ಸಮಯವೆಂಬ ನದಿ: ಮನೋಲ್ಲಾಸ

Manollasa
Published on
| ಡಾ.ಗಣಪತಿ ಹೆಗಡೆ

ಗುರುಕುಲದಲ್ಲಿ ಪಾಠ ಪ್ರವಚನಗಳು ಸಾಂಗವಾಗಿ ನಡೆಯುತ್ತಿದ್ದವು. ಆಲಸಿ ವಿದ್ಯಾರ್ಥಿಯೊಬ್ಬ ಗುರುಗಳು ಹೇಳಿದ್ದೆಲ್ಲದಕ್ಕೂ ವಿಪರೀತವಾಗಿಯೇ ಹೇಳುತ್ತಿದ್ದ. ಯಾವುದಕ್ಕೂ ಸರಿಯಾದ ಪ್ರತಿಸ್ಪಂದನೆ ಕೊಡುತ್ತಿರಲಿಲ್ಲ. ಗುರುಗಳು ಒಮ್ಮೆ ಆ ವಿದ್ಯಾರ್ಥಿಯನ್ನು ಏಕಾಂತದಲ್ಲಿ ಕರೆಸಿ ವಿದ್ಯಾರ್ಥಿಜೀವನದಲ್ಲಿ ವಿದ್ಯೆಯ ಮಹತ್ವವನ್ನು ತಿಳಿಹೇಳಿ, ಸಮಯವನ್ನು ಹಾಳುಮಾಡದೇ ಅದರ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ವಿವರಿಸಿದರು.

ವಿದ್ಯಾರ್ಥಿ ಕೊನೆಗೂ, ‘ಗುರುಗಳೇ, ಅದೆಲ್ಲ ಮುಂದಿನ ದಿನಗಳಲ್ಲಿ ಮಾಡಿಕೊಂಡರಾಯಿತು. ಇನ್ನೂ ಜೀವನ ಬೇಕಾದಷ್ಟಿದೆಯಲ್ಲ’ ಎಂದು ಅಸಹನೆಯಿಂದಲೇ ಹೇಳಿದ. ಇವನಿಗೆ ಬುದ್ಧಿಕಲಿಸಲು ಇದೇ ಸರಿಯಾದ ಸಮಯ ಎಂದರಿತ ಗುರುಗಳು, ‘ಮಗು, ಮನುಷ್ಯ ಎಷ್ಟು ವರ್ಷಗಳ ಕಾಲ ಬದುಕಬಲ್ಲ?’ ಎಂದು ಪ್ರಶ್ನಿಸಿದರು. ‘ನೂರುವರ್ಷಗಳು ಗುರುಗಳೇ’.

‘ಜೀವನದ ಅರ್ಧಭಾಗವನ್ನು ಅವನು ನಿದ್ರೆಯಲ್ಲಿಯೇ ಕಳೆಯುತ್ತಾನಲ್ಲವೇ?’

‘ಹೌದು, ದಿನದ ಅರ್ಧಭಾಗ ರಾತ್ರಿ, ಆಗ ನಿದ್ರೆಯನ್ನೇ ತಾನೇ ಮಾಡಬೇಕು?’

‘ಹಾಗಾದರೆ ಜೀವಿಸೋದಕ್ಕೆ ಇರೋದು ಐವತ್ತು ವರ್ಷಗಳು ಮಾತ್ರ ಅಲ್ಲವೇ?’

‘ಹೌದು ಗುರುಗಳೇ’, ‘ಬಾಲ್ಯಾವಸ್ಥೆಯಿಂದ ಹೊರಬರಲು ಮನುಷ್ಯನಿಗೆ ಎಷ್ಟು ವರ್ಷಗಳು ಬೇಕು ಗೊತ್ತೇ?’, ‘ಹತ್ತು- ಹದಿನೈದು ವರ್ಷಗಳು ಬೇಕಾಗಬಹುದು ಗುರುಗಳೇ.’ ‘ಇನ್ನು ವೃದ್ಧತ್ವದಲ್ಲಿ?’, ‘ವೃದ್ಧಾಪ್ಯ ಕಳೆಯೋದಕ್ಕೆ ಹದಿನೈದು ವರ್ಷಗಳು ಬೇಕಾಗುತ್ತವೆ.’ ‘ಇನ್ನು ಆರೋಗ್ಯ ಕೈಕೊಟ್ಟರೆ, ಯಾರನ್ನೋ ಕಳೆದುಕೊಂಡ ದುಃಖವನ್ನು ನೀಗಿಸುವುದಕ್ಕೋ, ಇನ್ನು ಯಾರದ್ದೋ ಸೇವೆ ಮಾಡಲೋ ಒಂದಿಷ್ಟು ವರ್ಷಗಳು ವ್ಯಯವಾಗುತ್ತವೆ ಅಲ್ಲವೇ?’ ಎಂದರು ಗುರುಗಳು.

‘ಹೌದು, ಗುರುಗಳೇ. ಅದಂತೂ ಸತ್ಯ’. ‘ಹಾಗಾದರೆ ನಿನಗಾಗಿ ಸಾಧನೆ ಮಾಡಲು, ಸುಖವಾಗಿ ಬದುಕಲು ನಿನಗೆ ಸಮಯವೆಲ್ಲಿದೆ?’ ಶಿಷ್ಯ ತಬ್ಬಿಬ್ಬಾದ. ‘ಹೌದಲ್ಲವೇ ಗುರುಗಳೇ, ಇಷ್ಟೊಂದು ವರ್ಷಗಳನ್ನು ನಾವು ಹೀಗೆಯೇ ಕಳೆದುಬಿಟ್ಟರೆ ನಮಗಾಗಿ ಬದುಕಲು ಸಮಯವೆಲ್ಲಿದೆ?’ ‘ಅದಕ್ಕೇ ಕಣಪ್ಪ, ಹೇಳೋದು, ಸಮಯ ಅತ್ಯಂತ ಅಮೂಲ್ಯ. ಅದು ಒಂದು ರೀತಿಯಲ್ಲಿ ಕೆಳಮುಖವಾಗಿ ಹರಿಯುವ ನದಿಯಿದ್ದಂತೆ. ಅದು ಎಂದಿಗೂ ವಾಪಸ್ ಬರುವುದಿಲ್ಲ. ಅದನ್ನು ಕಳೆಯಲು ಸರಿಯಾದ ಮಾರ್ಗವಿರಬೇಕು. ಅದಕ್ಕೆ ಭರ್ತೃಹರಿ ಎಂಬ ನೀತಿಶಾಸ್ತ್ರಜ್ಞನು ತನ್ನ ‘ವೈರಾಗ್ಯಶತಕಮ್ ಎಂಬ ಗ್ರಂಥದಲ್ಲಿ ಹೀಗೆ ಸ್ಪಷ್ಟವಾಗಿ ವಿವರಿಸಿದ್ದಾನೆ.

ಆಯುರ್ವರ್ಷಶತಂ ನೃಣಾಂ ಪರಿಮಿತಂ ರಾತ್ರೌ ತದರ್ಧಂ ಗತಂ

ತಸ್ಯಾರ್ಧಸ್ಯ ಪರಸ್ಯ ಚಾರ್ಧಮಪರಂ ಬಾಲತ್ವ ವೃದ್ಧತ್ವಯೋಃ|

ಶೇಷಂ ವ್ಯಾಧಿವಿಯೋಗದುಃಖಭರಿತಂ ಸೇವಾದಿಭಿರ್ನೀಯತೇ

ಜೀವೇ ವಾರಿತರಂಗಚಂಚಲತರೇ ಸೌಖ್ಯಂ ಕುತಃ ಪ್ರಾಣಿನಾಮ್|

ಮನುಷ್ಯರ ಆಯುಃಪ್ರಮಾಣ ಒಂದು ನೂರುವರ್ಷಗಳು. ಅದರಲ್ಲಿ ಅರ್ಧಭಾಗ ರಾತ್ರಿಯಲ್ಲಿಯೇ ಕಳೆದುಹೋಗುತ್ತದೆ. ಉಳಿದ ಅರ್ಧಾಯುಷ್ಯದಲ್ಲಿ ಹೆಚ್ಚಿನಂಶ ಬಾಲ್ಯದಲ್ಲಿ ಕಳೆದರೆ ಇನ್ನಷ್ಟು ವೃದ್ಧತ್ವದಲ್ಲಿ ಕಳೆಯುತ್ತವೆ. ಇನ್ನುಳಿದ ವರ್ಷಗಳಲ್ಲಿ ರೋಗಬಾಧೆ, ವಿರಹ, ದುಃಖ, ಸೇವೆ ಮುಂತಾದವುಗಳಿಗೆ ಒಂದಷ್ಟು ವರ್ಷಗಳು ಮೀಸಲು. ಇಂತಹ ಜೀವನದಲ್ಲಿ ಮನುಷ್ಯನಿಗೆ ಸುಖವೆಂಬುದು ಮರೀಚಿಕೆಯೇ ಸರಿ’. ಶಿಷ್ಯನಿಗೆ ತಪ್ಪಿನ ಅರಿವಾಯಿತು. ಗುರುಗಳಲ್ಲಿ ಕ್ಷಮೆಯಾಚಿಸಿದ. ಮುಂದಿನ ಜೀವನದ ಸಾಧನೆಗಾಗಿ ದೃಢವಾದ ಸಂಕಲ್ಪ ಮಾಡಿದ. ನಾವೂ ಹಾಗೆಯೇ, ಮುಂದೆ ಮಾಡಿದರಾಯಿತು ಅಂತ ಎಲ್ಲವನ್ನು ಮುಂದೂಡುತ್ತಲೇ ಬರುತ್ತೇವೆ. ಆದರೆ ಜೀವನದ ಅಮೂಲ್ಯ ಸಮಯ ಕಳೆದದ್ದು ಮಾತ್ರ ಅರಿವಿಗೆ ಬರುವುದೇ ಇಲ್ಲ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net