ಮನವ ಶೋಧಿಸಬೇಕು ನಿತ್ಯ..

Manollasa
Published on
| ಕೆ. ಸುಮಂಗಲಾ ಕೇಳತ್ತಾಯ ಸುಳ್ಯ

ಮಹರ್ಷಿ ಯಾಜ್ಞವಲ್ಕ್ಯರ ಹೆಸರನ್ನು ಕೇಳದವರು ವಿರಳ. ಇವರು ರಚಿಸಿದ ಈಶೋಪನಿಷತ್ ಬಹು ಪ್ರಸಿದ್ಧ. ಇದನ್ನು ಯಾಜ್ಞವಲ್ಕೊ್ಯೕಪನಿಷತ್ ಎಂದೂ ಕರೆಯುತ್ತಾರೆ. ಇವರ ಬಾಲ್ಯದಲ್ಲಿ ನಡೆದ ಒಂದು ಘಟನೆ ಇದು. ಬಾಲ್ಯದಲ್ಲಿ ಮಕ್ಕಳು ತಾಯಿಯನ್ನು ಸದಾ ಅನುಸರಿಸಿ ಬರುವುದು ಸಹಜ ತಾನೇ? ಒಮ್ಮೆ ಇವರ ತಾಯಿ ಪಾತ್ರೆ ತೊಳೆಯುತ್ತಿದ್ದಳು. ಮಗು ನೋಡುತ್ತ ನಿಂತಿತ್ತು. ತಾಯಿ ಪಾತ್ರೆಗಳ ಒಳಗು ಹಾಗೂ ಹೊರಗನ್ನು ಚೆನ್ನಾಗಿ ತಿಕ್ಕಿ ತೊಳೆಯುವುದನ್ನು ಗಮನಿಸಿದ ಮಗು ತಾಯಿಯನ್ನು ಪ್ರಶ್ನಿಸಿತು- ‘ಅಮ್ಮಾ, ಪಾತ್ರೆಗಳ ಎರಡೂ ಬದಿಗಳನ್ನು ಯಾಕೆ ತೊಳೆಯುತ್ತಿರುವೆ?’ ಅದಕ್ಕೆ ಅಮ್ಮ ಸಹಜವಾಗಿ, ‘ಮಗೂ, ಹೊರಗೆ ತೊಳೆಯದಿದ್ದರೆ ಮಸಿ ಮತ್ತು ಒಳಗೆ ತೊಳೆಯದಿದ್ದರೆ ಮುಸುರೆ ಪಾತ್ರೆಯಲ್ಲಿ ಉಳಿದುಕೊಳ್ಳುತ್ತದೆ’ ಎಂದಳಂತೆ. ಇದರಲ್ಲಿ ನಮ್ಮಂಥ ಲೌಕಿಕರಿಗೆ ಯಾವ ವಿಶೇಷವೂ ಕಾಣುವುದಿಲ್ಲ. ಆದರೆ ಆ ಮಗು ಹುಟ್ಟು ಜ್ಞಾನಿಯಾಗಿತ್ತು. ಹೀಗಾಗಿ ಅದು ಮತ್ತೆ ಮತ್ತೆ ತಾಯಿಯ ಮಾತನ್ನು ಮೆಲುಕು ಹಾಕುತ್ತ ಯೋಚನಾಮಗ್ನನಾಯಿತು.

ಮಗುವಿನ ದೃಷ್ಟಿ ಅಧ್ಯಾತ್ಮದತ್ತ ಹೊರಳಿ ಪಾತ್ರೆಯ ಒಳಗನ್ನು ಅಂತರಂಗ ಹಾಗೂ ಹೊರಗನ್ನು ಬಹಿರಂಗ ಶುದ್ಧಿಗೆ ಹೋಲಿಸಿಕೊಂಡು, ಜ್ಞಾನವೃದ್ಧಿಯೆಡೆಗೆ ಗಮನ ನೀಡಿತು. ಜ್ಞಾನಿಗಳ ದೃಷ್ಟಿಯೇ ಹೀಗೆ. ನಮ್ಮಲ್ಲಿ ಬಹುತೇಕರು ಪ್ರಾಪಂಚಿಕ ದೃಷ್ಟಿಯಿಂದ ಎಲ್ಲವನ್ನೂ ನೋಡುತ್ತೇವೆ, ಹಾಗಾಗಿ ಒಳತಿರುಳನ್ನು ಅರಿಯುವಲ್ಲಿ ವಿಫಲಗೊಳ್ಳುತ್ತೇವೆ. ಜ್ಞಾನಿಗಳು ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲವನ್ನೂ ನೋಡುತ್ತಾರೆ, ಅವಲೋಕಿಸುತ್ತಾರೆ. ಆ ಬಳಿಕ ಇತರರಿಗೂ ಆ ಪಥವನ್ನು ದರ್ಶಿಸುತ್ತ ದಿಕ್ಸೂಚಿಯಾಗುತ್ತಾರೆ.

ಲೌಕಿಕ ಬದುಕಿನಲ್ಲಿ ಇರುವವರು ಬಹಿರಂಗ ಶುದ್ಧಿಗೆ ಪ್ರಾಧಾನ್ಯ ಕೊಡುತ್ತೇವೆಯೇ ಹೊರತು ಅಂತರಂಗದ ಶುದ್ಧಿಯತ್ತ ಗಮನ ಹರಿಸುವುದು ಕಡಿಮೆ. ‘ಮನವ ಶೋಧಿಸಬೇಕು ನಿತ್ಯ’. ‘ಮರ್ಮವ ತಿಳಿಯದೆ ಚರ್ಮವ ತೊಳೆದರೆ ಕರ್ಮವು ಹೋಹುದೆ ಸಂನ್ಯಾಸಿ’ ಎಂಬುದಾಗಿ ಹೇಳಿದ್ದಾರೆ ದಾಸರು, ದಾರ್ಶನಿಕರು. ಈ ಮೂಲಕ ನಮ್ಮ ಒಳಗಡೆ, ಅಂತರಂಗದೆಡೆಗೆ ಇಣುಕುವ ಅಗತ್ಯವನ್ನು ಪ್ರತಿಪಾದಿಸುತ್ತ ಮನಶ್ಶುದ್ಧಿ ಬಹಳ ಮುಖ್ಯ ಎಂದು ತಿಳಿಸಿಕೊಟ್ಟಿದ್ದಾರೆ. ಅದಿಲ್ಲದೆ ದಿನಾ ಬೆಳಗ್ಗೆ, ಸಂಜೆ ಸ್ನಾನ ಮಾಡಿ ಕಂಡ ದೇವಾಲಯಗಳನ್ನು ಸಂದರ್ಶಿಸಿ, ಭಜನೆ ಹಾಡಿ ಇದ್ದಬದ್ದ ಸೇವೆಗಳನ್ನು ಮಾಡಿಸಿ ಕೃತಾರ್ಥನಾದೆ ಎಂದು ಎಣಿಸುವುದು ಖಂಡಿತ ತಪು್ಪ. ದೇವರು ಒಲಿಯುವುದು ನಿರ್ಮಲ ಮನಸ್ಕರಿಗೆ ಮಾತ್ರ. ಶುದ್ಧ ಮನಸ್ಸಿಗೆ ಪರಮಾತ್ಮನ ದರ್ಶನ ಆಗಿಯೇ ಆಗುತ್ತದೆ. ಆದ್ದರಿಂದ ಅಂತರಂಗವನ್ನು ಆದಷ್ಟೂ ಶುದ್ಧವಾಗಿ ಇರಿಸಲು ಪ್ರಯತ್ನಿಸಬೇಕು. ‘ಆತ್ಮವತ್ ಸರ್ವ ಭೂತೇಷು’ ಎಂಬಂತೆ ಯಾರನ್ನೂ ನೋಯಿಸದೆ ಎಲ್ಲರೂ ನಮ್ಮಂತೆಯೇ ಎಂದು ಭಾವಿಸಿ ಬದುಕಲು ಕಲಿಯಬೇಕು. ಇದರಿಂದ ನೆಮ್ಮದಿ, ಸಂತೃಪ್ತಿಯ ಬದುಕು ನಮ್ಮದಾಗುತ್ತದೆ. ಅನ್ಯರ ಕಷ್ಟ, ನೋವುಗಳಿಗೆ ಸ್ಪಂದಿಸುವ ಗುಣವೂ ಬೆಳೆಯುತ್ತದೆ.

(ಲೇಖಕಿ ನಿವೃತ್ತ ಬಿಎಸ್​ಎನ್​ಎಲ್ ಅಧೀಕ್ಷಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net