ಬದುಕಿಗೆ ಬೇಕು ದಯಾಭಾವ: ಮನೋಲ್ಲಾಸ

Narayana Guru
Published on
| ಸುಮಾ ವೀಣಾ

‘ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿ, ಪಕ್ಷಿಗಳಲ್ಲಿಯೂ, ದಯವೇ ಧರ್ಮದ ಮೂಲವಯ್ಯಾ’ ಎಂಬ ವಚನದ ಸಾಲುಗಳ ಪರಿಚಯ ಎಲ್ಲರಿಗೂ ಇರುತ್ತದೆ. ದಯೆ ಎಲ್ಲರಲ್ಲೂ ಇರಬೇಕು ಆಗ ಮಾತ್ರ ಮನುಷ್ಯ, ಮನುಷ್ಯತ್ವ ಎಂಬ ಪದಗಳಿಗೆ ನೆಲೆ, ಬೆಲೆ.

ರಮಣ ಮಹರ್ಷಿಗಳು ಒಮ್ಮೆ ನದಿತೀರದಲ್ಲಿ ವಿಹಾರ ಮಾಡುತ್ತಿರುವಾಗ ಚೇಳೊಂದು ನೀರಿನಿಂದ ಹೊರಬರಲಾರದೆ ಒದ್ದಾಡುತ್ತಿತ್ತು. ಮಹರ್ಷಿ ರಮಣರಿಗೆ ಅದನ್ನು ಹೇಗಾದರೂ ಬದುಕಿಸಬೇಕೆಂಬ ಮನಸ್ಸಾಯಿತು. ದಯಾಭಾವದಿಂದ ಎಡಗೈಯಲ್ಲಿ ಅದನ್ನು ಎತ್ತಿಹಿಡಿದರು, ಆದರೆ ಚೇಳು ಹುಟ್ಟುಗುಣ ಬಿಡುತ್ತದೆಯೇ? ಕುಟುಕಿಯೇ ಬಿಟ್ಟಿತು. ತಕ್ಷಣಕ್ಕೆ ಉರಿಯಿಂದ ಮಹರ್ಷಿಗಳು ಕೈ ಕೊಡಹಿದ್ದರಿಂದ ಚೇಳು ಮತ್ತೆ ನೀರಿಗೆ ಬಿತ್ತು, ಹೊರಬಾರಲಾರದೆ ಹೊರಳಾಡುತ್ತಿತ್ತು. ಚೇಳಿನ ಸಂಕಟವನ್ನು ನೋಡಲಾರದೆ ಮಹರ್ಷಿಗಳು ಮತ್ತೊಮ್ಮೆ ಬಲಗೈಯಲ್ಲಿ ಹಿಡಿದುಕೊಂಡರು. ಆದರೆ ಚೇಳು ಕಚ್ಚೋದನ್ನು ಬಿಡಲಿಲ್ಲ. ಅದು ಎಷ್ಟೇ ಬಾರಿ ಕಚ್ಚಿದರೂ ಅದನ್ನು ಬದುಕಿಸಲೇಬೇಕೆಂಬ ಸಂಕಲ್ಪದಿಂದ ಗುರುಗಳು ಪ್ರೀತಿಯಿಂದ- ‘ನಿನ್ನ ಗುಣವೇ ಕಚ್ಚುವಂಥದ್ದು. ನೀನು ಏನೂ ಮಾಡಲಾಗದು. ನಾನು ಮನುಷ್ಯ ನನ್ನಲ್ಲಿ ಪ್ರೀತಿ ಇರಬೇಕು, ದಯಾಭಾವವಿರಬೇಕು’ ಎಂದು ನದಿತೀರಕ್ಕೆ ತಂದಿಳಿಸಿದರು. ಅದು ಬದುಕಿದೆ ಬಡಜೀವ ಎಂಬಂತೆ ಮೈಕೊಡವಿಕೊಂಡು ಹೋಗುತ್ತದೆ. ‘ಭೂಲೋಕದ ಯಾವುದೇ ಜೀವಿಯಾಗಲಿ ತನ್ನದೇ ಆದ ಬದುಕಿನ ಕ್ರಮ ಹೊಂದಿದೆ. ತನ್ನದೇ ಆದ ಬದುಕಿನ ರೀತಿಯನ್ನು ಯಾರಾದರೂ ತಪ್ಪಿಸಲು ಪ್ರಯತ್ನಪಟ್ಟರೆ ಸುಮ್ಮನೆ ಬಿಡಲು ಸಾಧ್ಯವೇ?’ ಎಂದಿದ್ದಾರೆ ಮಹರ್ಷಿ ರಮಣರು.

ಇಲ್ಲಿ ಉಲ್ಲೇಖಿಸಿರುವ ಸನ್ನಿವೇಶ ಜೀವದ ಅಸ್ತಿತ್ವ ಹೇಳುವಂಥದ್ದು. ಚೇಳು ತಾನು ಬದುಕಲು ತನ್ನತನ ಬಿಡದೆ ಕುಟುಕುತ್ತದೆ, ಹಾವು ಕಚ್ಚುತ್ತದೆ, ಕತ್ತೆ ಒದೆಯುತ್ತದೆ, ಆನೆ ಘೀಳಿಡುತ್ತದೆ, ಸಿಂಹ ಗರ್ಜಿಸುತ್ತದೆ. ಇವೆಲ್ಲ ಅವುಗಳ ರೀತಿ. ಆದರೆ, ಮನುಷ್ಯ ಯಾವುದೇ ಜೀವಿಯ ಬದುಕಿನ ರೀತಿಯನ್ನು ಅಲುಗಿಸಬಾರದು, ಅವರ ಬದುಕಿನ ಅಗತ್ಯಗಳಿಗೆ ನಾವು ಕೂಡ ಸ್ಪಂದಿಸಬೇಕು. ಮನುಷ್ಯ ಎಷ್ಟೋ ಸಂದರ್ಭದಲ್ಲಿ ತನ್ನಂತೆ ಇತರ ಜೀವಿಗಳು ಎಂಬುದನ್ನು ಮರೆಯುತ್ತಾನೆ. ತಾನೆ ಎಲ್ಲವೂ ಎಂಬ ಅಹಮಿಕೆಯಿಂದ ಮೆರೆಯುತ್ತಾನೆ. ನಾಯಿ ಎಂದರೆ ಮನೆಕಾಯಲಷ್ಟೆ ಎನ್ನುವ ಅವನು ಅದರ ನಿಯತ್ತನ್ನು ಮರೆಯುತ್ತಾನೆ, ಕತ್ತೆ ಎಂದರೆ ಭಾರಹೊರಲು ಎಂದು ಭಾವಿಸಿದವನು ಅದರ ತಾಳ್ಮೆಯನ್ನು ಮರೆಯುತ್ತಾನೆ, ಹಸುವನ್ನು ಹಾಲಿಗೆ, ಶ್ರಮಕ್ಕೆ ಬಳಸುವವನು ಅದರ ಸೇವೆಯನ್ನು ಕಡೆಗಣಿಸುತ್ತಾನೆ. ಇತರರಿಗೆ ತೊಂದರೆ ಕೊಡದ, ವ್ಯವಸ್ಥಿತವಾಗಿ ಗೂಡು ನಿರ್ವಿುಸಿಕೊಳ್ಳುವ ಮುಷ್ಟಿಗಾತ್ರದ ಪಕ್ಷಿಯ ಚಾಕಚಕ್ಯತೆ ಮುಷ್ಟಿಯಷ್ಟೆ ಮಿದುಳಿರುವ ಮನುಷ್ಯನಿಗಿಲ್ಲ. ‘ಕಾಗೆಯೊಂದಗುಳ ಕಂಡೆರೆ ಕೂಗಿಕರೆಯದೆ ತನ್ನ ಬಳಗವ’ ಎಂಬ ಮಾತು ಮನುಷ್ಯನಿಗೆ ತಟ್ಟುತ್ತಿಲ್ಲ. ಇದಕ್ಕಿಂತ ವಿಪರ್ಯಾಸವೆಂದರೆ, ತಿಳಿದು ಬದುಕಬೇಕಾದ ಮನುಷ್ಯ ತುಳಿದು ಬದುಕುವ ಮನಸ್ಥಿತಿಯವನಾಗಿದ್ದಾನೆ. ಇವನ್ನೆಲ್ಲ ಹಿಂದಿಕ್ಕಲು, ಬದುಕಿನಲ್ಲಿ ಸಾರ್ಥಕತೆ ಪಡೆಯಲು ಒಂದೇ ಸಿದ್ಧೌಷಧ ಎಂದರೆ ಮನುಷ್ಯ ದಯಾಭಾವವನ್ನು ರೂಢಿಸಿಕೊಳ್ಳುವುದು.

(ಲೇಖಕರು ಉಪನ್ಯಾಸಕರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net