

| ಚಿದಂಬರ ಮುನವಳ್ಳಿ
ಕೈಲಾಸ ಪರ್ವತದಲ್ಲಿ ಶಿವನು ಧ್ಯಾನ ಸ್ವರೂಪದಲ್ಲಿ ಕಣ್ಣು ಮುಚ್ಚಿಕೊಂಡು ಪಾರ್ವತಿಗೆ ಕಥೆ ಹೇಳುತ್ತಿದ್ದ. ಪಾರ್ವತಿ ಮಾತ್ರ ಕಣ್ಣು ತೆರೆದು ಸುತ್ತಮುತ್ತ ದೃಷ್ಟಿ ಹಾಯಿಸುತ್ತ ಕಥೆ ಕೇಳುತ್ತಿದ್ದಳು. ಆ ಸಮಯದಲ್ಲಿ ಸನಕ, ಸನಾತನ, ಸನಂದನ ಮತ್ತು ಸನತ್ ಕುಮಾರರೆಂಬ ನಾಲ್ಕು ಋಷಿಗಳು ಅಲ್ಲಿಗೆ ಬಂದು ಶಿವನಿಗೆ ಮನಸ್ಸಿನಲ್ಲಿಯೇ ವಂದಿಸಿ ಹಾಗೆಯೇ ಮುಂದೆ ಹೋದರು. ಪಾರ್ವತಿಗೆ ಅವರ ಮೇಲೆ ಸಿಟ್ಟು ಬಂತು. ‘ಒಂದು ಕ್ಷಣ ನಿಂತು ಜಗತ್ಪತಿಯಾದ ಪರಮೇಶ್ವರನಿಗೆ ಶಿರಬಾಗಿ ನಮಿಸದೇ ಸೊಕ್ಕಿನಿಂದ ಮುಖ ಮೇಲೆ ಮಾಡಿಕೊಂಡು ಹೋದ ಸನಕಾದಿಗಳೇ ನಿಮಗೆ ಸದಾ ಮೇಲ್ಮುಖವಾಗಿರುವಂಥ ಒಂಟೆಯ ಜನ್ಮವು ಬರಲಿ’ ಎಂದು ಅಲ್ಲಿಂದಲೇ ಶಾಪವಿತ್ತಳು. ಕೂಡಲೇ ನಾಲ್ಕೂ ಜನರು ಒಂಟೆಗಳಾಗಿ ಜೀವಿಸತೊಡಗಿದರು.
ಕಥೆ ಮುಗಿದ ಮೇಲೆ ಪಾರ್ವತಿಯು ನಡೆದ ಘಟನೆಯನ್ನು ಶಿವನಿಗೆ ಹೇಳಿ, ಋಷಿಗಳಾದರೂ ಇಂಥ ಗರ್ವಿಷ್ಟರನ್ನು ಈ ಹಿಂದೆ ನೋಡಿಲ್ಲ. ಅದಕ್ಕೇ ಅವರಿಗೆ ಶಾಪ ಕೊಟ್ಟಿರುವುದಾಗಿ ತಿಳಿಸಿದಳು. ಶಿವ ನಸುನಕ್ಕು ಹೇಳಿದ. ‘ಆ ಮಹಾನ್ ಯೋಗಿಗಳಿಗೆ ನಿನ್ನ ಶಾಪದಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಎಂಥ ಪರಿಸ್ಥಿತಿ ಬಂದರೂ ಅವರು ಪ್ರಸನ್ನರಾಗಿಯೇ ಇರುತ್ತಾರೆ’. ಪಾರ್ವತಿ ಅದಕ್ಕೊಪ್ಪದೆ, ‘ಅದು ಹೇಗೆ ಸಂತುಷ್ಟರಾಗಿರಲು ಸಾಧ್ಯ? ಪೂಜ್ಯರೆನಿಸಿಕೊಳ್ಳುವ ಆ ಮಹಾತ್ಮ ಜೀವನವೆಲ್ಲಿ? ಈ ಒಂಟೆಯ ಜೀವನವೆಲ್ಲಿ?’ ಎಂದಳು. ‘ಹಾಗಾದರೆ ಅವರನ್ನೇ ಕೇಳೋಣ’ ನಡೆ ಶಿವ ಹೇಳಿದ. ಒಂಟೆಗಳು ಇರುವಲ್ಲಿ ಬಂದು ಶಿವ ಕೇಳಿದ- ‘ನೀವು ಸನಕಾದಿಕ ರೂಪದಲ್ಲಿ ಹೆಚ್ಚು ಆನಂದವಾಗಿದ್ದಿರೋ ಅಥವಾ ಈ ಒಂಟೆಯ ಅವಸ್ಥೆಯಲ್ಲಿಯೋ?’ ನಾಲ್ವರೂ ಒಂದೇ ಸ್ವರದಲ್ಲಿ ಹೇಳಿದರು. ‘ಪ್ರಭೂ ನಾವು ಈಗ ಆನಂದಮಯರಾಗಿದ್ದೇವೆ. ಯೋಗಿಯಾಗಿ ಇರುವುದು ಬಲು ಕಠಿಣ. ನಿತ್ಯ ಸಂಧ್ಯಾವಂದನೆ, ದೇವರ ಪೂಜೆ ಮಾಡಬೇಕು. ಭಿಕ್ಷೆಗೆ ಹೋದಾಗ ಬಯ್ದರೂ ಸುಮ್ಮನಿರಬೇಕು. ಈಗ ಅದ್ಯಾವದೂ ಇಲ್ಲ. ಯಾವುದೋ ಗಿಡದಲ್ಲಿ ಮುಖ ತೂರಿಸಿದರೆ ಸಾಕು ಹೊಟ್ಟೆ ತುಂಬುತ್ತದೆ’.
ಶಿವ ನಕ್ಕು ನುಡಿದ, ‘ಈಗಲಾದರೂ ಶಾಪವನ್ನು ಹಿಂದೆ ಪಡೆ’. ಪಾರ್ವತಿ ಮತ್ತೆ ಅವರನ್ನು ಯೋಗಿಗಳನ್ನಾಗಿ ಮಾಡಿ ಕೇಳಿದಳು- ‘ಈಗ ಹೇಗೆ ಅನಿಸುತ್ತದೆ?’ ‘ಜಗನ್ಮಾತೆಯೇ ಎಂಥ ಭಾಗ್ಯ ನಮ್ಮದು? ದುರ್ಲಭವಾದ ಮನುಷ್ಯ ಜನ್ಮ ಸಿಕ್ಕಿದೆ. ಸತ್ಕರ್ಮ, ಭಕ್ತಿ, ಜ್ಞಾನ, ವೈರಾಗ್ಯದಿಂದ ನಿಮ್ಮ ಕೃಪೆಗೆ ಪಾತ್ರರಾಗಬಹುದು. ಈ ರೂಪದಲ್ಲಿಯೇ ಅತ್ಯಂತ ಆನಂದದಿಂದಿದ್ದೇವೆ’.
ಹಣ, ಅಂತಸ್ತು, ಐಷಾರಾಮಿ ಜೀವನ, ಜನರಿಂದ ಮರ್ಯಾದೆ, ಕಿರಿಯರಿಂದ ಸೇವೆ ಹೀಗೆ ನಮಗೆ ಬೇಕಾದ್ದು ದೊರೆತಾಗ ಸಂತೋಷ ಹೊಂದುವ ನಾವು ಅವು ಸಿಗದಿದ್ದಾಗ ವಿಚಲಿತರಾಗಿ ಬಿಡುತ್ತೇವೆ. ‘ಎಲ್ಲ ಪರಿಸ್ಥಿತಿಯಲ್ಲಿಯೂ ಸಂತುಷ್ಟನೋ ಅಂಥ ಯೋಗಿಯು ನನಗೆ ಅತ್ಯಂತ ಪ್ರಿಯನು’ ಎಂದಿದ್ದಾನೆ ಭಗವಂತ. ಸದಾ ಸಂತುಷ್ಟನಾಗಿ ಇರುವುದೇ ವೈಭವದ ಜೀವನ ಅಲ್ಲವೇ?
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)