

ಅವನ ಹೆಸರು ಅಷ್ಟಾವಕ್ರ. ಕಹೋಳ ಋಷಿಯ ಮಗ. ಈತ ತಾಯಿಯ ಗರ್ಭದಲ್ಲಿರುವಾಗಲೇ ಒಮ್ಮೆ ತಂದೆ ಕಹೋಳರು ಸ್ವರವ್ಯತ್ಯಾಸ ಮಾಡಿ ವೇದವನ್ನು ಉಚ್ಚರಿಸಿದಾಗ ಅದನ್ನು ತಿಳಿಸಿ ತಪ್ಪು ತಿದ್ದಿದ ಮಹಾಧೀಮಂತ. ಸಕಲಶಾಸ್ತ್ರಗಳೂ ಇವನಿಗೆ ಕರತಲಾಮಲಕ. ತಂದೆ ಕಹೋಳರು ಒಮ್ಮೆ ಜನಕರಾಜನ ಯಜ್ಞದಲ್ಲಿ ವರುಣನ ಮಗ ಬಂದಿಯೊಡನೆ ವಾದ ಮಾಡಿ ಸೋತು ಜಲಾಧಿವಾಸಕ್ಕೆ ಗುರಿಯಾದರು. ತಾಯಿ ಮೂಲಕ ಈ ವಾರ್ತೆ ತಿಳಿದ ಅಷ್ಟಾವಕ್ರನು ಜನಕರಾಜನ ಆಸ್ಥಾನಕ್ಕೆ ಹೋಗಿ, ಬಂದಿಯೊಡನೆ ಅದ್ಭುತವಾದ ರೀತಿಯಲ್ಲಿ ವಾದ ಮಾಡಿ, ಬಂದಿಯನ್ನು ಸೋಲಿಸಿ, ತಂದೆಯನ್ನು ಜಲಬಂಧನದಿಂದ ಬಿಡಿಸಿಕೊಂಡು ಕರೆತಂದ. ಮಗನ ಈ ಕಾರ್ಯದಿಂದ ಸಂತುಷ್ಟರಾದ ತಂದೆ ಕಹೋಳರು ಮಗನ ಬಗ್ಗೆ ಹೆಮ್ಮೆಯಿಂದ ಎದೆತಟ್ಟಿಕೊಂಡು ಹೇಳುತ್ತಾರೆ-
ಇತ್ಯರ್ಥಮಿಚ್ಛಂತಿ ಸುತಾನ್ ಜನಾ ಜನಕ ಕರ್ಮಣಾ |
ಯದಹಂ ನಾಶಕಂ ಕರ್ತಂ ತತ್ಪುತ್ರಃ ಕೃತವಾನ್ ಮಮ ||
(ಮಹಾಭಾರತ ವನಪರ್ವ 131)
‘ತಂದೆ ಕಟ್ಟಿಕೊಂಡ ಕನಸು, ತಂದೆಗೆ ಮಾಡಲಿಕ್ಕಾಗದೇ ಇರುವ ಉತ್ತಮ ಕಾರ್ಯಗಳನ್ನು ಮಕ್ಕಳು ಪೂರೈಸುತ್ತಾರೆ. ಈ ಉದ್ದೇಶದಿಂದಲೇ ಬಹಳ ಜನ ಮಕ್ಕಳನ್ನು ಅಪೇಕ್ಷಿಸಬೇಕಂತೆ’. ಇದು ಶಾಸ್ತ್ರ ಹೇಳುವ ಅದ್ಭುತ ಕಿವಿಮಾತು. ‘ಬಂದಿಯಂಥ ಮಹಾಪಂಡಿತನನ್ನು ಸೋಲಿಸುವುದು ಅಸಾಧ್ಯ ವಾಯಿತು. ಅದಕ್ಕಾಗಿ ನನಗೆ ಬೇಸರವಿದೆ. ಆದರೆ ನನಗೆ ಆಗದ ಕೆಲಸವನ್ನು ಮಗ ಮಾಡಿ ತೋರಿಸಿದ. ಇದು ಅತೀವ ಸಂತಸದ ಸಂಗತಿ. ಇವನು ನನ್ನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎನ್ನುತ್ತಾರೆ ಕಹೋಳರು.
ಕಹೋಳರ ಈ ಹೆಮ್ಮೆಯ ಮಾತು ನಮ್ಮ-ನಿಮ್ಮೆಲ್ಲರ ಬಾಯಿಯಲ್ಲಿಯೂ ಬರಬೇಕಲ್ಲವೇ? ಇಂದು ಸಾಧನೆ ಮಾಡಲು ಅನೇಕ ಕ್ಷೇತ್ರಗಳಿವೆ. ಸಾಧನೆಯ ಉತ್ತುಂಗಶಿಖರ ಏರುವ ಕನಸನ್ನು ಕಟ್ಟಿಕೊಂಡಿದ್ದರೂ ಸಂಸಾರದ ಸಂಕಷ್ಟದಿಂದಲೋ, ವಯಸ್ಸಿನ ದೌರ್ಬಲ್ಯದಿಂದಲೋ ಕಂಡ ಕನಸನ್ನು ನನಸಾಗಿಸಿಕೊಳ್ಳದೇ ಕೊರಗುವ ವೃದ್ಧ ತಂದೆ-ತಾಯಿಗಳಿದ್ದಾರೆ. ತಂದೆ-ತಾಯಿಗಳ ಇಂಗಿತವನ್ನು ಅರಿತು, ಅವರ ಕನಸನ್ನು ನನಸು ಮಾಡುವ ಹೆಮ್ಮೆಯ ಮಕ್ಕಳು ನಾವಾಗಬೇಕಷ್ಟೇ! ನಮ್ಮ ಮಗ ಇಂತಹ ಸಾಧನೆ ಮಾಡಿದ, ಇಂತಹ ಉತ್ತಮ ಕೆಲಸ ಮಾಡಿದ ಎಂದು ವೃದ್ಧ ತಂದೆ-ತಾಯಿಗಳು ನಾಲ್ಕುಜನರ ಮುಂದೆ ಹೆಮ್ಮೆಯಿಂದ ಹೇಳಿಕೊಂಡರೆ, ಮಕ್ಕಳ ಏಳಿಗೆಗಾಗಿ ತಮ್ಮ ಇಡೀ ಜೀವನದುದ್ದಕ್ಕೂ ಪಟ್ಟ ಕಷ್ಟಕಾರ್ಪಣ್ಯಗಳೆಲ್ಲ ಕ್ಷಣದಲ್ಲಿ ಮಾಯವಾಗಿ ಆನಂದತುಂದಿಲರಾಗುವುದು ಅವಿಸ್ಮರಣೀಯ ಪ್ರಸಂಗ. ಹಾಗಾದಲ್ಲಿ ಮಕ್ಕಳ ಜೀವನದಲ್ಲಿ ಇದಕ್ಕಿಂತ ಸಾರ್ಥಕತೆ ಇನ್ನೇನಿದೆ? ತಂದೆ ಕಟ್ಟಿದ ವಿದ್ಯಾಸಂಸ್ಥೆಯನ್ನೋ, ಕಂಪನಿಯನ್ನೋ ಅಥವಾ ಇನ್ನಾವುದೋ ವ್ಯವಹಾರಗಳನ್ನೋ ಬಹಳ ದೊಡ್ಡದಾಗಿ ಬೆಳೆಸಿ, ತಂದೆಯ ಕೀರ್ತಿಯನ್ನು ಆಗಸದೆತ್ತರಕೆ ಎತ್ತರಿಸಿ, ತಂದೆ-ತಾಯಿಗಳ ಹೆಮ್ಮೆಯ ಮಕ್ಕಳಾಗಿ ಬೆಳೆದಿರುವ ಹಲವರು ಎಲ್ಲರಿಗೂ ಆದರ್ಶರಾಗಿದ್ದಾರೆ. ನಮ್ಮ ಏಳಿಗೆಗಾಗಿ ಹಗಲಿ ರುಳು ಶ್ರಮವಹಿಸಿ ದುಡಿದು ಎದೆಯೆತ್ತರಕ್ಕೆ ಬೆಳೆಸಿದ ತಂದೆ-ತಾಯಿಗಳು ಕತ್ತೆತ್ತಿ ‘ನಮ್ಮ ಮಗ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಕ್ಕಳಾಗಲು ಯತ್ನಿಸೋಣ.
(ಲೇಖಕರು ಸಂಸ್ಕೃತ ಸಂಶೋಧಕರು)