

ಒಮ್ಮೆ ಬೃಹತ್ ಗಾತ್ರದ ಹಡಗಿನ ಎಂಜಿನ್ ಕೆಟ್ಟುಹೋಯಿತು. ಅನೇಕ ಮೆಕ್ಯಾನಿಕ್ಗಳು, ಎಂಜಿನಿಯರುಗಳು ಎಂಜಿನನ್ನು ಸರಿಪಡಿಸಲು ಶತಪ್ರಯತ್ನ ಮಾಡಿದರೂ ಸರಿಪಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಇದರಿಂದ ಅಪಾರ ನಷ್ಟದ ಭೀತಿಯಲ್ಲಿದ್ದ ಹಡಗಿನ ಮಾಲೀಕ, ಕೊನೆಯ ಪ್ರಯತ್ನವಾಗಲಿ ಎಂದುಕೊಂಡು, ಹೆಚ್ಚು ಅನುಭವ ಹೊಂದಿರುವ ಹಳೆಯ ಮೆಕ್ಯಾನಿಕ್ನ ಸಹಾಯ ಕೇಳಲು ನಿರ್ಧರಿಸಿದನು. ಆತ ಬಂದು, ಹಡಗಿನ ಭಾಗಗಳನ್ನು ನೋಡಿ, ಎಂಜಿನ್ನನ್ನು ಎಲ್ಲಾ ರೀತಿಯಿಂದಲೂ ಸೂಕ್ಷ್ಮವಾಗಿ ಪರೀಕ್ಷಿಸಿ ತನ್ನಲ್ಲಿದ್ದ ಸುತ್ತಿಗೆಯನ್ನು ತೆಗೆದುಕೊಂಡು ನಿಧಾನವಾಗಿ ಎರಡು ಬಾರಿ ಕುಟ್ಟಿದನು, ಒಮ್ಮೆಲೆ ಎಂಜಿನ್ ಚಾಲೂ ಆಯಿತು; ಕೆಲಸ ಶುರುಮಾಡಿತು.
ಇದರಿಂದ ಹಡಗಿನ ಮಾಲೀಕನಿಗೆ ಸಮಾಧಾನವಾಗಿ, ಎಂಜಿನ್ ಸರಿ ಮಾಡಿಕೊಟ್ಟದ್ದಕ್ಕಾಗಿ ಸಂಭಾವನೆ ಎಷ್ಟೆಂದು ಕೇಳಿದ. ಆ ಮೆಕ್ಯಾನಿಕ್ ತನ್ನ ಸಂಭಾವನೆ ಒಂದು ಲಕ್ಷ ರೂಪಾಯಿ ಎಂದು ತಿಳಿಸಿದನು. ಇದನ್ನು ಕೇಳಿ ಮಾಲೀಕನು ಕೋಪಗೊಂಡು, ‘ಏನು ತಮಾಷೆ ಮಾಡುತ್ತೀಯಾ? ನೀನು ಕೇವಲ ಎರಡು ಬಾರಿ ಎಂಜಿನ್ ಕುಟ್ಟಿದೆಯಷ್ಟೆ. ಅಷ್ಟಕ್ಕೆ ಹಗಲು ದರೋಡೆ ಮಾಡುತ್ತಿರುವೆಯಾ? ಇಷ್ಟು ಹಣ ನೀಡಲು ಖಂಡಿತ ಸಾಧ್ಯವಿಲ್ಲ’ ಎಂದು ಹೇಳಿ, ಇಷ್ಟು ಸಣ್ಣ ಕೆಲಸಕ್ಕೆ ಯಾಕೆ ಇಷ್ಟು ಹಣ ಕೇಳುತ್ತಿರುವೆ ಎಂದು ಪ್ರಶ್ನಿಸಿದ. ಮೆಕ್ಯಾನಿಕ್ ಶಾಂತಚಿತ್ತದಿಂದ ವಿವರಿಸಿದ: ‘ಸುತ್ತಿಗೆಯಿಂದ ಒಂದು ಸಲ ಕುಟ್ಟಿದ್ದಕ್ಕೆ ಒಂದು ಸಾವಿರ ರೂಪಾಯಿ. ಎಂಜಿನ್ನಿಗೆ ಎಲ್ಲಿ ಮತ್ತು ಎಷ್ಟು ತಾಡಿಸಬೇಕೆಂದು ಮತ್ತು ತಾಡಿಸುವಿಕೆಯ ತೀವ್ರತೆ ಎಷ್ಟಿರಬೇಕು ಎಂದು ಖಚಿತವಾಗಿ ನಿರ್ಧರಿಸಲು ತೊಂಬತ್ತೊಂಬತ್ತು ಸಾವಿರ ರೂಪಾಯಿ ಸಂಭಾವನೆ.’
‘ಇಷ್ಟು ವರ್ಷಗಳ ಕೆಲಸದ ಸಮಯದಲ್ಲಿ ಪಡೆದ ಅನುಭವ ಮತ್ತು ಜ್ಞಾನವು ಈ ಹಡಗಿನ ಎಂಜಿನ್ ಅನ್ನು ನಿಮಿಷಗಳಲ್ಲಿ ಸರಿಪಡಿಸಲು ನನಗೆ ಸಹಾಯ ಮಾಡಿತು. ನಾನು ಈ ಮೊತ್ತವನ್ನು ವರ್ಷಗಳ ಅನುಭವಕ್ಕೆ ಕೇಳುತ್ತಿದ್ದೇನೆ, ನಿಮಿಷಗಳ ಲೆಕ್ಕದಲ್ಲಿ ಅಲ್ಲ’ಎಂದು ಆತ ತನ್ನ ವಾದಕ್ಕೆ ಸಮರ್ಥನೆ ನೀಡಿದ. ವೈಯಕ್ತಿಕವಾಗಿರಲಿ ಅಥವಾ ಅನ್ಯರಿಂದ ಕಲಿತಿರಲಿ ಅನುಭವವು ನಮ್ಮ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸುತ್ತ ಹೋಗುತ್ತದೆ. ಮಹಾಭಾರತದ ಪ್ರಬುದ್ಧ ಮತ್ತು ಅನುಭವಸ್ಥೆಯಾದ ಗಾಂಧಾರಿಯು ತನ್ನ ಮಗ ದುರ್ಯೋಧನನಿಗೆ ಕುರುಕ್ಷೇತ್ರದ ಯುದ್ಧದ ಮುಂಚಿತವಾಗಿ ಯುದ್ಧವನ್ನು ತಪ್ಪಿಸಲು ಪಾಂಡವರೊಂದಿಗೆ ಶಾಂತಿ ಸ್ಥಾಪಿಸಲು ಮಾರ್ಗದರ್ಶನ ನೀಡುತ್ತಾಳೆ. ಯುದ್ಧದಿಂದ ಅನಗತ್ಯ ರಕ್ತಪಾತ, ಸಾವು, ನೋವು ಮತ್ತು ಕುರುಗಳ ಅಂತಿಮ ವಿನಾಶವನ್ನು ತಪ್ಪಿಸಲು ಪ್ರಯತ್ನಿಸುತ್ತಾಳೆ. ಆದರೆ ಕ್ರೋಧ, ಕೋಪ ಮತ್ತು ಅವಿವೇಕತನದಿಂದ ಕೂಡಿದ ದುರ್ಯೋಧನನು ಅನುಭವಿ ತಾಯಿಯ ಮಾತನ್ನು ಧಿಕ್ಕರಿಸಿ ಯುದ್ಧದಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ. ಅವನೊಂದಿಗೆ ಕೌರವರ ವಂಶವೂ ಅಂತ್ಯವಾಗುತ್ತದೆ. ಹೀಗೆ, ಅನುಭವ ಇರುವಲ್ಲಿ ಅಮೃತತ್ವವಿದೆ. ಅನುಭವಜನ್ಯರಾಗೋಣ ಜ್ಞಾನವನ್ನು ಬೆಳೆಸಿಕೊಳ್ಳೋಣ.
(ಲೇಖಕರು ಇಂಜಿನಿಯರ್, ಹವ್ಯಾಸಿ ಬರಹಗಾರರು)