ಮನೋಲ್ಲಾಸ | ಅರಿಯಬೇಕು ನನ್ನೊಳಗಿನ ನಾನು...

Manollasa
Published on

| ಮಹಾದೇವ ಬಸರಕೋಡ

ಥಾಯ್ಲೆಂಡ್​ನಲ್ಲಿ ಹಲವು ವರುಷಗಳ ಹಿಂದೆ ನಡೆದ ಘಟನೆ. ಕಾರಣಾಂತರಗಳಿಂದ ಬುದ್ಧನ ಮಣ್ಣಿನ ಮೂರ್ತಿಯೊಂದನ್ನು ಬೇರೊಂದು ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕಾದ ಸಂದರ್ಭ ಒದಗಿ ಬಂದಾಗ ಅಲ್ಲಿನ ಭಕ್ತರೆಲ್ಲ ಸೇರಿ ಒಳ್ಳೆಯ ಮುಹೂರ್ತದಲ್ಲಿ ಮೆರವಣಿಗೆಯ ಮೂಲಕ ತೆಗೆದುಕೊಂಡು ನಿಗದಿತ ಸ್ಥಳಕ್ಕೆ ಹೊರಟರು. ಮೆರವಣಿಗೆ ಸ್ವಲ್ಪದೂರ ಸಾಗಿರಬೇಕು, ಒಮ್ಮೆಲೇ ರಭಸವಾಗಿ ಗಾಳಿ ಬೀಸಲು ಪ್ರಾರಂಭಿಸಿತು. ಕಾಮೋಡ ಆವರಿಸಿ ಗುಡುಗು ಮಿಂಚು ಸಹಿತ ಮಳೆ ಸುರಿಯತೊಡಗಿತು. ಸೇರಿದ ಜನಸಮೂಹವೆಲ್ಲ ಆತಂಕಕ್ಕೆ ಒಳಗಾಯಿತು. ಮಳೆಯಿಂದ ಬುದ್ಧನ ಮಣ್ಣಿನ ಮೂರ್ತಿ ಕರಗಿಹೋಗುವ ಭಯ ಎಲ್ಲರಲ್ಲೂ ಆವರಿಸಿತು. ಮೂರ್ತಿಗೆ ರಕ್ಷಣೆ ಕೊಡುವ ಪ್ರಯತ್ನದಲ್ಲಿ ಕೆಲವರು ಹರಸಾಹಸ ಮಾಡತೊಡಗಿದರು. ಕೆಲವರು ಕೊಡೆ ಹಿಡಿದರೆ, ಕೆಲವರು ಚಪ್ಪರ ಹಾಕಿ ರಕ್ಷಣೆ ಕೊಡುವಲ್ಲಿ ನಿರತರಾದರು. ಅವರ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಬುದ್ಧನ ಮೂರ್ತಿಯ ಮೇಲೆ ಮಳೆ ಬೀಳಲು ಪ್ರಾರಂಭವಾಯಿತು. ಮಣ್ಣಿನ ಮೂರ್ತಿ ನಿಧಾನವಾಗಿ ಕರಗತೊಡಗಿತು. ನೆರೆದಿದ್ದ ಭಕ್ತರಿಗೆಲ್ಲ ಮತ್ತಷ್ಟು ಭಯ ಆವರಿಸಿತು. ಪವಿತ್ರ ಬುದ್ಧನ ಮೂರ್ತಿ ಕರಗುವುದರಿಂದ ತಮಗೇನು ಕೇಡುಕಾದಿದೆಯೋ? ಎಂದು ಮಾತನಾಡತೊಡಗಿದರು.

ಕೆಲವರು ದುಃಖದಿಂದ ಅಳತೊಡಗಿದರು. ಇದೆಲ್ಲ ನೋಡುತ್ತಿರುವಂತೆ ಒಮ್ಮಲೇ ಪವಾಡಸದೃಶ ಘಟನೆ ನಡೆಯಿತು. ಮಣ್ಣು ಕರಗಿದಂತೆ ಅದರಲ್ಲಿ ಬುದ್ಧನ ತಲೆ, ಕಣ್ಣು, ಮುಖ, ಕೈ, ಕಾಲುಗಳು ಗೋಚರಿಸತೊಡಗಿದವು. ಮಣ್ಣೆಲ್ಲ ಕರಗಿ ಹೋದ ನಂತರ ಅದರಲ್ಲಿ ಅಡಗಿ ಕುಳಿತಿದ್ದ ಚಿನ್ನದ ಬುದ್ಧ ಕಾಣತೊಡಗಿದ. ಯಾರಿಗೂ ಗೊತ್ತೇ ಇರದ ಚಿನ್ನದ ಬುದ್ಧ ಕಾಂತಿಯಿಂದ ಹೊಳೆಯತೊಡಗಿದ್ದ. ಹಿಂದಿನವರು ಅದನ್ನು ಸಂರಕ್ಷಿಸಲು, ಶತ್ರುಗಳ ಕಣ್ಣಿಗೆ ಕಾಣದಂತೆ ಅದಕ್ಕೆ ಮಣ್ಣಿನ ಲೇಪನ ಮಾಡಿ ಇಟ್ಟಿರುವ ವಿಷಯ ಅಲ್ಲಿಯವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ. ಹೀಗೆಯೇ ನಾವು ದೈನಂದಿನ ಯಾಂತ್ರಿಕ ಬದುಕಿನಲ್ಲಿ ನಮ್ಮಲ್ಲಿ ದೇವರು ಅಡಗಿಸಿಟ್ಟಿರುವ ‘ಚಿನ್ನದ ಬುದ್ಧ’ ನಮ್ಮಲ್ಲಿಯೇ ಇರುವುದನ್ನು ಮರೆತುಬಿಡುತ್ತೇವೆ. ನಮ್ಮ ನೈಜ ಸಾಮರ್ಥ್ಯದ ಅರಿವಿರದೆ ಬದುಕಿನಲ್ಲಿ ಬಹುತೇಕ ಸಂದರ್ಭಗಳಲ್ಲಿ ವಿಫಲರಾಗುತ್ತೇವೆ. ಅಕ್ಕಮಹಾದೇವಿಯ ವಚನದಂತೆ,

ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು,

ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು,

ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ

ತಮ್ಮೊಳಗಿರ್ದ ಮಹಾಘನವರಿಯರು

ಚೆನ್ನಮಲ್ಲಿಕಾರ್ಜುನ

ಎಂಬ ಮಾತು ಕೂಡ ‘ನನ್ನೊಳಗಿನ ನನ್ನನ್ನು’ ಅರಿಯುವ ಅಗತ್ಯವನ್ನು ಸಾರಿ ಹೇಳುತ್ತದೆ. ಅಂಥೋನಿ ರಾಬಿನ್ಸ್ ಹೇಳುವಂತೆ, ‘ನಾನು ಅಂದುಕೊಂಡಿದ್ದನ್ನು, ನನಗೆ ಹೇಗೆ ಬೇಕೋ ಹಾಗೆ, ಹಿಂದೆಂದೂ ನಾನು ಮಾಡಿರದ ರೀತಿಯಲ್ಲಿ, ನನ್ನೆಲ್ಲ ಶಕ್ತಿ-ಸಾಮರ್ಥ್ಯ ಬಳಸಿ ಮಾಡಬಲ್ಲೆ ಎಂದು ನಿಮಗನ್ನಿಸುತ್ತಲೇ ಇರಬೇಕು. ಅಂಥ ಮನಸ್ಥಿತಿಯನ್ನು ರೂಢಿಸಿಕೊಳ್ಳಿ’, ಎಂಬ ಮನೋಭಾವ ಜಾಗೃತವಾಗಲು ‘ನನ್ನೊಳಗಿರುವ ನನ್ನನ್ನು’ ಮತ್ತೆ ಮತ್ತೆ ಅರಿಯಬೇಕಿದೆ. ಬದುಕು ಇಂಥ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಸುಂದರಗೊಳ್ಳುತ್ತದೆ, ಸಾರ್ಥಕವಾಗುತ್ತದೆ. ಯಶಸ್ಸಿನ ರಹದಾರಿಯಲ್ಲಿ ಮುನ್ನುಗ್ಗುತ್ತದೆ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net