ಶ್ರೇಷ್ಠತೆಯ ವ್ಯಸನವೇತಕೆ?: ಮನೋಲ್ಲಾಸ

Manollasa
Published on
| ಡಾ. ಗಣಪತಿ ಆರ್. ಭಟ್

ಆತ ಉದ್ಯಮಿ. ತನ್ನದೇ ಪರಿಶ್ರಮದಿಂದ ಆರಂಭಿಸಿದ ಉದ್ಯಮ ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಸಹಜವಾಗಿಯೇ ಅಭಿಮಾನದಿಂದ ಬೀಗಿದ್ದ. ತಾನು ತಯಾರಿಸುತ್ತಿದ್ದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿದಾಗ ತನ್ನನ್ನು ಮೀರಿಸುವವರು ಯಾರೆಂಬಂತೆ ಮೆರೆದಿದ್ದ. ಆದರೆ ಕಾಲ ಒಂದೇ ಸಮನಾಗಿ ಇರುವುದಿಲ್ಲವಲ್ಲ. ಆತನ ಉತ್ಪನ್ನಗಳಿಗೆ ಪ್ರತಿಸ್ಪರ್ಧೆ ಒಡ್ಡುವಂಥ ಉತ್ಪನ್ನವೊಂದು ಹಠಾತ್ತನೆ ಮಾರುಕಟ್ಟೆಗೆ ಲಗ್ಗೆಯಿಟ್ಟು ಅವನ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಸ್ವಾಭಿಮಾನದ ಕೋಟೆ ಒಮ್ಮೆಲೆ ಕುಸಿಯಿತು. ಅವಮಾನವಾದಂತಾಯಿತು. ಖಿನ್ನನಾಗಿ ಆತ ಸಮುದ್ರದ ದಂಡೆಯ ಮೇಲೆ ಬಂದು ಕುಳಿತ. ಜೋರಾಗಿ ದಂಡೆಗೆ ಅಪ್ಪಳಿಸುತ್ತಿದ್ದ ಅಲೆಗಳು ಸ್ಪರ್ಧೆಗೆ ಇಳಿದಂತೆ ಒಂದರ ಹಿಂದೆ ಇನ್ನೊಂದರಂತೆ ಮುನ್ನುಗ್ಗಿ ಬರುತ್ತಿದ್ದವು. ಪ್ರತಿ ಅಲೆಯೂ ತಾನೇ ಶಕ್ತಿಶಾಲಿಯೆಂದು ಮುನ್ನುಗ್ಗುತ್ತಿತ್ತಾದರೂ ಅದರ ಹಿಂದೆಯೇ ಅದಕ್ಕಿಂತಲೂ ದೊಡ್ಡದಾದ ಇನ್ನೊಂದು ಅಲೆ ಬಂದು ಆ ಅಲೆಯನ್ನು ತಣ್ಣಗಾಗಿಸುತ್ತಿತ್ತು. ನೋಡನೋಡುತ್ತಿದ್ದಂತೆಯೇ ಉದ್ಯಮಿಯ ಮನಸಿನಲ್ಲಿ ಹೊಸದೊಂದು ಆಲೋಚನೆ ಮೂಡಿತು. ಸ್ಪರ್ಧಾತ್ಮಕವಾದ ಜೀವನವೂ ಇದೇ ಥರ ಅಲ್ಲವೆ? ಒಬ್ಬರ ಹಿಂದೆ ಇನ್ನೊಬ್ಬರಂತೆ ಪ್ರತಿಭಾನ್ವಿತರು, ಪ್ರಭಾವಶಾಲಿಗಳು ಹುಟ್ಟುತ್ತಲೇ ಇರುತ್ತಾರೆ. ನಮ್ಮ ಪ್ರಭಾವವನ್ನು ಇನ್ನೊಬ್ಬರು ಕಡಿಮೆಗೊಳಿಸುತ್ತಾರೆ. ಹಾಗಂತ ಬೇಸರಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಪ್ರಪಂಚದ ಸಂಗತಿಗಳೆಲ್ಲವೂ ಪರಿವರ್ತನಶೀಲವಾದವು. ಹೀಗೆಂದು ಆಲೋಚಿಸುತ್ತಲೇ ಸಮಾಧಾನದ ನಿಟ್ಟುಸಿರು ಬಿಟ್ಟ ಆ ಉದ್ಯಮಿ. ನಾನು ಮತ್ತು ನನ್ನದು ಎನ್ನುವ ಭಾವ ಮನುಷ್ಯನಲ್ಲಿ ಸಹಜವಾಗಿಯೇ ಇರುತ್ತದೆ. ಆದರೆ ಅವುಗಳ ಜೊತೆ ಯಾವಾಗ ಕಾಮ ಮತ್ತು ಲೋಭಗಳು ಸೇರಿಕೊಳ್ಳುವವೋ ಆಗಲೇ ಮನುಷ್ಯ ‘ನಾನೇ ಶ್ರೇಷ್ಠ, ನಾನು ಮಾಡಿದ್ದೇ ಶ್ರೇಷ್ಠ’ ಎಂಬ ಅಭಿಪ್ರಾಯಕ್ಕೆ ಬರುತ್ತಾನೆ. ಇದು ಅವಿನಯತೆಯನ್ನೂ, ಮಾತ್ಸರ್ಯವನ್ನೂ ಮೂಡಿಸಿ ಮನುಷ್ಯನ ದುಃಖ, ಚಿಂತೆ, ಅಸಮಾಧಾನಕ್ಕೆ ಕಾರಣವಾಗುತ್ತದೆ ಕೂಡ. ಹಾಗಾಗಿ ಶ್ರೇಷ್ಠತೆಯೆಂಬ ವ್ಯಸನ ಮನುಷ್ಯನಿಗೆ ಅಂಟಬಾರದು. ಈ ನಿಟ್ಟಿನಲ್ಲಿ ಚಾಣಾಕ್ಯನೀತಿಯ ಶ್ಲೋಕವೊಂದನ್ನು ಗಮನಿಸಿ:

ದಾನೇ ತಪಸಿ ಶೌರ್ಯು ವಾ ವಿಜ್ಞಾನೇ ವಿನಯೇ ನಯೇ|

ವಿಸ್ಮಯೋ ನ ಹಿ ಕರ್ತವ್ಯೋ ಬಹುರತ್ನಾ ವಸುಂಧರಾ||

ನಾವು ಮಾಡಿದ ದಾನದ ವಿಷಯದಲ್ಲಿ, ಆಚರಿಸಿದ ತಪಸ್ಸಿನ ವಿಷಯದಲ್ಲಿ ಅಥವಾ ಗಳಿಸಿರುವ ಶೌರ್ಯ, ವಿದ್ಯೆ, ವಿನಯತೆ ಮತ್ತು ಜಾಣ್ಮೆಯ ಕುರಿತಾಗಿ ಜಂಭ ಪಡಲೇ ಬಾರದು. ಯಾಕೆಂದರೆ ಈ ಭೂಮಿ ಬಗೆಬಗೆಯ ಅಮೂಲ್ಯವಾದ ರತ್ನಗಳ ಆಗರ. ನಾವು ಏನನ್ನೇ ಸಾಧಿಸಿ ಶ್ರೇಷ್ಠರೆನಿಸಿದರೂ ಶ್ರೇಷ್ಠತೆಯೆಂಬ ಪದವಿ ನಮ್ಮ ಬಳಿಯೇ ಶಾಶ್ವತವಾಗಿ ಉಳಿಯುವುದಿಲ್ಲ. ನಮ್ಮನ್ನು ಮೀರಿಸುವ ಚತುರನೊಬ್ಬ ಬಂದಾಗ ಅದು ಅವನ ಸ್ವತ್ತಾಗುವುದು. ಈ ಅರಿವು ನಮ್ಮಲ್ಲಿ ಇದ್ದರೆ ವಿನಯಶೀಲತೆಯೂ ತಾನಾಗಿಯೇ ಮೂಡುತ್ತದೆ ಎನ್ನುವುದರಲ್ಲಿ ಸಂದೇಹವೇ ಬೇಡ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಡೆಯಬೇಕಾದುದಷ್ಟೇ ನಮ್ಮ ಕರ್ತವ್ಯ ಎಂಬುದನ್ನು ಎಂದಿಗೂ ಮರೆಯಬಾರದು.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net