

ಯಶಸ್ಸು ಆಕಸ್ಮಿಕವಲ್ಲ. ಮನುಷ್ಯ ಯಶಸ್ಸಿನ ರುಚಿ ಸವಿಯಲು ತನ್ನೊಳಗಿನ ಶಿಸ್ತು, ಸಂಯಮ, ಶಕ್ತಿಯೊಂದಿಗೆ ಕಠಿಣವಾಗಿ ಪರಿಶ್ರಮಿಸಬೇಕಾಗುತ್ತದೆ. ನಮ್ಮಲ್ಲಿರುವ ದೌರ್ಬಲ್ಯಗಳನ್ನು ಗ್ರಹಿಸಿ, ಅವುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಪಾಂಡವರು ಜೂಜಿನಲ್ಲಿ ಸೋತು, ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸಕ್ಕಾಗಿ ಕಾಡಿಗೆ ಹೊರಟರು. ಅಂತಹ ಕಠಿಣ ಸಮಯದಲ್ಲಿ ಪಾಂಡವರು ಹತಾಶರಾಗಲಿಲ್ಲ. ಬದಲಿಗೆ ಈ ಹದಿಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ತಮ್ಮ ತಮ್ಮ ದೌರ್ಬಲ್ಯಗಳನ್ನು ಸೂಕ್ಷ್ತ್ರ್ಮಾಗಿ ಗ್ರಹಿಸಿ, ಸತತ ಪರಿಶ್ರಮದಿಂದ ಅವುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡರು.
ವೇದವ್ಯಾಸ ಮಹರ್ಷಿಗಳ ಸಲಹೆ ಮೇರೆಗೆ ಅರ್ಜುನನು ದೇವಾನುದೇವತೆಗಳಿಂದ ಶಕ್ತಿಯುತ, ವಿನಾಶಕಾರಿ ಆಯುಧಗಳನ್ನು ಸಂಪಾದಿಸಲು ಹೊರಟನು; ದೈವಿಕ ದಿವ್ಯಾಸ್ತ್ರಗಳನ್ನು ಪಡೆಯಲು ಕೈಲಾಸ ಪರ್ವತದಲ್ಲಿ ಕಠಿಣ ತಪಸ್ಸನ್ನು ಕೈಗೊಂಡನು. ಶಿವನೊಂದಿಗೆ ಹೋರಾಡಿ ಪಾಶುಪತಾಸ್ತ್ರವನ್ನು ಪಡೆದನು. ಮುಂದೆ ನಡೆಯಲಿರುವ ಯುದ್ಧದಲ್ಲಿ ಬಿಲ್ಲುಗಾರಿಕೆಯು ಹೋರಾಟದ ಪ್ರಧಾನ ಮಾರ್ಗವಾಗಲಿದೆ ಎಂಬುದನ್ನರಿತು ತನ್ನ ಬಿಲ್ಲುಗಾರಿಕೆ ಕೌಶಲವನ್ನು ಸತತ ಅಭ್ಯಾಸ ಬಲದಿಂದ ಸುಧಾರಿಸಿಕೊಂಡನು. ಭೀಮನು ಸಹೋದರ ಹನುಮಂತನನ್ನು ಭೇಟಿಯಾಗಿ ತನ್ನ ಆಂತರ್ಯ ಶಕ್ತಿ ವೃದ್ಧಿಯಾಗಲು ಆಶೀರ್ವಾದ ಪಡೆದನು. ಕಾಡಿನಲ್ಲಿ ತನ್ನ ಕುಟುಂಬವನ್ನು ರಕ್ಷಿಸಲು ಆಜಾನುಬಾಹು ರಾಕ್ಷಸರೊಂದಿಗೆ ಹೊಡೆದಾಡಿ, ಕೊಂದು ತನ್ನ ಬಲವನ್ನು ಜಾಗೃತಗೊಳಿಸುತ್ತಲೆ ಮುಂದಿರುವ ಯುದ್ಧಕ್ಕಾಗಿ ತರಬೇತಿ ಎಂದು ಭಾವಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡನು.
ಹೀಗೆ ಭೀಮಾರ್ಜುನರು ಯುದ್ಧ ಕೌಶಲಗಳನ್ನು ಸುಧಾರಿಸಲು ವನವಾಸದಲ್ಲಿದ್ದೂ ಕೂಡ ಕಠಿಣ ಪರಿಶ್ರಮದಿಂದ ತಯಾರಿ ಮಾಡಿಕೊಂಡರು. ಈ ಮೂಲಕ ಅವರು ದ್ವಾಪರಯುಗದ ಅತ್ಯುತ್ತಮ ಯೋಧರಾದರು. ಯುಧಿಷ್ಠಿರನು ನಾರದ ಮುನಿ ಹಾಗೂ ಗಂಧರ್ವ ಚಿತ್ರಸೇನರಿಂದ ಪಗಡೆ ದಾಳಗಳ ಆಟವನ್ನು ಕಲಿತುಕೊಂಡನು. ವನವಾಸದಲ್ಲಿ ಎದುರಾದ ಋಷಿಮುನಿಗಳಿಂದ ವೇದ ಉಪನಿಷತ್ತುಗಳನ್ನು ರ್ಚಚಿಸಿ, ಧರ್ಮಜ್ಞಾನದಾಹಿಯಾಗಿ ಅಪಾರ ಜ್ಞಾನವನ್ನು ಸಂಪಾದಿಸಿದನು. ಧರ್ಮ ಅಧರ್ಮದ ಸೂಕ್ಷ್ತ್ರ್ಮೆಯನ್ನು ಗ್ರಹಿಸಿ ಯಮನಿಂದ ತನ್ನ ಸಹೋದರರನ್ನು ರಕ್ಷಿಸಿಕೊಂಡನು. ನಕುಲ ಸಹದೇವರು ಅಣ್ಣಂದಿರ ಹಾದಿಯಲ್ಲಿ ಜೊತೆಯಾಗಿ ನಡೆದರು. ಹೀಗೆ ಪಾಂಡವರು ಆ ಸವಾಲಿನ ಸುದೀರ್ಘ ಕಾಲವನ್ನು ಸಕಾರಾತ್ಮಕ ಮನಸ್ಸಿನಿಂದ ಒಂದಿಲ್ಲೊಂದು ತಯಾರಿ ಮಾಡಿಕೊಂಡು ಅಂತಿಮ ಗುರಿಯೆಡೆಗೆ ಸ್ಥಿರವಾಗಿ ಹೆಜ್ಜೆಯನ್ನಿಟ್ಟಿದ್ದರಿಂದಲೆ ಕುರುಕ್ಷೇತ್ರ ಯುದ್ಧದಲ್ಲಿ ಜಯಗಳಿಸಲು ಸಾಧ್ಯವಾಯಿತು. ಜೀವನದಲ್ಲಿ ಎದುರಾಗುವ ಸವಾಲುಗಳು ನಮ್ಮನ್ನು ನಿಷ್ಕ್ರಿಯಗೊಳಿಸಬಾರದು; ಬದಲಿಗೆ ನಮ್ಮ
ಅಂತಃಕರಣವನ್ನು ಜಾಗೃತಗೊಳಿಸಬೇಕು. ದೌರ್ಬಲ್ಯಗಳನ್ನೇ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡ ಸಾಕಷ್ಟು ಸಾಧಕರಿದ್ದಾರೆ. ವೇಗದ ಫಲಿತಾಂಶವನ್ನು ಬಯಸದೆ, ತಾಳ್ಮೆಯಿಂದ ಸಮಯ, ಶಕ್ತಿ ಮತ್ತು ಗುರಿಗಮನವನ್ನು ಹೂಡಿಕೆ ಮಾಡಿದರೆ ನಮ್ಮ ದೌರ್ಬಲ್ಯಗಳೇ ನಮಗೆ ಶಕ್ತಿಯಾಗುತ್ತವೆ. ಕೊರತೆಗಳೇ ನಮ್ಮ ಯಶಸ್ಸಿಗೆ ಜೀವಸೆಲೆಯ ಒರತೆಗಳಾಗುತ್ತವೆ. ನಮಗೆ ಕಠಿಣವಾಗಿದ್ದನ್ನು ಸರಳೀಕರಿಸಲು ವ್ಯೂಹಾತ್ಮಕವಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. ನಮ್ಮ ಮನಸ್ಥಿತಿಯನ್ನು ಭರವಸೆಯೆಡೆಗೆ ಬದಲಾಯಿಸುವುದೇ ಯಶಸ್ಸಿನ ಕಡೆಗೆ ಇಡುವ ಮೊದಲ ಹೆಜ್ಜೆ.
(ಲೇಖಕರು ಹವ್ಯಾಸಿ ಬರಹಗಾರರು)