

ಒಬ್ಬ ಬಾಲಕಿಗೆ ಐಸ್ಕ್ರೀಮ್ ಎಂದರೆ ತುಂಬಾ ಇಷ್ಟವಾಗಿತ್ತು. ಒಂದು ವೇಳೆ ಊಟವಿಲ್ಲದಿದ್ದರೂ ನಡೆಯುತ್ತಿತ್ತು. ಆದರೆ, ದಿನಾಲೂ ಎರಡು ಮೂರು ಐಸ್ಕ್ರೀಮ್ ಬೇಕೇ ಬೇಕು. ಅವಳ ತಂದೆ- ತಾಯಿ ಸಹ ಅವಳ ಈ ಇಚ್ಛೆಯನ್ನು ಪೂರೈಸುತ್ತಿದ್ದರು. ಮುಂದೆ ದೊಡ್ಡವಳಾದ ಮೇಲೆ ಅವಳ ಮದುವೆಯ ಸಮಯದಲ್ಲಿ ತಂದೆ- ತಾಯಿಯರು ಆಕೆಯ ಗಂಡ, ಅತ್ತೆ- ಮಾವಂದಿರಿಗೆ ವಿನಂತಿಸಿಕೊಂಡು, ‘ನಮ್ಮ ಮಗಳಿಗೆ ಹಣ ಒಡವೆ ಇದ್ಯಾವುದೂ ಬೇಡ; ಪ್ರತಿದಿನ ಅವಳಿಗೆ ಐಸ್ಕ್ರೀಮ್ ಸಿಗುವ ಹಾಗೆ ಮಾಡಿ’ ಎಂದು ವಿನಂತಿಸಿಕೊಂಡರು. ಅವರು ಸಹ ಅದೇನು ದೊಡ್ಡ ವಿಷಯ ಅಲ್ಲ, ಬಿಡಿ ಕೊಡಿಸೋಣ ಎಂದರು. ಅವಳ ಐಸ್ಕ್ರೀಮ್ ಸೇವನೆ ಮುಂದುವರಿಯಿತು. ಕೆಲವು ತಿಂಗಳುಗಳ ನಂತರ ಅವಳು ಗರ್ಭಿಣಿಯಾದಾಗ ಸಂಬಂಧಿಕರಲ್ಲಿಯ ಒಬ್ಬ ವೃದ್ಧೆ, ‘ನೋಡಮ್ಮ ಇಷ್ಟು ದಿನ ನೀನು ಐಸ್ಕ್ರೀಮ್ ತಿನ್ನುತ್ತಿರುವುದೇನೋ ಸರಿ. ಈಗಲೂ ಮುಂದುವರಿಸಿದರೆ ನಿನ್ನ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಕೆಡಬಹುದು. ಅದಕ್ಕೆ ಕಾಯಂ ನೆಗಡಿ, ಕೆಮ್ಮು ಜ್ವರ ಬರಬಹುದು’ ಎಂದಳು. ಅದನ್ನು ಕೇಳಿ ಅವಳು ಐಸ್ಕ್ರೀಮ್ ತಿನ್ನುವುದನ್ನು ನಿಲ್ಲಿಸಿಬಿಟ್ಟಳು. ‘ನನಗೆ ಪ್ರಿಯವಾದ ಆ ವಸ್ತು ಸಿಗದಿದ್ದರೂ ಚಿಂತೆಯಿಲ್ಲ. ನನ್ನ ಮಗುವಿಗೆ ಅದು ಒಳ್ಳೆಯದಲ್ಲ ಎಂದರೆ ಬಿಟ್ಟು ಬಿಡುವುದೇ ಲೇಸು’ ಎಂಬ ತೀರ್ಮಾನ ಮಾಡಿ ತ್ಯಾಗಕ್ಕೆ ಸಿದ್ಧಳಾಗಿಬಿಟ್ಟಳು. ಕೇವಲ ಮಗುವಿನ ಮೇಲಿನ ಪ್ರೇಮದಿಂದ ಈ ವಿವೇಕ ಅವಳಿಗೆ ಬಂತು.
ಅದೇ ರೀತಿ ನಮ್ಮ ಹೃದಯದಲ್ಲಿರುವ ಭಗವಂತನ ಮೇಲೆ ಅನನ್ಯ ಪ್ರೀತಿ ತೋರಿ ಅವನು ಮೆಚ್ಚುವ ರೀತಿ ವ್ಯವಹರಿಸುವುದೇ ಭಕ್ತಿ. ಅದು ಕೇವಲ ಬಾಹ್ಯ ಆಚರಣೆಯಲ್ಲ. ಸಂಪೂರ್ಣ ಸಮರ್ಪಣೆ. ಒಂದು ವೇಳೆ ಆ ವೃದ್ಧೆಯ ಹಿತನುಡಿಗಳನ್ನು ಕಡೆಗಣಿಸಿ ಐಸ್ಕ್ರೀಮ್ ಸೇವನೆ ಮುಂದುವರಿಸಿದಳೆಂದುಕೊಳ್ಳೋಣ. ಮಗುವಿನ ಜನನ ಆದ ಮೇಲೆ ಅದರ ಅನಾರೋಗ್ಯವನ್ನು ಕಣ್ಣಾರೆ ಕಂಡು ಅವಳಿಗೆ ಜ್ಞಾನೋದಯ ಆಗುತ್ತದೆ. ಎರಡನೇ ಸಲ ಗರ್ಭಿಣಿಯಾದಾಗ ಸುತರಾಂ ಐಸ್ಕ್ರೀಮ್ ಮುಟ್ಟುವುದಿಲ್ಲ. ಯಾಕೆಂದರೆ ಕಣ್ಣೆದುರಿಗೇ ಅದರ ಪರಿಣಾಮ ಕಾಣುತ್ತಿರುತ್ತದೆ. ಇದಕ್ಕೆ ಜ್ಞಾನ ಎನ್ನುತ್ತಾರೆ. ಅವಳ ಪತಿ ಒಮ್ಮೆ ಅವಳು ದಿನಾಲೂ ತಿನ್ನುವ ಐಸ್ಕ್ರೀಮ್ ತಯಾರಾಗುವ ಕಾರಖಾನೆಗೆ ಕೊಂಡೊಯ್ದಾಗ ಅಲ್ಲಿ ಮಷಿನ್ನಿಂದ ಹಾಲು ಕರೆಯುವ ರೀತಿ, ಹಾಲು ಕೆಡದ ಹಾಗೆ ಹಾಕುವ ರಾಸಾಯನಿಕ ಪದಾರ್ಥ, ಬ್ಯಾಕ್ಟೀರಿಯಗಳ ವಿವರಣೆಗಳನ್ನೆಲ್ಲ ಕೇಳಿ ಅದರ ಬಗ್ಗೆ ತಾತ್ಸಾರ ಭಾವನೆ ಬರಲು ಆರಂಭವಾಗಿ ಐಸ್ಕ್ರೀಮ್ ತಿನ್ನುವುದನ್ನು ನಿಲ್ಲಿಸಿ ಬಿಡುತ್ತಾಳೆ. ಇದಕ್ಕೆ ವೈರಾಗ್ಯ ಎನ್ನುತ್ತಾರೆ. ಮನುಷ್ಯನ ಮನಸ್ಸಿನಲ್ಲಿಯ ದ್ವಂದ್ವಗಳನ್ನು ಕಳೆದು ಯೋಗ್ಯ ಮಾರ್ಗದಲ್ಲಿ ಸಾಗುವುದು ಹೇಗೆ? ‘ಭಕ್ತಿ ಜ್ಞಾನ ವಿರಾಗಾಪ್ತೊ ವಿವೇಕೋ ವರ್ಧತೇ ಮಹಾನ್.’ ಭಕ್ತಿ, ಜ್ಞಾನ, ವೈರಾಗ್ಯ ಎಂಬ ಮೂರು ದಾರಿಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಂಡು ವಿವೇಕವನ್ನು ಜಾಗೃತಗೊಳಿಸಿ ಸಾರ್ಥಕ ಜೀವನ ನಡೆಸಬಹುದೆಂಬ ಭಾಗವತದ ಸಲಹೆ ಎಷ್ಟೊಂದು ಉಪಯುಕ್ತವಾಗಿದೆಯಲ್ಲವೇ?
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)