ಅಹಂಕಾರದ ಅಂತ್ಯ: ಮನೋಲ್ಲಾಸ

Ego
Published on
| ಡಾ. ಕೆ.ಪಿ. ಪುತ್ತೂರಾಯ

ಬೇಸಿಗೆಯ ಕಾಲದಲ್ಲಿ ಒಂದು ದಿನ, ಕಾಡಿನ ರಾಜನೆಂದೆನಿಸಿರುವ ಸಿಂಹ ಭರ್ಜರಿ ಬೇಟೆಯಾಡಿ ಹೊಟ್ಟೆತುಂಬ ತಿಂದು ಮರದ ನೆರಳಿನಲ್ಲಿ ಹಾಯಾಗಿ ಮಲಗಿತ್ತು. ಸುಖನಿದ್ರೆಯಲ್ಲಿದ್ದ ಸಿಂಹ ಥಟ್ಟನೆ ಎಚ್ಚರಗೊಂಡಿತು. ಕಾರಣ ಒಂದು ನೊಣ ಗುಂಯ್ಗುಟ್ಟುತ್ತಾ ಅದರ ಕಿವಿಯ ಒಳಗೆ ತೂರಲು ಪ್ರಯತ್ನಿಸುತ್ತಿತ್ತು. ಸಿಂಹಕ್ಕೆ ಭಾರೀ ಕೋಪ ಬಂತು. ನೊಣವನ್ನು ಓಡಿಸಲು ಇಲ್ಲವೆ ಹೊಡೆದು ಹಾಕಲು ತನ್ನ ಕೇಸರದ ಬಾಲವನ್ನು ಎತ್ತಿ ಪಟಪಟನೆ ಝಾಡಿಸಿತು. ಅಷ್ಟರಲ್ಲಿ ನೊಣ ಓಡಿ ಹೋಗಿತ್ತು; ತನ್ನ ಕಪಾಳದ ಮೇಲೆ ತಾನೇ ಕೊಟ್ಟುಕೊಂಡ ಏಟು ಮಾತ್ರ ಸಿಂಹದ ಪಾಲಾಯಿತು.

ನೊಣ ಪುನಃ ಬಂದು ಗರಗರನೇ ಸುತ್ತುತ್ತಾ ಸಿಂಹವನ್ನು ರೇಗಿಸಲು ಅದರ ಮೂಗಿನೊಳಗೆ ತೂರುವ ಪ್ರಯತ್ನ ಮಾಡಿತು. ಸಿಂಹ ಬಲಗಾಲನ್ನು ಎತ್ತಿ ನೊಣಕ್ಕೆ ಹೊಡೆಯಲು ಪ್ರಯತ್ನಿಸಿತು. ಇದೂ ಫಲಕಾರಿಯಾಗದೆ, ತನ್ನ ಮುಖದ ಮೇಲೆ ತನ್ನ ಕಾಲ ಉಗುರುಗಳಿಂದಲೇ ಗಾಯ ಮಾಡಿಕೊಂಡಿತು. ನೊಣ, ‘ನೀನೆಂತಹ ರಾಜನಯ್ಯ? ನನ್ನಂತಹ ಸಣ್ಣ ಪ್ರಾಣಿಯನ್ನೂ ನಿನ್ನಿಂದ ಕೊಲ್ಲಲಾಗುತ್ತಿಲ್ಲ. ನೀನು ಕಾಡಿನ ರಾಜನಾಗಲು ಯೋಗ್ಯನಲ್ಲ’ ಎಂದು ಹೀಯಾಳಿಸಿತು. ಇನ್ನೂ ಸಿಟ್ಟಿಗೆದ್ದ ಸಿಂಹ ಆ ನೊಣವನ್ನು ಕಚ್ಚಿಯಾದರೂ ಸಾಯಿಸಲೆಂದು ಬಾಯಿ ತೆರೆದು ಅಟ್ಟಿಸಲಾರಂಭಿಸಿತು. ಆದರೆ ಹಾರಾಡುತ್ತಾ ತಪ್ಪಿಸಿಕೊಳ್ಳುತ್ತಿದ್ದ ನೊಣವನ್ನು ಹಿಡಿಯಲು ಸಾಧ್ಯವಾಗದೆ, ಓಡುತ್ತಾ ಓಡುತ್ತಾ ಸಿಂಹ ಕುಸಿದು ಬಿತ್ತು. ನೊಣ ಗಹಗಹಿಸಿ ನಗುತ್ತಾ ಹೇಳಿತು-‘ಕಾಡಿನ ರಾಜ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದಾನೆ. ಅವನ ಶಕ್ತಿ ಸಾಮರ್ಥ್ಯ ನನ್ನ ಪುಟ್ಟ ರೆಕ್ಕೆಗಳಿಗೆ ಸಮವಲ್ಲ!’. ಇದನ್ನು ಕೇಳಿದ ಮರದ ಮೇಲಿದ್ದ ಹಕ್ಕಿಯೊಂದು ‘ಗೆಳೆಯಾ ನಿನ್ನ ಶಕ್ತಿ ನಿಜವಾಗಿಯೂ ಅದ್ಭುತವೇ ಸರಿ. ನನ್ನ ಜತೆ ಈ ಮರದ ಕೊಂಬೆಯವರೆಗೆ ಬಾ, ನಿನಗೆ ರಾಜಾತಿಥ್ಯ ನೀಡುವೆ’ ಎಂದು ಹೇಳಿತು.

ಅಹಂಕಾರದಿಂದ ಬೀಗುತ್ತಿದ್ದ ನೊಣ ಹಕ್ಕಿಯ ಜೊತೆ ಹಾರಲಾರಂಭಿಸಿತು. ಹಾರುತ್ತಾ ಹಾರುತ್ತಾ ಅದರ ಗಮನಕ್ಕೆ ಬಾರದೇನೇ ಆ ಹಳೇ ಮರದ ಸುತ್ತ ಇದ್ದ ಜೇಡರ ಬಲೆಯೊಳಗೆ ಸಿಕ್ಕಿಕೊಂಡಿತು. ಎಷ್ಟೇ ಒದ್ದಾಡಿದರೂ ಹೊರಬರಲಾಗಲಿಲ್ಲ. ಜೇಡರ ಹುಳ ತನ್ನ ಬಲೆಯನ್ನು ಇನ್ನಷ್ಟು ಬಿಗಿಪಡಿಸಿ ಅದರ ಪ್ರಾಣವನ್ನು ಹೀರತೊಡಗಿತು. ಅಷ್ಟರಲ್ಲಿ ಹಕ್ಕಿ ಹೇಳಿತು-‘ಅಯ್ಯಾ ನೊಣವೇ! ಸಿಂಹವನ್ನು ಸೋಲಿಸಿದೆ ಎಂದು ಬೀಗುತ್ತಿದ್ದ ನಿನಗೆ ಈ ಪುಟ್ಟ ಜೇಡರ ಬಲೆಯಿಂದ ಪಾರಾಗಲು ಸಾಧ್ಯವಾಗಲಿಲ್ಲವೇ! ನಿನ್ನ ಅಹಂಕಾರಕ್ಕೆ ತಕ್ಕ ಶಾಸ್ತಿಯಾಯಿತು.’

ಜೀವನದಲ್ಲಿ ಏನನ್ನೇ ಸಾಧಿಸಿದರೂ ನಾವು ವಿನಮ್ರರಾಗಿರಬೇಕು. ಚಂಡಮಾರುತ ಬಂದಾಗ ಸೆಟೆದು ನಿಂತ ಮರ ಉರುಳಿ ಹೋಗಿ ಬಾಗಿ ನಿಂತ ಹುಲ್ಲು ಬದುಕಿ ಉಳಿಯಲಿಲ್ಲವೇ? ಅಹಂಕಾರವೆನ್ನುವುದು ಕಣ್ಣಿನೊಳಗೆ ಬಿದ್ದ ಧೂಳಿನಂತೆ. ಆ ಧೂಳನ್ನು ತೆಗೆಯದೇ ಹೋದರೆ ಯಾವುದೂ ನಮಗೆ ಸ್ಪಷ್ಟವಾಗಿ ಕಾಣದು. ಯೇಸು ಕ್ರಿಸ್ತನನ್ನು ಜನರು ಪೂಜಿಸಬೇಕಾದರೆ ಆತ ಶಿಲುಬೆಗೆ ಏರಬೇಕಾಯಿತು. ಅಂತೆಯೇ ಜನರು ನಮ್ಮನ್ನು ಪ್ರೀತಿಸಬೇಕಾದರೆ ಮೊದಲು ನಮ್ಮ ಅಹಂನ್ನು ಶಿಲುಬೆಗೆ ಏರಿಸಬೇಕು!

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net