ಕೋಪದ ಸ್ವಗೃಹ ಯಾವುದು?: ಮನೋಲ್ಲಾಸ

Manollasa
Published on
| ಸುಮಾವೀಣಾ

ಸ್ವಭಾವತಃ ಮುಂಗೋಪಿ ಸನ್ಯಾಸಿಯೊಬ್ಬ ಆಶ್ರಮದಲ್ಲಿ ಧ್ಯಾನ ಮಾಡಲು ಸರಿಹೋಗುತ್ತಿಲ್ಲ; ಯಾರೇ ಬಂದರೂ ಏಕಾಗ್ರತೆಗೆ ಭಂಗ ತರುತ್ತಾರಾದ್ದರಿಂದ ಇನ್ನೂ ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಧ್ಯಾನಮಾಡಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಹಾಗೆ ಧ್ಯಾನಕ್ಕೆ ಆತ ಆರಿಸಿಕೊಂಡ ಸ್ಥಳ ನಿಂತ ದೋಣಿ. ಅಲ್ಲಿಯೇ ಕಣ್ಣುಮಚ್ಚಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ. ಹಾಗೆ ಒಂದೆರಡು ಗಂಟೆ ಸರಿದ ಬಳಿಕ ಆ ದೋಣಿಗೆ ಇನ್ನೊಂದು ದೋಣಿ ಹಠಾತ್ತನೆ ಎಡತಾಕುತ್ತದೆ. ಸನ್ಯಾಸಿಗೆ ಧ್ಯಾನಭಂಗವಾಗಿ ಸಹಿಸಲಾರದ ಕೋಪ ಬರುತ್ತದೆ. ಧ್ಯಾನಕ್ಕೆ ತೊಂದರೆ ನೀಡಿದವರನ್ನು ಚೆನ್ನಾಗಿ ಗದರಿಸಬೇಕು ಎಂದು ಕಣ್ಣು ಬಿಟ್ಟು ನೋಡಿದರೆ ಆ ದೋಣಿಗೆ ಅಂಬಿಗನಿರುವುದಿಲ್ಲ. ದೋಣಿಗೆ ಕಟ್ಟಿದ ಹಗ್ಗ ಸಡಿಲವಾಗಿ ಅದು ತೇಲುತ್ತಾ ಬಂದು ಆಕಸ್ಮಿಕವಾಗಿ ಸನ್ಯಾಸಿಯ ದೋಣಿಗೆ ಢಿಕ್ಕಿ ಹೊಡೆದಿರುತ್ತದೆ. ಕೋಪಗೊಂಡ ಸನ್ಯಾಸಿಗೆ ಇಲ್ಲಿ ತಪ್ಪು ಯಾರದ್ದೂ ಇಲ್ಲ ಅನ್ನುವ ಸತ್ಯ ತಿಳಿಯುತ್ತದೆ. ಕೋಪದ ಸ್ವಗೃಹ ನಮ್ಮ ಮನಸ್ಸೇ ವಿನಾ ಅನ್ಯವಲ್ಲ. ಹೊರಜಗತ್ತಿನ ಪರಿಭಾಷೆಯೊಂದಿಗೆ ಸಂಸರ್ಗವಾದಾಗ ಅದು ಜಾಗೃತವಾಗುತ್ತದೆ ಎಂಬ ಸತ್ಯವನ್ನು ಅರಿಯುತ್ತಾನೆ. ಅಂದೇಮೊದಲಾಗಿ ಯಾರಾದರೂ ಕಿರಿಕಿರಿ ಉಂಟುಮಾಡಿದರೆ ಕೋಪಗೊಳ್ಳದೆ ಅವರೆಲ್ಲ ಅಂಬಿಗನಿಲ್ಲದ ದೋಣಿಯಂತೆ ಕೋಪ ನನ್ನಲ್ಲೇ ಅಂತರ್ಗತವಾಗಿದೆ ಎಂದು ಪ್ರತಿಕ್ರಿಯಿಸದೆ ಕೆಲಸಗಳಲ್ಲಿ ಮಗ್ನನಾಗಿರುತ್ತಾನೆ.

ಸದಾ ತಹತಹಕ್ಕೆ ಒಳಗಾಗುವುದರಿಂದ, ಇರುವ ಸಮಸ್ಯೆಯನ್ನು ಕದಡಿ ರಾಡಿಮಾಡಿಕೊಂಡು ಮತ್ತಷ್ಟು ಜಟಿಲಗೊಳಿಸಿಕೊಳ್ಳುವುದರಿಂದ ಯಾವ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ; ಬದಲಾಗಿ ಇನ್ನಷ್ಟು ಜಟಿಲವಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವ ಯಾವ ಘಟನೆಗಳೂ ನಮ್ಮ ಅಂಕೆಯಲ್ಲಿ ಇರುವುದಿಲ್ಲ. ಅನಿರೀಕ್ಷಿತ ಘಟನೆಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಎನ್ನುವುದರ ಮೂಲಕ ಪರಿಸ್ಥಿತಿ ಹಾಗೂ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ.

ದಿನನಿತ್ಯ ಕೋಪಗೊಂಡು ಕಿರಿಕಿರಿ ಮಾಡಿಕೊಳ್ಳುವ ವಿಷಯಗಳು ಅಷ್ಟು ಗಹನವಾಗೇನೂ ಇರುವುದಿಲ್ಲ. ಸಮಯಕ್ಕೆ ಸಿಗದ ಬೀಗದ ಕೀ, ಬಾಚಣಿಗೆ, ಕರವಸ್ತ್ರ, ಆಯತಪ್ಪಿ ನೀರಿಗೆ ಬಿದ್ದ ಪತ್ರಿಕೆ, ಸೆಕೆಂಡುಗಳ ಅಂತರದಲ್ಲಿ ತಪ್ಪಿದ ಬಸ್, ದಿಢೀರನೆ ಎದುರಾಗಿ ಕಷ್ಟ ಹೇಳಿಕೊಳ್ಳುವ ಜನರು.... ಹೀಗೆ ಪ್ರತಿಯೊಂದಕ್ಕೂ ಅತ್ಯಂತ ವೇಗವಾಗಿ ಸಿಟ್ಟಿನಿಂದ ಪ್ರತಿಕ್ರಿಯಿಸುತ್ತೇವೆ. ಕ್ಷುಲ್ಲಕ ಕಾರಣಕ್ಕೆ ನಗೆಪಾಟಲಿಗೀಡಾಗುತ್ತೇವೆ. ತಪ್ಪು ನಮ್ಮದಾಗಿದ್ದಾಗ ಅನ್ಯರು ಟೀಕೆ ಮಾಡಿದರೆ ಅವರ ಮೇಲೇ ವ್ಯರ್ಥ ಕೋಪಗೊಳ್ಳುವುದು ಹೀಗೆ! ಇವೆಲ್ಲವನ್ನು ಬಿಟ್ಟು ಸಾವಧಾನವಾಗಿ ಎಲ್ಲವನ್ನು ನಿಭಾಯಿಸಿದರೆ ಮಾನಸಿಕ ಒತ್ತಡಗಳು ಆಗುವುದಿಲ್ಲ. ದಿನವಿಡಿ ಸಮಾಧಾನದಿಂದ ಇರಬಹುದು. ಸಿಟ್ಟು ಮತ್ತು ಆಸಿಡ್ ಎರಡೂ ಒಂದೇ! ಮೊದಲು ತಾವಿದ್ದ ಜಾಗವನ್ನೇ ಕೊಲ್ಲುತ್ತವೆ. ‘ಮನದ ಕೋಪ ತನ್ನ ಅರಿವಿನ ಕೇಡು ತನುವಿನ ಕೋಪ ತನ್ನ ಹಿರಿತನದ ಕೇಡು’ ಎಂಬಂತೆ ನಮ್ಮ ವ್ಯಕ್ತಿತ್ವವೇ ಟೀಕೆಗೆ ಒಳಗಾಗುತ್ತದೆ. ಸುಲಭ ಪರಿಹಾರ್ಯ ಕ್ಷುಲ್ಲಕ ಕಾರಣಗಳಿಗೆ ಕೋಪಾಗೃಹವೇ ಆಗುವುದಕ್ಕಿಂತ ಪ್ರಕ್ಷುಬ್ಧದ ಸಾಗರವಾಗುವುದಕ್ಕಿಂತ ಚಿತ್ತ ಸಮಾಧಾನದಿಂದ ಲೋಕವಾರ್ತೆಯಲ್ಲಿ ತೊಡಗಿಕೊಳ್ಳುವುದು ಮಿಗಿಲು.

(ಲೇಖಕರು ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net