ಮನೋಲ್ಲಾಸ | ಆಸೆಗೆ ದಾಸನೇ ಲೋಕದ ದಾಸ

Manollasa
Published on

| ಡಾ.ಗಣಪತಿ ಹೆಗಡೆ

ಸೋಮಾರಿಯೊಬ್ಬ ಆಶ್ರಮಕ್ಕೆ ಬಂದ. ಹತ್ತಾರು ಶಿಷ್ಯರು ಗುರುಗಳ ಸೇವೆ ಮಾಡುವುದನ್ನು ಕಂಡ. ತಾನೂ ಶಿಷ್ಯನಾದರೆ ಸುಖವಾಗಿ, ಆರಾಮವಾಗಿ ಬದುಕಬಹುದು, ಅಷ್ಟೇ ಅಲ್ಲ ಮುಂದೆ ಈ ಗುರುವಿನ ರೀತಿ ಶಿಷ್ಯರಿಂದ ಸೇವೆ ಮಾಡಿಸಿಕೊಂಡು ಹಾಯಾಗಿ ಬಾಳಬಹುದು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ. ಏಕಾಂತದಲ್ಲಿ ಗುರುಗಳನ್ನು ನೋಡಿ ವಿನಂತಿಸಿಕೊಂಡ. ‘ಗುರುಗಳೇ ನಿಮ್ಮ ಶಿಷ್ಯನಾಗಬೇಕು, ದಯಮಾಡಿ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಉದ್ಧರಿಸಿ’ ಎಂದು ಬೇಡಿದ.

‘ನಿನ್ನ ಮುಂದಿನ ಗುರಿಯೇನು?’ ಎಂದು ಕೇಳಿದರು ಗುರುಗಳು.

‘ನನಗೆ ಒಂದು ಆಸೆಯಿದೆ ಗುರುಗಳೇ! ಇಂದು ಹೇಗೋ ಅಲ್ಪಸ್ವಲ್ಪ ವಿದ್ಯೆಯನ್ನು ಕಲಿತು ಮುಂದೊಂದು ದಿನ ನಿಮ್ಮಂತೆಯೇ ಒಬ್ಬ ಗುರುವಾಗಬೇಕು, ಸುಖವಾಗಿ ಬದುಕಬೇಕು’ ಎಂಬುದು.

‘ನೋಡು, ಈ ನಿನ್ನ ಆಸೆಯಿದೆಯಲ್ಲ, ಇದು ನಿನ್ನನ್ನು ಗುರಿ ತಲುಪಲು ಅಡೆತಡೆಯುಂಟು ಮಾಡುತ್ತದೆ. ಇದೊಂದನ್ನು ಬಿಟ್ಟರೆ ಖಂಡಿತವಾಗಿ ನಿನ್ನ ಉದ್ದೇಶ ಫಲಿಸುತ್ತದೆ. ನಾವು ಅನುಭವಿಸುವ ಎಲ್ಲ ದುಃಖಗಳಿಗೂ ಆಸೆಯೇ ಕಾರಣ. ಆಸೆಯೊಂದನ್ನು ಗೆದ್ದರೆ ಜೀವನದಲ್ಲಿ ಎಲ್ಲವನ್ನೂ ಜಯಿಸಿದಂತೆಯೇ. ಹೀಗಾಗಿ ಆಸೆಗೆ ದಾಸನಾಗಬಾರದು ಎಂಬುದು ನಮ್ಮ ಹಿರಿಯರ ಅಭಿಮತ. ಸುಲಭದಲ್ಲಿ ಸಿಗುವ ಎಲ್ಲವೂ ತನಗೇ ಬೇಕೆಂಬ ಆಸೆಯೇ ನಮ್ಮ ಅಧಃಪತನಕ್ಕೆ ಕಾರಣವಾಗಬಹುದು’.

ಆಶಾಯಾಃ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ |

ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||

ಆಸೆಯೇ ಎಲ್ಲ ದುಃಖಗಳಿಗೂ ಮೂಲಕಾರಣವೆಂದು ಭಗವಾನ್ ಬುದ್ಧ ಹೇಳಿದ್ದಾನೆ. ‘ನಿನಗೆ ಆಸೆಯೊಂದು ಇಲ್ಲದೇ ಹೋದರೆ ಇಡೀ ಪ್ರಪಂಚವೇ ನಿನಗೆ ದಾಸನಾಗುತ್ತದೆ. ಅದೇ ಆಸೆಯೊಂದಿದ್ದರೆ ಈ ಪ್ರಪಂಚಕ್ಕೆ ನೀನು ದಾಸನಾಗಬೇಕಾಗುತ್ತದೆ’ ಎನ್ನುವ ಎಚ್ಚರಿಕೆಯ ಮಾತನ್ನು ಈ ಸುಭಾಷಿತಕಾರ ಹೇಳುತ್ತಾನೆ. ಯಾರು ಆಸೆಗೆ ದಾಸರೋ, ಯಾರು ಆಸೆಯ ನಿಯಂತ್ರಣದಲ್ಲಿ ಬಿದ್ದಿದ್ದಾರೋ, ಯಾರು ಆಸೆಗೆ ಬಲಿಯಾಗಿದ್ದಾರೋ ಅವರು ಇಡೀ ಪ್ರಪಂಚಕ್ಕೆ ದಾಸರಾಗಿರುತ್ತಾರೆ. ಆಸೆಗೆ ದಾಸನಾದರೆ ಸಮಾಜಕ್ಕೂ ದಾಸನಾಗಬೇಕು. ಏಕೆಂದರೆ ಹುಟ್ಟಿದ ಆಸೆಗಳನ್ನು ಪರಿಪೂರ್ಣಗೊಳಿಸಿಕೊಳ್ಳಬೇಕಾದರೆ ಇತರರ ಮುಂದೆ ದಾಸನಾಗಲೇಬೇಕು, ಕೈಯೊಡ್ಡಲೇಬೇಕು, ತಲೆ ತಗ್ಗಿಸಲೇಬೇಕು, ಅವಮಾನಗಳನ್ನು ಅನುಭವಿಸಲೇಬೇಕು, ಇದೆಲ್ಲ ಅನಿವಾರ್ಯವಾಗುತ್ತದೆ. ಆದರೆ ಆಸೆಯೇ ನಮ್ಮ ದಾಸನಾಗಿಬಿಟ್ಟರೇ? ಇದು ಎಂತಹ ಸುಂದರ ಪರಿಕಲ್ಪನೆ ನೋಡಿ. ಆಸೆಯನ್ನು ನಮ್ಮ ಹಿಡಿತದಲ್ಲಿಟ್ಟುಕೊಂಡರೆ, ಆ ಆಸೆಯ ಆಸೆಗೆ ನಾವು ಬಲಿಯಾಗದೇ ಹೋದರೆ ಶ್ರೇಷ್ಠ ಸ್ಥಾನದಲ್ಲಿ ಇರುತ್ತೇವೆ. ಸಮಾಜವೇ ನಮಗೆ ದಾಸನಾಗುತ್ತದೆ. ಸಾಧು, ಸಜ್ಜನ, ಸನ್ಯಾಸಿ ಇವರೆಲ್ಲ ಆಸೆಗಳನ್ನು ಬಿಟ್ಟವರು. ಇಂಥವರನ್ನು ಇಡೀ ಪ್ರಪಂಚ ಗೌರವಿಸುತ್ತದೆ. ನಾವು ತಿಳಿದುಕೊಳ್ಳಬೇಕಾಗಿರುವ ಅಂಶ ಎರಡೇ. ಆಸೆ ನಮ್ಮ ನಿಯಂತ್ರಣದಲ್ಲಿದ್ದರೆ ಸಮಾಜ ನಮಗೆ ಕೈ ಮುಗಿಯುತ್ತದೆ. ನಾವು ಆಸೆಯ ನಿಯಂತ್ರಣಕ್ಕೆ ಬಿದ್ದರೆ ಇಡೀ ಸಮಾಜಕ್ಕೆ ಕೈಚಾಚಿ, ‘ದೇಹಿ’ ಎಂದೆನ್ನುತ್ತ ದೈನ್ಯದಿಂದ ಬದುಕಬೇಕಾಗುತ್ತದೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net