ಮನೋಲ್ಲಾಸ: ಮಗನಿಗೆ ತಾಯಿ ಕಲಿಸಿದ ಅದ್ಭುತ ಪಾಠ...

Manollasa 13 Oct
Published on

| ಡಾ.ಗಣಪತಿ ಹೆಗಡೆ

ಬಾಲಕನೊಬ್ಬ ಮೈದಾನದಲ್ಲಿ ನಿಂತು ಅಮ್ಮನ ಸಹಾಯದೊಂದಿಗೆ ಗಾಳಿಪಟ ಹಾರಿಸುತ್ತಿದ್ದ. ನೋಡನೋಡುತ್ತಿದ್ದಂತೆಯೇ ಕೈಲಿದ್ದ ಬಣ್ಣ ಬಣ್ಣದ ಗಾಳಿಪಟ ಮುಗಿಲೆಡೆ ಹಾರತೊಡಗಿತು. ಬಾಲಕನಿಗೆ ಖುಶಿಯೋ ಖುಶಿ. ‘ಹೂಂ! ಇನ್ನೂ ಎತ್ತರ! ಇನ್ನೂ ಎತ್ತರ!’ ಎಂದು ಕೂಗುತ್ತ ಕುಣಿದಾಡುತ್ತಿದ್ದ. ಬಾನಂಗಳದಲ್ಲಿ ತನ್ನ ಪಟ ಇಷ್ಟೊಂದು ಎತ್ತರ ಹಾರುವುದನ್ನು ನೋಡಿದ ಬಾಲಕನ ಆನಂದಕ್ಕೆ ಪಾರವೇನಿರಲಿಲ್ಲ. ಸರಸರನೆ ಮೇಲೇರಿದ ಗಾಳಿಪಟ ಒಂದು ಹಂತದಲ್ಲಿ ಮೇಲೇರುವುದು ನಿಂತಿತು. ನೋಡಿದರೆ ಕೈಲಿದ್ದ ದಾರ ಮುಗಿದು ಹೋಗಿದೆ. ಮಗುವಿಗೆ ಬಹಳವೇ ಬೇಸರವಾಯಿತು. ‘ಛೇ, ಇನ್ನೂ ಎತ್ತರಕ್ಕೆ ಹಾರಬೇಕಾದ ಪಟಕ್ಕೆ ದಾರವೇ ತೊಡಕಾಯಿತಲ್ಲ! ಇನ್ನೂ ಉದ್ದವಾದ ದಾರವಿದ್ದಿದ್ದರೆ ಇನ್ನೂ ಮೇಲಕ್ಕೆ ಏರುತ್ತಿತ್ತಲ್ಲ’ ಎಂದು ಪೇಚಾಡಿದ.

ಪಕ್ಕದಲ್ಲೇ ನಿಂತಿದ್ದ ತಾಯಿ ಅವನ ಚಡಪಡಿಕೆಯನ್ನು ಗಮನಿಸಿದಳು. ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ತಿರಸ್ಕಾರ ಭಾವನೆಯಿಂದ ಆಗಾಗ ಮಾತನಾಡುತ್ತಿದ್ದ ಮಗನಿಗೆ ಪಾಠವೊಂದನ್ನು ಕಲಿಸಲು ನಿರ್ಧರಿಸಿದ ತಾಯಿ ಆ ಕ್ಷಣದಲ್ಲಿ ಗಾಳಿಪಟದ ದಾರವನ್ನು ಕತ್ತರಿಸಿಬಿಟ್ಟಳು. ಸೂತ್ರದ ಬಂಧನವನ್ನು ಕಳೆದುಕೊಂಡ ಪಟ ಇನ್ನೂ ಎತ್ತರಕ್ಕೇರಿತು, ಆದರೆ ಸೂತ್ರ ಹರಿದ ಗಾಳಿಪಟ ಆಗಸದಲ್ಲಿ ಎಷ್ಟು ಅಂತ ಹಾರಾಡೀತು? ಅದು ನಿಧಾನವಾಗಿ ಕೆಳಗಿಳಿಯುತ್ತ ಬಂದು ನೆಲಕಚ್ಚಿತು. ಇದನ್ನೂ ಓದಿ: ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನು ಕೊಲ್ಲಲು ಯೋಚಿಸಿದ್ದ ಗಲಭೆಕೋರರು!

ಇದನ್ನು ನೋಡಿದ ಬಾಲಕನಿಗೆ ಇನ್ನಿಲ್ಲದ ದುಃಖವಾಯಿತು. ತಾಯಿಯ ಕೈ ಹಿಡಿದು ಜೋರಾಗಿ ಅಳತೊಡಗಿದ. ಆಗ ತಾಯಿ- ‘ಮಗೂ, ಈ ಗಾಳಿಪಟ ನಮ್ಮ ಬದುಕು ಕಣೋ! ಇದನ್ನು ಬೇಕಾಬಿಟ್ಟಿ ಹಾರಾಡಲು ಬಿಡಬಾರದು. ಅದಕ್ಕೊಂದು ಸೂತ್ರವಿರಬೇಕು. ಅದು ಸಂಸ್ಕಾರದ ಸೂತ್ರವಿರಬಹುದು, ಕುಟುಂಬ ಬಂಧನದ ಸೂತ್ರ, ಬಾಂಧವ್ಯ, ಕರ್ತವ್ಯವೆಂಬ ಸೂತ್ರ, ಸಮಾಜ, ಸಂಸ್ಕೃತಿ ಈ ಯಾವುದೇ ಸೂತ್ರವಿರಬಹುದು. ಒಟ್ಟಿನಲ್ಲಿ ಒಂದು ಸೂತ್ರವಂತೂ ಇರಲೇಬೇಕು. ಈ ಸೂತ್ರಗಳು ಮೇಲ್ನೋಟಕ್ಕೆ ಬದುಕಿನ ಬಂಧನಗಳು ಎನ್ನಿಸಬಹುದು, ಆದರೆ ಸುಸೂತ್ರವಾದ ಜೀವನಕ್ಕೆ ಈ ಬಂಧನಗಳು ಅನಿವಾರ್ಯವೂ ಹೌದು. ಯಾಕೆಂದರೆ ಈ ಬಂಧನಗಳೇ ಬದುಕಿಗೊಂದು ಬದ್ಧತೆಯನ್ನೂ, ಸ್ಥಿರತೆಯನ್ನೂ ನೀಡುತ್ತವೆ. ನಿತ್ಯ ಬದುಕಿನ ಧಾವಂತದಲ್ಲಿ ಆಸೆ ಆಮಿಷಗಳಿಗೆ ಬಲಿಯಾಗಿ ಸೂತ್ರ ಹರಿದು ದಾರಿ ತಪ್ಪಿ ಕೊನೆಗೊಂದು ದಿನ ಪರಿತಪಿಸುವುದನ್ನು ಈ ಬಂಧನಗಳೇ ತಡೆಯುತ್ತವೆ.

ಬಯಕೆಗಳೆಂಬ ಗಾಳಿಯಲ್ಲಿ ಜೀವನವೆಂಬ ಪಟವು ಗರಿಗೆದರಿ ಹಾರಿ ಸಂತಸಪಡುವಾಗ ಕರ್ತವ್ಯಗಳೆಂಬ ಸೂತ್ರ ಸರಿಯಾಗಿ ಬಿಗಿದಿದ್ದರೆ ಆಗ ಅದು ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ‘ಬದುಕಿನ ಕಂಟಕವಾದ ಈ ಯಾವ ಸೂತ್ರವೂ ಬೇಡ, ನನಗೆ ಸ್ವಾತಂತ್ರ್ಯ ಬೇಕು’ ಎಂದವನ ಬದುಕು ಈ ಸೂತ್ರ ಹರಿದ ಗಾಳಿಪಟದಂತಾಗುತ್ತದೆ’ ಎಂದು ಅಮ್ಮ ಹೇಳಿ ಮುಗಿಸಿದಾಗ, ತನ್ನ ತಪ್ಪನ್ನು ತಿದ್ದಿಕೊಳ್ಳುವ ಸೂತ್ರವೊಂದು ಮಗುವಿನ ಮುಖದಲ್ಲಿ ಮಂದಹಾಸದ ರೂಪದಲ್ಲಿ ಕಂಡಿತು. ಹೀಗೆ ಸೂಕ್ತವಾದ ಸೂತ್ರವು ನಮ್ಮೆಲ್ಲರ ಜೀವನವನ್ನು ರೂಪಿಸಲಿ, ಸಾರ್ಥಕಗೊಳಿಸಲಿ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net