

ಆತನೋರ್ವ ಕ್ರೀಡಾಪಟು. ತರಬೇತುದಾರನ ತರಬೇತಿ ಆತನ ಯಶಸ್ಸಿಗೆ ಸಹಕರಿಸಿತ್ತು. ಪಂದ್ಯವಾಡ ಬೇಕಾದರೆ ಪ್ರತಿಸಲವೂ ತರಬೇತುದಾರ ಆತನ ಜತೆಗೇ ಇದ್ದು ಹುರಿದುಂಬಿಸುತ್ತಿದ್ದ. ಹಾಗಾಗಿ ಗೆಲುವು ನಿರಾಯಾಸವಾಗಿರುತ್ತಿತ್ತು. ಆದರೆ, ಕ್ರಮೇಣ ಆ ಕ್ರೀಡಾಪಟುವಿಗೆ ತನ್ನ ಬಗ್ಗೆಯೇ ಗರ್ವ ಬರತೊಡಗಿ ತರಬೇತುದಾರ ಅನಿವಾರ್ಯವೆನಿಸಲಿಲ್ಲ. ಅದೊಂದು ದಿನ ಸಣ್ಣ ಮನಸ್ತಾಪವಾಗಿ ತರಬೇತುದಾರನನ್ನು ದೂರ ಮಾಡಿಯೇಬಿಟ್ಟ. ತಾನೊಬ್ಬ ಯಶಸ್ವಿ ಆಟಗಾರನೆಂಬ ಪೂರ್ಣ ವಿಶ್ವಾಸ ಆತನ ಮನದಲ್ಲಿ ಮನೆ ಮಾಡಿತ್ತು. ಅಂದು ಕ್ರೀಡಾಂಗಣಕ್ಕೆ ಇಳಿದ ಕ್ರೀಡಾಪಟುವಿಗೆ ಇನ್ನೇನು ಪಂದ್ಯ ಶುರುವಾಗಬೇಕೆನ್ನುವಾಗ ಹಿಂದಿನ ದಿನದ ಯಾವುದೋ ಘಟನೆ ನೆನಪಾಗಿ ಮನಸ್ಸು ಉದ್ವಿಗ್ನವಾಯಿತು. ಥಟ್ಟನೆ ತರಬೇತುದಾರನ ನೆನಪಾಯಿತು. ಆತನನ್ನು ನೋಡಿದರೆ ಮನಸ್ಸಿಗೆಷ್ಟೋ ಸಮಾಧಾನವಾಗುತ್ತದೆಯಲ್ಲ ಎಂದೆನಿಸಿ ದೃಷ್ಟಿ ಹಾಯಿಸಿದ. ಆದರೆ, ತರಬೇತುದಾರ ಬಂದಿರಲಿಲ್ಲ. ಹೇಗೋ ಸಾವರಿಸಿಕೊಂಡು ಆಡಿದನಾದರೂ ಅಂದು ಆತನಿಗೆ ಗೆಲುವಾಗಲಿಲ್ಲ. ತರಬೇತುದಾರನ ಅವಶ್ಯಕತೆ ಆ ಕ್ರೀಡಾಪಟುವಿಗೆ ಮನದಟ್ಟಾಯಿತು. ಗುರುವಿನಿಂದ ವಿದ್ಯೆ ಕಲಿತ ಮೇಲೆ ತಾವೀಗ ಸರ್ವಜ್ಞರೆಂದು ಭಾವಿಸಿ ಗುರುವಿನಿಂದ ವಿಮುಖರಾಗುವವರು ಅನೇಕರಿರುತ್ತಾರೆ. ವಾಸ್ತವಿಕವಾಗಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರತಿ ಹಂತದಲ್ಲಿಯೂ ಗುರುವಿನ ಕೃಪಾಕಟಾಕ್ಷವಿರಬೇಕೆಂಬುದನ್ನು ಅರಿಯುವುದಿಲ್ಲ.
ಈ ಭೂಮಿಯಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು. ಸಾಧಿಸಲು ನಿರ್ದಿಷ್ಟ ಗುರಿಯಿರಬೇಕು. ಗುರಿ ತಲುಪಲು ಸಾಧಿಸುವ ಛಲ, ಬುದ್ಧಿಯ ಬಲ ಇವೆರಡಿದ್ದರೆ ಸಾಕೆಂದುಕೊಳ್ಳುವುದು ಮೂರ್ಖತನ. ಯಾಕೆಂದರೆ ಬುದ್ಧಿ ಯಾವಾಗ ಬೇಕಾದರೂ ಕೆಡಬಹುದು. ಛಲವು ಒಮ್ಮಿಂದೊಮ್ಮೆಲೆ ಕುಸಿದುಬಿಡಬಹುದು. ನಮ್ಮ ಬುದ್ಧಿ ಮತ್ತು ಬದ್ಧತೆಗಳೆರಡೂ ಸರಿಯಾಗಿ ಕೆಲಸ ಮಾಡಲು ಗುರುವೆಂಬ ಮಾಂತ್ರಿಕನಿರಬೇಕು. ವಿಶ್ವಾಮಿತ್ರರನ್ನು ಹಿಂಬಾಲಿಸಿ ಕಾಡಿಗೆ ಬಂದ ಬಾಲಕ ರಾಮನಿಗೆ
ದುಷ್ಟರನ್ನು ಸದೆಬಡಿಯುವ ಸಲುವಾಗಿಯೇ ತನ್ನನ್ನು ಕರೆತಂದಿದ್ದಾರೆಂಬ ಕಾರಣ ತಿಳಿದಿತ್ತು. ಮಾರ್ಗ ಮಧ್ಯದಲ್ಲಿ ವಿಶ್ವಾಮಿತ್ರರಿಂದ ಕಲಿತ ವಿದ್ಯೆಯ ಬಲವೂ ಜತೆಗಿತ್ತು. ಆದರೂ ತಾಟಕೆಯನ್ನು ಕೊಲ್ಲಬೇಕಾದ ರಾಮನ ಮನಸಿನಲ್ಲಿ ಸ್ತ್ರೀಹತ್ಯಾದೋಷವು ಬರುವುದೇನೋ ಎಂಬ ಅಳುಕು ಆವರಿಸಿತು. ವಿಶ್ವಾಮಿತ್ರರು, ‘ತಾಟಕೆ ದುರ್ವರ್ಗದಲ್ಲಿ ನಡೆದು ಪ್ರಜಾಕಂಟಕಳಾಗಿದ್ದಾಳೆ. ರಾಜಪುತ್ರನಾದ ನಿನಗೆ ಪ್ರಜೆಗಳನ್ನು ರಕ್ಷಿಸುವುದೇ ದೊಡ್ಡ ಧರ್ಮ’ ಎಂದು ಮನವರಿಕೆ ಮಾಡುತ್ತ, ಈ ಹಿಂದೆಯೂ ಇಂದ್ರ, ವಿಷ್ಣು ಮೊದಲಾದ ದೇವತೆಗಳು ದುಷ್ಟ ಸ್ತ್ರೀಯರನ್ನು ಸಂಹರಿಸಿರುವ ಉದಾಹರಣೆ ನೀಡಿ ರಾಮನ ಅನುಮಾನ ಬಗೆಹರಿಸಿದರು.
ರಾಜಕುಲದಲ್ಲಿ ಹುಟ್ಟಿದರೂ ದುರ್ದೈವವಶಾತ್ ನಿರ್ಗತಿಕನಾಗಿದ್ದ ಚಂದ್ರಗುಪ್ತನ ಬುದ್ಧಿಮತ್ತೆ ಗುರುತಿಸಿದ ಗುರು ಚಾಣಕ್ಯ, ಅವನಿಗೆ ರಾಜನೀತಿ ಬೋಧಿಸಿ ಮೌರ್ಯ ಸಾಮ್ರಾಜ್ಯ ಸ್ಥಾಪಿಸಲು ಪ್ರೇರೇಪಿಸಿದರು. ಹಕ್ಕ-ಬುಕ್ಕ ಸಹೋದರರಿಗೆ ಗುರು ವಿದ್ಯಾರಣ್ಯರ ದಿವ್ಯ ಮಾರ್ಗದರ್ಶನ ಸಿಕ್ಕು ಅವರು ವಿಜಯನಗರ ಸಾಮ್ರಾಜ್ಯ ಕಟ್ಟಲು ಸಾಧ್ಯವಾಯಿತು. ಯಾವುದೇ ಬಗೆಯ ಬಲ ನಮ್ಮ ಬಳಿ ಇದ್ದರೂ ಗುರುಬಲವಿಲ್ಲದೆ ಕಾರ್ಯ ಸಾಧನೆಯಾಗಲಾರದು.
(ಲೇಖಕರು ಸಂಸ್ಕತ ಪ್ರಾಧ್ಯಾಪಕರು ಹಾಗೂ ರೇಡಿಯೋ ನಿರೂಪಕರು)