ಚೈತನ್ಯ ನೀಡುವವರು ಯಾರು?: ಮನೋಲ್ಲಾಸ

Manollasa
Published on
| ಚಿದಂಬರ ಮುನವಳ್ಳಿ ಬೆಳಗಾವಿ

ಲೋಕಪ್ರಿಯವಾದ ‘ವೈಷ್ಣವ ಜನ ತೋ ತೇನೆ ಕಹಿಯೇ ಜೆ ಪೀಡ ಪರಾಯಿ ಜಾನೇ ರೇ...’ ಇಂಥ ಭಜನೆಗಳನ್ನು ರಚಿಸಿ ತನ್ಮಯರಾಗಿ ಹಾಡುತ್ತಿದ್ದ 15ನೇ ಶತಮಾನದ ಗುಜರಾತಿನ ಶ್ರೇಷ್ಠ ಸಂತ ನರಸಿಂಹ ಮೆಹತಾರ ಮಗಳು ಕುಂವರಬಾಯಿ ಮದುವೆಯಾಗಿ ಪತಿ ಗೃಹ ಸೇರಿದ್ದಳು. ಅವಳ ಅತ್ತೆಯ ಮನೆಯವರಿಗೆ ಶ್ರೀಮಂತಿಕೆಯ ಅಹಂಕಾರವಿತ್ತು. ಕುಂವರಬಾಯಿ ಗರ್ಭಿಣಿಯಾಗಿ ಎಂಟನೇ ತಿಂಗಳು ಆರಂಭವಾದಾಗ ಆಕೆಗೆ ಸೀಮಂತ ಮಾಡಬೇಕೆಂದು ನಿಶ್ಚಯಿಸಿದರು. ಆದರೆ ಮನೆಯಲ್ಲಿ ಕುಂವರಬಾಯಿಗೆ ಹೀಯಾಳಿಸುತ್ತ, ‘ನಿನ್ನ ತಾಯಿಯಂತೂ ತೀರಿ ಹೋಗಿದ್ದಾಳೆ. ಸೀಮಂತಕ್ಕೆ ನಿನ್ನ ಅಪ್ಪನಾದರೂ ಬರುತ್ತಾನೆಯೇ? ಬಂದರೂ ಅವನೇನು ಉಡುಗೊರೆ ತರಬಲ್ಲನು? ಅವನ ಮನೆಯಲ್ಲಿ ಶಂಖ, ಆರತಿತಟ್ಟೆ ಬಿಟ್ಟರೆ ಇರುವುದಾದರೂ ಏನು?’ ಎಂದು ಚುಚ್ಚಿ ಮಾತನಾಡಿದರು.

ಕುಂವರಬಾಯಿ ತನ್ನ ತಂದೆಗಾದ ಅಪಮಾನದಿಂದ ನೊಂದುಕೊಂಡು ಕಣ್ಣೀರು ಸುರಿಸುತ್ತ, ‘ಪತ್ರ ಬರೆಯಿರಿ, ಅಪ್ಪ ಏನಾದರೂ ಮಾಡಬಹುದು’ ಎಂದಳು. ಅಷ್ಟು ಹೇಳುವುದೇ ತಡ ಎಲ್ಲರೂ ಸೇರಿ ಅವಳ ನಾದಿನಿಯ ಕಡೆಯಿಂದ ಒಂದು ಪತ್ರ ಬರೆಯಿಸಿದರು. ಅಳಿಯ, ಮಗಳು, ಅತ್ತೆ, ಅಜ್ಜಿ ಮುಂತಾದವರಿಗೆಲ್ಲ ಕೊಡಬೇಕಾದ ಉಡುಗೊರೆಗಳ ದೊಡ್ಡ ಯಾದಿಯೇ ಹೋಯಿತು. ಆ ಪತ್ರವನ್ನು ಓದಿದ ನರಸಿಂಹ ಮೆಹತಾ ಸೀದಾ ಅದನ್ನು ದೇವರಕೋಣೆಯಲ್ಲಿರುವ ಶ್ರೀಕೃಷ್ಣನ ವಿಗ್ರಹದ ಮುಂದೆ ಇಟ್ಟು, ‘ಪ್ರಭು! ನಿನಗೆ ತಿಳಿಯದ್ದು ಏನಿದೆ? ಇದನ್ನೆಲ್ಲ ಪೂರೈಸುವ ಸ್ಥಿತಿಯಲ್ಲಿ ನಾನಿಲ್ಲ. ನಾನು ಬೇಡುವುದಿಷ್ಟೇ. ನನಗೆ ಕೊಟ್ಟಂತೆ ನನ್ನ ಮಗಳಿಗೆ ಸಹ ಇದನ್ನೆಲ್ಲ ಸಹಿಸುವ ಶಕ್ತಿಯನ್ನು ದಯಪಾಲಿಸು’ ಎಂದು ಹೇಳಿ ನಿರ್ಲಿಪ್ತರಾದರು.

ಇತ್ತ ಸೀಮಂತದ ದಿನ ಉಡಿ ತುಂಬುವ ಮುಹೂರ್ತಕ್ಕೆ ಸರಿಯಾಗಿ ಒಂದು ದೊಡ್ಡ ಎತ್ತಿನ ಗಾಡಿ ಬಂದು ವಾಡೆಯ ಮುಂದೆ ನಿಂತಿತು. ಕೋಟು, ಶುಭ್ರ ಧೋತರ, ಪೇಟಾ, ಮುತ್ತಿನಹಾರ ಧರಿಸಿದ ಶ್ಯಾಮಲವರ್ಣದ ಸುಂದರ ಪುರುಷನೊಬ್ಬ ಪತ್ನಿಯೊಡನೆ ಗಾಡಿಯಿಂದ ಕೆಳಗಿಳಿದು, ‘ನಾಲ್ಕು ಆಳುಗಳನ್ನು ಕಳುಹಿಸಿ. ನಮ್ಮ ಮಾಲೀಕರಾದ ನರಸಿಂಹ ಮೆಹತಾರವರು ಜುನಾಗಢದಿಂದ ಕಳುಹಿಸಿದ ಸಾಮಾನು ಇಳಿಸಬೇಕಾಗಿದೆ’ ಎಂದ. ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಇದರಲ್ಲಿ ಏನೇನಿದೆ? ಸುಗ್ರಾಸ ಭೋಜನಕ್ಕೆ ಬೇಕಾಗುವ ಸಾಮಾನು. ಮನೆಯ ಎಲ್ಲ ಜನರಿಗೆ ಬಂಗಾರದ ಆಭರಣಗಳು. ಜರತಾರಿ ಪಂಚೆ, ಸೀರೆ, ಆಳುಕಾಳುಗಳಿಗೆ ಬಟ್ಟೆಬರೆ ಒಂದೂ ಬಿಡದೆ ಎಲ್ಲವನ್ನೂ ಕಳುಹಿಸಿದ್ದಾರೆ. ‘ಹಾಗಾದರೆ ನೀವ್ಯಾರು?’ ‘ನಾವು ಅವರ ವ್ಯವಹಾರ ನೋಡಿಕೊಳ್ಳುವ ಏಜೆಂಟರು. ಅವರು ಹೇಳಿದ ಕೆಲಸ ಮಾಡುವುದೆಂದರೆ ನಮಗೆ ಪರಮಾನಂದ. ನಮಗೆ ಉಡಿ ತುಂಬಲು ಅವಕಾಶ ಮಾಡಿ ಕೊಡಿ. ಬೇಗ ಹೊರಡಬೇಕಾಗಿದೆ’ ಎಂದರು.

ನಿತ್ಯಸ್ಮರಣೆಯಿಂದ ಮಾತ್ರ ಇಂಥ ದಿವ್ಯಸಾನಿಧ್ಯದ ಅನುಭವ ಸಾಧ್ಯ. ಕನಕದಾಸರು ‘ಸಮಯಾ ಸಮಯವುಂಟೇ ಭಕ್ತವತ್ಸಲ ನಿನಗೆ...’ ಎಂದು ಭಗವಂತನನ್ನು ಕೊಂಡಾಡಿದ್ದಾರೆ. ಕುಂವರಬಾಯಿಯ ಉಡಿಯನ್ನು ಪತ್ನಿಸಮೇತ ಬಂದು ತುಂಬಿದಂತೆ ಪ್ರತಿದಿನವೂ ನಮಗೆ ಚೈತನ್ಯವನ್ನು ತುಂಬುತ್ತಿರುವವನು ಅವನೇ ಅಲ್ಲವೇ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net