ಮನೋಲ್ಲಾಸ: ಜೀವನವೆಂಬುದು ಅನಿರೀಕ್ಷಿತ ಘಟನೆಗಳ ಸರಮಾಲೆ

Manollasa
Published on

| ಚಿದಂಬರ ಮುನವಳ್ಳಿ

ಆಗಷ್ಟೇ ಕಾಲೇಜು ಮೆಟ್ಟಿಲೇರಿದ ಮಗ ರಜೆಯಲ್ಲಿ ಊರಿಗೆ ಬಂದಾಗ ಅವನಲ್ಲಿ ಆತ್ಮವಿಶ್ವಾಸ ಬೆಳೆಯುತ್ತಿದ್ದುದನ್ನು ಕಂಡು ತಂದೆಗೆ ಹೆಮ್ಮೆ ಎನಿಸಿದರೂ, ಸ್ವಂತಬುದ್ಧಿ ಮೇಲಿನ ಅತಿಯಾದ ವಿಶ್ವಾಸ ಹಾಗೂ ಹಿರಿಯರ ಬಗ್ಗೆ ತಿರಸ್ಕಾರ ಮಗನ ಮಾತಿನಲ್ಲಿ ಎದ್ದು ಕಾಣಿಸತೊಡಗಿತು. ಅಂದು ಮಧ್ಯಾಹ್ನ ಊಟವಾದ ಮೇಲೆ ಎರಡು ಗಾಜಿನ ಬಟ್ಟಲುಗಳಲ್ಲಿ ಐಸ್ಕ್ರೀಮ್ ತುಂಬಿದ ತಂದೆ ‘ನಿನಗೆ ಬೇಕಾದ್ದನ್ನು ಆರಿಸಿಕೊ’ ಎಂದರು. ಒಂದರ ಮೇಲೆ ಕಡುಗೆಂಪು ಬಣ್ಣದ ಚೆರ್ರಿಹಣ್ಣು ಇದ್ದರೆ, ಇನ್ನೊಂದರ ಮೇಲದು ಇರಲಿಲ್ಲ. ಆತ ತನಗೆ ಪ್ರಿಯವಾದ ಚೆರ್ರಿಹಣ್ಣು ಇರುವ ಐಸ್ಕ್ರೀಮ್ ತೆಗೆದುಕೊಂಡು ಬಾಯಿಯಲ್ಲಿ ಹಾಕಿಕೊಳ್ಳುತ್ತ ಇನ್ನೊಂದು ಬಟ್ಟಲಿನ ಕಡೆಗೆ ನೋಡಿದ. ತಂದೆ ಚಮಚದಿಂದ ತಿರುವಿ ತಿನ್ನಲಾರಂಭಿಸಿದ ಆ ಐಸ್ಕ್ರೀಮ್ ಒಳಗೆ ಎರಡು ಚೆರ್ರಿಹಣ್ಣುಗಳಿದ್ದವು. ‘ನಾನದನ್ನು ಆರಿಸಿಕೊಳ್ಳಬೇಕಿತ್ತೇನೋ’ ಎಂದೆಣಿಸುವಾಗ ತಂದೆ ಹೇಳಿದರು-‘ಮಗು, ಜೀವನದಲ್ಲಿ ನಾವೇನು ನೋಡುತ್ತೇವೆಯೋ ಅಥವಾ ಆಕರ್ಷಿತರಾಗುತ್ತೇವೆಯೋ ಅದು ನಮ್ಮ ಸಲುವಾಗಿ ಒಳ್ಳೆಯದಾಗಿಯೇ ಇರುತ್ತದೆ ಎಂದೇನೂ ಇಲ್ಲ’.

ಮರುದಿನ ಮತ್ತೆರಡು ಐಸ್ಕ್ರೀಮ್ ಬಟ್ಟಲುಗಳನ್ನು ತಂದಿಟ್ಟಾಗ ಹಿಂದಿನ ಅನುಭವದಿಂದ ಆಗಲೇ ‘ಬುದ್ಧಿವಂತ’ನಾಗಿದ್ದ ಮಗ ಚೆರ್ರಿ ಇರುವುದನ್ನು ತಂದೆಗೆ ಕೊಟ್ಟ. ತನ್ನ ಐಸ್ಕ್ರೀಮ್ ತಿನ್ನುವಾಗ ಎಷ್ಟು ಕೆದಕಿದರೂ ಒಂದೂ ಚೆರ್ರಿಹಣ್ಣು ಸಿಗದೆ ನಿರಾಶನಾದ. ಆಗ ತಂದೆ ಎರಡನೆಯ ಪಾಠ ಹೇಳಿದರು-‘ಜೀವನದ ಒಂದು ಅನುಭವದಿಂದ ಎಲ್ಲವನ್ನೂ ತಿಳಿದಿದ್ದೇನೆ ಎಂದುಕೊಳ್ಳಬೇಡ. ಜೀವನವೇ ಅನಿರೀಕ್ಷಿತ ಘಟನೆಗಳ ಸರಮಾಲೆ. ಒಂದರಂತೆ ಇನ್ನೊಂದಿಲ್ಲ’. ಮೂರನೇ ದಿನ ಮತ್ತೆ ಅದೇ ಥರದ ಬಟ್ಟಲಗಳನ್ನು ತಂದು ಆರಿಸಲು ಹೇಳಿದರು ಅಪ್ಪ. ಗೊಂದಲಕ್ಕೆ ಬಿದ್ದ ಮಗ- ‘ಇವೆರಡನ್ನೂ ನೀವೇ ತಯಾರು ಮಾಡಿರುವಿರಿ. ನೀವು ಆರಿಸಿಕೊಂಡು ಬಿಟ್ಟಿದ್ದನ್ನು ನಾನು ತೆಗೆದುಕೊಳ್ಳುವೆ’ ಎಂದ. ಐಸ್ಕ್ರೀಮ್ ಮೇಲೆ ಚೆರ್ರಿಹಣ್ಣು ಇರುವುದನ್ನು ತಂದೆ ಆರಿಸಿಕೊಂಡಾಗ, ‘ಎಂಥ ಸ್ವಾರ್ಥಿ ಅಪ್ಪ!’ ಎಂದುಕೊಂಡು ಎರಡನೇ ಬಟ್ಟಲನ್ನು ಕೈಗೆತ್ತಿಕೊಂಡ. ಐಸ್ಕ್ರೀಮ್ ಸವಿಯಲಾರಂಭಿಸುತ್ತ ನೋಡಿದರೆ ಅದರಲ್ಲಿ ರುಚಿರುಚಿಯಾದ ಮೂರು ಚೆರ್ರಿಹಣ್ಣುಗಳಿದ್ದವು. ತಂದೆ ಪ್ರೀತಿಗೆ ಮನಸೋತು ಬಲವಾಗಿ ಅಪ್ಪಿಕೊಂಡ.

ತಂದೆ-ತಾಯಿ, ಗುರು-ಹಿರಿಯರು ಕೊಡುವಷ್ಟು ಒಳ್ಳೆಯದನ್ನು ಜಗತ್ತಿನಲ್ಲಿ ಬೇರಾರೂ ಕೊಡಲು ಸಾಧ್ಯವಿಲ್ಲ. ಅದಕ್ಕೆ ಪ್ರತಿಯಾಗಿ ಅವರು ಅಪೇಕ್ಷಿಸುವುದು ನಮ್ಮ ಶ್ರದ್ಧೆಯನ್ನು ಮಾತ್ರ. ಈಗಿನ ಯುವಪೀಳಿಗೆ ತೀಕ್ಷ್ಣ ಬುದ್ಧಿಮತ್ತೆ ಜೊತೆ ಕಷ್ಟಸಹಿಷ್ಣುಗಳೂ ಆಗಿದ್ದಾರೆ. ತತ್ಪಲವಾಗಿ ಅವರಿಗೆ ಐಹಿಕ ಸುಖಭೋಗಗಳೂ ದೊರೆತಿವೆ. ಇವು ಹಿಂದಿನವರಿಗೆ ಕನಸಿನ ಮಾತಾಗಿದ್ದವು. ಆದರೆ ಸಾಂಸಾರಿಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಹಿರಿಯರನ್ನು ಸೌಜನ್ಯಕ್ಕೂ ಲೆಕ್ಕಿಸದೆ ತಮ್ಮ ಬುದ್ಧಿ ಮೇಲಿನ ಅತಿಯಾದ ನಂಬಿಕೆಯಿಂದ ಅವರನ್ನು ಧಿಕ್ಕರಿಸಿ ಯಾರು ನಡೆದಿದ್ದಾರೋ ಅವರು ಹತಾಶೆ, ಖಿನ್ನತೆ, ವ್ಯಸನ, ಆತ್ಮಹತ್ಯೆಗಳಂಥ ಅಧಃಪತನಕ್ಕೆ ಈಡಾಗಿದ್ದಾರೆ. ಯಾರು ಅವರಲ್ಲಿ ಶ್ರದ್ಧೆ ಇರಿಸಿ ಸಮನ್ವಯ ಸಾಧಿಸಿದ್ದಾರೋ ಅವರು ಯಶಸ್ವಿಯಾಗಿ, ಸುಖಿಗಳಾಗಿದ್ದಾರೆ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net