

ಹಿಂದೆ ವಿಜಯನಗರವು ಉಚ್ಛಾ›ಯ ಸ್ಥಿತಿಯಲ್ಲಿದ್ದ ಕಾಲ. ಒಂದು ದಿನ ಒಬ್ಬ ಕಳ್ಳನು ಮಧ್ಯರಾತ್ರಿಯಲ್ಲಿ ಕಳ್ಳತನಕ್ಕಾಗಿ ಅರಮನೆಯನ್ನು ಪ್ರವೇಶಿಸಿದ. ಕತ್ತಲಲ್ಲಿ ತಡವಿಕೊಂಡು ಬರುತ್ತಿದ್ದಾಗ ಆಕಸ್ಮಾತ್ ಯಾವುದೋ ವಸ್ತು ಕಾಲಿಗೆ ತಗುಲಿ ಎಡವಿ ಬಿದ್ದ. ಎಡವಿದ ರಭಸಕ್ಕೆ ಅವನ ಎಡಗಾಲಿನ ಹೆಬ್ಬೆರಳಿನ ಉಗುರು ಕಿತ್ತು ಬಂದು ಕತ್ತಲಲ್ಲಿ ಬಿದ್ದುಹೋಯಿತು. ಬೆರಳಿನಿಂದ ರಕ್ತ ಸುರಿಯತೊಡಗಿತು.
ಕಳ್ಳನಿಗೆ ಈಗ ಬಹಳ ಗಾಬರಿಯಾಯಿತು; ಬೆರಳಿಗೆ ಪೆಟ್ಟಾದುದಕ್ಕಲ್ಲ. ಬದಲು ಆ ಉಗುರು ಎಲ್ಲೋ ಬಿದ್ದುದಕ್ಕೆ. ಯಾಕೆಂದರೆ ಉಗುರು, ತಲೆಕೂದಲು ಮೊದಲಾದವು ಮನೆಯೊಳಗಿದ್ದರೆ ಅನಿಷ್ಟ. ತನ್ನ ಉಗುರು ಅರಮನೆಯೊಳಗೆ ಬಿದ್ದು ತನ್ನ ಈ ದೇಶ ವಿಜಯನಗರದಿಂದ ಭಾಗ್ಯಲಕ್ಷ್ಮಿ ಹೊರಟು ಹೋಗಿ ದಾರಿದ್ರ್ಯ ನೆಲೆಸಿದರೆ? ಛೇ! ಹಾಗಾಗಬಾರದು. ತನ್ನ ಪ್ರೀತಿಯ ಈ ದೇಶ ಯಾವತ್ತೂ ಸುಭಿಕ್ಷವಾಗಿರಬೇಕು. ಆದ್ದರಿಂದ ಬಿದ್ದ ಉಗುರನ್ನು ಹುಡುಕಿ ಹೊರಗೆ ಎಸೆದು ಮತ್ತೆ ತಾನು ಬಂದ ಕಾರ್ಯಕ್ಕೆ ತೊಡಗುವೆನೆಂದು ನಿಶ್ಚಯಿಸಿ ಆ ಕಳ್ಳ ಉಗುರನ್ನು ಹುಡುಕ ತೊಡಗಿದ. ಉಗುರು ಸಿಗಲಿಲ್ಲ ಕಳ್ಳ ಬಿಡಲಿಲ್ಲ. ಹೀಗೆ ಬೆಳಗಿನವರೆಗೂ ಕಳ್ಳ ಹುಡುಕುತ್ತಲೇ ಇದ್ದ. ಬೆಳಗಾಗುವಾಗ ರಾಜಭಟರು ಇವನನ್ನು ಕಂಡು ಅರಸನಲ್ಲಿಗೆ ಎಳೆದೊಯ್ದರು.
ರಾಜ ಇವನನ್ನು ಕಂಡು ‘ನೀನಾರು? ಇಲ್ಲಿಗೆ ಏಕೆ ಬಂದೆ?’ ಎಂದು ಪ್ರಶ್ನಿಸಿದ. ಕಳ್ಳ ತಾನು ಕಳವು ಮಾಡಲು ಬಂದುದಾಗಿ ಸತ್ಯವನ್ನೇ ಹೇಳಿದ. ರಾಜ ಆಶ್ಚರ್ಯದಿಂದ ‘ಹಾಗಿದ್ದರೆ ಅರಮನೆಯಿಂದ ಏನನ್ನೂ ಕದಿಯದೆ ಅಲ್ಲಿ ಏನು ಮಾಡುತ್ತಿದ್ದೆ?’ ಎಂದು ಕೇಳಿದ. ಕಳ್ಳ ಮರೆಮಾಚದೆ ಎಲ್ಲವನ್ನೂ ಅರಸನಿಗೆ ಅರುಹಿದ. ಬೆರಗಾದ ರಾಜ ಕಳ್ಳನ ದೇಶಭಕ್ತಿ ಮತ್ತು ಸತ್ಯಸಂಧತೆಯನ್ನು ಮೆಚ್ಚಿ ಆತನಿಗೆ ಆಸ್ಥಾನದಲ್ಲಿ ಒಂದು ಉದ್ಯೋಗವನ್ನು ಕೊಟ್ಟು ಕಳ್ಳತನದ ವೃತ್ತಿಯನ್ನು ತೊರೆಯುವಂತೆ ಮಾಡಿದ.
ಈ ಕಥೆ ಕೇಳಿದರೆ ‘ಯಥಾ ರಾಜಾ ತಥಾ ಪ್ರಜಾ’ ಎಂಬ ಮಾತು ಅಕ್ಷರಶಃ ನಿಜ ಎನಿಸುತ್ತದೆ. ಆಳುವವರು ಯಾವತ್ತೂ ಉನ್ನತ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡರೆ ಪ್ರಜೆಗಳೂ ಅದೇ ದಾರಿಯಲ್ಲಿ ನಡೆಯುತ್ತಾರೆ. ಇದು ರಾಜರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಅನ್ವಯಿಸುತ್ತದೆ.
ಗೀತಾಚಾರ್ಯನಾದ ಶ್ರೀ ಕೃಷ್ಣನು ಹೇಳಿದಂತೆ-
ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಾಃ
ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ
ಎಂದರೆ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಇತರರು ಕೂಡಾ ಅನುಸರಿಸುತ್ತಾರೆ. ಆದ ಕಾರಣ ನಾವು ಮೊದಲು ಉತ್ತಮರಾಗಿ ಇತರರಿಗೆ ಮಾದರಿಯಾಗಲು ಪ್ರಯತ್ನಿಸೋಣ ಹಾಗೂ ‘ಸರ್ವೆ ಜನಾಃ ಸುಖಿನೋ ಭವಂತು’ ಎಂದು ಆಶಿಸೋಣ. ಮಾದರಿ ವ್ಯಕ್ತಿಗಳ ಆದರ್ಶ ಕಣ್ಣೆದುರು ಇದ್ದರೆ ಜನರಿಗೂ ಅನುಸರಿಸಲು ಪ್ರೇರಣೆ ದೊರೆಯುತ್ತದೆ. ಇಂಥ ಆದರ್ಶಜೀವಿಗಳ ಸಂಖ್ಯೆ ಹೆಚ್ಚಿದಷ್ಟು ಸಮಾಜಕ್ಕೂ ದೇಶಕ್ಕೂ ಹಿತ.
(ಲೇಖಕರು ಹವ್ಯಾಸಿ ಬರಹಗಾರರು)