

ಅದು ಮಹಾ ಧರ್ಮನಗರಿ. ಅಲ್ಲೊಂದು ಮಹಾ ಅರಮನೆ. ಅರಮನೆ ಬಾಗಿಲು ಸದಾ ತೆರೆದೇ ಇರುವುದು. ಅಲ್ಲಿ ಬಾಗಿಲು ಹಾಕುವ ಪದ್ಧತಿಯೇ ಇಲ್ಲ. ಯಾಕೆಂದರೆ ಅಲ್ಲಿಗೆ ಯಾರೂ ಬರಲಿಚ್ಛಿಸುವದಿಲ್ಲ. ಅಂತಹದರಲ್ಲಿ ಬಾಗಿಲು ತಟ್ಟಿ ‘ಒಳಗೆ ಬರಲೇ?’ ಎಂಬ ಮಾತು ಕೇಳಿದಾಗ, ಯಾರು ಬಂದಿದ್ದಾರೆ ನೋಡಿರಿ ಎಂಬ ಆಜ್ಞೆ ರಾಜನದು. ಅಲ್ಲಿಗೆ ಬಂದವರು ಮಹಾನ್ ಋಷಿ ನಾರದರು.
ಇದು ಪ್ರೇತಪುರಿ. ಅಂದರೆ ಯಮಪುರಿ. ನಾರದರಿಗೆ ಪ್ರೇತಪುರಿಯ ಬಾಗಿಲು ಸದಾ ಮುಚ್ಚಿರುತ್ತದೆ. ಹೌದು, ನಾರದರಿಗೆ ಅಲ್ಲಿ ಸ್ಥಾನವಿಲ್ಲ, ಕೆಲಸವಿಲ್ಲ, ಅವರ ಆಗಮನ ಮಹದಾಶ್ಚರ್ಯ. ಆದರೂ ಬಂದ ಮುನಿಯನ್ನು ಯಮಧರ್ಮ ರಾಜ ಶ್ರದ್ಧೆಯಿಂದ ಬರಮಾಡಿಕೊಂಡು ಆದರಾತಿಥ್ಯಗಳಾದವು. ‘ತ್ರಿಲೋಕ ಸಂಚಾರಿಗಳೂ, ನಾರಾಯಣನ ಭಕ್ತರೂ ಆದ ತಮ್ಮ ಆಗಮನದ ಇಂಗಿತ, ಕಾರಣವೆನೆಂಬುದನ್ನು ತಿಳಿಸಬೇಕು’ಎಂದು ಯಮರಾಜ ವಿನಂತಿಸಿದ.
ನಾರದರೆಂದರು- ‘ನನಗೆ ನರಕ ದರ್ಶನ ಮಾಡಬೇಕಾಗಿದೆ.’ ಯಮಧರ್ಮನಿಗೆ ಆಶ್ಚರ್ಯ, ಇವರಿಗೇಕೆ ನರಕದ ದರ್ಶನ ಎಂದು. ಆದರೂ ಮಹಾ ಮುನಿಗಳ ಆಜ್ಞೆಯನ್ನು ಮೀರುವ ಹಾಗಿಲ್ಲ. ನರಕವನ್ನು ತೋರಿಸಿದ. ಎಲ್ಲೆಲ್ಲೂ ಅಂಧಕಾರ, ಆರ್ತನಾದ, ರಕ್ತದ ಮಡುವು, ದುರ್ಗಂಧ, ಕುದಿಯುವ ಎಣ್ಣೆ ಯಲ್ಲಿ ಕುಣಿಯುತ್ತಲಿದ್ದವರು ಅನೇಕರು, ಅಳುವವರು, ತಮ್ಮ ಮಾಂಸ ತಾವೇ ತಿನ್ನುವವರು ಇತ್ಯಾದಿ. ಇವೆಲ್ಲವನ್ನು ಕಂಡ ನಾರದರ ಮನಸ್ಸು ಕರಗಿತು. ಬಾಯಿಯಂದ ಒಂದೇ ಉದ್ಗಾರ-
ನಾರಾಯಣೇತಿ ನಾಮಾಸ್ತಿ ವಾಗಸ್ತಿ ವಶವರ್ತಿನಿ |
ತಥಾಪಿ ನರಕೇ ಘೊರೇಪತಂತಿತ್ಯೇತದದ್ಭುತಮ್ ||
‘ನಾರಾಯಣ ಎಂಬ ನಾಮ ಒಂದಿದೆ, ಹಾಗೆಯೆ ಆ ನಾರಾಯಣ ಕೊಟ್ಟ, ಹೇಗೆ ಬೇಕಾದ ಹಾಗೆ ಹೊರಳಬಲ್ಲ ನಾಲಿಗೆಯೂ ಇದೆ. ಇವೆರಡೂ ಆ ಭಗವಂತನ ಕೃಪೆಯಿಂದ ಮನುಜನಿಗೆ ದೊರಕಿದಾಗ ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇಷ್ಟೊಂದು ಕಷ್ಟಕ್ಕೆ ಗುರಿಮಾಡಿಕೊಳ್ಳುತ್ತಾರಲ್ಲಾ ನಾರಾಯಣ ನಾರಾಯಣ’.
ಅದೇ ಕ್ಷಣ ನರಕ ಲೋಕವೇ ರಿಕ್ತವಾಯಿತು. ಅಲ್ಲಿದ್ದ ನರಕವಾಸಿಗಳೆಲ್ಲ ಉದ್ಧಾರವಾದರು. ಯಮಧರ್ಮನ ಮನೆಯಿಂದ ಸುಧರ್ಮನ ಮನೆಗೆ ಬಂದರು. ಪ್ರೇತಪುರಿಯಿಂದ ಹರಿಪುರಕ್ಕೆ. ನಾವು ದಿನದಲ್ಲಿ ಎಷ್ಟೋ ಮಾತುಗಳನ್ನು ಆಡುತ್ತೇವೆ, ಬೆಳಗ್ಗೆಯಿಂದ ರಾತ್ರಿವರೆಗೆ, ನಾಲಿಗೆ ವಿಶ್ರಾಂತಿರಹಿತವಾಗಿರುತ್ತದೆ. ಭೋಜನದ ಮಧ್ಯದಲ್ಲೂ ಅವಕಾಶ ನೋಡಿ ತುತ್ತು ಬಾಯಿಯಲ್ಲಿ ಇಟ್ಟುಕೊಂಡೇ ಮಾತಾಡುವ ಬಾಯಿ, ಹರಿನಾಮ ಕೀರ್ತನೆಯನ್ನು ಮಾತ್ರ ಒಲ್ಲದು. ಸ್ವಲ್ಪ ಸಂಯಮ, ಶುದ್ಧ ಭಕ್ತಿ, ಪ್ರಾಮಾಣಿಕ ಹರಿಪ್ರೀತಿ, ಸಜ್ಜನರ ಸಹವಾಸ ಇವೆಲ್ಲದರಿಂದ ಬದುಕಿಗೆ ಅರ್ಥ ಬರುತ್ತದೆ. ಮಾಡಿದ ಪ್ರತಿಯೊಂದು ಕರ್ಮ, ಪೂಜೆ ಭಗವಂತನಿಗೆ ಅರ್ಪಣೆಯಾದಲ್ಲಿ ಅನ್ಯಾಯಕ್ಕೆ ಅವಕಾಶವೆಲ್ಲಿ? ನಾರದಮುನಿಯಂತೆ ನಮ್ಮನ್ನು ನಾವು ಹರಿಗೊಪ್ಪಿಸಿಕೊಂಡು, ಶುದ್ಧ ಕಾರ್ಯಗಳನ್ನೇ ಮಾಡಿ ಸರ್ವ ಕಾರ್ಯ ಸಮರ್ಪಣೆ ಆ ಸರ್ವೆಶ್ವರಗೆ ಎಂದು ಚಿಂತನೆ ಮಾಡಿದರೆ ಜೀವನ ಸಾರ್ಥಕ.
(ಲೇಖಕರು ಹವ್ಯಾಸಿ ಬರಹಗಾರರು)