

ಮಹಿಲಾರೋಪ್ಯವೆಂಬ ನಗರದಲ್ಲಿ ಅಮರಶಕ್ತಿಯೆಂಬ ಶೂರನಾದ ರಾಜನಿದ್ದ, ಅವನ ಮೂರು ಗಂಡುಮಕ್ಕಳೂ ನ್ಯಾಯನೀತಿ ರಹಿತರಾಗಿ ಮಹಾಮೂರ್ಖರಾಗಿದ್ದರು. ಇದರಿಂದ ಚಿಂತಾಕ್ರಾಂತನಾದ ರಾಜನು ಮಂತ್ರಿಗಳೊಂದಿಗೆ ಸಮಾಲೋಚಿಸಿ ತನ್ನ ಮಕ್ಕಳು ನೀತಿವಂತರೂ ಬುದ್ಧಿವಂತರೂ ಆಗುವಂತಹ ಮಾರ್ಗವನ್ನು ಶೋಧಿಸಲು ಸೂಚಿಸಿದ. ಆಗ ವಿಷ್ಣುಶರ್ಮನೆಂಬ ವಿದ್ವಾಂಸನು ರಾಜನ ಮೂವರು ಮಕ್ಕಳನ್ನು ಆರು ತಿಂಗಳಲ್ಲಿ ವಿದ್ಯಾವಂತರನ್ನಾಗಿ ಮಾಡುವ ಭರವಸೆ ನೀಡಿ ರಾಜನ ಮಕ್ಕಳನ್ನು ಕರೆದೊಯ್ದು ಮಕ್ಕಳಿಗೆ ನೀತಿಯುಕ್ತವಾದ ಐದು ತಂತ್ರಗಳನ್ನೊಳಗೊಂಡ ಕಥೆಯನ್ನು ರಚಿಸಿ ಮನಮುಟ್ಟುವಂತೆ ಹೇಳಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದ. ಅದೇ ಇಂದಿಗೂ ಪಂಚತಂತ್ರವೆಂಬ ಹೆಸರಿನ ಬಹೂಪಯೋಗಿ ಗ್ರಂಥವಾಗಿದೆ.
ಮಕ್ಕಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಕಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತೀಯ ಪುರಾಣೇತಿಹಾಸಗಳಿಂದ ಆಯ್ದ ಕಥೆಗಳು ಲೌಕಿಕ ವ್ಯವಹಾರದ ಜ್ಞಾನವನ್ನು ಅಂದರೆ ಯಾರೊಂದಿಗೆ ಎಂತಹ ವ್ಯವಹಾರ ಇಟ್ಟುಕೊಳ್ಳಬೇಕು ಎಂಬ ಜ್ಞಾನ ನೀಡುವ ಜೊತೆಗೆ ಅನೇಕ ನೀತಿತತ್ತ್ವಗಳನ್ನು ಬೋಧಿಸಿ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಸತ್ಪ್ರಜೆಗಳನ್ನಾಗಿ ಮಾಡಲು ಸಹಕಾರಿಯಾಗಿವೆ.
ಸತ್ತ್ವ-ರಜಸ್ಸು-ತಮಸ್ಸುಗಳೆಂಬ ತ್ರಿಗುಣಗಳು ಇಡೀ ಬ್ರಹ್ಮಾಂಡ (ವಿಶ್ವ) ದಲ್ಲಿ ಹಾಗೂ ಪಿಂಡಾಂಡ (ಶರೀರ)ದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿವೆ. ಈ ತ್ರಿಗುಣಗಳ ಕ್ರಿಯೆಗಳಿಲ್ಲದೆ ಸೃಷ್ಟಿಚಕ್ರ ನಡೆಯು ವುದೇ ಇಲ್ಲ. ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳಲು ತ್ರಿಗುಣಗಳು ಅತ್ಯವಶ್ಯಕ. ಶಾಂತಿ, ಸಮಾಧಾನಗಳಿಗೆ ಸತ್ತ್ವಗುಣ ಅವಶ್ಯಕವಾದರೆ ಕಾರ್ಯಪ್ರವೃತ್ತಿಗೆ ರಜೋಗುಣ ಬೇಕು; ಆಲಸ್ಯ ಉಂಟುಮಾಡುವ ತಮೋಗುಣವನ್ನು ನಿದ್ರೆಗಾಗಿ ಅವಲಂಬಿಸಲೇಬೇಕು. ಸತ್ತ ್ವ ಆಧಿಕ್ಯವನ್ನು ಸಾಧಿಸಿ ಅದರ ಅಧೀನದಲ್ಲಿ ರಜಸ್ಸು ಮತ್ತು ತಮಸ್ಸುಗಳಿರುವಂತೆ ನೋಡಿಕೊಂಡಾಗ ಜೀವನ ಧರ್ಮಮಯವಾಗಿರುತ್ತದೆ. ಅಂತಹ ಸತ್ತ ್ವುಣದ ಆಧಿಕ್ಯವನ್ನು ಸಾಧಿಸಲು ಸದ್ವಿಚಾರಗಳ ಶ್ರವಣ ಅತ್ಯವಶ್ಯಕ, ಎಳೆಯ ಮನಸ್ಸಿನ ಮಕ್ಕಳಿಗೆ ರಾಮನಂತೆ ವರ್ತಿಸಬೇಕು ರಾವಣನಂತೆ ವರ್ತಿಸಬಾರದು ಎಂಬಿತ್ಯಾದಿ ಸದ್ವಿಚಾರಗಳನ್ನು ತತ್ತ ್ವ ಸಹಿತವಾಗಿ ಕೊಟ್ಟಾಗ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಸಂಸ್ಕಾರವಂತರನ್ನಾಗಿ ಮಾಡಬಹುದು. ತಾಯಿ ಜೀಜಾಬಾಯಿ ಹೇಳುತ್ತಿದ್ದ ಮಹಾಭಾರತದ ಕಥೆಯನ್ನು ಕೇಳಿ ಛತ್ರಪತಿ ಶಿವಾಜಿ ಮಹಾರಾಜರು ಬೆಳೆದುದರ ಪರಿಣಾಮ ಭಾರತಭೂಮಿ ಅಂತಹ ಒಬ್ಬ ಧರ್ವಿುಷ್ಠ ರಾಜನನ್ನು ಕಾಣಲು ಸಾಧ್ಯವಾಯಿತು. ಮಹರ್ಷಿಗಳು ವೇದದಲ್ಲಿರುವ ಧರ್ಮಸೂಕ್ಷ್ಮಗಳನ್ನು ಪುರಾಣೇತಿಹಾಸಗಳಲ್ಲಿ ಹಾಗೂ ಕಾವ್ಯಗಳಲ್ಲಿ ಕಥಾರೂಪದಲ್ಲಿ ಹೆಣೆದು ಲೋಕಕ್ಕೆ ನೀಡಿದ್ದಾರೆ. ಆ ಕಥೆಗಳೇ ಪುಟ್ಟ ಮಕ್ಕಳಿಗೆ ಅರ್ಥವಾಗುವಂತೆ ಪ್ರಾಣಿ-ಪಕ್ಷಿಗಳ ಕಥೆಗಳ ಮೂಲಕ ಪಂಚತಂತ್ರ ಇತ್ಯಾದಿಗಳಲ್ಲಿ ಚಿತ್ರಿಸಲ್ಪಟ್ಟಿವೆ. ‘ಮಹರ್ಷಿ ತನ್ನ ಮಟ್ಟದಲ್ಲೇ ತಾನು ಇದ್ದುಬಿಟ್ಟರೆ ಲೋಕಕ್ಕೆ ಅದಾವುದೂ ಅರ್ಥವಾಗೋಲ್ಲ. ಲೋಕವು ಆ ಮಟ್ಟಕ್ಕೆ ಏರಲಾಗುವುದಿಲ್ಲ. ಪುಟ್ಟ ಮಕ್ಕಳಿಗೆ ನಾವೇನಾದರೂ ಕೂಗಿಕೊಡುವ ಸನ್ನಿವೇಶ ಬಂದಾಗ ನಾವು ಆ ಮಕ್ಕಳ ಮಟ್ಟಕ್ಕೇ ಇಳಿದು ಮಾತನಾಡಿಸಿ ಕೊಡಬೇಕೇ ಹೊರತು ನಮ್ಮ ಮಟ್ಟದಲ್ಲೇ, ನಮ್ಮ ಪಿಚ್ಚಿನಲ್ಲೇ, ನಮ್ಮ ಭಾಷಾಗಾಂಭೀರ್ಯದಲ್ಲೇ ನಾವು ಮಾತನಾಡುವುದಾದರೆ ಮಕ್ಕಳು ನಮ್ಮ ಹತ್ತಿರದಲ್ಲೇ ಸುಳಿಯಲಾರವು’ ಎಂಬ ಶ್ರೀರಂಗಮಹಾಗುರುಗಳ ಮಾತಿನಂತೆ ಮಕ್ಕಳಿಗೆ ವೇದೋಪನಿಷತ್ತುಗಳಲ್ಲಿರುವ ಸದ್ವಿಚಾರಗಳನ್ನು ಕಥೆಗಳ ಮೂಲಕ ಕೊಡಲು ಪ್ರಯತ್ನಿಸೋಣ.
(ಲೇಖಕರು ಸಂಸ್ಕೃತಿ ಚಿಂತಕರು)