ಆತ್ಮವಿಶ್ವಾಸ ಕುಸಿಯಲು ಬಿಡಬಾರದು..: ಮನೋಲ್ಲಾಸ

Manollasa
Published on
| ಡ್ಯಾನಿ ಪಿರೇರಾ ಹಳ್ಳಿಮೈಸೂರು

ವಿದ್ಯುತ್ ಬಲ್ಬ್ ಕಂಡು ಹಿಡಿದಿದ್ದ ಥಾಮಸ್ ಆಲ್ವ ಎಡಿಸನ್​ಗೆ ಆ ಸಾಧನೆ ಆತನ ಬದುಕಿನ ಅವಿಸ್ಮರಣೀಯ ಘಟನೆಯಾಗಿತ್ತು. ಬಲ್ಬ್ ಹೊತ್ತಿಸಬೇಕು, ಅದನ್ನು ಕಣ್ತುಂಬಿಕೊಳ್ಳಬೇಕು. ಎಡಿಸನ್ ಮತ್ತವನ ತಂಡಕ್ಕೆ ಅದೊಂದು ಭಾವುಕ ಕ್ಷಣ. ಬಲ್ಬಿನ ಹೋಲ್ಡರ್ ಮಹಡಿಯ ಮೇಲಿತ್ತು. ತಂಡದ ಹುಡುಗನಿಗೆ ಬಲ್ಬನ್ನು ಕೊಟ್ಟು ಅದನ್ನು ಹೋಲ್ಡರಿಗೆ ಸಿಕ್ಕಿಸಲು ಎಡಿಸನ್ ಸೂಚಿಸಿದ. ಆ ಮಹತ್ವಪೂರ್ಣ ಗಳಿಗೆ ಎಡಿಸನ್​ಗೆ ಹೇಗೋ ಅವನ ತಂಡದ ಆ ಹುಡುಗನಿಗೂ ಆಗಿತ್ತು. ಆ ಗಳಿಗೆಯಲ್ಲಿ ಆ ಹುಡುಗ ಅದೆಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದನೆಂದರೆ ಆತ ಮಹಡಿಯ ಮೆಟ್ಟಿಲು ಹತ್ತುವಾಗ ಕೈ ನಡುಗಿ ಅವನ ಕೈಯಿಂದ ಬಲ್ಬ್ ಜಾರಿ ಒಡೆದು ಹೋಯಿತು. ಇಡೀ ತಂಡಕ್ಕೆ ಹೇಳಲಾಗದಷ್ಟು ನಿರಾಶೆ, ಕೋಪ. ಬಲ್ಬ್ ತಯಾರಿಸಲು ಅವರು ಮತ್ತೆ ಇಪ್ಪತ್ನಾಲ್ಕು ಗಂಟೆ ವ್ಯಯಮಾಡಬೇಕಿತ್ತು. ಆದರೆ ಎಡಿಸನ್ ಶಾಂತಚಿತ್ತನಾಗಿದ್ದ. ಅನಿವಾರ್ಯವಾಗಿ ಅವರು ಹೊಸ ಬಲ್ಬ್ ತಯಾರಿಸಬೇಕಾಗಿತ್ತು. ಅವರು ಇಪ್ಪತ್ನಾಲ್ಕು ಗಂಟೆಯ ಪ್ರಯತ್ನದಲ್ಲಿ ಹೊಸ ಬಲ್ಬನ್ನು ತಯಾರಿಸಿದರು. ಎಡಿಸನ್ ಮತ್ತೆ ಅದನ್ನು ಆ ಹುಡುಗನ ಬಳಿಯೇ ಕೊಟ್ಟು ಹೋಲ್ಡರಿಗೆ ಸಿಕ್ಕಿಸಲು ಸೂಚಿಸಿದ. ಅಲ್ಲಿದ್ದ ತಂಡದ ಇತರರು ಎಡಿಸನ್ ಬಗ್ಗೆ ಕೋಪಿಸಿಕೊಂಡರು. ಅವರಲ್ಲೊಬ್ಬ ಹೇಳಿದ- ‘ಎಷ್ಟು ಮೂರ್ಖನಿದ್ದೀಯಾ ನೀನು, ಒಂದು ಬಲ್ಬ್ ಈಗಾಗಲೇ ಅವನು ಒಡೆದುಬಿಟ್ಟಿದ್ದಾನೆ. ಮತ್ತೆ ಒಡೆದರೆ ಅದು ತಯಾರಿಸಲು ಇಪ್ಪತ್ನಾಲ್ಕು ಗಂಟೆ ಬೇಕು. ಮತ್ತೆ ಪ್ರಯೋಗವನ್ನು ಮುಂದೂಡಬೇಕು. ಹೀಗಾದರೆ ಗತಿ ಏನು?’ ಎಡಿಸನ್ ಕೋಪಗೊಳ್ಳಲಿಲ್ಲ. ಶಾಂತಚಿತ್ತದಿಂದಲೇ ಹೇಳಿದ- ‘ಬಲ್ಬ್ ಒಡೆದರೆ ಮತ್ತೊಂದು ತಯಾರಿಸಬಹುದು. ನಾವೆಲ್ಲ ಒಂದಷ್ಟು ಪ್ರಯತ್ನ ಮಾಡಿದರೆ ಇಂಥ ಸಾವಿರ ಬಲ್ಬ್​ಗಳನ್ನು ತಯಾರಿಸಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ಕುಂದಿದರೆ ಅದನ್ನು ಪುನರ್ ಸ್ಥಾಪಿಸುವುದು ಹೇಗೆ?’ ಎಂದ. ಹುಡುಗರೆಲ್ಲ ಮೌನವಾದರು.

ಹೌದು, ಆತ್ಮವಿಶ್ವಾಸ ತುಂಬುವುದು ಎಲ್ಲಕ್ಕೂ ಮಿಗಿಲಾದ ದಿವ್ಯೌಷಧ! ಗಹನವಾದ ಸಾಧನೆ ಒಂದೇ ಪ್ರಯತ್ನದಲ್ಲಿ ಪೂರ್ಣಗೊಳ್ಳುವುದು ಕಷ್ಟ. ವಿಫಲಗೊಂಡ ಮೇಲೂ ಮತ್ತೆ ಸಾಧಿಸುವ ಪ್ರಯತ್ನ ನಡೆದರೆ ಯಶಸ್ಸು ನಿಶ್ಚಿತ. ಸೋತಾಗ ಅವಮಾನಿಸುವುದು, ನಿನ್ನಿಂದಾಗದೆಂದು ಹೀಯಾಳಿಸುವುದಲ್ಲ. ಒಂದು ಸೋಲು ಮುಂದಿನ ವಿಜಯದ ಮೆಟ್ಟಿಲಾಗುವುದು. ಸೋತ ಮೇಲೂ ಮತ್ತೆ ಸಾಧಿಸುತ್ತೇನೆಂಬ ವಿಶ್ವಾಸ ಮುಖ್ಯ. ಸೋತವನಿಗೆ ಆತ್ಮವಿಶ್ವಾಸ ತುಂಬುವುದು ಅದಕ್ಕಿಂತ ಮುಖ್ಯ. ಅದನ್ನೇ ಸ್ವಾಮಿ ವಿವೇಕಾನಂದರು ಹೇಳಿದ್ದು- ‘ಶ್ರದ್ಧೆ, ಸಹನೆ, ಸತತ ಪ್ರಯತ್ನ ಇವು ಮೂರು ಜಯ ಸಾಧಿಸಲು ಅಗತ್ಯವಾಗಿ ಬೇಕಾಗುವ ಸಾಧನಗಳು. ಇದರೊಂದಿಗೆ ಆತ್ಮವಿಶ್ವಾಸ ಇದ್ದರೆ ಮಾತ್ರ ವಿಜಯ ನಮಗೆ ಒಲಿಯುತ್ತದೆ’ ಎಂದು. ಅಂಥ ಆತ್ಮವಿಶ್ವಾಸವನ್ನು ಇತರರಲ್ಲಿ ತುಂಬುವ, ನಮ್ಮ ವ್ಯಕ್ತಿತ್ವದಲ್ಲೂ ಅಳವಡಿಸಿಕೊಳ್ಳುವ ಪ್ರಯತ್ನವಾಗಲಿ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net