

ಹನ್ನೆರಡು-ಹದಿಮೂರು ವರ್ಷ ವಯಸ್ಸಿನ ಬಾಲಕನೋರ್ವ ಪಠ್ಯಪುಸ್ತಕ ಅಭ್ಯಾಸ ಬದಿಗೊತ್ತಿ, ಮಣ್ಣಿನಲ್ಲಿ ಆಟವಾಡಲು ಶುರು ಮಾಡಿದ. ಮಣ್ಣನ್ನು ಹದ ಮಾಡಿ, ನಾನಾ ಆಕಾರದ ಗೊಂಬೆಗಳನ್ನು ಮಾಡುವುದು ಅವನ ಕಾಯಕವಾಯಿತು. ಪಾಲಕರ ಬುದ್ಧಿಮಾತು ನಾಟಲಿಲ್ಲ. ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬರತೊಡಗಿದಾಗ ಪಾಲಕರಿಗೆ ಆತಂಕ ಶುರುವಾಯಿತು. ಚಿಂತಾಕ್ರಾಂತರಾದ ಅವರು ಹಿರಿಯ ಶಿಕ್ಷಕರೊಬ್ಬರ ಮನೆಗೆ ಮಗನನ್ನು ಕರೆದುಕೊಂಡು ಹೋಗಿ ಸಮಸ್ಯೆ ಹೇಳಿಕೊಂಡರು. ಕೈ ಕಟ್ಟಿಕೊಂಡು ಸುಮ್ಮನೆ ತಲೆತಗ್ಗಿಸಿ ನಿಂತಿದ್ದ ಆ ಬಾಲಕನಿಗೆ ನಾನಾ ಪ್ರಶ್ನೆಗಳನ್ನು ಕೇಳಿ ಆತನಿಂದ ಉತ್ತರ ಪಡೆದುಕೊಂಡಾಗ ಆ ಶಿಕ್ಷಕರಿಗೆ ಸಮಸ್ಯೆ ಎಲ್ಲಿದೆ ಎಂದು ಗೊತ್ತಾಯಿತು. ‘ನಿಮ್ಮ ಮಗ ತನ್ನ ವಯಸ್ಸಲ್ಲಿ ಎಷ್ಟು ಚುರುಕಾಗಿರಬೇಕೋ ಅದಕ್ಕಿಂತಲೂ ಹೆಚ್ಚೇ ಚುರುಕಾಗಿದ್ದಾನೆ. ತನಗಿಷ್ಟವಾದುದನ್ನು ಆರಿಸಿಕೊಳ್ಳುವ, ತಿಳಿದು, ಕಲಿಯುವ ಬುದ್ಧಿಮತ್ತೆ ಈಗ ಅವನಿಗಿದೆ. ನಿಮ್ಮ ಆಲೋಚನೆ ಬದಲಾಯಿಸಿಕೊಂಡು ಆತನ ಚಟುವಟಿಕೆಗಳನ್ನು ಗಮನಿಸಿ. ಆತನ ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸಿ. ಮುಂದೆ ಎಲ್ಲವೂ ಸರಿಹೋಗುವುದು’ ಎಂದರು ಶಿಕ್ಷಕರು. ಹಾಗೇ ಮಾಡಲಾಗಿ ಕ್ರಮೇಣ ಪಾಲಕರಿಗೆ ಮಗನೊಳಗೊಬ್ಬ ಕಲಾಕಾರ ಗೋಚರವಾದ. ಆತನ ಕಲೆಯನ್ನು ಪ್ರೋತ್ಸಾಹಿಸಿದಂತೆಲ್ಲ ಪಠ್ಯ ಕಲಿಕೆಯೂ ವೇಗ ಪಡೆದುಕೊಳ್ಳಲಾರಂಭಿಸಿತು. ತನ್ನಿಚ್ಛೆಯಂತೆ ಮುಂದೆ ಆತ ಶಿಲ್ಪಶಾಸ್ತ್ರ ಕಲಿತು ಮಹಾನ್ ಶಿಲ್ಪಿಯಾದ.
ನೋಡುವ ರೀತಿ, ಯೋಚಿಸುವ ಮಾರ್ಗ ಸರಿಯಾಗಿದ್ದರೆ ಮಾತ್ರವೇ ಹುದುಗಿರುವ ಕೌಶಲ ಒದಗಿ ಬರಲಿಕ್ಕೆ ಸಾಧ್ಯ. ಅನೇಕರು ಪೂರ್ವಗ್ರಹ ಪೀಡಿತರಾಗಿ ತಾವಂದುಕೊಂಡಿದ್ದನ್ನೇ ಸರಿ ಎಂದು ಭಾವಿಸಿ, ಉಪಸಂಹಾರ ಬರೆದು ಬಿಡುತ್ತಾರೆ. ಅಜ್ಞಾನದಿಂದಲೋ, ಆತುರದಲ್ಲೋ ಸರಿಯಾಗಿ ದೃಷ್ಟಿ ಹರಿಸದಿದ್ದರೆ ಒಳ್ಳೆಯದನ್ನು ಕಳೆದುಕೊಳ್ಳಬೇಕಾಗುವುದು. ಅದರಿಂದಾಗುವ ನಷ್ಟ ಒಂದಿಡೀ ಸಮಾಜಕ್ಕೇ ತಟ್ಟಬಹುದು. ಪರಮಾತ್ಮನ ಸೃಷ್ಟಿಯಲ್ಲಿ ಯಾವುದೂ ನಿರುಪಯೋಗಿಯಲ್ಲ, ನಿರರ್ಥಕವಲ್ಲ. ಅದು ನಮಗೆ ಸಾರ್ಥಕವಾಗಿ ಗೋಚರವಾಗಬೇಕಾದರೆ, ನಮಗಿರುವ ಆಲೋಚನಾ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ಹಾಗೆ ಈ ಸೃಷ್ಟಿಯನ್ನು ಸಾರ್ಥಕವಾಗಿ ಕಾಣಬೇಕಾಗಿದ್ದು ಮನುಷ್ಯನ ಕರ್ತವ್ಯ ಕೂಡ.
ತಮಸಾ ನದಿ ತೀರದಲ್ಲಿ ವಾಲ್ಮೀಕಿ ಮುನಿಗಳು ವಿಹರಿಸುತ್ತಿದ್ದ ವೇಳೆ ಆಕಾಶದಲ್ಲಿ ಕ್ರೌಂಚಪಕ್ಷಿ ಜೋಡಿಯೂ ವಿಹರಿಸುತ್ತಿತ್ತು. ನೋಡ ನೋಡುತ್ತಿದ್ದಂತೆಯೇ ಗಂಡು ಪಕ್ಷಿಯನ್ನು ವ್ಯಾಧನೋರ್ವ ನಿರ್ದಯವಾಗಿ ಕೊಂದು ಹಾಕಿದ. ನಂತರ ಒಂಟಿಯಾದ ಆ ಹೆಣ್ಣು ಪಕ್ಷಿ ರೋದಿಸುವುದನ್ನು ಕಂಡು ವಾಲ್ಮೀಕಿ ಮಹರ್ಷಿಗಳೂ ಮರುಗಿದರು. ಸ್ವತಃ ವ್ಯಾಧಕುಲದವರಾದರೂ, ಆ ವೃತ್ತಾಂತವನ್ನು ವಾಲ್ಮೀಕಿ ಮಹರ್ಷಿಗಳು ವ್ಯಾಧನ ದೃಷ್ಟಿಯಿಂದ ನೋಡದೆ, ಕರುಣಾಮಯಿಯ ದೃಷ್ಟಿಯಿಂದ ನೋಡಿದರು. ಆ ಸಮಯದಲ್ಲಿ ಅವರಲ್ಲಿ ಹುಟ್ಟಿದ ಆಲೋಚನೆಯೇ ಮುಂದೆ ರಾಮಾಯಣವೆಂಬ ಅದ್ಭುತ ಗ್ರಂಥ ಬರೆಯಲು ಅವರನ್ನು ಪ್ರೇರೇಪಿಸಿತು. ನಮ್ಮ ಸುತ್ತ ಇರುವ ಅನೇಕಾನೇಕ ಸಂಗತಿಗಳನ್ನು ಸಕಾರಾತ್ಮಕವಾದ ದೃಷ್ಟಿಯಿಂದ ನೋಡಿದಾಗ ನಮ್ಮಿಂದ ಅದ್ಭುತ ಲೋಕವೇ ಸೃಷ್ಟಿಯಾಗುತ್ತದೆಯೆಂದರೆ ಅತಿಶಯೋಕ್ತಿಯಲ್ಲ. ಕಸವನ್ನು ರಸವನ್ನಾಗಿ, ಬಯಲನ್ನು ಬೆಟ್ಟವಾಗಿ, ಬರಡನ್ನು ಫಲವತ್ತಾಗಿ ಪರಿವರ್ತಿಸಿದ ಉದಾಹರಣೆಗಳನ್ನು ಕಂಡಾಗ ನಮ್ಮ ದೃಷ್ಟಿಗೆ ಅದೆಂಥ ದಿವ್ಯ ಶಕ್ತಿಯಿದೆ ಎಂದು ಎನಿಸದೇ ಇರಲಾರದು.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)