ಲೌಕಿಕ ವ್ಯಾಮೋಹ ಸಲ್ಲದು: ಮನೋಲ್ಲಾಸ

Manollasa
Published on
| ಪದ್ಮಲತಾ ಮೋಹನ್

ಒಬ್ಬ ರಾಜನಿದ್ದ. ಆತ ಸಾಯುವ ಮುನ್ನ ತನ್ನ ಭಾವನಾದ ನಕುಲನನ್ನು ಕರೆದು 'ನನ್ನ ಮಗನ ಜವಾಬ್ದಾರಿ ನಿನ್ನದು. ಆತನಿಗೆ ಹದಿನೆಂಟು ತುಂಬುವವರೆಗೆ ಈ ರಾಜ್ಯವನ್ನು ನೀನು ನೋಡಿಕೋ. ತದನಂತರ ಆತನಿಗೆ ಪಟ್ಟಾಭಿಷೇಕ ಮಾಡು' ಎಂದು ಹೇಳುತ್ತಾನೆ.

ನಕುಲ ಒಳ್ಳೆಯ ವ್ಯಕ್ತಿ. ಆತ ರಾಜ್ಯದ ಚುಕ್ಕಾಣಿ ಹಿಡಿದ. ಕೆಲವು ವರುಷಗಳು ಕಳೆದವು. ಒಂದು ದಿನ ನಕುಲನಿಗೆ ಹೀಗನಿಸಿತು- 'ಬಾಲಕ ಹದಿನೆಂಟು ವರ್ಷದವನಾದಾಗ ನಾನು ಅವನಿಗೆ ಅಧಿಕಾರ ಕೊಡಬೇಕಲ್ಲಾ? ಬಾಲಕ ಅಲ್ಲಿಯವರೆಗೆ ಬದುಕಿದರೆ ತಾನೇ ಈ ಪ್ರಶ್ನೆ? ಅದರ ಮೊದಲೇ ಅವನನ್ನು ಮುಗಿಸಿಬಿಡಬೇಕು.' ಭಟರನ್ನು ಕರೆದು ಆ ಹುಡುಗನನ್ನು ಕಾಡಿಗೆ ಕರೆದುಕೊಂಡು ಹೋಗಿ ಮುಗಿಸಿಬಿಡಿ ಎಂದ. ಭಟರು ಹುಡುಗನನ್ನು ಕಾಡಿಗೆ ಕರೆದೊಯ್ಯುವ ಸಮಯದಲ್ಲಿ ಅವನ ಸನ್ನಡತೆ ಕಂಡು ವಿಸ್ಮಿತರಾಗುತ್ತಾರೆ. ಅವನಲ್ಲಿ ಏನೋ ವಿಶೇಷ ಶಕ್ತಿ ಗೋಚರಿಸುತ್ತದೆ. ಕ್ರೂರ ಭಟರು ದಯಾಳುಗಳಾಗಿ ಪರಿವರ್ತನೆಗೊಳ್ಳುತ್ತಾರೆ ಮತ್ತು ಬಾಲಕನಿಗೆ ಕೈ ಮುಗಿದು ನಿಮ್ಮನ್ನು ಕೊಲ್ಲಬೇಕೆಂದು ರಾಜ ಆಜ್ಞಾಪಿಸಿದ್ದ. ಆದರೆ, ಮನಸ್ಸಾಗುತ್ತಿಲ್ಲ. ಇಲ್ಲೇ ಒಂದು ಆಶ್ರಮ ಇದೆ. ನೀವು ಅಲ್ಲಿ ಇದ್ದು ಬಿಡಿ' ಎನ್ನುತ್ತಾರೆ.

ಆಗ ಆ ಬಾಲಕ 'ರಾಜಾಜ್ಞೆ ಪಾಲಿಸುವುದು ನಿಮ್ಮ ಕರ್ತವ್ಯ. ನಿಮ್ಮ ಕೆಲಸ ನೀವು ಮಾಡಿ' ಎನ್ನುತ್ತಾನೆ. ಸಾವು ಪಕ್ಕದಲ್ಲಿದ್ದರೂ ಹೆದರದ ಈ ಬಾಲಕ ಮಹಾಪುರುಷನೇ ಇರಬೇಕು. ಇವನ ಕೊಂದ ಪಾಪ ನಮಗೆ ಬೇಡ ಎಂದು ನಿರ್ಧರಿಸಿದ ಭಟರು ಬಾಲಕನನ್ನು ಬಿಟ್ಟು ಹೊರಡುತ್ತಾರೆ. ಆಗ ಬಾಲಕ ಒಂದು ಪತ್ರ ಕೊಟ್ಟು ಇದನ್ನು ರಾಜನಿಗೆ ಕೊಡಿ ಎಂದು ಹೇಳುತ್ತಾನೆ.

ಊರಿಗೆ ಮರಳಿದ ಭಟರು ರಾಜನ ಹತ್ತಿರ ಹೋಗಿ ತಾವು ಹುಡುಗನನ್ನು ಮುಗಿಸಿದ್ದಾಗಿ ಹೇಳಿ ಪತ್ರವನ್ನು ಕೊಡುತ್ತಾರೆ. ಅದರಲ್ಲಿ ಹೀಗೆ ಬರೆದಿತ್ತು ಕೃತಯುಗದಲ್ಲಿ ಮಾಂಧಾತ್ತ ಎಂಬ ದೊಡ್ಡ ರಾಜನಿದ್ದ. ಆತ ಬಹಳ ವರುಷ ರಾಜ್ಯವಾಳಿ ಕಾಲವಾದ, ತ್ರೇತಾಯುಗದ ದೊಡ್ಡ ದೊಡ್ಡ ಅರಸರು ಈಗ ಇಲ್ಲ. ಪಾಂಡವರು - ಕೌರವರು ಕೂಡ ಹೋಗಿದ್ದಾರೆ. ಆದರೆ, ಅವರು ಆಳಿದ ಭೂಮಿ ಅವರ ಯಾರ ಜೊತೆಯೂ ಹೋಗಿಲ್ಲ. ಅದು ಇಲ್ಲೇ ಇದೆ. ನೀವು ನನ್ನನ್ನು ಮುಗಿಸಿ ಈ ಭೂಮಿಯನ್ನು ಆಳಬೇಕೆಂದುಕೊಂಡಿದ್ದೀರಲ್ಲಾ? ಸರಿ ತೆಗೆದುಕೊಳ್ಳಿ. ಈ ಭೂಮಿ ನಿಮ್ಮ ಜತೆ ಬರಬಹುದೇನೋ ನೋಡಿ.' ಇದನ್ನು ಓದಿ ನಕುಲನ ಕಣ್ಣಲ್ಲಿ ನೀರುಬಂತು. ಇಷ್ಟು ಚಿಕ್ಕ ಹುಡುಗ ಎಂತಹ ದೊಡ್ಡ ಮಾತು ಬರೆದಿದ್ದಾನಲ್ಲಾ. ಇವನ ಮಾತು ಎಷ್ಟು ಸತ್ಯ ಎಂಬರಿವಾಗಿ ಭಟರಲ್ಲಿ ನಿಜವಾಗಲೂ ನೀವು ಅವನನ್ನು ಮುಗಿಸಿಬಿಟ್ಟಿರಾ? 'ಎಂದು ಕೇಳಿದ. ಭಟರು 'ಇಲ್ಲ' ಎಂದಾಗ ನಕುಲ ಬಾಲಕನನ್ನು ವಾಪಸ್ ಕರೆತರಲು ಹೇಳುತ್ತಾನೆ.

ಮನೆ, ಕಾರು, ಹಣ, ಅಧಿಕಾರ ಎಲ್ಲವೂ ನಮ್ಮದೇ ಎಂದು ಬೀಗುತ್ತೇವೆ. ಆದರೆ, ನಾವು ಹೋಗುವಾಗ ಅದ್ಯಾವುದೂ ನಮ್ಮ ಜೊತೆ ಬರುವುದಿಲ್ಲ. ಈ ಸತ್ಯದ ಅರಿವಾದರೆ ಬದುಕುವ ರೀತಿಯೇ ಬದಲಾಗುವುದು.

(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net