ಪ್ರೀತಿ ಇಲ್ಲದ ಆತಿಥ್ಯ ನೀತಿಯಲ್ಲ!

feature11
Published on
ಡಾ.ಕೆ.ಪಿ.ಪುತ್ತೂರಾಯ

ಶ್ರೀಕೃಷ್ಣ ಪರಮಾತ್ಮ ಯುದ್ಧದ ಮುನ್ನ ಒಮ್ಮೆ ಸಂಧಾನಕ್ಕೆಂದು ದುರ್ಯೋಧನನ ಅರಮನೆಗೆ ಹೋದ ಪ್ರಸಂಗ. ಶ್ರೀಕೃಷ್ಣನ ಆಗಮನದ ಸುದ್ದಿ ತಿಳಿದು ದುರ್ಯೋಧನನೇನೋ, ಪಂಚಭಕ್ಷ್ಯ ಪರಮ್ಮಾನಗಳನ್ನು ಒಳಗೊಂಡ ವಿಶೇಷವಾದ ಅಡುಗೆ ಮಾಡಿಸಿದ. ಆದರೆ ಅಪರೂಪದ ಅತಿಥಿಯಾಗಿ ಬಂದಂಥ ಭಗವಂತನೊಂದಿಗೆ ಭಕ್ತಿಭಾವ, ವಿನಮ್ರತೆಯಿಂದ ನಡೆದುಕೊಳ್ಳದೆ ತನ್ನ ವೈಭವ, ಐಶ್ವರ್ಯವನ್ನು ಪ್ರದರ್ಶಿಸುತ್ತ ಅಹಂಕಾರದಿಂದ ಶ್ರೀಕೃಷ್ಣನನ್ನು ಊಟಕ್ಕೆ ಆಹ್ವಾನಿಸಿದ. ಆದರೆ ಕೃಷ್ಣ ಪರಮಾತ್ಮನು ‘ನಚ ಸಪ್ರೀಯಸೆ ರಾಜನ್, ನಚೈವ ಆಪತ್ಗತಾಃ ವಯಂ’ ‘ನೀನು ನನ್ನನ್ನು ಪ್ರೀತಿಯಿಂದ ಕರೆಯುತ್ತಿಲ್ಲ. ಹಾಗೂ ನಾನೇನು ಬೇರೆ ಗತಿ ಇಲ್ಲದೆ, ನಿನ್ನಲ್ಲಿ ಊಟ ಮಾಡಲು ಬಂದಿಲ್ಲ’ ಎನ್ನುತ್ತ ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸಿದ ಮತ್ತು ದಾಸಿಪುತ್ರನೆಂದು ದುರ್ಯೋಧನನು ಹೀಯಾಳಿಸುತ್ತಿದ್ದ ಪರಮಜ್ಞಾನಿಯಾದ ವಿದುರನ ಮನೆಗೆ ಆಹ್ವಾನವಿಲ್ಲದಿದ್ದರೂ ಹೋಗಿ ಅಲ್ಲಿ ಸಂತೋಷದಿಂದ ಪ್ರಸಾದವನ್ನು ಸ್ವೀಕರಿಸಿದ.

ತಾತ್ಪರ್ಯ ಇಷ್ಟೆ: ಮನೆಗೆ ಅತಿಥಿಯಾಗಿ ಬಂದವನು ದೇವರಿಗೆ ಸಮಾನ (ಅತಿಥಿ ದೇವೋಭವ) ಎಂಬ ಕಲ್ಪನೆ ಭಾರತೀಯ ಸಂಸ್ಕೃತಿಯದು. ಆದುದರಿಂದ ಬಂದ ಅತಿಥಿಯನ್ನು ಪ್ರೀತ್ಯಾದರ, ಗೌರವದಿಂದ ಬರಮಾಡಿಕೊಂಡು ಆದರಪೂರ್ವಕವಾಗಿ ಸತ್ಕರಿಸಬೇಕಾದುದು ಒಂದು ಸತ್ ಸಂಪ್ರದಾಯ. ಬಂದ ಅತಿಥಿಯ ಎದುರು, ನಮ್ಮ ಸೊತ್ತು-ಸಂಪತ್ತು, ಐಶ್ವರ್ಯಗಳ ಪ್ರದರ್ಶನ ಸಭ್ಯತೆಯೂ ಅಲ್ಲ, ಸೌಜನ್ಯವೂ ಅಲ್ಲ. ಆತ್ಮೀಯ ಉಪಚಾರವೇ, ಪ್ರೀತಿಯ ನುಡಿಗಳೇ ಆಗಮಿಸಿದ ಅತಿಥಿಗೆ ಆಪ್ಯಾಯಮಾನವಾಗುತ್ತದೆ.

ಪ್ರೀತಿ ಎಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡುಗಿಡವಲ್ಲ; ಹೃದಯಾಂತರಾಳದಲ್ಲಿ ಅರಳುವ ಮಂದಾರ ಕುಸುಮ. ಇದಕ್ಕೆ ಜಾತಿ-ಮತ, ಮೇಲು-ಕೀಳುಗಳೆಂಬ ಅಡ್ಡಗೋಡೆಗಳಿಲ್ಲ. ‘ಗ್ರಂಥ ಗ್ರಂಥವನ್ನು ಓದಿದವರೆಲ್ಲ ಪಂಡಿತರಲ್ಲ: ಇದು ಖಂಡಿತ. ಪ್ರೀತಿ-ಪ್ರೇಮವೇನೆಂಬುದನ್ನು ಅರಿತವನೇ ಪಂಡಿತ’ ಎಂಬ ಮಾತಿನಲ್ಲಿ ಸತ್ಯವಿದೆ. ಪ್ರೀತಿ-ಪ್ರೇಮಗಳಿಗೆ ಗಂಟೆ ಜಾಗಟೆಗಳಿಲ್ಲ; ತಂಬೂರ ತಮಟೆಗಳಿಲ್ಲ; ಅದು ಸದ್ದುಗದ್ದಲವಿಲ್ಲದೆ, ಹರಿಯುವ ಒಂದು ಪಾಶದ ಹೊಳೆ, ಹಾಲಿಗಿಂತ ಜೇನು ಮಧುರ, ಜೇನಿಗಿಂತ ಸ್ನೇಹ; ಸ್ನೇಹಕ್ಕಿಂತಲೂ ಪ್ರೀತಿ ಮಧುರ. ಈ ಎಲ್ಲ ಸತ್ಯವನ್ನರಿತ ಕಾರಣವೇ ಶ್ರೀಕೃಷ್ಣ ಪರಮಾತ್ಮ ವಿದುರನ ಮನೆಗೆ ಹೋದ. ಎಷ್ಟಾದರೂ ‘ದೊಡ್ಡವರ ಮನೆಯ ನೋಟ ಚೆಂದ, ಬಡವರ ಮನೆಯ ಊಟ ಚೆಂದ’ವಲ್ಲವೇ? ಮೇಲಾಗಿ ನಮ್ಮ ಪ್ರೀತಿಪಾತ್ರರಿಗೆ ನಾವು ನೀಡುವ ದೊಡ್ಡ ಕಾಣಿಕೆ ಎಂದರೆ, ನಮ್ಮ ಸಮಯ. ಅಂತೆಯೇ ನಮ್ಮ ಆಗಮನವನ್ನು ನಿರೀಕ್ಷಿಸುತ್ತಿರುವವರಲ್ಲಿ ಹೋದರೆ ಹಾಗೂ ಆತ್ಮೀಯರಲ್ಲಿಗೆ ಅನಿರೀಕ್ಷಿತವಾಗಿ ಹೋದರೆ, ಅವರಿಗೂ ಅನಂದವೇ ಆನಂದ; ನಮಗೂ ಆದರದ ಅತಿಥಿ ಸತ್ಕಾರ; ಅನಪೇಕ್ಷಿತವಾಗಿ ಹೋದರೆ ಇಲ್ಲವೆ ಆಗಾಗ ಹೋದರೆ, ತಿರಸ್ಕಾರ ಅಲ್ಲ, ‘ಅಭ್ಯಾಗತಃ ಸ್ವಯಂ ವಿಷ್ಣುಃ’ ಎಂಬ ಮಾತಿನಂತೆ, ಕರೆದು ಬರುವ ಅತಿಥಿ ಮಾತ್ರವಲ್ಲ; ಕರೆಯದೆ ಬರುವ ಅತಿಥಿ (ಅಭ್ಯಾಗತಃ) ಕೂಡ ಪ್ರೀತ್ಯಾದರದ ಆತಿಥ್ಯಕ್ಕೆ ಅರ್ಹರು, ಎಂಬುದು ನಮ್ಮ ಭಾರತೀಯ ಸಂಸ್ಕೃತಿ.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net