ಇಂದ್ರಿಯನಿಗ್ರಹದತ್ತ ಸಾಗಬೇಕಾದರೆ...: ಮನೋಲ್ಲಾಸ

Manollasa
Published on
| ಕೆ. ಸುಮಂಗಲಾ ಕೇಳತ್ತಾಯ ಸುಳ್ಯ

ಗುರುಕುಲದಲ್ಲಿ ಒಬ್ಬ ಗುರುವಿನ ಬಳಿ ಹಲವಾರು ಶಿಷ್ಯರು ವಿದ್ಯಾಭ್ಯಾಸ ಮಾಡುತ್ತಿದ್ದರು. ಅದೊಂದು ದಿನ ಗುರುಗಳು ಇಂದ್ರಿಯನಿಗ್ರಹದ ಬಗ್ಗೆ ಹೇಳುತ್ತ, ಪಂಚೇಂದ್ರಿಯಗಳು ಮತ್ತು ಅವುಗಳನ್ನು ಹತೋಟಿಯಲ್ಲಿ ಇರಿಸುವ ಕುರಿತು ವಿವರಿಸಿದರು. ಆದರೆ ಶಿಷ್ಯರಿಗೆ ಸರಿಯಾಗಿ ಅರ್ಥವಾಗಲಿಲ್ಲ. ಗುರುಗಳು ಮುಂದೆ ಹೆಚ್ಚೇನು ಮಾತನಾಡಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಗುರುಗಳು ಶಿಷ್ಯರೊಂದಿಗೆ ಸುತ್ತಾಡಲು ಹೊರಟರು. ಹೀಗೇ ಸಾಗುತ್ತ ದಾರಿಯಲ್ಲಿ ಅನೇಕ ದೃಶ್ಯಗಳನ್ನೂ, ಅನೇಕ ಬಗೆಯ ಜನರನ್ನೂ ನೋಡುತ್ತ ಹೋಗುತ್ತಿದ್ದರು. ಆಗ ಇವರ ಎದುರಿಗೆ ಹಲವು ಜನರ ಒಂದು ಗುಂಪು ಬಂದಿತು. ಅವರಲ್ಲಿ ಒಬ್ಬನ ಕೈಗಳನ್ನು ಸರಪಳಿಯಿಂದ ಬಂಧಿಸಲಾಗಿತ್ತು. ಆತ ದೊಡ್ಡ ಕಳ್ಳನಾಗಿದ್ದು, ವಿಚಾರಣೆಗೆಂದು ನ್ಯಾಯಾಲಯಕ್ಕೆ ಕೊಂಡೊಯ್ಯಲಾಗುತ್ತಿತ್ತು. ಕಳ್ಳನು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆತನ ಹಿಂದೆ ಮುಂದೆ ಹಲವರು ನಡೆದು ಬರುತ್ತಿದ್ದರು. ಗುರು-ಶಿಷ್ಯರು ಇದನ್ನೆಲ್ಲ ನೋಡುತ್ತ ಮುಂದೆ ಸಾಗಿದರು.

ಇನ್ನೂ ಮುಂದೆ ಹೋದಾಗ ಇವರೆದುರಿಗೆ ಇನ್ನೊಂದು ಗುಂಪು ಬಂತು. ಈ ಬಾರಿ ಮಧ್ಯದಲ್ಲಿ ಬರುತ್ತಿದ್ದವನು ಅಲ್ಲಿಯ ರಾಜನೇ ಆಗಿದ್ದ! ರಾಜ ಠೀವಿಯಿಂದ ನಡೆದು ಬರುತ್ತಿದ್ದರೆ ಉಳಿದವರು ಆತನ ಆಜ್ಞಾಪಾಲಕರಾಗಿ ಆತನನ್ನು ಹಿಂಬಾಲಿಸಿ ಬರುತ್ತಿದ್ದರು. ಗುರು-ಶಿಷ್ಯರು ಇದನ್ನೂ ಗಮನಿಸಿ, ಸಂಚಾರ ಮುಗಿಸಿ ಆಶ್ರಮಕ್ಕೆ ಹಿಂತಿರುಗಿದರು. ಬಳಿಕ ಗುರುಗಳು ಶಿಷ್ಯರೊಂದಿಗೆ, ‘ಇಂದು ದಾರಿಯಲ್ಲಿ ಏನೇನು ನೋಡಿದಿರಿ?’ ಎಂದು ಕೇಳಿದರು. ಶಿಷ್ಯರು ಮುಖ್ಯವಾಗಿ ಕಳ್ಳ ಮತ್ತು ರಾಜನನ್ನು ನೋಡಿದುದಾಗಿ ಹೇಳಿದರು. ಆಗ ಗುರುಗಳು ನಕ್ಕು ಹೇಳಿದರು, ‘ಅದೇನೋ ಸರಿ. ಆದರೆ, ಈ ಎರಡು ದೃಶ್ಯಗಳಲ್ಲಿ ಒಂದು ಮುಖ್ಯ ವ್ಯತ್ಯಾಸವನ್ನು ಗಮನಿಸಿದಿರಾ? ಕಳ್ಳನು ಸುತ್ತಲಿನವರ ನಿಯಂತ್ರಣದಲ್ಲಿದ್ದ. ಆದರೆ ರಾಜನ ಸುತ್ತಲಿದ್ದವರು ಅವನಿಗೆ ವಿಧೇಯರಾಗಿ ಅವನ ನಿಯಂತ್ರಣದಲ್ಲಿದ್ದರು. ಇಂದ್ರಿಯದಾಸ್ಯ ಮತ್ತು ಇಂದ್ರಿಯನಿಗ್ರಹಗಳಿಗಿರುವ ವ್ಯತ್ಯಾಸವೂ ಇದುವೇ’ ಎಂದು ಮನದಟ್ಟು ಮಾಡಿಸಿದರು. ನಿಜ, ಇಂದ್ರಿಯಗಳು ಬಹುಚಂಚಲ ಸ್ವಭಾವದವು. ಇವಕ್ಕೆ ಮನುಷ್ಯರು ಗೊತ್ತಿಲ್ಲದೆಯೇ ವಶರಾಗಿ ಬಿಡುತ್ತಾರೆ. ಮತ್ತು ಅದರಿಂದ ಆಚೆ ಬರಲಾಗದೆ, ಜೀವನವನ್ನು ಹೇಗೇಗೋ ಕಳೆದುಬಿಡುತ್ತಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಈ ರೀತಿ ಹೇಳಿದ್ದಾನೆ.

ಇಂದ್ರಿಯಾಣಾಂ ಹಿ ಚರತಾಂ

ಯನ್ಮನೋನು ವಿಧೀಯತೇ

ತದಸ್ಯ ಹರತಿ ಪ್ರಜ್ಞಾಂ ವಾಯು ರ್ನಾವಮಿವಾಂಭಸಿ.

‘ಯಾರ ಮನಸ್ಸು ಇಂದ್ರಿಯಗಳನ್ನು ಹಿಂಬಾಲಿಸುತ್ತದೆಯೋ ಅದು ಅವನ ಪ್ರಜ್ಞೆಯನ್ನು ಅಪಹರಿಸುತ್ತದೆ’. ಇದರರ್ಥ ಈ ಪಂಚೇಂದ್ರಿಯಗಳು ಹೇಳಿದಂತೆ ಕೇಳಿದರೆ ವ್ಯಕ್ತಿ ಬುದ್ಧಿಶೂನ್ಯನಾಗಿ ಮಾಡಬಾರದುದನ್ನೆಲ್ಲ ಮಾಡುತ್ತಾನೆ. ಆದ್ದರಿಂದ ಇಂದ್ರಿಯ ಚಾಪಲ್ಯಗಳಿಗೆ ಬಲಿ ಬೀಳದೆ ಬುದ್ಧಿವಂತಿಕೆ, ದೃಢತೆಯಿಂದ ಬಾಳಿದರೆ ಜನ್ಮ ಸಾರ್ಥಕ. ಅದಕ್ಕೆ ಹಿರಿಯರು ಅಧ್ಯಾತ್ಮದ ದೃಷ್ಟಿಯನ್ನು, ಭಕ್ತಿಯ ಪಥವನ್ನು ತೋರಿಸಿಕೊಟ್ಟಿದ್ದಾರೆ. ಶಾಶ್ವತ ಸತ್ಯ ಯಾವುದು ಎಂಬುದನ್ನು ಅರುಹಿದ್ದಾರೆ. ಆ ದಾರಿಯತ್ತ ಸಾಗುವ ಸಂಕಲ್ಪ ನಮ್ಮದಾಗಬೇಕು ಅಷ್ಟೇ.

(ಲೇಖಕರು ಬಿಎಸ್​ಎನ್​ಎಲ್ ನಿವೃತ್ತ ಅಧೀಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net