ಬದುಕೆಂಬ ಚಾರಣ: ಮನೋಲ್ಲಾಸ

Manollasa
Published on
| ಭಾರತಿ ಎ. ಕೊಪ್ಪ

ಒಂದು ದಿನ ಗುರುಗಳು ಶಿಷ್ಯಂದಿರನ್ನು ಚಾರಣಕ್ಕೆ ಕರೆದುಕೊಂಡು ಹೋಗಲು ತೀರ್ವನಿಸಿದರು. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ಮೇಲೆ ಒಂದು ಪುಟ್ಟ ಗುಡಿ ಕೂಡ ಇತ್ತು. ಅಲ್ಲಿಗೆ ಚಾರಣ ಹೋಗುವುದೆಂದು ತೀರ್ವನವಾಯಿತು. ಮರುದಿನ ನಸುಕಿನಲ್ಲಿಯೇ ಚಾರಣಕ್ಕೆ ಹೊರಟರು. ಅರಣ್ಯದ ತಪ್ಪಲಿನ ಕಿರುದಾರಿಯಲ್ಲಿ ನಿಂತು ನೋಡುವಾಗ ಬೆಟ್ಟ ಏರುವುದು ಅಷ್ಟೇನು ಕಷ್ಟಕರ ಅನಿಸುತ್ತಿರಲಿಲ್ಲ. ಬೆಟ್ಟದ ಮೇಲಿನ ಗುಡಿ ಕೂಡ ಬಹಳ ಹತ್ತಿರ ಇದೆ ಎಂಬಂತೆ ಕಾಣುತ್ತಿತ್ತು. ಎಲ್ಲರೂ ಗುರುಗಳೊಂದಿಗೆ ಉತ್ಸಾಹದಿಂದ ಹೆಜ್ಜೆ ಹಾಕತೊಡಗಿದರು. ಒಂದಷ್ಟು ದೂರ ಸಾಗಿದ ಮೇಲೆ ಕೆಲವರ ಹೆಜ್ಜೆಗಳು ನಿಧಾನವಾಗತೊಡಗಿದವು. ಬಾಯಾರಿಕೆ, ಆಯಾಸ ಎಲ್ಲವೂ ಕಾಣತೊಡಗಿತು. ‘ಅಯ್ಯೋ! ಇನ್ನೆಷ್ಟು ದೂರ ಏರಬೇಕು? ಸನಿಹ ಇದೆ ಎಂಬಂತೆ ಭಾಸವಾಗುತ್ತಿದ್ದರೂ ಬೆಟ್ಟದ ತುದಿ ತಲುಪಲು ಇನ್ನೂ ಆಗಿಲ್ಲವಲ್ಲ’ ಎಂದು ಗುರುಗಳ ಬಳಿ ಪ್ರಶ್ನಿಸಿತ್ತಾ ಭಾರವಾದ ಹೆಜ್ಜೆಗಳನ್ನಿಟ್ಟು ಮುನ್ನಡೆಯುತ್ತಿದ್ದರು.

ಗುರುಗಳು ಶಾಂತಚಿತ್ತದಿಂದ ‘ಇನ್ನೇನು ತಲುಪುತ್ತೇವೆ. ಆಯಾಸ ಪರಿಹಾರಕ್ಕೆ ತುಸು ವಿಶ್ರಾಂತಿ ಪಡೆದು, ನೀರು ಕುಡಿದು ಸಾಗೋಣ. ಬೆಟ್ಟದ ತುದಿ ಏರಿದಾಗ ನಡಿಗೆಯ ಆಯಾಸ ಎಲ್ಲವೂ ಮರೆಯಾಗುತ್ತದೆ’ ಎಂದು ಹೇಳುತ್ತಾ, ಮರುಚೈತನ್ಯ ತುಂಬುತ್ತಿದ್ದರು. ಆಗ ಶಿಷ್ಯವೃಂದದ ಮನೋಬಲ ಹೆಚ್ಚುತ್ತಿತ್ತು. ಅಂತೂ ಇಂತೂ ಮಾತು, ವಿಶ್ರಾಂತಿ, ಮರುನಡಿಗೆ ಮೂಲಕ ಬೆಟ್ಟದ ತುದಿ ಏರಿಯೇ ಬಿಟ್ಟರು.

ಬೆಟ್ಟದ ಮೇಲಿನ ಗುಡಿಯ ದೇವರ ದರ್ಶನ ಪಡೆದು, ಬಂಡೆಯ ಮೇಲೆ ಕುಳಿತು ನಿಸರ್ಗದ ಚೆಲುವನ್ನು ಆಸ್ವಾದಿಸಿದರು. ಪ್ರಕೃತಿ ಸೌಂದರ್ಯದ ಸವಿಯಲ್ಲಿ ತೇಲುವಾಗ ಬೆಟ್ಟ ಏರುವಾಗ ಉಂಟಾದ ಆಯಾಸ ಮರೆತೇ ಹೋಯ್ತು. ಗುರುಗಳು ಶಿಷ್ಯಂದಿರ ಸಂತೋಷ ನೋಡಿ ಚಾರಣದ ಉದ್ದೇಶ ಸಾರ್ಥಕವಾಯಿತು ಎಂದುಕೊಂಡರು.

ನಮ್ಮ ಬದುಕಿನ ಪಯಣವೂ ಒಂದು ಚಾರಣ ಇದ್ದಂತೆ. ಬೆಟ್ಟದ ತುದಿ ಸಮೀಪ ಇದೆ ಎಂದು ಭಾಸವಾಗುವಂತೆ, ಯಶಸ್ಸು ಸಮೀಪದಲ್ಲಿದೆ ಎಂದು ಭಾಸವಾಗುತ್ತಿರುತ್ತದೆ. ಚಾರಣದ ಹಾದಿಯಲ್ಲಿ ಆಯಾಸಗೊಂಡು ಹೆಜ್ಜೆಗಳು ನಿಧಾನವಾದಂತೆ, ಬದುಕಿನ ಹಾದಿಯಲ್ಲಿ ಪಯಣಿಸುವಾಗ ನೋವು, ನಿರಾಸೆ, ಕಷ್ಟಕಾರ್ಪಣ್ಯಗಳೆಂಬ ಅನೇಕ ಅಡೆತಡೆಗಳುಂಟಾಗುತ್ತವೆ. ಆಗ ಜೀವನದ ಪಯಣದ ಓಟ ಮಂದಗತಿಯಲ್ಲಿ ಸಾಗುತ್ತದೆ. ಗುರುಗಳು ಚಾರಣದ ನಡುವೆ ಶಿಷ್ಯಂದಿರಿಗೆ ಉತ್ಸಾಹ ತುಂಬಿದಂತೆ, ನಮಗೂ ನಮ್ಮ ಆತ್ಮೀಯರು ಕಷ್ಟಕಾಲದಲ್ಲಿ ನೀಡುವ ಸಣ್ಣಪುಟ್ಟ ಸಹಾಯ, ಸಲಹೆಗಳು ಕೂಡ ಹೊಸ ಉತ್ಸಾಹ ತುಂಬಿ ನಮ್ಮ ಗುರಿಯತ್ತ ಚಲಿಸುವಲ್ಲಿ ಪ್ರೇರಣಾದಾಯಕವಾಗುತ್ತವೆ. ‘ಮನುಷ್ಯನಿಗೆ ಜೀವನದಲ್ಲಿ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ. ಏಕೆಂದರೆ ಯಶಸ್ಸನ್ನು ಸಂಭ್ರಮಿಸಲು ಅವು ಬೇಕಾಗುತ್ತವೆ’ ಎಂಬ ಎ.ಪಿ.ಜೆ.ಅಬ್ದುಲ್ ಕಲಾಂ ನುಡಿಯಂತೆ, ಯಶಸ್ವಿ ಬದುಕನ್ನು ನಮ್ಮದಾಗಿಸಿ ಕೊಳ್ಳುವ ಹಾದಿಯಲ್ಲಿ ಒಂದಿಷ್ಟು ಕಷ್ಟಗಳು, ಅಡೆತಡೆಗಳು ಬರುವುದು ಸಹಜ ಹಾಗೂ ಅವು ಅಗತ್ಯ ಕೂಡ. ಯಶಸ್ವಿ ಜೀವನಕ್ಕಾಗಿ ದೃಢ ಹೆಜ್ಜೆಗಳನ್ನಿಟ್ಟು ಸಾಗೋಣ.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net