ಇದೆ.
ಇಲ್ಲಿ ‘ಪ್ರಾಂಶುರಮೋಘಃ’ ಎನ್ನುವ ಪದದ ಅರ್ಥವನ್ನು ಮಾತ್ರ ನಾವು ತೆಗೆದುಕೊಂಡರೆ ‘ಪ್ರಾಂಶು’ ಎಂದರೆ ಎತ್ತರದಲ್ಲಿರುವವನು ಎಂದು ಅರ್ಥವಾಗುತ್ತದೆ. ಸೂರ್ಯನಲ್ಲಿ, ಚಂದ್ರನಲ್ಲಿ, ಎಲ್ಲ ಜೀವಿಗಳಲ್ಲಿ ಮತ್ತು ಅಖಂಡ ಬ್ರಹ್ಮಾಂಡದಲ್ಲಿ ತುಂಬಿರುವವನು ಭಗವಂತ. ಅವನೇ ಪ್ರಾಂಶು. ಅಂದರೆ ಎಲ್ಲರಿಗಿಂತ, ಎಲ್ಲಕ್ಕಿಂತ ಅತೀ ಎತ್ತರದಲ್ಲಿರುವವನು ಎಂದರ್ಥ. ಮೋಘ ಎಂದರೆ ವ್ಯರ್ಥ ಎಂದು. ಅಮೋಘ ಎಂದರೆ ವ್ಯರ್ಥವಲ್ಲದ್ದು ಎಂದು. ನಾವು ಭಗವಂತನಿಗೆ ಅರ್ಪಿಸುವ ಯಾವ ಕ್ರಿಯೆಯೂ ವ್ಯರ್ಥವಾಗಬಾರದು. ಹೀಗಾಗಿ, ನಾವು ಭಗವಂತನ ಸೇವೆಯನ್ನು ಸದಾ ಅಮೋಘವಾಗಿ ಮಾಡಬೇಕು. ಹೇಗೆಂದರೆ ಭಗವದ್ಗೀತೆಯ ಇನ್ನೊಂದು ಶ್ಲೋಕದಲ್ಲಿ ‘ನೇಹಾಭಿಕ್ರ ಮನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ’ ಎಂದಿದೆ. ಹಾಗಂದರೆ ಭಗವಂತನ ಆರಾಧನೆಯ ಒಂದು ತೊದಲು ಹೆಜ್ಜೆಯೂ ವ್ಯರ್ಥವಲ್ಲ ಎಂದು. ಭಗವಂತನನ್ನು ಮರೆತು ಗಳಿಸಿದ ಸಂಪತ್ತು ನಮ್ಮ ಜತೆ ಬರುವುದಿಲ್ಲ. ಆದರೆ, ನಾವು ಮಾಡಿದ ಪ್ರತಿಯೊಂದು ಕರ್ಮದಿಂದ ಬರುವ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ಮೋಘವಾಗದೇ ಅಮೋಘವಾಗಿ ನಮಗೆ ಮುಂದಿನ ಜನ್ಮಕ್ಕೆ ಹಸ್ತಾಂತರಿಸುವವನು ಭಗವಂತ.
ಇದರರ್ಥ ಏನಪ್ಪಾ ಅಂದರೆ ನಮಗೆ ಒಳ್ಳೆಯ ಫಲಗಳು ಸಿಗಬೇಕಾದರೆ ಒಳ್ಳೆಯ ಕೆಲಸಗಳನ್ನೇ ಮಾಡಬೇಕು ಎಂದು. ಹೀಗಾಗಿ, ನಿಮ್ಮ ಗುರಿ ಜೀವನದಲ್ಲಿ ಮತ್ತು ಜೀವನದ ನಂತರವೂ ಅಮೋಘವಾಗುವಂತೆ ಮತ್ತು ನೀವು ಪ್ರಾಂಶುಪಾಲರಾಗುವಂತೆ ಇರಲಿ ಎನ್ನುವುದೇ ನನ್ನ ಆಶಯ ಎಂದು ಗುರುಗಳು ಅಂದಿನ ಪಾಠ ಮುಗಿಸಿದರು.
(ಲೇಖಕರು ಹವ್ಯಾಸಿ ಬರಹಗಾರರು)