

ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವನ್ನು ತನ್ನೂರಿಗೆ ಕರೆದುಕೊಂಡು ಹೋದ. ಗುರು ಆಗಮಿಸಿದ ಸಂತಸ ಅತೀವವಾಗಿತ್ತು. ತನ್ನ ಮನೆತನ, ಹಿರಿಯರ ಗತ್ತು ಗೈರತ್ತು, ತಲೆತಲಾಂತರಗಳಿಂದ ಬಂದ ಆಸ್ತಿ-ಪಾಸ್ತಿಗಳೆಲ್ಲವನ್ನೂ ಎಳೆಎಳೆಯಾಗಿ ಗುರುವರ್ಯರಿಗೆ ಪರಿಚಯಿಸುತ್ತ ಸಾಗಿದ. ಹೆಮ್ಮೆಯಿಂದ ತುಸು ಹೆಚ್ಚಾಗಿಯೇ ವಿವರಿಸುತ್ತ ಮುಂದುವರಿದ. ಗುರುಗಳು ಶಾಂತಚಿತ್ತದಿಂದ ಆಲಿಸುತ್ತ, ‘ಮಗು, ನಾನು ಇಷ್ಟೆಲ್ಲವನ್ನೂ ಓಡಾಡಿ ನೋಡಲಾರೆ. ನಿನ್ನ ಆಸ್ತಿ-ಪಾಸ್ತಿಯನ್ನು ನಿರ್ದಿಷ್ಟ ಅಳತೆಯ ಮಾನವನ್ನಿಟ್ಟುಕೊಂಡು ನಕ್ಷಾಚಿತ್ರದ ಮೂಲಕ ತೋರಿಸು. ವಿದ್ಯೆಯಲ್ಲಿ ಪ್ರವೀಣನಾಗಿರುವ ನಿನಗೆ ಪ್ರಪಂಚದ ನಕ್ಷೆಯನ್ನು ಬರೆಯಲು ಕಷ್ಟವಾಗಲಾರದು. ಹಾಗಾಗಿ ಇಡೀ ಭೂಮಂಡಲದ ನಕ್ಷೆಯಲ್ಲಿ ನಿನ್ನ ಆಸ್ತಿ-ಪಾಸ್ತಿ ಎಷ್ಟಿದೆ? ಎಲ್ಲಿದೆ? ಎಂಬುದನ್ನು ತೋರಿಸು. ನಾನಿಲ್ಲಿಯೇ ಕುಳಿತು ನೋಡುವೆ’ ಎಂದರು. ಶಿಷ್ಯನು ಗುರುವಿನ ಮಾತಿಗೊಪ್ಪಿದನು.
ನಕ್ಷೆಯಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ, ತನ್ನೂರನ್ನು ಬರೆದಂತೆ ಕೊನೆಯಲ್ಲಿ ತನ್ನ ಆಸ್ತಿ-ಪಾಸ್ತಿಗಳನ್ನು ತೋರಿಸಲು ಸೂಜಿಯ ಮೊನೆಯಷ್ಟು ಜಾಗಕ್ಕೂ ತಡಕಾಡುವಂತಾಯಿತು. ನಕ್ಷೆಯನ್ನು ಗುರುವಿನ ಮುಂದೆ ಇಡುವಾಗಲೇ ಶಿಷ್ಯನಿಗೆ ಕಸಿವಿಸಿ ಆರಂಭವಾಯಿತು. ಆಗ ಗುರು ಪ್ರಶಾಂತಚಿತ್ತದಿಂದ- ‘ನೋಡು ಬ್ರಹ್ಮಾಂಡದಲ್ಲಿ ನಾವಿರುವ ಈ ಜಾಗ ಸೂಜಿಯ ಮೊನೆಯಷ್ಟು. ನಿನ್ನ ಆಸ್ತಿ-ಪಾಸ್ತಿ ಅದರಲ್ಲೆಷ್ಟು? ಅರಿವಾಯಿತೇ?’ ಎಂದರು. ಶಿಷ್ಯನ ಮಾತು ತೊದಲಿತು. ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ.
ಆಗ ಗುರುಗಳು, ‘ನಿನ್ನ ಮತ್ತು ನಿನ್ನ ತಲೆತಲಾಂತರದ ಸಂಪತ್ತು, ಸಾಧನೆ ದಿಟವಾಗಿಯೂ ಪ್ರಶಂಸನೀಯ. ಆದರೆ ಅದನ್ನೇ ಅಹಂಕಾರ ಪಡುತ್ತ, ಬೀಗುತ್ತ ಜೀವನ ಸಾಗಿಸಿದರೆ, ಅದು ವಿನಾಶಕ್ಕೆ ನಾಂದಿಯಾಗುತ್ತದೆ. ನಮ್ರತೆಯನ್ನು ಕಾಪಾಡಿದರೆ ಪ್ರಗತಿಯ ಹರಿವು ನಿರಂತರವಾಗಿ ಚಲನಶೀಲತೆಯನ್ನು ಪಡೆದು, ಸುಲಲಿತವಾಗಿ ಸಾಗುತ್ತದೆ’ ಎಂದು ಮನಮುಟ್ಟುವಂತೆ ಹೇಳಿದರು. ಈ ಶಿಷ್ಯನಂತೆಯೇ ನಾವು ಕೂಡ. ನಮ್ಮ ವಿದ್ಯೆ, ಆಸ್ತಿ-ಅಂತಸ್ತುಗಳ ಬಗೆಗೆ ಒಂದಷ್ಟು ಅಹಂಕಾರಪಡುವ ಮನಸ್ಥಿತಿಯನ್ನು ಹೊಂದಿರುತ್ತೇವೆ. ಬದುಕು ಕ್ಷಣಿಕ ಎಂದು ಗೊತ್ತಿದ್ದರೂ ನಮ್ಮ ತಲೆತಲಾಂತರದ ಹಿರಿಮೆ-ಗರಿಮೆ, ಸಾಧನೆಗಳನ್ನು ಇತರರ ಮುಂದೆ ಅನಾವರಣ ಮಾಡುವುದರಲ್ಲಿ ಬೀಗುತ್ತ ಹೆಮ್ಮೆ ಪಡುವುದು ಸಹಜ. ಆದರೆ ಸಾಧನೆ ನಿಂತ ನೀರಾಗಲೂ ಬಾರದು, ಅಹಂಕಾರವಾಗಿ ಪರಿವರ್ತನೆಯಾಗಲೂ ಬಾರದು. ಸಿರಿತನ, ಸಾಧನೆಯ ಯಶದೊಂದಿಗೆ ಸಾಧಿಸಿದ್ದು ಕಡಿಮೆ, ಸಾಧಿಸಲು ಬಹಳಷ್ಟಿದೆ ಎಂಬ ನಮ್ರತೆ ನಮ್ಮನ್ನು ನಿರಂತರ ಸುಜ್ಞಾನದೆಡೆಗೆ, ಯಶಸ್ಸಿನ ದೀಪ್ತಿಯೆಡೆಗೆ ಕೊಂಡೊಯ್ಯುತ್ತದೆ.
ಪ್ರಗತಿ ಬಯಸುವವರು ತಮ್ಮ ಸದ್ಗುಣ, ಸತ್ಕಾರ್ಯಗಳ ಬಗ್ಗೆ ಹೆಮ್ಮೆ ಪಡಬಾರದು. ತಾನು ದೊಡ್ಡವನೆಂದನಿಸಿದಾಕ್ಷಣ ಮೇಲೆ ನೋಡಬೇಕು. ಚಿಕ್ಕವನೆಂದೆನಿಸಿದಾಕ್ಷಣ ಕೆಳಗೆ ನೋಡಬೇಕು ಎಂಬ ಬಲ್ಲವರ ಸೊಲ್ಲೊಂದರಂತೆ, ನಮ್ಮ ಇತಿಮಿತಿಯನ್ನು ಅರಿತು, ನಮ್ರತೆಯಿಂದ ಮುಂದೆ ಸಾಗಿದಲ್ಲಿ ಮಾತ್ರ ನಿರಂತರ ಪ್ರಗತಿ ಸಾಧ್ಯ. ಜಗತ್ತಿನಲ್ಲಿ ಬಹುಕಾಲ ನಿಲ್ಲುವುದು ಹಣವಲ್ಲ, ಅಧಿಕಾರ ವಲ್ಲ. ಬದಲಾಗಿ, ವಿಶ್ವಮಾನವತ್ವ ಮಾತ್ರ. ಹಾಗಾಗಿ, ನಾವು ಹಿರಿಮೆಯ ಅಹಂಕಾರ ಬದಿಗೊತ್ತಿ, ನಮ್ರತೆ ಮತ್ತು ಪರಸ್ಪರ ಅನುಭೂತಿಯಿಂದ ಬಾಳ ಪಯಣದ ಹಾದಿಯಲ್ಲಿ ಸಾಗಿ, ನಮ್ಮ ಹೆಜ್ಜೆ ಗುರುತುಗಳು ಅಳಿಯದೇ ಉಳಿಯುವಂತೆ ಬದುಕೋಣ.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)