ಆಂತರ್ಯದ ಸೌಂದರ್ಯ ಗುರುತಿಸೋಣ: ಮನೋಲ್ಲಾಸ

Manollasa
Published on

| ಜಯಶ್ರೀ ಜೆ. ಅಬ್ಬಿಗೇರಿ

ಕಡು ಬೇಸಿಗೆಯ ದಿನದಲ್ಲಿ ರಾಜ ವಿಕ್ರಮಾದಿತ್ಯ ಮತ್ತು ಕಾಳಿದಾಸ ತುಂಬ ಬೆವತಿದ್ದರು. ಸೇವಕರು ಇಬ್ಬರಿಗೂ ಗಾಳಿ ಬೀಸುತ್ತಿದ್ದರು. ವಿಕ್ರಮಾದಿತ್ಯ ತಾನು ಸುಂದರ ಎಂದು ಬೀಗುತ್ತಿದ್ದ. ಕಾಳಿದಾಸನತ್ತ ನೋಡುತ್ತ- ‘ಮಹಾಕವಿಗಳೇ, ನೀವು ಮಹಾನ ವಿದ್ವಾಂಸರೂ, ಚತುರರೂ ಗುಣವಂತರೂ ನಿಜವೇ. ಆದರೆ, ದೇವರು ನಿಮಗೆ ಒಂದಿಷ್ಟು ಸೌಂದರ್ಯವನ್ನು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲವೇ?’ ಎಂದ. ‘ಮಹಾರಾಜರೇ, ಇದಕ್ಕೆ ನಾಳೆ ಉತ್ತರಿಸುವೆ’ ಎಂದು ಕಾಳಿದಾಸ ಅಲ್ಲಿಂದ ಹೊರಟು ಹೋದ. ಅಂದೇ ರಾತ್ರಿ ಅಕ್ಕಸಾಲಿಗನ ಬಳಿ ಹೋಗಿ ಬಂಗಾರದ ಹೂಜಿಯನ್ನು ಮಾಡಿಸಿದ. ಮಾರನೇ ದಿನ ದರ್ಬಾರು ಪ್ರಾರಂಭವಾಗುವ ಮೊದಲೇ ಮಣ್ಣಿನ ಹೂಜಿಯ ಜಾಗದಲ್ಲಿ ಆ ಬಂಗಾರದ ಹೂಜಿಯನ್ನಿಟ್ಟು ನೀರು ತುಂಬಿಸಿದ. ದರ್ಬಾರು ಆರಂಭವಾಯಿತು. ಅಂದು ಸಹ ಬಿಸಿಲಿನ ಧಗೆ ಬಹಳಷ್ಟಿತ್ತು. ವಿಕ್ರಮಾದಿತ್ಯ ಎಂದಿನಂತೆ ತಣ್ಣನೆಯ ನೀರಿಗಾಗಿ ಹೂಜಿಯತ್ತ ಕೈ ಚಾಚಿದ. ಆದರೆ ಹೂಜಿಯಲ್ಲಿನ ನೀರು ತಣ್ಣಗಿರಲಿಲ್ಲ. ಕುಪಿತಗೊಂಡ ರಾಜ ಹೂಜಿಯತ್ತ ಕಣ್ಣೆತ್ತಿ ನೋಡಿದ. ಅದು ಬಂಗಾರದ ಹೂಜಿಯೆಂದು ತಿಳಿಯಿತು. ‘ಬಂಗಾರದ ಹೂಜಿಯಲ್ಲಿ ನೀರು ಎಂದಾದರೂ ತಣ್ಣಗಿರುವುದೇನು? ಮಣ್ಣಿನ ಹೂಜಿ ಏನಾಯಿತು? ಯಾವ ಮೂರ್ಖ ಈ ಹೂಜಿ ಬದಲಾವಣೆ ಮಾಡಿದ್ದು?’ ಎಂದು ಸಿಟ್ಟಿನಿಂದ ಕೇಳಿದ.

ಕಾಳಿದಾಸ ಎದ್ದು ನಿಂತು- ‘ಮಹಾರಾಜರೇ, ಆ ಮೂರ್ಖ ನಾನೇ. ಎಷ್ಟಾದರೂ ನೀವು ಸೌಂದರ್ಯಪ್ರೇಮಿಗಳಲ್ಲವೇ? ನೀರು ತಣ್ಣಗೆ ಮಾಡುವ ಮಹಾಗುಣ ಮಣ್ಣಿನ ಹೂಜಿಗೆ ಇದ್ದರೂ ನೀವು ಗುಣಕ್ಕಿಂತ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿರಲ್ಲವೇ? ನಿಜವಾದ ಗುಣವನ್ನು, ಸೌಂದರ್ಯವನ್ನು ಮರೆತಿರಲ್ಲವೇ’ ಎಂದು ಪ್ರಶ್ನಿಸಿದ. ಕಾಳಿದಾಸನ ವ್ಯಂಗ್ಯದಿಂದ ರಾಜ ನಾಚಿಕೊಂಡ. ತನ್ನ ತಪ್ಪಿನ ಅರಿವಾಗಿ ಕವಿ ಕಾಳಿದಾಸನಲ್ಲಿ ಕ್ಷಮೆ ಕೋರಿದ. ನಾವು ಸಹ ರಾಜನಂತೆಯೇ ಅಂತರಂಗದ ಸೌಂದರ್ಯವನ್ನು ಗೌಣವಾಗಿಸಿ ಬಾಹ್ಯಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಅದರಿಂದ ಹಲವು ಅನರ್ಥಗಳನ್ನು ಅನುಭವಿಸುತ್ತಿದ್ದೇವೆ. ಮೊದಲೆಲ್ಲ ಬಣ್ಣಗಳು ಹೆಚ್ಚಾಗಿ ನಾಟಕ, ಸಿನಿಮಾಗಳಿಗೆ ಸೀಮಿತವಾಗಿದ್ದವು. ಆದರೆ ಈಗ ಹಾಗಿಲ್ಲ ಬಾಹ್ಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಣ್ಣಗಳನ್ನು ಉಪಯೋಗಿಸುವುದು ಸಾಮಾನ್ಯವಾಗಿದೆ. ಬಣ್ಣಗಳು ಬಣ್ಣಗಳಾಗಿ ಉಳಿಯದೇ ಮೇಕಪ್ ಆಗಿ ಮಾಗಿದೆ. ಬಾಹ್ಯ ಸೌಂದರ್ಯ ಹೆಚ್ಚಿಸಲೆಂದೇ ಹಲವು ಕಸರತ್ತು ಮಾಡಲಾಗುತ್ತದೆ.

ಬಣ್ಣದ ಆಧಾರದ ಮೇಲೆ ಸೌಂದರ್ಯ ಅಳೆಯುವುದು ರೂಢಿಯಾಗುತ್ತಿದ್ದು, ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ನೋಡುವ ನೋಟದಲ್ಲಿ ಸೌಂದರ್ಯವಿರುತ್ತದೆ. ಆದರೆ, ಬಹುತೇಕ ಜನರು ಬಾಹ್ಯ ಸೌಂದರ್ಯ, ಆರ್ಥಿಕ ಸಾಮರ್ಥ್ಯದಿಂದ ವ್ಯಕ್ತಿತ್ವವನ್ನು ಅಳೆಯುವುದು ವಿಪರ್ಯಾಸ. ನಡೆ, ನುಡಿ, ಕರುಣೆ, ಮಮತೆ ಮತ್ತು ಹೃದಯವಂತಿಕೆಯ ಗುಣಗಳೇ ಆಂತರ್ಯದ ಸೌಂದರ್ಯವನ್ನು ಹೆಚ್ಚಿಸುವಂಥವು. ಆದರೆ, ಈ ಗುಣಗಳನ್ನು ಪರಿಗಣಿಸದಿರುವುದು ದುರಂತ. ದೈಹಿಕ ಸೌಂದರ್ಯದ ಮೋಡಿಗೆ ಮರುಳಾಗಿ ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ ಎಂಬುದು ಸ್ವಷ್ಟವಾಗಿ ಎದ್ದು ಕಾಣುತ್ತಿದೆ. ಆದರೆ, ಸೌಂದರ್ಯ ಹೊರಗಿಲ್ಲ ಅಂತರಂಗದಲ್ಲಿದೆ. ಬಂಗಾರ ಹೊರ ಸೌಂದರ್ಯವಾದರೆ, ಮಣ್ಣು ಆಂತರಿಕ ಸೌಂದರ್ಯ ಹೊಂದಿದೆ. ಆಂತರಿಕ ಸೌಂದರ್ಯವನ್ನು ಗೌರವಿಸಲು ಕಲಿತರೆ ಬದುಕು ಬಂಗಾರವಾಗುತ್ತದೆ.

(ಲೇಖಕಿ ಇಂಗ್ಲಿಷ್ ಉಪನ್ಯಾಸಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net