ವಿವಾದದ ಮೂಲ: ವಿವಾದಕ್ಕೆ ಮುಖ್ಯ ಕಾರಣ ಅಭಿಪ್ರಾಯಭೇದ ಮತ್ತು ಅಹಂಕಾರ

Manollasa
Published on
| ವನರಾಗ ಶರ್ಮಾ

ವಿವಾದಕ್ಕೆ ಮುಖ್ಯ ಕಾರಣ ಅಭಿಪ್ರಾಯಭೇದ ಮತ್ತು ಅಹಂಕಾರ (ಇಗೋ). ಅದು ಸತ್ಯದ ಮೇಲೆ ನಿಂತಿರುವುದಿಲ್ಲ. ಸುಳ್ಳಿಗೆ ಹಲವು ಮುಖ. ಸತ್ಯಕ್ಕೆ ಒಂದೇ ಮುಖ. ಅದು ಯಾವಾಗಲೂ ಒಂದೇ ತೆರನಾಗಿರುತ್ತದೆ. ಅಸತ್ಯ ಬಹುತೆರನಾಗಿರುವುದರಿಂದಲೇ ವಿವಾದ ಹುಟ್ಟುತ್ತದೆ. ಇದನ್ನು ಸಾಬೀತುಪಡಿಸುವ ಖಲೀಲ್ ಗಿಬ್ರಾನ್ ಬರೆದ ಕಥೆ ಹೀಗಿದೆ: ಒಮ್ಮೆ ಮೂವರು ವ್ಯಕ್ತಿಗಳು ಗುಡ್ಡದ ಮೇಲಿರುವ ಒಂದು ಸುಂದರವಾದ ಭವನವನ್ನು ನೋಡಿದರು. ಅವರಲ್ಲಿ ಒಬ್ಬ ಹೇಳಿದ; ‘ಅಲ್ಲಿ ಕಾಣುವ ಭವನ ವಯಸ್ಸಾದ ಕುರೂಪಿ ರೂಥಳದ್ದು. ಆಕೆ ಹಳೆಯ ಕಾಲದ ಜಾದುಗಾರಿಣಿ.’ ಎರಡನೆಯ ಹೇಳಿದ; ‘ನೀನು ಹೇಳುತ್ತಿರುವುದು ತಪ್ಪು. ಮಿಸೆಸ್ ರೂಥ್ ಓರ್ವ ಸುಂದರಿಯಾದ ತರುಣಿ. ಸದಾ ಬಣ್ಣದ ಕನಸುಗಳನ್ನು ಕಾಣುತ್ತಿರುತ್ತಾಳೆ.’ ಇದನ್ನು ಕೇಳುತ್ತಿದ್ದ ಮೂರನೆಯವ ಸುಮ್ಮನಿದ್ದಾನೆಯೆ?

‘ನೀವು ಸರಿಯಾಗಿ ತಿಳಿದುಕೊಂಡಿಲ್ಲ. ಶ್ರೀಮತಿ ರೂಥ್ ವೃದ್ಧೆಯೂ ಅಲ್ಲ, ಜಾದುಗಾರಿಣಿಯೂ ಅಲ್ಲ, ಸುಂದರಿಯೂ ಅಲ್ಲ, ತರುಣಿಯೂ ಅಲ್ಲ, ಕವಯಿತ್ರಿಯೂ ಅಲ್ಲ. ಆಕೆಯೋರ್ವ ಮಧ್ಯವಯಸ್ಸಿನ ಮಹಿಳೆ. ಈ ವಿಸ್ತಾರವಾದ ಭೂಮಿ ಭಾಗದ ಒಡತಿ. ಆಕೆ ಅತ್ಯಂತ ಕಠೋರಳು, ಮತ್ತು ಶೋಷಕಳು. ಅವಳೀ ಸುಂದರ ಬಿಳಿಯ ಭವನದ ಹಿಂದೆ ರೈತರ ರಕ್ತದ ಚರಿತ್ರೆಯ ಪದರ ಇದೆ.’ ಹೀಗೆ ಮೂವರ ವಾದ ವಿವಾದ ಗೊತ್ತುಗುರಿಯಿಲ್ಲದೇ ಸಾಗಿತ್ತು. ಅವರು ಗುಡ್ಡದ ಮೇಲೆ ಬಂದುಮುಟ್ಟಿದಾಗ ಸಂಯೋಗವಶಾತ್ ಓರ್ವ ವೃದ್ಧ ಸಿಕ್ಕಿದ. ಅವನನ್ನು ಕೇಳಿದರು: ‘ಈ ಸುಂದರ ಭವನದಲ್ಲಿ ವಾಸಿಸುತ್ತಿರುವ ಶ್ರೀಮತಿ ರೂಥ್​ಳ ಕುರಿತು ನಿಮಗೇನಾದರೂ ಗೊತ್ತಿದೆಯೆ?’

ಆ ವೃದ್ಧ ಹೇಳಿದ: ‘ನನಗೀಗ ತೊಂಬತ್ತು ವರ್ಷ. ನಾನು ಸಣ್ಣವನಿದ್ದಾಗ ಅವಳ ಸಂಬಂಧ ಸ್ವಲ್ಪವಷ್ಟೇ ನೆನಪಿದೆ. ಅವಳು ಸತ್ತು ಅರುವತ್ತು ವರ್ಷಗಳಾಗಿವೆ. ಈಗ ಆ ಭವನ ಖಾಲಿಯಿದೆ. ಗೂಬೆಗಳು ಕೂಗುತ್ತಿರುತ್ತವೆ. ಅಲ್ಲಿ ಪ್ರೇತಗಳು ವಾಸಿಸುತ್ತಿವೆ ಎಂದು ಜನರಿಗೆ ಅನುಮಾನವಿದೆ.’

ಈ ಕಥೆ ವಿವಾದವು ವಾಸ್ತವಿಕತೆ ಅಥವಾ ಸತ್ಯದಿಂದ ದೂರಸರಿದು ಎಷ್ಟೆಲ್ಲ ರೂಪಾಂತರ ಗಳನ್ನೂ, ಅವಾಂತರಗಳನ್ನೂ ಸೃಷ್ಟಿಸಿಕೊಳ್ಳುವತ್ತ ಸಾಗುತ್ತದೆ ಎಂಬುದನ್ನು ಶ್ರುತಪಡಿಸುತ್ತದೆ. ಸತ್ಯದ ಕುರಿತಾಗಿ ಅಥವಾ ಸತ್ಯ ಸಂಗತಿ ಏನು ಎಂಬುದು ಗೊತ್ತಿಲ್ಲದ ವ್ಯಕ್ತಿಗಳು ಸಹ ಅದರ ಕುರಿತು ತಮ್ಮ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ‘ವಿವಾದ ಸತ್ಯದ ಕಾರಣದಿಂದಾಗಿ ಅಲ್ಲ; ಅಭಿಪ್ರಾಯದ ಕಾರಣದಿಂದಾಗಿ ಆಗುತ್ತದೆ’ ಎಂದು ಓಶೋ ಹೇಳುತ್ತಾರೆ.

ಅಹಮಿಕೆಯು ಮೇಲೇಳುತಭಿಮತವು ಬೇರಾಗಿ |

ಸಹಮತಿಯ ಸುಳಿವಿರದ ದಿಟದೂರ ವಾದ ||

ಕಹಿಯಾಗಿ ಸಟೆಯಾಗಿ ಹರಿಯುತ್ತ ಹೋಗುವುದು |

ನಹಿ ಸತ್ಯ ಮಾತಿನಲಿ ತರುವುದದು ಖೇದ ||

ಎನುವಂತೆ ಅಭಿಪ್ರಾಯದ ಕಾರಣದಿಂದ, ‘ಇಗೊ’ದ ದೆಸೆಯಿಂದ ನಿರರ್ಥಕ ವಿವಾದದಲ್ಲಿ ತೊಡಗಿ ಕೊಳ್ಳುತ್ತೇವೆ. ಸುಳ್ಳು ಸಾವಿರ ರೂಪಗಳನ್ನು ಪಡೆದುಕೊಂಡು ಹರಿದಾಡುತ್ತಿರುತ್ತದೆ. ಈ ಹುರುಳಿಲ್ಲದ ವಿವಾದ, ವ್ಯರ್ಥವಾದ ವಿವಾದ ಕಹಿಯನ್ನೇ ಉಂಟುಮಾಡುತ್ತದೆೆ; ಖೇದವನ್ನೇ ತರುತ್ತದೆ, ಅಷ್ಟೆ ಹೊರತು ಇನ್ನಾವ ಪ್ರಯೋಜನವೂ ಇಲ್ಲ. ಅದು ಸತ್ಯದ ಕುರಿತಾದ ವಾದವೂ ಆಗಿರುವುದಿಲ್ಲ.

(ಲೇಖಕರು ನಿವೃತ್ತ ಅಧ್ಯಾಪಕರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net