ದುಡುಕಿನ ನಿರ್ಧಾರ ಬೇಡ: ಮನೋಲ್ಲಾಸ

Manollasa
Published on
| ಚ.ಸು.ಹ.ಕನ್ನಡತಿ ಚಿಕ್ಕಬಳ್ಳಾಪುರ

ಕೋಪಗೊಳ್ಳುವುದು ತುಂಬ ಸಹಜ ವಿಷಯವೆನಿಸಿದರೂ ಅದರ ಪರಿಣಾಮ ಮನುಷ್ಯನ ಜೀವನವನ್ನು ಅಲ್ಲೋಲ-ಕಲ್ಲೋಲ ಮಾಡಿಬಿಡುತ್ತದೆ. ಕೋಪದ ಕೈಗೆ ನಮ್ಮ ಬುದ್ಧಿಯನ್ನು ಕೊಡಬಾರದು. ಕೋಪದಿಂದ ಹೊರಬಂದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ.

ಒಮ್ಮೆ ವಾರಾಣಸಿಯ ರಾಜ ಭೋದಿಸತ್ವನ ರಾಜ್ಯಕ್ಕೆ ಭಿಕ್ಷಾಟನೆಗೆಂದು ಒಬ್ಬ ಸನ್ಯಾಸಿ ಬಂದಿದ್ದ. ರಾಜ ಅವನಿಗೆ ಸಕಲ ಸನ್ಮಾನಗಳನ್ನು ಮಾಡಿ ಗೌರವಿಸಿ, ರಾಜ್ಯದ ಉದ್ಯಾನದಲ್ಲಿ ತಂಗಲು ವ್ಯವಸ್ಥೆ ಮಾಡಿದ. ಹಾಗೇ ಅವನ ಸೇವೆಗೆಂದು ತನ್ನ ಆಸ್ಥಾನದಲ್ಲಿದ್ದ ಸುಮಂಗಲ ಎಂಬ ಪ್ರಾಮಾಣಿಕ ವ್ಯಕ್ತಿಯನ್ನು ನೇಮಿಸಿದ. ಹೀಗೆ ಒಂದೆರಡು ತಿಂಗಳುಗಳ ನಂತರ ಸನ್ಯಾಸಿ ಸುಮಂಗಲನನ್ನು ಕರೆದು, ‘ಒಂದೆರಡು ದಿನಗಳು ಬೇರೆ ಊರಿಗೆ ಹೋಗಿಬರುತ್ತೇನೆ. ನಾನು ಮರಳಿ ಬಂದ ಮೇಲೆ ನೀನು ಬಂದರೆ ಸಾಕು, ರಾಜರಿಗೆ ತಿಳಿಸು’ ಎಂದು ಹೇಳಿಹೋದ.

ಒಂದು ದಿನ ಸಂಜೆ ಸನ್ಯಾಸಿ ಮರಳಿ ಬಂದಾಗ ಸುಮಂಗಲ ತನ್ನ ಮನೆಯಲ್ಲಿದ್ದ. ಆಗ ಸನ್ಯಾಸಿ ಕೆಲಕಾಲ ಸುತ್ತಾಡಿಕೊಂಡು ಬರಲು ಕಾಡಿಗೆ ಹೋದ. ಅಂದಿನ ದಿನ ಸುಮಂಗಲನ ಮನೆಗೆ ನೆಂಟರು ಬಂದ ಕಾರಣ ಜಿಂಕೆಮಾಂಸದ ಅಡುಗೆಗೆಂದು ಬೇಟೆಯಾಡಲು ಆತ ಸನ್ಯಾಸಿ ಹೋದ ಕಾಡಿಗೆ ಹೋದ. ಮಬ್ಬು ಕತ್ತಲಲ್ಲಿ ಜಿಂಕೆಯೆಂದು ತಿಳಿದು ಬಿಟ್ಟ ಬಾಣವು ಅಚಾತುರ್ಯದಿಂದ ಸನ್ಯಾಸಿಗೆ ತಾಗಿತು. ಸುಮಂಗಲ ಅಲ್ಲಿಗೆ ಬಂದು ನೋಡಿ ಗೋಳಾಡಿದ. ಬಾಣ ಹೊರತೆಗೆಯುವಷ್ಟರಲ್ಲಿ ಸನ್ಯಾಸಿ ಪ್ರಾಣಪಕ್ಷಿ ಹಾರಿಹೋಗಿತ್ತು. ರಾಜನಿಗೆ ಈ ವಿಷಯ ತಿಳಿದರೆ ತನ್ನನ್ನು ಸಾಯಿಸುತ್ತಾನೆಂದು ಹೆದರಿ ರಾಜ್ಯ ಬಿಟ್ಟು ಹೋದ.

ಒಂದೆರಡು ವರ್ಷ ಕಳೆದಾಗ ರಾಜ್ಯಕ್ಕೆ ವಾಪಾಸಾಗಲು ರಾಜನ ಒಪ್ಪಿಗೆ ಕೋರಿದ. ಆಗ ರಾಜ ಮೌನವಾಗಿದ್ದ. ಮೂರನೇ ವರ್ಷಕ್ಕೆ ಸುಮಂಗಲನಿಗೆ ವಾಪಸ್ ಬರಲು ರಾಜ ಅನುಮತಿ ನೀಡಿದ. ಆತ ರಾಜನ ಹತ್ತಿರ ನಡೆದದ್ದನ್ನು ಹೇಳಿ ದೈನ್ಯಭಾವದಿಂದ ಕ್ಷಮೆಯಾಚಿಸಿದ. ಆಸ್ಥಾನದಲ್ಲಿದ್ದ ಅಮಾತ್ಯನೊಬ್ಬ- ‘ರಾಜರೇ ಮೊದಲೆರಡು ವರುಷ ಆತನಿಗೆ ಅನುಮತಿ ನೀಡಲಿಲ್ಲ. ಈಗ ಯಾಕೆ ಅನುಮತಿ ಕೊಟ್ಟಿರಿ?’ ಎಂದು ಕೇಳಿದಾಗ ರಾಜ ಹೇಳುತ್ತಾನೆ- ‘ನನಗೆ ಆಗ ತುಂಬ ಕೋಪವಿತ್ತು. ಆ ಕೋಪದಲ್ಲಿ ಸುಮಂಗಲನನ್ನು ಏನಾದರೂ ನೋಡಿದ್ದರೆ ಅವನನ್ನು ಕೊಲ್ಲಿಸಿಬಿಡುತ್ತಿದ್ದೆ. ಹಾಗೇ ಒಬ್ಬ ಪ್ರಾಮಾಣಿಕ ಸೇವಕನನ್ನೂ ಕಳೆದುಕೊಳ್ಳುತಿದ್ದೆ. ರಾಜನಾದವನಿಗೆ ರಾಜಧರ್ಮ, ಶಾಂತಿ, ಸಹನೆ ಮುಖ್ಯ’ ಎಂದನಂತೆ. ಅಂದರೆ, ಮನಸ್ಸು ಸ್ಥಿಮಿತಕ್ಕೆ ಬಂದಾಗ ಸೂಕ್ತ ನಿರ್ಧಾರಕ್ಕೆ ಬಂದಿದ್ದ.

ಮನುಷ್ಯನಿಗೆ ಕೋಪ ಹುಟ್ಟುವುದೇ ‘ನಾನು’ ಎಂಬ ಭಾವಕ್ಕೆ ಘಾಸಿಯಾದಾಗ.

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ

ತನಗಾದ ಆಗೇನು ಅವರಿಗಾದ ಚೇಗೆಯೇನು

ತನುವಿನ ಕೋಪ ತನ್ನ ಹಿರಿಯತನದ ಕೇಡು.

ಮನದ ಕೋಪ ತನ್ನ ಅರಿವಿನ ಕೇಡು.

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ

ನೆರೆಮನೆಯ ಸುಡದು ಕೂಡಲಸಂಗಮದೇವಾ

ಎಂಬ ಬಸವಣ್ಣ ವಚನವನ್ನು ಅರಿತು, ಸಿಟ್ಟನ್ನು ನಿಯಂತ್ರಿಸೋಣ. ಮನಸ್ಸು ಸ್ಥಿಮಿತದಲ್ಲಿದ್ದಾಗ ಮಾತ್ರ ಯಾವುದೇ ನಿರ್ಧಾರಕ್ಕೆ ಬರೋಣ.

(ಲೇಖಕಿ ಉಪನ್ಯಾಸಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net