ಬೆಳೆಯುವ ಪೈರು ಮೊಳಕೆಯಲ್ಲೇ!

napoleon-bonaparte- Manollasa
Published on
ಡಾ.ಕೆ.ಪಿ.ಪುತ್ತೂರಾಯ

ಫ್ರಾನ್ಸ್ ದೇಶದಲ್ಲಿ ನಡೆದ ಸತ್ಯಕಥೆ. ಒಂದು ಹಳ್ಳಿಯಲ್ಲಿ ಜ್ಯೋತಿಷಿಯಿದ್ದ. ಅವನು ಹೇಳುತ್ತಿದ್ದ ಭವಿಷ್ಯ ಬಹಳಷ್ಟು ನಿಜವಾಗುತ್ತಿತ್ತು. ಆ ಕಾರಣ ಅವನ ಬಳಿ ದೂರದೂರದ ಊರುಗಳಿಂದ ಜನರು ಬರುತ್ತಿದ್ದರು. ಈ ಜ್ಯೋತಿಷಿಗಾದರೋ ಹಣದ ಮೇಲೆ ಅತಿಯಾಸೆ. ಆದುದರಿಂದ ಭವಿಷ್ಯ ನುಡಿಯಲು ಹೆಚ್ಚಿನ ಹಣ ತೆಗೆದುಕೊಳ್ಳುತ್ತಿದ್ದ. ಆದರೂ, ಜನರು ಇವನನ್ನು ಹಾಡಿ ಹೊಗಳುತ್ತಿರುವುದನ್ನು ಕಂಡ ಬಾಲಕನೊಬ್ಬ ತಾನೂ ಏಕೆ ತನ್ನ ಭವಿಷ್ಯ ತಿಳಿದುಕೊಳ್ಳಬಾರದು ಎಂದು ಯೋಚಿಸಿದ.

ಒಂದು ದಿನ ಜ್ಯೋತಿಷಿಯ ಬಳಿ ಬಂದು, ತನ್ನ ಭವಿಷ್ಯ ನುಡಿಯಬೇಕೆಂದು ಕೇಳಿಕೊಂಡ. ಆದರೆ, ‘ನನ್ನ ಬಳಿ ಇರೋದು ಒಂದು ಪೆನ್ನಿ ಮಾತ್ರ. ನಿಮಗೆ ಅಷ್ಟನ್ನೇ ಕೊಡಬಲ್ಲೆ’ ಎಂದ. ಒಂದು ಪೆನ್ನಿಯನ್ನಾದರೂ ಏಕೆ ಬಿಡಬೇಕೆಂದು ಯೋಚಿಸಿದ ಆ ಜಿಪುಣ, ಪೆನ್ನಿಯನ್ನು ಪಡೆದು ಬಾಲಕನ ಹಸ್ತರೇಖೆಗಳನ್ನು ನೋಡಲಾರಂಭಿಸಿದ. ನೋಡುತ್ತಿದ್ದಂತೆ ಅವನ ಮುಖ ಅರಳಲಾರಂಭಿಸಿತು. ಕಾರಣ ಅಂತಹ ಅದ್ಭುತ ಭವಿಷ್ಯ ಹೊಂದಿರುವ ಕೈಯನ್ನು ಅವನು ಅಲ್ಲಿಯವರೆಗೆ ನೋಡಿಯೇ ಇರಲಿಲ್ಲ. ಬಾಲಕನ ಕೈಯಲ್ಲಿ ಅತ್ಯಂತ ವೀರ-ಧೀರ ಚಕ್ರವರ್ತಿಯಾಗುವ ಎಲ್ಲ ಲಕ್ಷಣಗಳಿದ್ದವು. ಅದರೂ ಕೇವಲ ಒಂದೇ ಪೆನ್ನಿಗೆ, ಇಂತಹ ದೊಡ್ಡ ಭವಿಷ್ಯವನ್ನು ಹೇಳೋದು ಸರಿ ಹೋಗದು ಎಂದು ಯೋಚಿಸಿ, ಸುಮ್ಮನೆ ಒಂದು ಲೋಪದೋಷ ಹೇಳುವ ನೆಪದಲ್ಲಿ, ‘ಬಾಲಕನೇ ನಿನ್ನ ಹಸ್ತರೇಖೆಗಳೇನೋ ಅದ್ಭುತ. ಎಲ್ಲ ಒಳ್ಳೆಯ ಲಕ್ಷಣಗಳಿವೆ. ಆದರೆ...’ ‘ಏನು ಆದರೆ?’ ಬಾಲಕ ಕೇಳಲಾಗಿ ಜ್ಯೋತಿಷಿ ಹೇಳಿದ, ‘ನಿನ್ನ ಕೈಯಲ್ಲಿ ಇನ್ನೊಂದು ರೇಖೆ ಇರುತ್ತಿದ್ದರೆ ನೀನು ಚಕ್ರವರ್ತಿಯೇ ಆಗುತ್ತಿದೆ’. ‘ಯಾವ ರೇಖೆ?’ ಎಂದು ಕೇಳಿದಾಗ, ಆತ ಬಾಲಕನ ಕೈ ಮೇಲೆ ಯಾವುದೋ ಒಂದು ಜಾಗ ತೋರಿಸಿ, ‘ಇಲ್ಲಿ ಆ ರೇಖೆ ಇರಬೇಕಾಗಿತ್ತು’ ಎಂದ. ತಕ್ಷಣವೇ ಆ ಬಾಲಕ, ಜೇಬಿನಿಂದ ಚೂರಿ ತೆಗೆದು ಜ್ಯೋತಿಷಿ ಹೇಳಿದ ಜಾಗದಲ್ಲಿ ಗೆರೆ ಎಳೆದುಕೊಂಡು, ರಕ್ತಸಿಕ್ತವಾದ ಕೈ ತೋರಿಸುತ್ತ, ನಗು-ನಗುತ್ತಾ ಕೇಳಿದ- ‘ಈಗ?’

ಬಾಲಕನ ಧೀರತನ ಕಂಡು ಬೆರಗಾದ ಜ್ಯೋತಿಷಿಯ ಕಣ್ಣಂಚಿನಲ್ಲಿ ನೀರು ಬಂತು. ತಾನಾಗಿಯೇ ನಿಜ ಬಾಯಿಯಿಂದ ಬಂತು. ‘ಮಗು ನನ್ನನ್ನು ಕ್ಷಮಿಸಿ ಬಿಡು. ನಿನ್ನ ಹಸ್ತರೇಖೆ ಅದ್ಭುತ. ವಿಶ್ವವಿಖ್ಯಾತವಾದ ಚಕ್ರವರ್ತಿಯಾಗುವ ಎಲ್ಲ ಲಕ್ಷಣಗಳು ನಿನ್ನ ಕೈಯ್ಯಲ್ಲಿವೆ’ ಎಂದ. ಮುಂದೆ ಆ ಜ್ಯೋತಿಷಿಯ ಮಾತು ನೂರಕ್ಕೆ ನೂರು ಸತ್ಯವಾಯಿತು. ಆ ಬಾಲಕನೇ ಫ್ರಾನ್ಸ್ ದೇಶವನ್ನಾಳಿದ ಚಕ್ರವರ್ತಿ ನೆಪೊಲಿಯನ್ ಬೋನಾಪಾರ್ಟೆ.

ತಾತ್ಪರ್ಯ ಇಷ್ಟೆ: ‘ಬೆಳೆಯುವ ಪೈರು ಮೊಳಕೆಯಲ್ಲಿಯೇ ತನ್ನ ಗುಣವನ್ನು ತೋರಿಸುತ್ತದೆ’. ಅಂತೆಯೇ ವ್ಯಕ್ತಿಗಳು ಭವಿಷ್ಯದಲ್ಲಿ ಏನಾಗುತ್ತಾರೆ ಎಂಬುದನ್ನು ತಮ್ಮ ಬಾಲ್ಯದಿಂದಲೇ ಪ್ರಕಟಿಸುತ್ತಿರುತ್ತಾರೆ. ಜಗದ್ಗುರು ಆದಿಶಂಕರಾಚಾರ್ಯರು 7ನೇ ವಯಸ್ಸಿಗೆ ‘ಕನಕಧಾರಾ ಸ್ತೋತ್ರ’ವನ್ನು ರಚಿಸಿಲ್ಲವೇ? ಥಾಮಸ್ ಆಲ್ವಾ ಎಡಿಸನ್ ಬಾಲ್ಯದಿಂದಲೇ ಮುಂದೆ ಖ್ಯಾತ ವಿಜ್ಞಾನಿಯಾಗುವ ಸಂಶೋಧನಾ ಪ್ರವೃತ್ತಿಯನ್ನು ಪ್ರಕಟಿಸಲಿಲ್ಲವೇ? ಬಾಲ್ಯದ ಚಟುವಟಿಕೆಗಳೇ ಭವಿಷ್ಯದ ಮುನ್ನುಡಿಯಿದ್ದಂತೆ!

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net